IND vs NZ 3rd T20I Highlights: ಮಳೆಯಿಂದ ಪಂದ್ಯ ಡ್ರಾ; ಸರಣಿ ಗೆದ್ದ ಭಾರತ
IND vs NZ 3rd T20I Live Score: ಭಾರತ ಮತ್ತು ನ್ಯೂಜಿಲೆಂಡ್ ನಡುವೆ 3 ಟಿ20 ಸರಣಿಯ ಮೂರನೇ ಪಂದ್ಯ ಇಂದು ನೇಪಿಯರ್‌ನಲ್ಲಿ ನಡೆಯುತ್ತಿದೆ. ಭಾರತ ಸರಣಿಯಲ್ಲಿ 1-0 ಮುನ್ನಡೆಯಲ್ಲಿದ್ದು, ಮೂರನೇ ಪಂದ್ಯವನ್ನು ಗೆದ್ದು ಸರಣಿ ವಶಪಡಿಸಿಕೊಳ್ಳುವ ಪ್ರಯತ್ನದಲ್ಲಿದೆ.
ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೂರನೇ ಮತ್ತು ಅಂತಿಮ ಟಿ20 ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ಕಾರಣ ಪಂದ್ಯ ಡ್ರಾ ಆಗಿದೆ. ಇದರೊಂದಿಗೆ ಮೂರು ಪಂದ್ಯಗಳ ಸರಣಿಯನ್ನು ಭಾರತ 1-0ಯಿಂದ ವಶಪಡಿಸಿಕೊಂಡಿದೆ. ಮಳೆಯಿಂದಾಗಿ ಸರಣಿಯ ಮೊದಲ ಪಂದ್ಯವನ್ನು ಆಡಲಾಗಲಿಲ್ಲ. ಇದಾದ ಬಳಿಕ ಎರಡನೇ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ಸರಣಿಯಲ್ಲಿ ಮುನ್ನಡೆ ಸಾಧಿಸಿತ್ತು. ಮೂರನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆತಿಥೇಯರು 19.4 ಓವರ್‌ಗಳಲ್ಲಿ 160 ರನ್‌ಗಳಿಗೆ ಆಲೌಟ್ ಆಗಿದ್ದರು. ಈ ಗುರಿಯನ್ನು ಬೆನ್ನಟ್ಟಿದ ಭಾರತ ಒಂಬತ್ತು ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು 75 ರನ್ ಗಳಿಸಿತ್ತು. ಆದರೆ ಈ ನಂತರ ಮಳೆ ಬಂದ ಕಾರಣದಿಂದಾಗಿ ಪಂದ್ಯವನ್ನು ಆಡಲು ಸಾಧ್ಯವಾಗಲಿಲ್ಲ. ಹೀಗಾಗಿ ಅಂಪೈರ್‌ಗಳು ಪಂದ್ಯವನ್ನು ಟೈ ಮಾಡಿದರು.
LIVE NEWS & UPDATES
-
ಮೂರನೇ ಟಿ20 ಪಂದ್ಯ ಟೈ ಆಗಿದೆ
ಮಳೆಯಿಂದಾಗಿ 9 ಓವರ್‌ಗಳ ನಂತರ ಪಂದ್ಯವನ್ನು ನಿಲ್ಲಿಸಲಾಯಿತು, ನಂತರ ಪಂದ್ಯವನ್ನು ಪುನರಾರಂಭಿಸಲು ಸಾಧ್ಯವಾಗಲಿಲ್ಲ. ಇದರೊಂದಿಗೆ ಪಂದ್ಯ ಟೈ ಆಗಿದೆ. ಡಕ್‌ವರ್ತ್ ಲೂಯಿಸ್ ನಿಯಮದ ಪ್ರಕಾರ ಭಾರತ ಈ ಪಂದ್ಯವನ್ನು ಗೆಲ್ಲಬೇಕಿದ್ದರೆ 76 ರನ್‌ಗಳ ಗುರಿಯನ್ನು 9 ಓವರ್‌ಗಳಲ್ಲಿ ಸಾಧಿಸಬೇಕಾಗಿತ್ತು. ಆದರೆ ಭಾರತ 4 ವಿಕೆಟ್‌ಗೆ 75 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಭಾರತ 1-0 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದೆ.
