ಭಾರತ ಹಾಗೂ ನ್ಯೂಜಿಲೆಂಡ್ (Indian cricket team and New Zealand) ನಡುವಿನ ಮೂರನೇ ಮತ್ತು ಅಂತಿಮ ಟಿ20 ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ಕಾರಣ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಇದರೊಂದಿಗೆ ಮೂರು ಪಂದ್ಯಗಳ ಸರಣಿಯನ್ನು ಭಾರತ 1-0ಯಿಂದ ವಶಪಡಿಸಿಕೊಂಡಿದೆ. ಮಳೆಯಿಂದಾಗಿ ಸರಣಿಯ ಮೊದಲ ಪಂದ್ಯವನ್ನು ಆಡಲಾಗಲಿಲ್ಲ. ಇದಾದ ಬಳಿಕ ಎರಡನೇ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ಸರಣಿಯಲ್ಲಿ ಮುನ್ನಡೆ ಸಾಧಿಸಿತ್ತು. ಮೂರನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆತಿಥೇಯರು 19.4 ಓವರ್‌ಗಳಲ್ಲಿ 160 ರನ್‌ಗಳಿಗೆ ಆಲೌಟ್ ಆಗಿದ್ದರು. ಈ ಗುರಿಯನ್ನು ಬೆನ್ನಟ್ಟಿದ ಭಾರತ ಒಂಬತ್ತು ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು 75 ರನ್ ಗಳಿಸಿತ್ತು. ಆದರೆ ಈ ನಂತರ ಮಳೆ ಬಂದ ಕಾರಣದಿಂದಾಗಿ ಪಂದ್ಯವನ್ನು ಆಡಲು ಸಾಧ್ಯವಾಗಲಿಲ್ಲ. ಹೀಗಾಗಿ ಅಂಪೈರ್‌ಗಳು ಪಂದ್ಯವನ್ನು ಟೈ ಎಂದು ಘೋಷಿಸಿದರು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ಪರ ಡೆವೊನ್ ಕಾನ್ವೆ ಅದ್ಭುತ ಅರ್ಧಶತಕ ಬಾರಿಸಿದ್ದರು. ತಮ್ಮ ಇನ್ನಿಂಗ್ಸ್ನಲ್ಲಿ 49 ಎಸೆತಗಳನ್ನು ಎದುರಿಸಿದ ಕಾನ್ವೇ ಐದು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳ ಸಹಾಯದಿಂದ 59 ರನ್ ಗಳಿಸಿದರು. ಅವರನ್ನು ಹೊರತುಪಡಿಸಿ ಗ್ಲೆನ್ ಫಿಲಿಪ್ಸ್ 33 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳ ನೆರವಿನಿಂದ 54 ರನ್ ಗಳಿಸಿದರು. ಈ ಇಬ್ಬರನ್ನು ಹೊರತುಪಡಿಸಿ ಕಿವೀಸ್ನ ಮತ್ತ್ಯಾವ ಆಟಗಾರನಿಗೂ ತಂಡಕ್ಕೆ ಹೆಚ್ಚಿನ ಕೊಡುಗೆ ನೀಡಲು ಸಾಧ್ಯವಾಗಲಿಲ್ಲ. ಹೀಗಾಗಿ ಒಂದು ಹಂತದಲ್ಲಿ ಬೃಹತ್ ರನ್ ಕಲೆಹಾಕುವ ಸೂಚನೆ ನೀಡಿದ್ದ ಕಿವೀಸ್ ಕೇವಲ 160 ರನ್‌ಗಳಿಗೆ ಸುಸ್ತಾಯಿತು.
