ಬರೋಬ್ಬರಿ 1043 ದಿನಗಳ ನಂತರ ಶತಕ ಸಿಡಿಸಿದ ವಾರ್ನರ್! 20 ವರ್ಷಗಳ ಹಳೆಯ ದಾಖಲೆಯೂ ಉಡೀಸ್
David Warner: ಮೆಲ್ಬೋರ್ನ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಡೇವಿಡ್ ವಾರ್ನರ್ 102 ಎಸೆತಗಳನ್ನು ಎದುರಿಸಿ 106 ರನ್ ಗಳಿಸಿದರು.
ಮೊದಲು ವಿರಾಟ್ ಕೊಹ್ಲಿ (Virat Kohli), ಈಗ ಡೇವಿಡ್ ವಾರ್ನರ್ (David Warner). ಪ್ರಸ್ತುತ ಯುಗದ ಈ ಇಬ್ಬರೂ ಸ್ಟಾರ್ ಬ್ಯಾಟ್ಸ್‌ಮನ್‌ಗಳಿಗೆ ಒಂದೇ ಒಂದು ಸಮಸ್ಯೆ ಇತ್ತು. ಅದೆನೆಂದರೆ ಈ ಇಬ್ಬರ ಬ್ಯಾಟ್ ಬಹಳ ದಿನಗಳಿಂದ ಶತಕದ ಬರ ಎದುರಿಸುತ್ತಿತ್ತು. ಈ ಇಬ್ಬರೂ ಅರ್ಧಶತಕದ ಇನ್ನಿಂಗ್ಸ್ ಆಡುತ್ತಿದ್ದರಾದರೂ, ಅದನ್ನು ಶತಕವನ್ನಾಗಿ ಪರಿವರ್ತಿಸುವಲ್ಲಿ ವಿಫಲರಾಗುತ್ತಿದ್ದರು. ಆದರೆ ಕೆಲವು ತಿಂಗಳ ಹಿಂದೆ ವಿರಾಟ್ ಕೊಹ್ಲಿಯ ಅಂತಾರಾಷ್ಟ್ರೀಯ ಶತಕದ ನಿರೀಕ್ಷೆ ಎರಡೂವರೆ ವರ್ಷಗಳ ನಂತರ ಕೊನೆಗೊಂಡಿತು. ಅಂತೆಯೇ ಇದೀಗ 2 ವರ್ಷ 10 ದಿನಗಳ ನಂತರ ಅಂದರೆ ಒಟ್ಟಾರೆ 1043 ದಿನಗಳ ನಂತರ ಡೇವಿಡ್ ವಾರ್ನರ್ ಅವರ ಅಂತರಾಷ್ಟ್ರೀಯ ಶತಕದ ನಿರೀಕ್ಷೆಯೂ ಅಂತ್ಯಗೊಂಡಿದೆ. ಮೆಲ್ಬೋರ್ನ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಡೇವಿಡ್ ವಾರ್ನರ್ ಅದ್ಭುತ ಶತಕ ಸಿಡಿಸಿ ಮಿಂಚಿದ್ದಾರೆ.
ಮೆಲ್ಬೋರ್ನ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಡೇವಿಡ್ ವಾರ್ನರ್ 102 ಎಸೆತಗಳನ್ನು ಎದುರಿಸಿ 106 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್‌ಗಳು ಸೇರಿದ್ದವು. ಇದು ವಾರ್ನರ್ ಅವರ ಏಕದಿನ ವೃತ್ತಿಜೀವನದ 18 ನೇ ಶತಕವಾಗಿದ್ದು, ಅವರ ಅಂತರರಾಷ್ಟ್ರೀಯ ವೃತ್ತಿಜೀವನದ 43 ನೇ ಶತಕವಾಗಿದೆ.
43ನೇ ಶತಕಕ್ಕಾಗಿ 1043 ದಿನ ಕಾಯಬೇಕಾಯಿತು
ಆದಾಗ್ಯೂ ಡೇವಿಡ್ ವಾರ್ನರ್ ತಮ್ಮ 43ನೇ ಅಂತಾರಾಷ್ಟ್ರೀಯ ಶತಕಕ್ಕಾಗಿ ಬಹಳ ಸಮಯ ಕಾಯಬೇಕಾಯಿತು. 1043 ದಿನಗಳ ನಂತರ ಅವರ ಬ್ಯಾಟ್‌ನಿಂದ ಈ ಶತಕ ಹೊರಹೊಮ್ಮಿತು. ಅವರು ತಮ್ಮ ಕೊನೆಯ ಶತಕವನ್ನು 14 ಜನವರಿ 2020 ರಂದು ಭಾರತದ ವಿರುದ್ಧ ವಾಂಖೆಡೆಯಲ್ಲಿ ಗಳಿಸಿದರು. ಅಂದಿನಿಂದ ಇಂದಿನವರೆಗೂ ವಾರ್ನರ್ ಅವರ ಬ್ಯಾಟ್ ಶತಕದ ಬರ ಎದುರಿಸುತ್ತಿತ್ತು ಆದರೆ, ಅವರು ಮೆಲ್ಬೋರ್ನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಶತಕ ಸಿಡಿಸಿದ್ದಲ್ಲದೆ, ತಮ್ಮ ಆರಂಭಿಕ ಪಾಲುದಾರ ಟ್ರೆವಿಡ್ ಹೆಡ್ ಅವರೊಂದಿಗೆ ದಾಖಲೆಯ ಪಾಲುದಾರಿಕೆಯನ್ನು ಮಾಡಿದ್ದು, ಇದು 20 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದೆ.
20 ವರ್ಷಗಳ ಹಳೆಯ ದಾಖಲೆ ಉಡೀಸ್
ಡೇವಿಡ್ ವಾರ್ನರ್ ಜೊತೆಗೆ ಟ್ರಾವಿಸ್ ಹೆಡ್ ಕೂಡ ಇನ್ನೊಂದು ತುದಿಯಿಂದ ಶತಕ ಬಾರಿಸಿದರು. ವಾರ್ನರ್ 106 ರನ್ ಗಳಿಸಿದರೆ, ಹೆಡ್ 130 ಎಸೆತಗಳಲ್ಲಿ 152 ರನ್ ಗಳಿಸಿದರು. ಇವರಿಬ್ಬರ ನಡುವೆ 269 ರನ್‌ಗಳ ಜೊತೆಯಾಟವಿತ್ತು. ಇದು ಮೆಲ್ಬೋರ್ನ್‌ನಲ್ಲಿ ನಡೆದ ಪುರುಷರ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅತಿ ದೊಡ್ಡ ಜೊತೆಯಾಟವಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಆಸ್ಟ್ರೇಲಿಯಾದ ಆಡಮ್ ಗಿಲ್‌ಕ್ರಿಸ್ಟ್ ಮತ್ತು ರಿಕಿ ಪಾಂಟಿಂಗ್ ಹೆಸರಿನಲ್ಲಿತ್ತು. 2002 ರಲ್ಲಿ ಇಂಗ್ಲೆಂಡ್ ವಿರುದ್ಧ ಇಬ್ಬರೂ 225 ರನ್‌ಗಳ ಜೊತೆಯಾಟವನ್ನು ಆಡಿದ್ದರು. ಈ ಮೂಲಕ ಹೆಡ್ ಮತ್ತು ವಾರ್ನರ್ ಎಂಸಿಜಿಯಲ್ಲಿ ಅತಿದೊಡ್ಡ ಜೊತೆಯಾಟದ ದಾಖಲೆಯನ್ನು ಮುರಿದಿದ್ದಾರೆ.