ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿ ಸಾಧನೆ ಗೈದಿದ್ದ ಭಾರತ (India vs New Zealand) ಇದೀಗ ಟಿ20 ಸರಣಿಯನ್ನೂ ವಶಪಡಿಸಿಕೊಂಡಿದೆ.
ಅಹ್ಮದಾಬಾದ್ನ ನರೆಂದ್ರ ಮೋದಿ ಸ್ಟೇಡಿಯಂನಲ್ಲಿ ಬುಧವಾರ ನಡೆದ ನಿರ್ಣಾಯಕ ಮೂರನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಬರೋಬ್ಬರಿ 168 ರನ್ಗಳ ಅಮೋಘ ಜಯ ಸಾಧಿಸುವ ಮೂಲಕ 2-1 ಅಂತರದಿಂದ ಸರಣಿಯನ್ನು ವಶಪಡಿಸಿಕೊಂಡಿದೆ.
ಶುಭ್ಮನ್ ಗಿಲ್ (Shubman Gill) ಅವರ ಅಮೋಘ ಚೊಚ್ಚಲ ಶತಕ ಹಾಗೂ ಹಾರ್ದಿಕ್ ಪಾಂಡ್ಯ (Hardik Pandya) ಬೌಲಿಂಗ್ ದಾಳಿಯ ನೆರವಿನಿಂದ ಭಾರತ ದೊಡ್ಡ ಮೊತ್ತದ ಜಯ ಸಾಧಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ಮತ್ತೆ ಉತ್ತಮ ಆರಂಭ ಪಡೆದುಕೊಳ್ಳುವಲ್ಲಿ ಎಡವಿತು. ಇಶನ್ ಕಿಶನ್ ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ಮತ್ತೆ ವಿಫಲರಾದರು. 1 ರನ್ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಹಾದಿ ಹಿಡಿದರು. ಕಿಶನ್ ನಂತರ ಬಂದ ರಾಹುಲ್ ತ್ರಿಪಾಠಿ ಅವರು ಶುಬ್ಮನ್ ಗಿಲ್ ಅವರೊಂದಿಗೆ 50 ರನ್ಗಳ ಉತ್ತಮ ಜೊತೆಯಾಟ ನೀಡಿದರು.
ನಂತರ ವೀಸ್ ಬೌಲರ್ಗಳ ಬೆಂಡೆತ್ತಿದ ಗಿಲ್ ಫೋರ್- ಸಿಕ್ಸರ್ಗಳ ಮಳೆ ಸುರಿಸಿದರು. ಗಿಲ್ಗೆ ಸಾಥ್ ನೀಡಿದ ನಾಯಕ ಹಾರ್ದಿಕ್ ಪಾಂಡ್ಯ ಅಮೋಘ ಆಟವಾಡಿದರು.
ಗಿಲ್ ಕೇವಲ 63 ಎಸೆತಗಳಲ್ಲಿ 12 ಫೋರ್, 7 ಸಿಕ್ಸರ್ನೊಂದಿಗೆ ಅಜೇಯ 126 ರನ್ ಚಚ್ಚಿದರು. ಭಾರತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 234 ರನ್ಗಳ ಸವಾಲಿನ ಮೊತ್ತವನ್ನು ದಾಖಲಿಸಿತು.
235 ರನ್ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ ಭಾರತದ ಬಿಗಿ ಬೌಲಿಂಗ್ ದಾಳಿಗೆ ಸಿಲುಕಿ 12.1 ಓವರ್ ಗಳಲ್ಲಿ ಕೇವಲ 66 ರನ್ ಗಳಿಗೆ ಆಲೌಟಾಯಿತು. ಡೇರಿಲ್ ಮಿಚೆಲ್ 35 ಮತ್ತು ನಾಯಕ ಸ್ಯಾಂಟ್ನರ್ 13 ರನ್ ಹೊರತು ಪಡಿಸಿ ಉಳಿದ ಯಾವ ಆಟಗಾರನೂ ಒಂದಂಕಿ ದಾಟಲಿಲ್ಲ.
ಭಾರತ ಪರ ನಾಯಕ ಹಾರ್ದಿಕ್ ಪಾಂಡ್ಯ 4 ವಿಕೆಟ್ ಮತ್ತು ಅರ್ಷದೀಪ್, ಉಮ್ರಾನ್ ಮಲಿಕ್ ಹಾಗೂ ಶಿವಂ ಮಾವಿ ತಲಾ ಎರಡು ವಿಕೆಟ್ ಪಡೆದರು.
Published On - 12:29 pm, Thu, 2 February 23