ಬೆಂಗಳೂರಿನಲ್ಲಿ ನೆದರ್ಲೆಂಡ್ ತಂಡವನ್ನು ಮಣಿಸಿದ ಭಾರತ (India Vs Netherlands) ಲೀಗ್ ಸುತ್ತಿಗೆ ಯಶಸ್ವಿ ವಿದಾಯ ಹೇಳಿದೆ. ಈ ಸುತ್ತಿ ಅಂತ್ಯದೊಂದಿಗೆ ಸೆಮಿಫೈನಲ್‌ಗೇರುವ 4 ತಂಡಗಳ ಚಿತ್ರಣವೂ ಸ್ಪಷ್ಟವಾಗಿದೆ. ಭಾರತವಲ್ಲದೆ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿವೆ. ಟೂರ್ನಿಯ ನಿಯಮಾವಳಿ ಪ್ರಕಾರ ಲೀಗ್ ಪಂದ್ಯಗಳು ಮುಗಿದ ಬಳಿಕ ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿರುವ ಟೀಂ ಇಂಡಿಯಾ ನಾಲ್ಕನೇ ಶ್ರೇಯಾಂಕದ ನ್ಯೂಜಿಲೆಂಡ್ (India vs New Zealand) ತಂಡವನ್ನು ಎದುರಿಸಲಿದೆ. ಈ ಪಂದ್ಯ ನವೆಂಬರ್ 15 ರಂದು ಮುಂಬೈನ ವಾಂಖೆಡೆ (Wankhede Stadium) ಸ್ಟೇಡಿಯಂನಲ್ಲಿ ನಡೆಯಲಿದೆ. ಎರಡನೇ ಸೆಮಿಫೈನಲ್ ಪಂದ್ಯ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವೆ ನವೆಂಬರ್ 15 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ. ಆದರೆ ಈ ಬಾರಿಯ ವಿಶ್ವಕಪ್‌ನಲ್ಲಿ (ICC ODI World Cup 2023) ಅಜೇಯ ಓಟ ಮುಂದುವರೆಸಿರುವ ಟೀಂ ಇಂಡಿಯಾಕ್ಕೆ ವಾಂಖೆಡೆ ಕ್ರೀಡಾಂಗಣದ ದಾಖಲೆಗಳು ಕೊಂಚ ಹಿನ್ನಡೆಯನ್ನುಂಟು ಮಾಡಿವೆ. ಅದಕ್ಕೆ ಕಾರಣವೆಂದರೆ, ಇದುವರೆಗೆ ವಾಂಖೆಡೆಯಲ್ಲಿ ನಡೆದಿರುವ ಒಂದೇ ಒಂದು ಸೆಮಿಫೈನಲ್ ಪಂದ್ಯವನ್ನೂ ಟೀಂ ಇಂಡಿಯಾ ಗೆಲ್ಲದಿರುವುದು.
1983 ರಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸುವ ಮೂಲಕ ಟೀಂ ಇಂಡಿಯಾ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಗೆದ್ದಿತು. 4 ವರ್ಷಗಳ ನಂತರ ನಡೆದ ವಿಶ್ವಕಪ್‌ನಲ್ಲಿ ಭಾರತ ಮತ್ತೊಮ್ಮೆ ಪ್ರಶಸ್ತಿಗಾಗಿ ಸ್ಪರ್ಧಿಯಾಗಿ ಟೂರ್ನಿಗೆ ಪ್ರವೇಶಿಸಿತ್ತು. ಆದರೆ ತಂಡದ ಪ್ರಯಾಣವು ಸೆಮಿಫೈನಲ್‌ನಲ್ಲಿ ಕೊನೆಗೊಂಡಿತು. ವಾಂಖೆಡೆಯಲ್ಲಿ ನಡೆದ ಈ ಸೆಮಿಫೈನಲ್ ಪಂದ್ಯದಲ್ಲಿ ಭಾರತವನ್ನು 35 ರನ್‌ಗಳಿಂದ ಸೋಲಿಸುವ ಮೂಲಕ ಇಂಗ್ಲೆಂಡ್ ಫೈನಲ್‌ಗೆ ಟಿಕೆಟ್ ಖಚಿತಪಡಿಸಿಕೊಂಡಿತ್ತು.
