ವಿಶ್ವವಿಜೇತ ಇಂಗ್ಲೆಂಡ್‌ಗೆ 221 ರನ್‌ಗಳ ಹೀನಾಯ ಸೋಲು! ಸರಣಿ ಕ್ಲೀನ್ ಸ್ವೀಪ್ ಮಾಡಿದ ಆಸ್ಟ್ರೇಲಿಯಾ
AUS Vs ENG: 2018ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ 219 ರನ್‌ಗಳಿಂದ ಸೋತಿತ್ತು. ಆದರೆ ನಾಲ್ಕು ವರ್ಷಗಳ ನಂತರ ಇದೀಗ ಇಂಗ್ಲೆಂಡ್ ಈ ಅನಗತ್ಯ ದಾಖಲೆಯನ್ನು ಮುರಿದಿದೆ.
ಟಿ20 ವಿಶ್ವಕಪ್ ಗೆದ್ದುಬೀಗಿದ್ದ ಇಂಗ್ಲೆಂಡ್ ತಂಡ ತನ್ನ ಮುಂದಿನ ಸರಣಿಯಲ್ಲೇ ಇಷ್ಟು ಕೆಟ್ಟ ಸ್ಥಿತಿಗೆ ತಲುಪುತ್ತದೆ ಎಂದು ಯಾರೂ ಕೂಡ ಭಾವಿಸಿರಲಿಲ್ಲ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯನ್ನು ಇಂಗ್ಲೆಂಡ್ ತಂಡ 3-0 ಅಂತರದಿಂದ ಕಳೆದುಕೊಂಡಿದೆ. ಅಲ್ಲದೆ ಅಚ್ಚರಿಯ ಸಂಗತಿಯಾಗಿ, ಯಾವ ಮೈದಾದನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಟಿ20 ವಿಶ್ವಕಪ್ ಎತ್ತಿಹಿಡಿದಿತ್ತೋ ಅದೇ ಮೈದಾನದಲ್ಲಿ (Melbourne ground) ಜೋಸ್ ಬಟ್ಲರ್ ತಂಡ 221 ರನ್‌ಗಳ ಹೀನಾಯ ಸೋಲು ಅನುಭವಿಸಿದೆ. ಇದು ರನ್‌ಗಳ ವಿಷಯದಲ್ಲಿ ಇಂಗ್ಲೆಂಡ್‌ನ ಏಕದಿನ ಇತಿಹಾಸದಲ್ಲಿ ಅತಿದೊಡ್ಡ ಸೋಲು ಎಂಬುದನ್ನು ಇಲ್ಲಿ ಗಮನಿಸಬೇಕಾದ ವಿಚಾರವಾಗಿದೆ.
2018ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ 219 ರನ್‌ಗಳಿಂದ ಸೋತಿತ್ತು. ಆದರೆ ನಾಲ್ಕು ವರ್ಷಗಳ ನಂತರ ಇದೀಗ ಇಂಗ್ಲೆಂಡ್ ಈ ಅನಗತ್ಯ ದಾಖಲೆಯನ್ನು ಮುರಿದಿದೆ. ಮೂರನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 355 ರನ್ ಗಳಿಸಿತ್ತು. ಮಳೆ ಬಾಧಿತ ಈ ಪಂದ್ಯದಲ್ಲಿ 2 ಓವರ್‌ಗಳನ್ನು ಕಡಿತಗೊಳಿಸಿ ಇಂಗ್ಲೆಂಡ್‌ಗೆ 364 ರನ್‌ಗಳ ಗುರಿ ನೀಡಲಾಯಿತು. ಉತ್ತರವಾಗಿ ಆಂಗ್ಲರ ತಂಡ ಕೇವಲ 142 ರನ್‌ಗಳಿಗೆ ಆಲೌಟ್ ಆಯಿತು.
