IND vs NZ: 5 ದಿನವು ಮಳೆ… ಭಾರತ vs ನ್ಯೂಝಿಲೆಂಡ್ ಪಂದ್ಯ ನಡೆಯುವುದು ಅನುಮಾನ
India vs New Zealand: ಭಾರತ ಮತ್ತು ನ್ಯೂಝಿಲೆಂಡ್ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯು ಬುಧವಾರದಿಂದ ಶುರುವಾಗಲಿದೆ. ಅಕ್ಟೋಬರ್ 16 ರಿಂದ ಆರಂಭವಾಗಲಿರುವ ಮೊದಲ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯವಹಿಸಿದರೆ, ಎರಡನೇ ಪಂದ್ಯವು ಪುಣೆಯಲ್ಲಿ ನಡೆಯಲಿದೆ. ಹಾಗೆಯೇ ಮೂರನೇ ಪಂದ್ಯವು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಜರುಗಲಿದೆ.
ರಾಜ್ಯದಲ್ಲಿ ಮುಂದಿನ 4 ದಿನಗಳವರೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅದರಲ್ಲೂ ಬೆಂಗಳೂರಿನ ಸುತ್ತ ಮುತ್ತ ನಾಳೆಯಿಂದ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ. ಇತ್ತ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಾಳೆಯಿಂದ (ಅ.16) ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಟೆಸ್ಟ್ ಸರಣಿ ಶುರುವಾಗಬೇಕಿದೆ.
ಇದೀಗ ಬೆಂಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಟೆಸ್ಟ್ ಪಂದ್ಯ ನಡೆಯುವುದು ಅನುಮಾನ ಎನ್ನಲಾಗಿದೆ. ಏಕೆಂದರೆ ಮುಂದಿನ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಆರೆಂಜ್ ಆಲರ್ಟ್ ಘೋಷಿಸಲಾಗಿದ್ದು, ಹೀಗಾಗಿ ಪಂದ್ಯವನ್ನು ಆಯೋಜಿಸುವುದು ಕಷ್ಟಸಾಧ್ಯ.
ವೆದರ್.ಕಾಮ್ ವರದಿ ಪ್ರಕಾರ, ಭಾರತ vs ನ್ಯೂಝಿಲೆಂಡ್ ನಡುವಣ ಪಂದ್ಯದ ಮೊದಲ ದಿನದಾಟವು ಸಂಪೂರ್ಣ ಮಳೆಗೆ ಅಹುತಿಯಾಗಲಿದೆ. ಇನ್ನು ಎರಡನೇ ದಿನದಾಟದ ವೇಳೆ ಶೇ.80 ರಷ್ಟು ಮಳೆಯಾಗಲಿದೆ. ಹಾಗೆಯೇ ಮೂರನೇ ಮತ್ತು ನಾಲ್ಕನೇ ದಿನದಾಟದ ಅವಧಿಯಲ್ಲಿ ಶೇ.60 ರಷ್ಟು ಮಳೆಯಾಗುವ ಸಂಭವನೀಯತೆ ಇದೆ. ಅದೇ ರೀತಿ ಕೊನೆಯ ದಿನದಾಟದ ವೇಳೆ ಶೇ.70 ರಷ್ಟು ಮಳೆಯಾಗಲಿದೆ ಎಂದು ತಿಳಿಸಲಾಗಿದೆ.
ಅಂದರೆ ಅಕ್ಟೋಬರ್ 16 ರಿಂದ 20 ರವರೆಗೆ ಕನಿಷ್ಠ 60% ರಷ್ಟು ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ ಪಂದ್ಯ ನಡೆಯುವ ಸಾಧ್ಯತೆ ತುಂಬಾ ಕಡಿಮೆ. ಇನ್ನು ಪಂದ್ಯ ನಡೆದರೂ ಸಂಪೂರ್ಣ ದಿನದಾಟಗಳು ನಡೆಯುವ ಸಾಧ್ಯತೆಯಿಲ್ಲ.
ಸಬ್ ಏರ್ ಸಿಸ್ಟಂ ಮೈದಾನ:
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅತ್ಯಾಧುನಿಕ ಸಬ್ ಏರ್ ಸಿಸ್ಟಂ ಹೊಂದಿದ್ದು, ಇದು ಶೀಘ್ರವಾಗಿ ಮೈದಾನದಲ್ಲಿನ ನೀರನ್ನು ಹೀರಿಕೊಳ್ಳುತ್ತದೆ. ಹೀಗಾಗಿ ಮಳೆ ಬಂದು ನಿಂತರೆ ಕೆಲವೇ ನಿಮಿಷಗಳಲ್ಲಿ ಮೈದಾನವನ್ನು ಸಜ್ಜುಗೊಳಿಸಬಹುದು.
ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿ ಮುಂದಿದೆ ಮೂರು ಭರ್ಜರಿ ದಾಖಲೆಗಳು
ಆದರೆ ವೆದರ್.ಕಾಮ್ ವರದಿ ಪ್ರಕಾರ, 5 ದಿನದಾಟಗಳಲ್ಲಿ ಶೇ.60 ರಷ್ಟು ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ. ಒಂದು ವೇಳೆ ಸಂಪೂರ್ಣ ಮಳೆ ನಿಂತ ಬಳಿಕ ಸಬ್ ಏರ್ ಸಿಸ್ಟಂ ಬಳಸಿ ಮೈದಾನವನ್ನು ರೆಡಿ ಮಾಡಿದರೂ, ಪಂದ್ಯ ಶುರುವಾಗುವ ವೇಳೆ ಮತ್ತೆ ಮಳೆಯಾಗಬಹುದು. ಹೀಗಾಗಿ ಪಂದ್ಯವನ್ನು ಆಯೋಜಿಸುವುದು ಕಷ್ಟಸಾಧ್ಯ ಎಂದೇ ಹೇಳಬಹುದು.
ದಿಢೀರ್ ಮಳೆ ಯಾಕೆ?
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ದಕ್ಷಿಣ ಭಾರತದಲ್ಲಿ ಭಾರೀ ಮಳೆಯಾಗುತ್ತಿದೆ. ಈ ಮಳೆಯು ಮುಂದಿನ ನಾಲ್ಕೈದು ದಿನಗಳ ಕಾಲ ಮುಂದುವರೆಯಲಿದೆ. ಅಲ್ಲದೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಅಲರ್ಟ್ ಘೋಷಿಸಿದೆ.
Published On - 3:02 pm, Tue, 15 October 24