ಪಂತ್-ಕಿಶನ್ ವಿಫಲ
ಭಾರತದ ಮುಂದೆ ಈ ಗುರಿ ತುಂಬಾ ದೊಡ್ಡದಾಗಿರಲಿಲ್ಲ ಆದರೆ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಜೋಡಿ ರಿಷಬ್ ಪಂತ್ ಮತ್ತು ಇಶಾನ್ ಕಿಶನ್ ಬೇಗನೆ ಪೆವಿಲಿಯನ್‌ಗೆ ಮರಳಿದರು. ಎರಡನೇ ಓವರ್‌ನ ಕೊನೆಯ ಎಸೆತದಲ್ಲಿ ಕಿಶನ್ (10) ಅವರನ್ನು ಆಡಮ್ ಮಿಲ್ನೆ ಔಟ್ ಮಾಡಿದರೆ, ಕೇವಲ 11 ರನ್ ಗಳಿಸಲಷ್ಟೇ ಶಕ್ತರಾದ ಪಂತ್ ಟಿಮ್ ಸೌಥಿಗೆ ಬಲಿಯಾದರು. ಆ ಬಳಿಕ ಬಂದ ಶ್ರೇಯಸ್ ಅಯ್ಯರ್ ಕೂಡ ಸೌದಿ ಬೌಲಿಂಗ್ನಲ್ಲಿ ಖಾತೆ ತೆರೆಯದೆ ಔಟಾದರು. ಸೂರ್ಯಕುಮಾರ್ ಯಾದವ್ ಕೂಡ ಕೇವಲ 16 ರನ್ ಗಳಿಸಿ ಇಶ್ ಸೋಧಿ ಎಸೆತದಲ್ಲಿ ಪೆವಿಲಿಯನ್‌ಗೆ ಮರಳಿದರು.
ಇದಾದ ಬಳಿಕ ಹಾರ್ದಿಕ್ ಪಾಂಡ್ಯ ಹಾಗೂ ದೀಪಕ್ ಹೂಡಾ ತಂಡವನ್ನು ಗೆಲ್ಲಿಸುವ ಜವಾಬ್ದಾರಿ ಹೊತ್ತಿದ್ದರು. ಆದರೆ ಈ ವೇಳೆಗೆ ಮಳೆ ಶುರುವಾಗಿದ್ದರಿಂದ ಪಂದ್ಯವನ್ನು ನಿಲ್ಲಿಸಲಾಯಿತು. ಆಗ ಪಾಂಡ್ಯ 30 ಮತ್ತು ಹೂಡಾ ಒಂಬತ್ತು ರನ್ ಗಳಿಸಿ ಆಡುತ್ತಿದ್ದರು. ಆದರೆ ಆ ಬಳಿಕ ಎಡಬಿಡದೆ ಸುರಿದ ಮಳೆಯಿಂದಾಗಿ ಅಂಪೈರ್‌ಗಳು ಪಂದ್ಯವನ್ನು ಡ್ರಾ ಎಂದು ಘೋಷಿಸಿದರು.
ನ್ಯೂಜಿಲೆಂಡ್ ಇನ್ನಿಂಗ್ಸ್ ಹೀಗಿತ್ತು
ಟಾಸ್ ಗೆದ್ದ ನ್ಯೂಜಿಲೆಂಡ್ ಪರ ಕಾನ್ವೆ ಮತ್ತು ಗ್ಲೆನ್ ಫಿಲಿಪ್ಸ್ ಮೂರನೇ ವಿಕೆಟ್‌ಗೆ 86 ರನ್ ಜೊತೆಯಾಟ ನಡೆಸಿದರು. ಆದರೆ ಆ ನಂತರ ಆತಿಥೇಯರು ಕೇವಲ 30 ರನ್ ಗಳಿಸುವಷ್ಟರಲ್ಲಿ ಎಂಟು ವಿಕೆಟ್ ಕಳೆದುಕೊಂಡರು. ನ್ಯೂಜಿಲೆಂಡ್ ಸ್ಕೋರ್ ಒಂದು ಹಂತದಲ್ಲಿ 16 ನೇ ಓವರ್‌ನಲ್ಲಿ ಎರಡು ವಿಕೆಟ್‌ಗೆ 130 ಆಗಿತ್ತು. ಆದರೆ ಅರ್ಶ್‌ದೀಪ್ (37ಕ್ಕೆ 4) ಮತ್ತು ಸಿರಾಜ್ (17ಕ್ಕೆ 4) ಅದ್ಭುತ ಪುನರಾಗಮನವನ್ನು ಮಾಡಿ ಪ್ರತಿಸ್ಪರ್ಧಿ ತಂಡವನ್ನು ಇನ್ನೂ ಎರಡು ಎಸೆತಗಳು ಬಾಕಿ ಇರುವಂತೆಯೇ ಕಟ್ಟಿಹಾಕಿದರು.
Published On - 4:16 pm, Tue, 22 November 22