ಏಕದಿನ ಸರಣಿ ಕ್ಲೀನ್ ಸ್ವೀಪ್
ಈ ಪಂದ್ಯಕ್ಕೂ ಮುನ್ನ ಆಡಿದ ಎರಡು ಪಂದ್ಯಗಳಲ್ಲೂ ಇಂಗ್ಲೆಂಡ್ ಹೀನಾಯವಾಗಿ ಸೋತಿತ್ತು. ಸಿಡ್ನಿಯಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ 6 ವಿಕೆಟ್‌ಗಳ ಸೋಲು ಅನುಭವಿಸಿತ್ತು. ಒಟ್ಟಾರೆ ಈ ಇಡೀ ಸರಣಿಯಲ್ಲಿ ಇಂಗ್ಲೆಂಡ್ ಪ್ರದರ್ಶನ ತೀರಾ ಕಳಪೆಯಾಗಿದ್ದು, ಇದರಿಂದಾಗಿ ಕ್ಲೀನ್ ಸ್ವೀಪ್ ಸೋಲನ್ನು ಎದುರಿಸಬೇಕಾಯಿತು. ಈ ಪಂದ್ಯದಲ್ಲಿ 152 ರನ್ ಗಳಿಸಿದ ಟ್ರಾವಿಸ್ ಹೆಡ್‌ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಗಿದ್ದು, ಡೇವಿಡ್ ವಾರ್ನರ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ವಾರ್ನರ್-ಹೆಡ್ ದಾಖಲೆಯ ಜೊತೆಯಾಟ
ಮೆಲ್ಬೋರ್ನ್ನಲ್ಲಿ ನಡೆದ ಈ 3ನೇ ಏಕದಿನ ಪಂದ್ಯದಲ್ಲಿ ಆಸೀಸ್ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ವಾರ್ನರ್ ಮತ್ತು ಹೆಡ್ ಆಸ್ಟ್ರೇಲಿಯಾ ತಂಡಕ್ಕೆ ಅದ್ಭುತ ಆರಂಭ ನೀಡಿದರು.ಈ ಇಬ್ಬರು ಪವರ್‌ಪ್ಲೇಯ 10 ಓವರ್‌ಗಳಲ್ಲಿ 64 ರನ್‌ಗಳ ಜೊತೆಯಾಟ ಹಂಚಿಕೊಂಡರು. ಈ ವೇಳೆ ಹೆಡ್ 55 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರೆ, ವಾರ್ನರ್ 53 ಎಸೆತಗಳನ್ನು ತೆಗೆದುಕೊಂಡು ತಮ್ಮ ಅರ್ಧಶತಕ ಪೂರ್ಣಗೊಳಿಸಿದರು. ಆ ಬಳಿಕ ತಮ್ಮ ಜೊತೆಯಾಟವನ್ನು ಮುಂದುವರೆಸಿದೆ ಹೆಡ್-ವಾರ್ನರ್ ಆಸ್ಟ್ರೇಲಿಯಾದ ಸ್ಕೋರ್ ಅನ್ನು 24.5 ಓವರ್‌ಗಳಲ್ಲಿ 150 ಕ್ಕೆ ಕೊಂಡೊಯ್ದರು.
ಈ ಹಂತದಲ್ಲಿ ಟ್ರಾವಿಸ್ ಹೆಡ್ ತಮ್ಮ ಮೂರನೇ ಏಕದಿನ ಶತಕವನ್ನು 91 ಎಸೆತಗಳಲ್ಲಿ ಪೂರ್ಣಗೊಳಿಸಿದರೆ, ವಾರ್ನರ್ ಕೂಡ 97 ಎಸೆತಗಳಲ್ಲಿ ಶತಕ ಪೂರೈಸಿದರು. ಇದರೊಂದಿಗೆ ವಾರ್ನರ್ 1040 ದಿನಗಳ ಶತಕದ ಬರವನ್ನು ಕೊನೆಗೊಳಿಸಿದರು. ಅಂತಿಮವಾಗಿ 128 ಎಸೆತಗಳಲ್ಲಿ 150 ರನ್ ಪೂರೈಸಿ ಟ್ರಾವಿಸ್ ಹೆಡ್, 130 ಎಸೆತಗಳಲ್ಲಿ 152 ರನ್ ಗಳಿಸಿ ಔಟಾದರು. ಡೇವಿಡ್ ವಾರ್ನರ್ ಕೂಡ 106 ರನ್‌ಗಳ ಇನಿಂಗ್ಸ್ ಆಡಿ ತಮ್ಮ ಇನ್ನಿಂಗ್ಸ್ ಮುಗಿಸಿದರು. ಈ ಮೂಲಕ ವಾರ್ನರ್, ಹೆಡ್ ಜೊತೆ 269 ರನ್‌ಗಳ ದಾಖಲೆಯ ಜೊತೆಯಾಟವನ್ನು ನಡೆಸಿದರು. ಈ ಇಬ್ಬರ ಶತಕದ ನೆರವಿನಿಂದಾಗಿ ಆಸ್ಟ್ರೇಲಿಯಾ ತಂಡ 48 ಓವರ್‌ಗಳಲ್ಲಿ 355 ರನ್ ಗಳಿಸಿತು.
