IND vs PAK: ಅತಿ ಹೆಚ್ಚು ಸಿಕ್ಸರ್; ಬುಮ್ರಾ ವಿರುದ್ಧ ವಿಶ್ವ ದಾಖಲೆ ಬರೆದ ಪಾಕ್ ಆರಂಭಿಕ
Asia Cup 2025 Final: 2025ರ ಏಷ್ಯಾಕಪ್ ಫೈನಲ್‌ನಲ್ಲಿ ಸಾಹಿಬ್‌ಜಾದಾ ಫರ್ಹಾನ್ ಜಸ್ಪ್ರೀತ್ ಬುಮ್ರಾ ಬೌಲಿಂಗ್‌ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅವರು ಬುಮ್ರಾ ವಿರುದ್ಧ ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು (ಮೂರು) ಬಾರಿಸಿದ ಮೊದಲ ಆಟಗಾರನಾಗಿದ್ದಾರೆ. ದುಬೈನಲ್ಲಿ ನಡೆದ ಈ ಐತಿಹಾಸಿಕ ಸಾಧನೆ ಪಾಕಿಸ್ತಾನದ ಆರಂಭಿಕ ಆಟಗಾರ ಫರ್ಹಾನ್ ಅವರ ಹೊಡಿಬಡಿ ಆಟಕ್ಕೆ ಸಾಕ್ಷಿಯಾಗಿದೆ, ಇದು ಕ್ರಿಕೆಟ್ ಲೋಕದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ.
2025 ರ ಏಷ್ಯಾಕಪ್‌ನ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ಆರಂಭಿಕ ಆಟಗಾರ ಸಾಹಿಬ್‌ಜಾದಾ ಫರ್ಹಾನ್ ಭಾರತದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಅವರ ಬೌಲಿಂಗ್‌ನಲ್ಲಿ ವಿಶ್ವ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕ್ ಪರ ಸಾಹಿಬ್‌ಜಾದಾ ಫರ್ಹಾನ್ ಮತ್ತೊಮ್ಮೆ ಉತ್ತಮ ಆರಂಭ ನೀಡುವಲ್ಲಿ ಯಶಸ್ವಿಯಾದರು. ಅದರಲ್ಲೂ ಬುಮ್ರಾ ವಿರುದ್ಧ ಮತ್ತೊಮ್ಮೆ ಹೊಡಿಬಡಿ ಆಟವನ್ನಾಡಿದ ಫರ್ಹಾನ್ ಹೊಸ ಇತಿಹಾಸ ನಿರ್ಮಿಸಿದರು.
ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬೌಲಿಂಗ್ ಆಯ್ಕೆ ಮಾಡಿತು. ಪಾಕಿಸ್ತಾನದ ಪರ ಸಾಹಿಬ್‌ಜಾದಾ ಫರ್ಹಾನ್ ಮತ್ತು ಫಖರ್ ಜಮಾನ್ ಇನ್ನಿಂಗ್ಸ್ ಆರಂಭಿಸಿದರು. ಜಸ್ಪ್ರೀತ್ ಬುಮ್ರಾ ಎಸೆದ ಇನ್ನಿಂಗ್ಸ್ನ ಮೂರನೇ ಓವರ್ನ ಮೂರನೇ ಎಸೆತವನ್ನು ಸಾಹಿಬ್‌ಜಾದಾ ಫರ್ಹಾನ್ ಸಿಕ್ಸರ್ಗಟ್ಟಿದರು. ಈ ಮೂಲಕ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬುಮ್ರಾ ವಿರುದ್ಧ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆಯನ್ನು ಫರ್ಹಾನ್ ನಿರ್ಮಿಸಿದರು.
ಇದು ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬುಮ್ರಾ ವಿರುದ್ಧ ಅವರ ಮೂರನೇ ಸಿಕ್ಸ್ ಆಗಿತ್ತು. ಸೂಪರ್-4 ಪಂದ್ಯದಲ್ಲಿ ಅವರು ಬುಮ್ರಾ ವಿರುದ್ಧ ಎರಡು ಸಿಕ್ಸ್‌ಗಳನ್ನು ಬಾರಿಸಿದ್ದರು. ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಬುಮ್ರಾ ವಿರುದ್ಧ ಮೂರು ಸಿಕ್ಸ್‌ಗಳನ್ನು ಬಾರಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಸಾಹಿಬ್‌ಜಾದಾ ಫರ್ಹಾನ್. ಅವರಲ್ಲದೆ, ಜಿಂಬಾಬ್ವೆಯ ಎಲ್ಟನ್ ಚಿಗುಂಬುರಾ, ವೆಸ್ಟ್ ಇಂಡೀಸ್‌ನ ಲೆಂಡ್ಲ್ ಸಿಮ್ಮನ್ಸ್ ಮತ್ತು ಕೀರನ್ ಪೊಲಾರ್ಡ್, ನ್ಯೂಜಿಲೆಂಡ್‌ನ ಮಾರ್ಟಿನ್ ಗುಪ್ಟಿಲ್ ಮತ್ತು ಆಸ್ಟ್ರೇಲಿಯಾದ ಕ್ಯಾಮರೂನ್ ಗ್ರೀನ್ ಬುಮ್ರಾ ವಿರುದ್ಧ ತಲಾ ಎರಡು ಸಿಕ್ಸ್‌ಗಳನ್ನು ಬಾರಿಸಿದ್ದಾರೆ.