-
ಸೂರ್ಯಕುಮಾರ್ ಔಟ್
ಸೂರ್ಯಕುಮಾರ್ ಯಾದವ್ ಹಾರ್ದಿಕ್ ಪಾಂಡ್ಯ ಅವರನ್ನು ಬೆಂಬಲಿಸಲು ಸಾಧ್ಯವಾಗದೆ 7ನೇ ಓವರ್ ನ ಮೂರನೇ ಎಸೆತದಲ್ಲಿ ಇಶ್ ಸೋಧಿಗೆ ಬಲಿಯಾದರು. ಸೂರ್ಯ 13 ರನ್‌ಗಳಿಗೆ ಗ್ಲೆನ್ ಫಿಲಿಪ್ಸ್ಗೆ ಕ್ಯಾಚ್ ನೀಡಿ ಔಟಾದರು. ಭಾರತಕ್ಕೆ ದೊಡ್ಡ ಹೊಡೆತ
-
ಭಾರತದ 50 ರನ್ ಪೂರ್ಣ
3 ವಿಕೆಟ್ಗಳ ನಂತರ ಹಾರ್ದಿಕ್ ಪಾಂಡ್ಯ ಅವರ ಬಿರುಸಿನ ಬ್ಯಾಟಿಂಗ್ ಆರಂಭವಾಗಿದೆ. ಸೌದಿಯ ಓವರ್‌ನಲ್ಲಿ ಅವರು ಸಿಕ್ಸರ್ ಮತ್ತು ಬೌಂಡರಿ ಬಾರಿಸಿದರು. ಇದರೊಂದಿಗೆ ಭಾರತದ 50 ರನ್ ಕೂಡ ಪೂರ್ಣಗೊಂಡಿದೆ.
ಶ್ರೇಯಸ್ ಅಯ್ಯರ್ ಗೋಲ್ಡನ್ ಡಕ್
ಪಂತ್ ಅವರನ್ನು ಔಟ್ ಮಾಡಿದ ನಂತರ, ಮುಂದಿನ ಎಸೆತದಲ್ಲಿ ಸೌದಿ ಶ್ರೇಯಸ್ ಅಯ್ಯರ್ ಅವರನ್ನು ಗೋಲ್ಡನ್ ಡಕ್‌ಗೆ ಔಟ್ ಮಾಡಿದರು.
ಪಂತ್ ಔಟ್
ಸೌದಿಯ ಮೂರನೇ ಓವರ್‌ನ ಎರಡನೇ ಮತ್ತು ಮೂರನೇ ಎಸೆತದಲ್ಲಿ ಪಂತ್ ಸತತ 2 ಬೌಂಡರಿಗಳನ್ನು ಬಾರಿಸಿದರು, ಆದರೆ ನಂತರದ ಎಸೆತದಲ್ಲಿ ಅವರು ಸೌದಿಯ ಬಲೆಗೆ ಸಿಕ್ಕಿ ಸೋಧಿಗೆ ಕ್ಯಾಚ್ ನೀಡಿದರು. ಪಂತ್ ಅವರ ಕಳಪೆ ಬ್ಯಾಟಿಂಗ್, ಕೇವಲ 11 ರನ್ ಗಳಿಸಲಷ್ಟೇ ಶಕ್ತವಾಯಿತು.
ಭಾರತಕ್ಕೆ ಮೊದಲ ಹೊಡೆತ
ಮಿಲ್ನೆ ಓವರ್‌ನ ಕೊನೆಯ ಎಸೆತದಲ್ಲಿ ಇಶಾನ್ ಕಿಶನ್ ಔಟಾದರು. ಭಾರತ 13 ರನ್‌ಗಳಿಗೆ ಮೊದಲ ಹೊಡೆತವನ್ನು ಪಡೆಯಿತು. ಇಶಾನ್ 10 ರನ್ ಗಳಿಸಲಷ್ಟೇ ಶಕ್ತರಾದರು.
ಇಶಾನ್ ಸಿಕ್ಸರ್
ನ್ಯೂಜಿಲೆಂಡ್ ನೀಡಿದ 161 ರನ್‌ಗಳ ಗುರಿಗೆ ಉತ್ತರವಾಗಿ ಇಶಾನ್ ಕಿಶನ್ ಮತ್ತು ರಿಷಬ್ ಪಂತ್ ಕ್ರೀಸ್‌ಗೆ ಬಂದು ಭಾರತದ ಇನ್ನಿಂಗ್ಸ್ ಆರಂಭಿಸಿದ್ದಾರೆ. ಟಿಮ್ ಸೌಥಿ ಅವರ ಓವರ್‌ನ ನಾಲ್ಕನೇ ಎಸೆತದಲ್ಲಿ ಡೀಪ್ ಕವರ್ ಮೇಲೆ ಸಿಕ್ಸರ್ ಬಾರಿಸುವ ಮೂಲಕ ಇಶಾನ್ ಭಾರತದ ಖಾತೆ ತೆರೆದರು.