ಇಂಗ್ಲೆಂಡಿನ ಬ್ಯಾಟಿಂಗ್ ವೈಫಲ್ಯ
ಈ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಇಂಗ್ಲೆಂಡ್ ತಂಡದ ಆರಂಭ ಉತ್ತಮವಾಗಿರಲಿಲ್ಲ. ಆರಂಭಿಕ ಆಟಗಾರ ಡೇವಿಡ್ ಮಲಾನ್ ಕೇವಲ 2 ರನ್ ಗಳಿಸಿ ಔಟಾದರು. ಹೀಗಾಗಿ ಆರಂಭದಲ್ಲೇ ಒತ್ತಡಕ್ಕೆ ಸಿಲುಕಿದ ಇಂಗ್ಲೆಂಡ್ ತಂಡ ಪವರ್‌ಪ್ಲೇಯ 10 ಓವರ್‌ಗಳಲ್ಲಿ 49 ರನ್ ಗಳಿಸಲಷ್ಟೇ ಶಕ್ತವಾಯಿತು. ಅಲ್ಲದೆ ಆಸೀಸ್ ಮಾರಕ ವೇಗಕ್ಕೆ ಸುಸ್ತಾದ ಇಂಗ್ಲೆಂಡ್ ಬ್ಯಾಟರ್ಗಳು ನಿಧಾನಗತಿಯ ಆಟಕ್ಕೆ ಮುಂದಾದರು. ಅಲ್ಲದೆ ಆಗಾಗ್ಗೆ ವಿಕೆಟ್ ಕೈಚೆಲ್ಲಿದರು. ಹೀಗಾಗಿ ಇಂಗ್ಲೆಂಡ್ ತಂಡ 26.3 ಓವರ್‌ಗಳಲ್ಲಿ 100 ರನ್ ಪೂರೈಸಿತ್ತಾದರೂ ಈ ವೇಳೆಗೆ ತಂಡದ 7 ವಿಕೆಟ್‌ಗಳು ಪತನಗೊಂಡಿದ್ದವು.
ಈ ಪಂದ್ಯದಲ್ಲಿ ಇಂಗ್ಲೆಂಡ್‌ನ ಯಾವುದೇ ಬ್ಯಾಟ್ಸ್ಮನ್ಗೂ ಅರ್ಧಶತಕ ಗಳಿಸಲು ಸಾಧ್ಯವಾಗಲಿಲ್ಲ. ತಂಡದ ಪರ ಜೇಸನ್ ರಾಯ್ ಗರಿಷ್ಠ 33 ರನ್ ಗಳಿಸಿದರು. ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ತೋರಿದ ಆಸೀಸ್ ಲೆಗ್ ಸ್ಪಿನ್ನರ್ ಆಡಮ್ ಜಂಪಾ ಕೇವಲ 31 ರನ್ ನೀಡಿ 4 ವಿಕೆಟ್ ಪಡೆದರು. ಕಮ್ಮಿನ್ಸ್ ಹಾಗೂ ಅಬಾಟ್ ತಲಾ ಒಂದೊಮದು ವಿಕೆಟ್ ಪಡೆದರು.
Published On - 5:35 pm, Tue, 22 November 22