ಸೆಮಿಫೈನಲ್‌ನಲ್ಲಿ ಮೀಸಲು ದಿನವೂ ಮಳೆಯಾದರೆ ಫಲಿತಾಂಶವನ್ನು ಹೇಗೆ ನಿರ್ಧರಿಸಲಾಗುತ್ತದೆ?
ICC World Cup 2023: ಮುಂಬೈನಲ್ಲಿ ಸೆಮಿಫೈನಲ್ ಪಂದ್ಯ ನಡೆಯುತ್ತಿರುವುದರಿಂದ ಇಲ್ಲಿ ಯಾವಾಗಲೂ ಅಕಾಲಿಕ ಮಳೆಯ ಭೀತಿ ಇರುತ್ತದೆ. ಆದರೆ ಐಸಿಸಿ ಈಗಾಗಲೆ ಸೆಮಿಫೈನಲ್ ಪಂದ್ಯಗಳಿಗೆ ಮೀಸಲು ದಿನವನ್ನು ಸಹ ಇರಿಸಿದೆ. ಆದಾಗ್ಯೂ, ಮೀಸಲು ದಿನದಂದು ಪಂದ್ಯ ಕೊನೆಗೊಳ್ಳದಿದ್ದರೆ ವಿಜೇತರನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ? ಎಂಬುದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ.
ಭಾರತ, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳು ವಿಶ್ವಕಪ್‌ನ (ICC ODI World Cup 2023) ಈಗಾಗಲೇ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿವೆ. ಶ್ರೀಲಂಕಾ ತಂಡವನ್ನು ಮಣಿಸಿರುವ ನ್ಯೂಜಿಲೆಂಡ್ ಕೂಡ ಅಗ್ರ ನಾಲ್ಕರೊಳಗೆ ಎಂಟ್ರಿಕೊಡುವುದು ಖಚಿತವಾಗಿದೆ. ಆದರೆ ಐಸಿಸಿಯಿಂದ ಈ ಬಗ್ಗೆ ಅಧಿಕೃತ ಹೇಳಿಕೆ ಮಾತ್ರ ಬಾಕಿ ಉಳಿದಿದೆ. ಹೀಗಾಗಿ ಈಗಾಗಲೇ ಸೆಮಿಫೈನಲ್‌ನಲ್ಲಿ ಯಾವ ತಂಡಕ್ಕೆ ಯಾವ ತಂಡ ಎದುರಾಗಲಿದೆ ಎಂಬುದರ ಸ್ಪಷ್ಟ ಚಿತ್ರಣ ಹೊರಬಿದ್ದಿದೆ. ಬುಧವಾರ ನಡೆಯಲ್ಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ (India Vs New Zealand) ಮುಖಾಮುಖಿಯಾದರೆ, ಗುರುವಾರ ನಡೆಯಲ್ಲಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ದಕ್ಷಿಣ ಆಫ್ರಿಕಾ (Australia vs South Africa) ಎದುರಿಸಲಿದೆ.
ಭಾರತ- ಕಿವೀಸ್ ಮುಖಾಮುಖಿ
ಭಾರತ ಇಲ್ಲಿಯವರೆಗೆ 8 ಪಂದ್ಯಗಳನ್ನು ಗೆದ್ದಿದ್ದು, ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಇತ್ತ ನ್ಯೂಜಿಲೆಂಡ್ ಆಡಿರುವ 9 ಪಂದ್ಯಗಳಲ್ಲಿ 5 ಗೆಲುವು ಸಾಧಿಸಿ ಸೆಮಿಫೈನಲ್‌ಗೆ ಕೊನೆಯ ತಂಡವಾಗಿ ಎಂಟ್ರಿಕೊಟ್ಟಿದೆ. ಈ ಕಾರಣಕ್ಕಾಗಿ ಸೆಮಿಫೈನಲ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಮುಖಾಮುಖಿಯಾಗುವುದು ಬಹುತೇಕ ಖಚಿತವಾಗಿದೆ. ಆದರೆ ಈ ನಡುವೆ ಸೆಮಿಫೈನಲ್ ಪಂದ್ಯದ ದಿನದಂದು ಮಳೆ ಬಂದರೆ ವಿಜೇತರನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡಲಾರಂಭಿಸಿದೆ. ಅದೆಲ್ಲ ಪ್ರಶ್ನೆಗಳಿಗೆ ಸಂಕ್ಷಿಪ್ತ ಉತ್ತರ ಇಲ್ಲಿದೆ.