ಭಾರತಕ್ಕೆ 161 ರನ್‌ಗಳ ಗುರಿ
ಡೆತ್ ಓವರ್‌ಗಳಲ್ಲಿ ಅತ್ಯುತ್ತಮ ಬೌಲಿಂಗ್‌ನ ಆಧಾರದ ಮೇಲೆ, ಟೀಂ ಇಂಡಿಯಾ ನ್ಯೂಜಿಲೆಂಡ್‌ಗೆ ಪೂರ್ಣ 20 ಓವರ್‌ಗಳನ್ನು ಸಹ ಆಡಲು ಅವಕಾಶ ನೀಡಲಿಲ್ಲ. 19.4 ಓವರ್‌ಗಳಲ್ಲಿ ನ್ಯೂಜಿಲೆಂಡ್ 160 ರನ್‌ಗಳಿಗೆ ಆಲೌಟ್ ಆಯಿತು.
ಅರ್ಷದೀಪ್‌ಗೆ 3 ವಿಕೆಟ್
19ನೇ ಓವರ್‌ನ ಮೊದಲ ಎಸೆತದಲ್ಲಿ ಮಿಚೆಲ್ ಪಂತ್ಗೆ ಕ್ಯಾಚ್ ನೀಡಿ ಔಟ್ ಆದರು. ಮುಂದಿನ ಎಸೆತದಲ್ಲಿ ಇಶ್ ಸೋಧಿಯನ್ನು ಬೌಲ್ಡ್ ಮಾಡಿದರು. ನಂತರದ ಎಸೆತದಲ್ಲಿ ಸಿರಾಜ್ ಅವರ ಅದ್ಭುತ ಸ್ಟ್ರೈಟ್ ಹಿಟ್ನಲ್ಲಿ ಮಿಲ್ನೆ ರನ್ಔಟ್ ಆದರು.
ಸಿರಾಜ್ಗೆ ಒಂದೇ ಓವರ್ನಲ್ಲಿ 2 ವಿಕೆಟ್
18ನೇ ಓವರ್ನಲ್ಲಿ ಸಿರಾಜ್ 2 ವಿಕೆಟ್ ಪಡೆದರು. ಆ ಓವರ್‌ನ ಮೊದಲ ಎಸೆತದಲ್ಲಿ ನೀಶಮ್ ಔಟಾದರೆ, ನಂತರ 5ನೇ ಎಸೆತದಲ್ಲಿ ಸ್ಯಾಂಟ್ನರ್ ಅವರನ್ನು 1 ರನ್‌ಗೆ ಔಟ್ ಮಾಡಿದರು
ನೀಶಮ್ ಕೂಡ ಔಟ್
ಸಿರಾಜ್ ಎಸೆತದಲ್ಲಿ ನೀಶಮ್ ಬಿಗ್ ಶಾಟ್ ಆಡಲು ಯತ್ನಿಸಿ ವಿಫಲರಾದರು. ಪಂತ್ ಕ್ಯಾಚ್ ಹಿಡಿಯುವ ಮೂಲಕ ನ್ಯೂಜಿಲೆಂಡ್‌ಗೆ 5ನೇ ಹೊಡೆತ. ನೀಶಮ್‌ಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ
ಕಾನ್ವೇ ಪೆವಿಲಿಯನ್‌ಗೆ
17ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಅರ್ಷದೀಪ್ 59 ರನ್‌ಗಳಿಗೆ ಡೆವೊನ್ ಕಾನ್ವೆ ಅವರ ಇನ್ನಿಂಗ್ಸ್ ಅನ್ನು ನಿಲ್ಲಿಸಿದರು. ಅರ್ಷದೀಪ್‌ಗೆ ಇದು ಎರಡನೇ ವಿಕೆಟ್, ಕಾನ್ವೆ 49 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಬಾರಿಸಿದರು.
ಫಿಲಿಪ್ಸ್ ಔಟ್
16ನೇ ಓವರ್ನ 5ನೇ ಎಸೆತದಲ್ಲಿ 54 ರನ್ ಗಳಿಸಿದ್ದ ಫಿಲಿಪ್ಸ್ ಅವರನ್ನು ಸಿರಾಜ್ ಔಟ್ ಮಾಡಿದರು. ಫಿಲಿಪ್ಸ್ ಆಡಿದ ಶಾಟನ್ನು ಫೈನ್ ಲೆಗ್‌ನಿಂದ ಓಡಿ ಬಂದ ಭುವಿ ಅದ್ಭುತ ಕ್ಯಾಚ್ ಪಡೆದರು.
