
ಬೆಂಗಳೂರು (ಸೆ. 28): ಏಷ್ಯಾಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತ (Indian Cricket Team) ಮತ್ತು ಪಾಕಿಸ್ತಾನ ನಡುವೆ ಫೈನಲ್ ಪಂದ್ಯ ನಡೆಯುತ್ತಿದೆ. ಈ ಹೈವೋಲ್ಟೇಜ್ ಕದನಕ್ಕೆ ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣ ಸಜ್ಜಾಗಿದೆ. ಈ ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಎರಡು ಪಂದ್ಯಗಳನ್ನು ಆಡಿದ್ದು, ಭಾರತ ಈ ಎರಡನ್ನೂ ಗೆದ್ದಿದೆ. ಸದ್ಯ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಇಂದಿನ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ ದೊಡ್ಡ ಬದಲಾವಣೆ ಮಾಡಲಾಗಿದೆ. ಇಂಜುರಿಯಿಂದ ಬಳಲುತ್ತಿರುವ ಹಾರ್ದಿಕ್ ಪಾಂಡ್ಯ ಫೈನಲ್ ಕದನಕ್ಕೆ ಅಲಭ್ಯರಾಗಿದ್ದಾರೆ. ಇವರ ಜಾಗಕ್ಕೆ ರಿಂಕು ಸಿಂಗ್ ಆಯ್ಕೆ ಆಗಿದ್ದಾರೆ. ಹಾಗೆಯೆ ಕಳೆದ ಸೂಪರ್ 4 ನಲ್ಲಿ ಶ್ರೀಲಂಕಾ ವಿರುದ್ಧ ವಿಶ್ರಾಂತಿ ಪಡೆದುಕೊಂಡಿದ್ದ ಜಸ್ಪ್ರಿತ್ ಬುಮ್ರಾ ಕಮ್ಬ್ಯಾಕ್ ಮಾಡಿದ್ದಾರೆ. ಶಿವಂ ದುವೆ ಕೂಡ ತಂಡಕ್ಕೆ ಮರಳಿದ್ದಾರೆ.
ಭಾರತ ಪ್ಲೇಯಿಂಗ್ XI: ಅಭಿಷೇಕ್ ಶರ್ಮಾ, ಶುಭ್ಮನ್ ಗಿಲ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರಿಂಕು ಸಿಂಗ್, ಅಕ್ಸರ್ ಪಟೇಲ್, ಹರ್ಷಿತ್ ರಾಣಾ, ಕುಲ್ದೀಪ್ ಯಾದವ್, ಜಸ್ಪ್ರಿತ್ ಬುಮ್ರಾ, ವರುಣ್ ಚಕ್ರವರ್ತಿ.
ಅತ್ತ ಪಾಕಿಸ್ತಾನ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಪಾಕಿಸ್ತಾನ ಪ್ಲೇಯಿಂಗ್ XI: ಸಾಹಿಬ್ಜಾದಾ ಫರ್ಹಾನ್, ಫಖರ್ ಜಮಾನ್, ಸೈಮ್ ಅಯೂಬ್, ಸಲ್ಮಾನ್ ಅಘಾ (ನಾಯಕ), ಹುಸೇನ್ ತಲತ್, ಮೊಹಮ್ಮದ್ ಹ್ಯಾರಿಸ್( ವಿಕೆಟ್ ಕೀಪರ್), ಮೊಹಮ್ಮದ್ ನವಾಜ್, ಫಹೀಮ್ ಅಶ್ರಫ್, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ಅಬ್ರಾರ್ ಅಹ್ಮದ್.
ಯುಎಇ ವಿರುದ್ಧ 9 ವಿಕೆಟ್‌ಗಳಿಂದ ಗೆಲುವು, ಪಾಕಿಸ್ತಾನವನ್ನು 7 ವಿಕೆಟ್‌ಗಳಿಂದ ಸೋಲಿಸಿ ಮತ್ತು ಓಮನ್ ವಿರುದ್ಧ 21 ರನ್‌ಗಳಿಂದ ಸೋಲಿಸಿ ಗುಂಪು ಹಂತದ ಪಂದ್ಯ ಭಾರತ ಗೆದ್ದರೆ, ಬಳಿಕ ಸೂಪರ್ 4 ನಲ್ಲಿ ಪಾಕಿಸ್ತಾನವನ್ನು 6 ವಿಕೆಟ್‌ಗಳಿಂದ ಸೋಲಿಸಿ ಬಾಂಗ್ಲಾದೇಶವನ್ನು 41 ರನ್‌ಗಳಿಂದ ಸೋಲಿಸಿ, ಶ್ರೀಲಂಕಾವನ್ನು ಸೂಪರ್ ಓವರ್‌ನಲ್ಲಿ ಸೋಲಿಸಿ ಫೈನಲ್ಗೆ ಲಗ್ಗೆಯಿಟ್ಟಿದೆ.
ಏಷ್ಯಾ ಕಪ್‌ನ 41 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಹಾಲಿ ಚಾಂಪಿಯನ್ ಭಾರತ ತನ್ನ ಒಂಬತ್ತನೇ ಪ್ರಶಸ್ತಿಯನ್ನು ಗುರಿಯಾಗಿಸಿಕೊಂಡರೆ, ಪಾಕಿಸ್ತಾನ ತನ್ನ ಮೂರನೇ ಏಷ್ಯಾ ಕಪ್ ಟ್ರೋಫಿಯನ್ನು ಗುರಿಯಾಗಿಸಿಕೊಂಡಿದೆ.
ಪ್ರಸ್ತುತ ಅತ್ಯುತ್ತಮ ಫಾರ್ಮ್‌ನಲ್ಲಿರುವ ವಿಶ್ವದ ನಂ. 1 ಟಿ20ಐ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ, 2025 ರ ಏಷ್ಯಾಕಪ್ ಫೈನಲ್‌ನಲ್ಲಿ ಭಾರತ ಪರ ಇನ್ನಿಂಗ್ಸ್ ತೆರೆಯಲಿದ್ದಾರೆ. ಇಲ್ಲಿಯವರೆಗೆ ಟೂರ್ನಿಯ ಆರು ಪಂದ್ಯಗಳಲ್ಲಿ 309 ರನ್ ಗಳಿಸಿದ್ದಾರೆ ಮತ್ತು ದಾರಿಯುದ್ದಕ್ಕೂ ಹಲವಾರು ಬ್ಯಾಟಿಂಗ್ ದಾಖಲೆಗಳನ್ನು ಮುರಿದಿದ್ದಾರೆ. ಅಭಿಷೇಕ್ ಶರ್ಮಾ ಇನ್ನೂ 11 ರನ್‌ಗಳನ್ನು ಗಳಿಸಿದರೆ, ಅವರು ವಿರಾಟ್ ಕೊಹ್ಲಿ ಅವರ ಭಾರತಕ್ಕಾಗಿ ಟಿ20ಐ ಸರಣಿ/ಟೂರ್ನಮೆಂಟ್‌ನಲ್ಲಿ ಅತಿ ಹೆಚ್ಚು ರನ್‌ಗಳ ದಾಖಲೆಯನ್ನು ಮುರಿಯುತ್ತಾರೆ. ಇದು ಇಂದೇ ಆಗುತ್ತ ನೋಡಬೇಕು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:34 pm, Sun, 28 September 25