T20 World Cup 2022: ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಭಾನುವಾರ ನಡೆದ ಪಾಕಿಸ್ತಾನ್ (India vs Pakistan) ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಭರ್ಜರಿ ಜಯ ಸಾಧಿಸಿತ್ತು. ಪಾಕ್ ವಿರುದ್ಧದ ಈ ಗೆಲುವು ದೀಪಾವಳಿ ಹಬ್ಬದ ಖುಷಿಯಲ್ಲಿದ್ದ ಭಾರತೀಯರ ಸಂಭ್ರಮವನ್ನು ಹೆಚ್ಚಿಸಿತ್ತು. ಅತ್ತ ಇದೇ ಖುಷಿಯಲ್ಲಿ ಗೂಗಲ್ ಸಿಇಒ ಸುಂದರ್ ಪಿಚೈ (Google CEO Sundar Pichai) ಕೂಡ ಟ್ವೀಟ್ ಮಾಡಿದ್ದರು. ಆದರೆ ಈ ಟ್ವೀಟ್ ಪಾಕ್ ಕ್ರಿಕೆಟ್ ಪ್ರೇಮಿಗಳ ಕಣ್ಣು ಕೆಂಪಾಗಿಸಿದೆ.
ಪಾಕಿಸ್ತಾನ್ ವಿರುದ್ಧ ಟೀಮ್ ಇಂಡಿಯಾ ಗೆಲ್ಲುತ್ತಿದ್ದಂತೆ ಟ್ವೀಟ್ ಮಾಡಿದ ಸುಂದರ್ ಪಿಚೈ, “ದೀಪಾವಳಿಯ ಶುಭಾಶಯಗಳು! ಪ್ರತಿಯೊಬ್ಬರೂ ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಅದ್ಭುತ ಸಮಯ ಕಳೆಯುತ್ತಿದ್ದೀರಿ ಎಂದು ಭಾವಿಸುತ್ತೇವೆ. ನಾನು ಕೊನೆಯ ಮೂರು ಓವರ್‌ಗಳನ್ನು ಮತ್ತೆ ನೋಡುವ ಮೂಲಕ ದೀಪಾವಳಿ ಆಚರಿಸಿದೆ. ಎಂತಹ ಆಟ ಮತ್ತು ಪ್ರದರ್ಶನ…ಎಂದು ಗೂಗಲ್ ಸಿಇಒ ಟ್ವೀಟ್ ಮಾಡಿದ್ದರು.
Happy Diwali! Hope everyone celebrating has a great time with your friends and family.
? I celebrated by watching the last three overs again today, what a game and performance #Diwali #TeamIndia #T20WC2022— Sundar Pichai (@sundarpichai) October 24, 2022
ಈ ಟ್ವೀಟ್ಗೆ ಪಾಕ್ ಕ್ರಿಕೆಟ್ ಪ್ರೇಮಿಯೊಬ್ಬರು ಪ್ರತಿಕ್ರಿಯೆ ನೀಡಿದ್ದರು. ಅದೂ ಕೂಡ ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳನ್ನು ಕಿಚಾಯಿಸುವ ಮೂಲಕ ಎಂಬುದು ವಿಶೇಷ. ಅಂದರೆ ಸುಂದರ್ ಪಿಚೈ ಟ್ವೀಟ್ಗೆ ಪ್ರತಿಕ್ರಿಯಿಸಿದ ಮೊಹಮ್ಮದ್ ಶಹ್ಝೈಬ್ ಎನ್ನುವ ವ್ಯಕ್ತಿಯೊಬ್ಬರು, ಮೊದಲ ಮೂರು ಓವರ್‌ಗಳನ್ನು ಸಹ ವೀಕ್ಷಿಸುವಂತೆ ಕಿಚಾಯಿಸಿದ್ದರು.
ಅಂದರೆ ಪಾಕಿಸ್ತಾನದ ಮೊದಲ 3 ಓವರ್ಗಳಲ್ಲಿ ಕೆಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ ಔಟಾಗಿದ್ದರು. ಇದನ್ನೇ ಪ್ರಸ್ತಾಪಿಸಿ ಪಾಕ್ ಅಭಿಮಾನಿ ಸುಂದರ್ ಪಿಚೈ ಅವರನ್ನು ಕಿಚಾಯಿಸಿ ಪ್ರತಿಕ್ರಿಯಿಸಿದ್ದರು. ಆದರೆ ಈ ಪ್ರತಿಕ್ರಿಯೆಗೆ ಕೌಂಟರ್ ಕೊಡುವ ಮೂಲಕ ಗೂಗಲ್ ಸಿಇಒ ಎಲ್ಲರ ಗಮನ ಸೆಳೆದಿದ್ದಾರೆ.
ಅದನ್ನೂ ಕೂಡ ನೋಡಿದ್ದೇನೆ..ಭುವನೇಶ್ವರ್ ಕುಮಾರ್ ಹಾಗೂ ಅರ್ಷದೀಪ್ ಸಿಂಗ್ ಅದ್ಭುತವಾಗಿ ಬೌಲಿಂಗ್ ಮಾಡಿದ್ದರು ಎಂದು ಸುಂದರ್ ಪಿಚೈ ಕೌಂಟರ್ ರಿಪ್ಲೈ ನೀಡಿದ್ದಾರೆ. ಅಂದರೆ ಮೊದಲ 3 ಓವರ್ಗಳಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿದ್ದ ಭುವಿ ಹಾಗೂ ಅರ್ಷದೀಪ್ 2 ವಿಕೆಟ್ ಕಬಳಿಸಿದ್ದರು. ಅತ್ತ ಪಾಕ್ ಅಭಿಮಾನಿ ಪಾಕಿಸ್ತಾನದ ಬೌಲಿಂಗ್ನ್ನು ಪರೋಕ್ಷವಾಗಿ ಹೊಗಳಿದರೆ, ಇತ್ತ ಸುಂದರ್ ಪಿಚೈ ಮುಟ್ಟಿ ನೋಡಿಕೊಳ್ಳುವಂತಹ ಉತ್ತರ ನೀಡಿ ಟೀಮ್ ಇಂಡಿಯಾ ಬೌಲರ್ಗಳನ್ನು ಹೊಗಳಿದರು.