ಫಿಲಿಪ್ಸ್ ಅರ್ಧಶತಕ
ಕಾನ್ವೇ ಬಳಿಕ ಫಿಲಿಪ್ಸ್ ಕೂಡ ಅರ್ಧಶತಕ ಗಳಿಸಿದ್ದಾರೆ. ಹರ್ಷಲ್ ಪಟೇಲ್ ಅವರ ಓವರ್‌ನ ನಾಲ್ಕನೇ ಎಸೆತದಲ್ಲಿ ಡೀಪ್ ಸ್ಕ್ವೇರ್ ಲೆಗ್‌ನಲ್ಲಿ ಸಿಕ್ಸರ್ ಬಾರಿಸಿದರು ಮತ್ತು ಇದರೊಂದಿಗೆ ಅವರು 31 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಪೂರ್ಣಗೊಳಿಸಿದರು.
ಕಾನ್ವೇ ಅರ್ಧಶತಕ
ಭುವನೇಶ್ವರ್ ಕುಮಾರ್ ಅವರ ಓವರ್‌ನ ಮೊದಲ ಎಸೆತದಲ್ಲಿ ಕಾನ್ವೆ 3 ರನ್ ಸೇರಿಸಿದರು. ಇದರೊಂದಿಗೆ ಅವರು 39 ಎಸೆತಗಳಲ್ಲಿ ಅರ್ಧಶತಕವನ್ನೂ ಪೂರೈಸಿದರು.
ನ್ಯೂಜಿಲೆಂಡ್ ಶತಕ ಪೂರ್ಣ
ಚಾಹಲ್ ಅವರ ಓವರ್‌ನ ಕೊನೆಯ 2 ಎಸೆತಗಳಲ್ಲಿ ಫಿಲಿಪ್ಸ್ ಒಂದು ಬೌಂಡರಿ ಮತ್ತು ಸಿಕ್ಸರ್ ಬಾರಿಸಿದರು. ಇದರೊಂದಿಗೆ ನ್ಯೂಜಿಲೆಂಡ್ ಸ್ಕೋರ್ ಕೂಡ 100ರ ಗಡಿ ದಾಟಿದೆ. ನ್ಯೂಜಿಲೆಂಡ್ 13 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 105 ರನ್ ಗಳಿಸಿದೆ.
10 ಓವರ್‌ಗಳಲ್ಲಿ ನ್ಯೂಜಿಲೆಂಡ್ ಸ್ಕೋರ್ 74/2
10 ಓವರ್‌ಗಳಲ್ಲಿ ನ್ಯೂಜಿಲೆಂಡ್ 2 ವಿಕೆಟ್ ನಷ್ಟಕ್ಕೆ 74 ರನ್ ಗಳಿಸಿದೆ. 10ನೇ ಓವರ್‌ನ ಕೊನೆಯ ಎಸೆತದಲ್ಲಿ ಫಿಲಿಪ್ಸ್ ಬೌಂಡರಿ ಬಾರಿಸಿದರು. ಚಾಹಲ್ ಓವರ್ನಲ್ಲಿ 13 ರನ್ ಕೊಳ್ಳೆ ಹೊಡೆದರು. ಫಿಲಿಪ್ಸ್ 14 ಮತ್ತು ಕಾನ್ವೆ 38 ರನ್ ಬಾರಿಸಿ ಆಡುತ್ತಿದ್ದಾರೆ.
ಕಾನ್ವೇ ಕ್ರೀಸ್‌ನಲ್ಲಿ
ಕ್ರೀಸ್‌ನಲ್ಲಿರುವ ಕಾನ್ವೇ ಭಾರತದ ಬೌಲರ್‌ಗಳಿಗೆ ತುಂಬಾ ತೊಂದರೆ ಕೊಡುತ್ತಿದ್ದಾರೆ. ಭಾರತೀಯ ಬೌಲರ್‌ಗಳು ಅವರನ್ನು ಆದಷ್ಟು ಬೇಗ ಪೆವಿಲಿಯನ್‌ಗೆ ಕಳುಹಿಸಬೇಕಾಗುತ್ತದೆ, ಏಕೆಂದರೆ ಅವರು ಇನ್ನೂ ಸ್ವಲ್ಪ ಸಮಯ ಉಳಿದರೆ, ಅವರು ತೊಂದರೆ ಉಂಟುಮಾಡಬಹುದು.