IND vs NED: ಬ್ಯಾಟಿಂಗ್ ಸ್ವರ್ಗ ಬೆಂಗಳೂರಿನಲ್ಲಿ ಅಬ್ಬರಿಸುತ್ತಾ ಭಾರತ? ಪಂದ್ಯಕ್ಕೆ ಮಳೆಯ ಆತಂಕ? ಇಲ್ಲಿದೆ ವಿವರ
ಮಳೆಯಾದರೆ ಯಾವ ತಂಡಕ್ಕೆ ಲಾಭ
ಮುಂಬೈನಲ್ಲಿ ಸೆಮಿಫೈನಲ್ ಪಂದ್ಯ ನಡೆಯುತ್ತಿರುವುದರಿಂದ ಇಲ್ಲಿ ಯಾವಾಗಲೂ ಅಕಾಲಿಕ ಮಳೆಯ ಭೀತಿ ಇರುತ್ತದೆ. ಆದರೆ ಐಸಿಸಿ ಈಗಾಗಲೆ ಸೆಮಿಫೈನಲ್ ಪಂದ್ಯಗಳಿಗೆ ಮೀಸಲು ದಿನವನ್ನು ಸಹ ಇರಿಸಿದೆ. ಆದಾಗ್ಯೂ, ಮೀಸಲು ದಿನದಂದು ಪಂದ್ಯ ಕೊನೆಗೊಳ್ಳದಿದ್ದರೆ ವಿಜೇತರನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ? ಎಂಬುದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಒಂದು ವೇಳೆ ಮಳೆಯಿಂದಾಗಿ ಮೀಸಲು ದಿನವೂ ಪಂದ್ಯ ಪೂರ್ಣಗೊಳದ ಪರಿಸ್ಥಿತಿ ಬಂದರೆ ಅದು ಭಾರತಕ್ಕೆ ಲಾಭವಾಗಲಿದೆ. ನಿಯಮಗಳ ಪ್ರಕಾರ, ಮೀಸಲು ದಿನದಂದು ಪಂದ್ಯವನ್ನು ಪೂರ್ಣಗೊಳಿಸದಿದ್ದರೆ, ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ತಂಡವು ಫೈನಲ್ ಆಡುವ ಅವಕಾಶವನ್ನು ಪಡೆಯುತ್ತದೆ. ಹೀಗಾಗಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ಪಂದ್ಯವನ್ನಾಡದೆ ನೇರವಾಗಿ ಫೈನಲ್ ತಲುಪಬಹುದಾಗಿದೆ.
ಆಫ್ರಿಕಾ ಫೈನಲ್ಗೆ
ಇನ್ನೊಂದೆಡೆ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳಿಗೂ ಇದೇ ನಿಯಮವನ್ನು ಅನ್ವಯ ಮಾಡಲಾಗುತ್ತದೆ. ಒಂದು ವೇಳೆ ಪಂದ್ಯದ ದಿನ ಮಳೆ ಬಂದು ಪಂದ್ಯ ರದ್ದಾದರೆ, ಮೀಸಲು ದಿನದಂದು ಅಂದರೆ ಮರು ದಿನದಂದು ಪಂದ್ಯವನ್ನು ಪೂರ್ಣಗೊಳಿಸಲಾಗುತ್ತದೆ. ಆದರೆ ಆ ದಿನವೂ ಮಳೆಯಿಂದ ಪಂದ್ಯ ಪೂರ್ಣಗೊಳದಿದ್ದರೆ ಪಾಯಿಂಟ್ ಪಟ್ಟಿಯಲ್ಲಿ ಮೇಲಿನ ಸ್ಥಾನದಲ್ಲಿರುವ ತಂಡವನ್ನು ವಿಜಯಿ ಎಂದು ಘೋಷಿಸಲಾಗುತ್ತದೆ. ಪ್ರಸ್ತುತ ಪಾಯಿಂಟ್ ಪಟ್ಟಿಯ ಪ್ರಕಾರ ದಕ್ಷಿಣ ಆಫ್ರಿಕಾ ತಂಡ, ಆಸ್ಟ್ರೇಲಿಯಾಕ್ಕಿಂತ ಮೇಲಿದ್ದು, ಆಫ್ರಿಕಾ ತಂಡವನ್ನೇ ವಿಜಯಿ ಎಂದು ಘೋಷಿಸಲಾಗುತ್ತದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:28 pm, Sat, 11 November 23