you should watch 1st three overs
— Muhammad Shahzaib (@Muhamma91436212) October 24, 2022
ಇದೀಗ ಭಾರತೀಯ ಮೂಲದ ಗೂಗಲ್ ಸಿಇಒ ಸುಂದರ್ ಪಿಚೈ ಮಾಡಿರುವ ಟ್ವೀಟ್ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೆ ಭಾರತೀಯರು ಯಾವುದೇ ಹುದ್ದೆಯಲ್ಲಿದ್ದರೂ ಕ್ರಿಕೆಟ್ ವಿಷಯದಲ್ಲಿ ಮಾತ್ರ ಬಿಟ್ಟುಕೊಡಲ್ಲ ಎಂದು ಅನೇಕರು ಈ ಟ್ವೀಟ್ಗೆ ಪ್ರತಿಕ್ರಿಯಿಸಿದ್ದಾರೆ.
ಟೀಮ್ ಇಂಡಿಯಾಗೆ ರೋಚಕ ಜಯ:
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು ಟೀಮ್ ಇಂಡಿಯಾ 160 ರನ್ಗಳ ಟಾರ್ಗೆಟ್ ನೀಡಿತ್ತು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 31 ರನ್ಗಳಿಗೆ ಕೆಎಲ್ ರಾಹುಲ್, ರೋಹಿತ್ ಶರ್ಮಾ, ಅಕ್ಷರ್ ಪಟೇಲ್ ಹಾಗೂ ಸೂರ್ಯಕುಮಾರ್ ಯಾದವ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಈ ಹಂತದಲ್ಲಿ ಜೊತೆಯಾದ ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ 113 ರನ್ಗಳ ಜೊತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಅದರಂತೆ ಅಂತಿಮ 3 ಓವರ್ಗಳ ವೇಳೆ ಪಂದ್ಯವು ರೋಚಕಘಟ್ಟದತ್ತ ಸಾಗಿತ್ತು. ಅದರಂತೆ ಕೊನೆಯ 18 ಎಸೆತಗಳಲ್ಲಿ ಟೀಮ್ ಇಂಡಿಯಾಗೆ 48 ರನ್ಗಳ ಅವಶ್ಯಕತೆಯಿತ್ತು. ಶಾಹೀನ್ ಅಫ್ರಿದಿ ಎಸೆದ 18ನೇ ಓವರ್ನಲ್ಲಿ ಕೊಹ್ಲಿ ಮೂರು ಭರ್ಜರಿ ಬೌಂಡರಿ ಬಾರಿಸಿದರು. ಅಲ್ಲದೆ ಆ ಓವರ್ನಲ್ಲಿ 17 ರನ್ ಕಲೆಹಾಕಿದರು. ಅಂತಿಮ 12 ಎಸೆತಗಳಲ್ಲಿ 31 ರನ್ ಗಳಿಸಬೇಕಿತ್ತು.
ಇದನ್ನೂ ಓದಿ: T20 World Cup 2022: ಟಿ20 ವಿಶ್ವಕಪ್ನ ಟೀಮ್ ಇಂಡಿಯಾದ ಸಂಪೂರ್ಣ ವೇಳಾಪಟ್ಟಿ
ಹ್ಯಾರಿಸ್ ರೌಫ್ ಎಸೆದ 19ನೇ ಓವರ್ನಲ್ಲಿ ಭರ್ಜರಿ 2 ಸಿಕ್ಸ್ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ ಪಂದ್ಯ ಗೆಲ್ಲಿಸಿಕೊಡುವ ಭರವಸೆ ಮೂಡಿಸಿದರು. ಹಾಗೆಯೇ ಓವರ್ನಲ್ಲಿ 16 ರನ್ಗಳ ಗುರಿಯೊಂದಿಗೆ ಬ್ಯಾಟ್ ಬೀಸಿದ ಕೊಹ್ಲಿ ಬೌಲರ್ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು. ಅದರಲ್ಲೂ ಮೊಹಮ್ಮದ್ ನವಾಜ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿ ಗೆಲುವನ್ನು ಖಚಿತಪಡಿಸಿದರು. ಅಂತಿಮವಾಗಿ ಕೊನೆಯ ಎಸೆತದಲ್ಲಿ ಅಶ್ವಿನ್ 1 ರನ್ ಕಲೆಹಾಕುವ ಮೂಲಕ ಟೀಮ್ ಇಂಡಿಯಾ 4 ವಿಕೆಟ್ಗಳ ಜಯ ಸಾಧಿಸಿತು. ಈ ಮೂಲಕ ಪಾಕಿಸ್ತಾನ್ ತಂಡಕ್ಕೆ ಸೋಲುಣಿಸಿ 2021 ರ ಟಿ20 ವಿಶ್ವಕಪ್ ಸೋಲಿನ ಸೇಡನ್ನು ಟೀಮ್ ಇಂಡಿಯಾ ತೀರಿಸಿಕೊಂಡಿದೆ.