ಎರಡು ವರ್ಷಗಳ ನಂತರ, ನೆಹರು ಕಪ್‌ನ ಸೆಮಿ-ಫೈನಲ್ ಪಂದ್ಯವು ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇದೇ ವಾಂಖೆಡೆಯಲ್ಲಿ ನಡೆದಿತ್ತು. ಈ ಪಂದ್ಯದಲ್ಲೂ ಟೀಂ ಇಂಡಿಯಾವನ್ನು ವೆಸ್ಟ್ ಇಂಡೀಸ್ 8 ವಿಕೆಟ್‌ಗಳಿಂದ ಗೆದ್ದಿತು. ಆ ಬಳಿಕ 2016 ರಲ್ಲಿ ನಡೆದ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಮತ್ತೊಮ್ಮೆ ಭಾರತವನ್ನು ಸೋಲಿಸಿತ್ತು.
ಸೆಮಿಫೈನಲ್‌ನಲ್ಲಿ ಮೀಸಲು ದಿನವೂ ಮಳೆಯಾದರೆ ಫಲಿತಾಂಶವನ್ನು ಹೇಗೆ ನಿರ್ಧರಿಸಲಾಗುತ್ತದೆ?
ಇನ್ನು ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್ ಭಾರತದ ದಾಖಲೆಯನ್ನು ನೋಡುವುದಾದರೆ.. 1985 ರಲ್ಲಿ ಮೊದಲ ಬಾರಿಗೆ ವಿಶ್ವಚಾಂಪಿಯನ್ಶಿಪ್ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೆಮಿ ಎದುರಿಸಿದ್ದ ಭಾರತ 7 ವಿಕೆಟ್ಗಳ ಜಯ ಸಾಧಿಸಿತ್ತು. ಆ ಬಳಿಕ ಉಭಯ ತಂಡಗಳು 2019 ರ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾದ್ದವು. ಆದರೆ ಆ ಪಂದ್ಯವನ್ನು ಭಾರತ 18 ರನ್‌ಗಳಿಂದ ಸೋತು ವಿಶ್ವಕಪ್ನಿಂದ ಹೊರಬಿದ್ದಿತ್ತು.
ಇದು ವಾಂಖೆಡೆಯಲ್ಲಿ ಭಾರತದ ಸೆಮಿಫೈನಲ್ ಸೋಲಿನ ಕಥೆಯಾದರೆ.. ಇದೇ ಮೈದಾನದಲ್ಲಿ ಭಾರತ ವಿಶ್ವ ಚಾಂಪಿಯನ್ ಕೂಡ ಆಗಿದೆ. 2011ರ ವಿಶ್ವಕಪ್‌ನಲ್ಲಿ ಇದೇ ಮೈದಾನದಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿದ್ದ ಭಾರತ ಬರೋಬ್ಬರಿ 28 ವರ್ಷಗಳ ಬಳಿಕ ವಿಶ್ವಕಪ್ ಎತ್ತಿ ಹಿಡಿದಿತ್ತು. ಆದರೆ ಅಂಕಿಅಂಶಗಳನ್ನು ಗಮನಿಸಿದರೆ, ಇಲ್ಲಿಯವರೆಗೆ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಯಾವುದೇ ಮಾದರಿಯ ಸೆಮಿಫೈನಲ್ ಪಂದ್ಯವನ್ನು ಭಾರತ ಗೆದ್ದಿಲ್ಲ ಎಂಬುದು ಅಭಿಮಾನಿಗಳ ಆತಂಕ ಹೆಚ್ಚಿಸಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