IND vs NZ: ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ನ್ಯೂಝಿಲೆಂಡ್ಗೆ ಆಘಾತ: ಪ್ರಮುಖ ಆಟಗಾರ ಔಟ್
IND vs NZ: ಬೆನ್ ಸಿಯರ್ಸ್ ಈ ವರ್ಷ ನ್ಯೂಝಿಲೆಂಡ್ ಪರ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದರು. 26ರ ಹರೆಯದ ಬೌಲರ್ ಆಸ್ಟ್ರೇಲಿಯಾ ವಿರುದ್ಧ 5 ವಿಕೆಟ್ ಕಬಳಿಸಿ ಮಿಂಚಿದ್ದರು. ಅಲ್ಲದೆ ಕಳೆದ ತಿಂಗಳು ಶ್ರೀಲಂಕಾ ಪ್ರವಾಸದ ವೇಳೆ ಗಾಯಗೊಂಡು ತಂಡದಿಂದ ಹೊರಗುಳಿದಿದ್ದರು. ಇದೀಗ ಭಾರತದ ವಿರುದ್ಧದ ಸರಣಿಯಿಂದಲೂ ಹಿಂದೆ ಸರಿದಿದ್ದಾರೆ.
ಭಾರತ ವಿರುದ್ಧದ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ನ್ಯೂಝಿಲೆಂಡ್ ತಂಡಕ್ಕೆ ಆಘಾತ ಎದುರಾಗಿದೆ. ತಂಡದ ಪ್ರಮುಖ ವೇಗಿ ಬೆನ್ ಸಿಯರ್ಸ್ ಸರಣಿಯಿಂದ ಹೊರಗುಳಿದಿದ್ದಾರೆ. ಮೊಣಕೈಗೆ ಗಾಯ ಮಾಡಿಕೊಂಡಿರುವ ಸಿಯರ್ಸ್ ಇದೀಗ ಮೂರು ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.
ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿ ವೇಳೆ ಬೆನ್ ಸಿಯರ್ಸ್ ಗಾಯಗೊಂಡಿದ್ದರು. ಇದಾಗ್ಯೂ ಅವರನ್ನು ಭಾರತದ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆ ಮಾಡಲಾಗಿತ್ತು. ಆದರೀಗ ಅವರು ಸಂಪೂರ್ಣ ಫಿಟ್ನೆಸ್ ಸಾಧಿಸುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಅವರನ್ನು ತಂಡದಿಂದ ಕೈ ಬಿಡಲು ನ್ಯೂಝಿಲೆಂಡ್ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ.
ಬದಲಿ ಆಟಗಾರ ಯಾರು?
ಬೆನ್ ಸಿಯರ್ಸ್ ಹೊರಬಿದ್ದ ಬೆನ್ನಲ್ಲೇ ಜೇಕೊಬ್ ಡಫಿ ಅವರನ್ನು ಬದಲಿ ಆಟಗಾರನಾಗಿ ಆಯ್ಕೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿರುವ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 299 ವಿಕೆಟ್‌ಗಳನ್ನು ಪಡೆದಿದ್ದಾರೆ. ಹಾಗೆಯೇ ನ್ಯೂಝಿಲೆಂಡ್ ಪರ 6 ಏಕದಿನ ಮತ್ತು 14 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಅನುಭವ ಹೊಂದಿದ್ದಾರೆ.
ಕೇನ್ ವಿಲಿಯಮ್ಸನ್ ಅಲಭ್ಯ:
ನ್ಯೂಝಿಲೆಂಡ್ ತಂಡದ ಪ್ರಮುಖ ಬ್ಯಾಟರ್ ಕೇನ್ ವಿಲಿಯಮ್ಸನ್ ಕೂಡ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಪಂದ್ಯಕ್ಕೆ ವಿಲಿಯಮ್ಸನ್ ಅಲಭ್ಯರಾಗಿದ್ದಾರೆ.
ಇದನ್ನೂ ಓದಿ: IPL 2025: RCB ತಂಡದಿಂದ ಗ್ರೀನ್ಗೆ ಗೇಟ್ ಪಾಸ್..!
ನ್ಯೂಝಿಲೆಂಡ್ ಟೆಸ್ಟ್ ತಂಡ: ಟಾಮ್ ಲ್ಯಾಥಮ್ (ನಾಯಕ), ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೇ, ಮ್ಯಾಟ್ ಹೆನ್ರಿ, ಡೇರಿಲ್ ಮಿಚೆಲ್, ವಿಲ್ ಓ’ರೂರ್ಕ್, ಅಜಾಝ್ ಪಟೇಲ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಕೇನ್ ವಿಲಿಯಮ್ಸನ್ (ಮೊದಲ ಪಂದ್ಯಕ್ಕೆ ಅಲಭ್ಯ), ಜೇಕೊಬ್ ಡಫಿ, ವಿಲ್ ಯಂಗ್, ಮೈಕೆಲ್ ಬ್ರೇಸ್‌ವೆಲ್ (ಮೊದಲನೇ ಟೆಸ್ಟ್ಗೆ ಮಾತ್ರ), ಇಶ್ ಸೋಧಿ (ಮೊದಲ ಪಂದ್ಯಕ್ಕೆ ಅಲಭ್ಯ).
ಭಾರತ vs ನ್ಯೂಝಿಲೆಂಡ್ ಟೆಸ್ಟ್ ಸರಣಿ ವೇಳಾಪಟ್ಟಿ:
- ಮೊದಲ ಟೆಸ್ಟ್ – ಅಕ್ಟೋಬರ್ 16 ರಿಂದ 20 (ಎಂ ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರು)
- ಎರಡನೇ ಟೆಸ್ಟ್ – 24 ರಿಂದ 28 ಅಕ್ಟೋಬರ್ (ಎಂಸಿಎ ಸ್ಟೇಡಿಯಂ, ಪುಣೆ)
- ಮೂರನೇ ಟೆಸ್ಟ್ – ನವೆಂಬರ್ 1 ರಿಂದ 5 (ವಾಂಖೆಡೆ ಸ್ಟೇಡಿಯಂ, ಮುಂಬೈ).