ನ್ಯೂಜಿಲೆಂಡ್ 50 ರನ್ ಪೂರ್ಣ
8ನೇ ಓವರ್‌ನಲ್ಲಿ ನ್ಯೂಜಿಲೆಂಡ್‌ನ 50 ರನ್‌ಗಳು ಪೂರ್ಣಗೊಂಡವು. ಈ ವೇಳೆ ನ್ಯೂಜಿಲೆಂಡ್ ತನ್ನ 2 ಬಿಗ್ ವಿಕೆಟ್‌ಗಳನ್ನು ಕಳೆದುಕೊಂಡಿತು. ಡೆವೊನ್ ಕಾನ್ವೆ ಹಾಗೂ ಗ್ಲೆನ್ ಫಿಲಿಪ್ಸ್ ಕ್ರೀಸ್‌ನಲ್ಲಿದ್ದಾರೆ.
ನ್ಯೂಜಿಲೆಂಡ್‌ಗೆ ಎರಡನೇ ಹೊಡೆತ
ಆರನೇ ಓವರ್‌ನ ಎರಡನೇ ಎಸೆತದಲ್ಲಿ ಸಿರಾಜ್ ಚಾಪ್‌ಮನ್‌ರನ್ನು ತಮ್ಮ ಬಲೆಗೆ ಬೀಳಿಸಿದರು. ಅರ್ಷದೀಪ್ ಅವರ ಅದ್ಭುತ ಕ್ಯಾಚ್, ಚಾಪ್ಮನ್ 12 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು.
ಅರ್ಷದೀಪ್ ದುಬಾರಿ
3ನೇ ಓವರ್ ಎಸೆದ ಅರ್ಷದೀಪ್ ಸಿಂಗ್ ಈ ಓವರ್ನಲ್ಲಿ 19 ರನ್ ಬಿಟ್ಟುಕೊಟ್ಟರು. ಈ ಓವರ್ನಲ್ಲಿ ಚಾಪ್ಮನ್ ಒಂದು ಬೌಂಡರಿ ಬಾರಿಸಿದರೆ, ಕಾನ್ವೇ 2 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿದರು.
ಅಲೆನ್ ಔಟ್
ಓವರ್‌ನ ಮೂರನೇ ಎಸೆತದಲ್ಲಿ ಫಿನ್ ಅಲೆನ್ ಅವರನ್ನು ಅರ್ಶ್‌ದೀಪ್ ಎಲ್ಬಿಡಬ್ಲ್ಯು ಔಟ್ ಮಾಡಿದರು. ಕಾನ್ವೇಯೊಂದಿಗೆ ಮಾತನಾಡಿದ ಅಲೆನ್ ವಿಮರ್ಶೆಯನ್ನು ತೆಗೆದುಕೊಳ್ಳಲಿಲ್ಲ. ಅಲೆನ್ ಕೇವಲ 3 ರನ್ ಗಳಿಸಲಷ್ಟೇ ಶಕ್ತರಾದರು.
ಬ್ಯಾಟಿಂಗ್ ಆಂಭ
ಕಿವೀಸ್ ತಂಡ ಬ್ಯಾಟಿಂಗ್ ಆರಂಭಿಸಿದೆ. ಟೀಂ ಇಂಡಿಯಾ ಪರ ಮೊದಲ ಓವರ್ ಎಸೆದ ಭುವಿ 4 ರನ್ ನೀಡಿದರು.
ನ್ಯೂಜಿಲೆಂಡ್ ತಂಡ
ಫಿನ್ ಅಲೆನ್, ಡೆವೊನ್ ಕಾನ್ವೇ, ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಡಾರೆಲ್ ಮಿಚೆಲ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಆಡಮ್ ಮಿಲ್ನೆ, ಇಶ್ ಸೋಧಿ, ಟಿಮ್ ಸೌಥಿ, ಲಾಕಿ ಫರ್ಗುಸನ್
ಭಾರತ ತಂಡ
ಇಶಾನ್ ಕಿಶನ್, ರಿಷಬ್ ಪಂತ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ದೀಪಕ್ ಹೂಡಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ಯುಜ್ವೇಂದ್ರ ಚಹಾಲ್
ಟಾಸ್ ಸೋತ ಭಾರತ
ಮೂರನೇ ಪಂದ್ಯದಲ್ಲಿ ಭಾರತ ಟಾಸ್ ಸೋತಿದೆ. ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
Published On - Nov 22,2022 12:02 PM