
ಮುಂಬೈನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ (India Vs New Zealand) ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ (Virat Kohli) 117 ರನ್ಗಳ ಪ್ರಬಲ ಇನ್ನಿಂಗ್ಸ್ ಆಡಿದರು. ಇದು ಏಕದಿನ ಕ್ರಿಕೆಟ್ನಲ್ಲಿ ಕೊಹ್ಲಿ ಅವರ 50ನೇ ಶತಕವಾಗಿದ್ದು, ಇದರೊಂದಿಗೆ ಸಚಿನ್ ತೆಂಡೂಲ್ಕರ್ (Sachin Tendulkar) ದಾಖಲೆಯನ್ನು ಕೊಹ್ಲಿ ಮುರಿದಿದ್ದಾರೆ. ಈ ಸಂದರ್ಭದಲ್ಲಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಉಪಸ್ಥಿತರಿದ್ದ ಸಚಿನ್ ತೆಂಡೂಲ್ಕರ್ ಕೂಡ ಕೊಹ್ಲಿ, ಶತಕ ಪೂರೈಸಿದ ಬಳಿಕ ಎದ್ದು ನಿಂತು ಗೌರವ ಸಲ್ಲಿಸಿದ್ದರು. ಅಷ್ಟೇ ಅಲ್ಲದೆ 50ನೇ ಏಕದಿನ ಶತಕ ಸಿಡಿಸಿದ ವಿರಾಟ್ ಕೊಹ್ಲಿಗೆ ಎಲ್ಲೆಡೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಇದೀಗ ಭಾರತದ ಮಾಜಿ ಆಟಗಾರ ಹಾಗೂ ಸಂಸದ ಗೌತಮ್ ಗಂಭೀರ್ (Gautam Gambhir) ಕೂಡ ಪ್ರತಿಕ್ರಿಯಿಸಿದ್ದಾರೆ.
ಗೌತಮ್ ಗಂಭೀರ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ, ‘50 ಶತಕಗಳನ್ನು ಬಾರಿಸುವ ಮೂಲಕ ಶ್ರೇಷ್ಠ ಸಚಿನ್ ತೆಂಡೂಲ್ಕರ್ ಅವರನ್ನು ಮೀರಿಸಿ ಸ್ಮರಣೀಯ ಸಾಧನೆ ಮಾಡಿದ ವಿರಾಟ್ಗೆ ಅಭಿನಂದನೆಗಳು!! ಅವರ ದಿವಂಗತ ತಂದೆ ಇಂದು ತುಂಬಾ ಹೆಮ್ಮೆಪಡುತ್ತಾರೆ ಮತ್ತು ಅವರ ಮಗನ ಸಾಧನೆಯನ್ನು ನೋಡಿ ತುಂಬ ಸಂತಸಪಟ್ಟಿರುತ್ತಾರೆ ಎಂದು ನನಗೆ ಖಾತ್ರಿಯಿದೆ!!’ ಎಂದು ಬರೆದುಕೊಂಡಿದ್ದಾರೆ.
Virat Kohli: ಏಕದಿನದಲ್ಲಿ ರಿಕಿ ಪಾಂಟಿಂಗ್ ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿದ ಕಿಂಗ್ ಕೊಹ್ಲಿ..!
ಗೌತಮ್ ಗಂಭೀರ್ ಅವರ ಈ ಮೆಚ್ಚುಗೆಯ ಮಾತುಗಳಿಗೆ ಅಭಿಮಾನಿಗಳು ಕೂಡ ಹರ್ಷವ್ಯಕ್ತಪಡಿಸುತ್ತಿದ್ದಾರೆ. ಕೊಹ್ಲಿ 2009ರಲ್ಲಿ ಶ್ರೀಲಂಕಾ ವಿರುದ್ಧ ಮೊದಲ ಏಕದಿನ ಶತಕ ದಾಖಲಿಸಿದ್ದರು. ಆ ಪಂದ್ಯದಲ್ಲಿ ಗೌತಮ್ ಗಂಭೀರ್ ಕೂಡ ಶತಕ ಸಿಡಿಸಿದ್ದರು. ಆ ಪಂದ್ಯದಲ್ಲಿ ಗೌತಮ್ ಗಂಭೀರ್ಗೆ ಮ್ಯಾಜ್ ಆಫ್ ದಿ ಮ್ಯಾಚ್ ಪ್ರಶಸ್ತಿ ನೀಡಲಾಗಿತ್ತು. ಆದರೆ ಗಂಭೀರ್ ಆ ಪ್ರಶಸ್ತಿಯನ್ನು ವಿರಾಟ್ ಕೊಹ್ಲಿಗೆ ನೀಡಿದ್ದರು. ಆ ವೇಳೆ ಗೌತಮ್ ಗಂಭೀರ್ ಇದು ವಿರಾಟ್ ಅವರ ಮೊದಲ ಶತಕ. ಹೀಗಾಗಿ ಅವರ ಶತಕವನ್ನು ಇನ್ನಷ್ಟು ಸ್ಪೆಷಲ್ ಮಾಡುವ ಉದ್ದೇಶದಿಂದ ಈ ಪ್ರಶಸ್ತಿಯನ್ನು ಅವರಿಗೆ ನೀಡುತ್ತಿದ್ದೇನೆ ಎಂದಿದ್ದರು.
ಇನ್ನು ವಿಶ್ವಕಪ್ ಸೆಮಿಫೈನಲ್ ಪಂದ್ಯವನ್ನು ಗೆದ್ದು ಬೀಗಿರುವ ಟೀಂ ಇಂಡಿಯಾ ಫೈನಲ್ ಪಂದ್ಯದಲ್ಲಿ ಯಾರು ಎದುರಾಳಿಯಾಗುತ್ತಾರೆ ಎಂಬುದನ್ನು ಕಾದು ನೋಡುತ್ತಿದೆ. ನವೆಂಬರ್ 19 ರಂದು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ ತಂಡ ಅಂತಿಮ ಪಂದ್ಯವನ್ನು ಆಡಲಿದೆ. ಭಾರತ ತಂಡ ಮೂರನೇ ಬಾರಿಗೆ ವಿಶ್ವಕಪ್ ಪ್ರಶಸ್ತಿ ಗೆಲ್ಲುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ. ಭಾರತ ಈ ಹಿಂದೆ 1983 ಮತ್ತು 2011ರಲ್ಲಿ ವಿಶ್ವಕಪ್ ಗೆದ್ದಿತ್ತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:01 pm, Thu, 16 November 23