41 ರನ್​ಗೆ ವಿರಾಟ್ ಕೊಹ್ಲಿ ಔಟ್: ನಿಯಮ ಗೊತ್ತಿಲ್ಲದೇ ಬೆಪ್ಪಾದ ಪಾಕಿಸ್ತಾನ್..!

India vs Pakistan: ಚಾಂಪಿಯನ್ಸ್ ಟ್ರೋಫಿಯ ಬಹುನಿರೀಕ್ಷಿತ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ಧ ಭಾರತ ತಂಡ ಭರ್ಜರಿ ಗೆಲುವು ದಾಖಲಿಸಿದೆ. ಈ ಅಮೋಘ ಗೆಲುವಿನ ರೂವಾರಿ ವಿರಾಟ್ ಕೊಹ್ಲಿ. ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿರಾಟ್ ಕೊಹ್ಲಿ 111 ಎಸೆತಗಳನ್ನು ಎದುರಿಸಿ ಅಜೇಯ ಶತಕ ಬಾರಿಸಿದ್ದರು. ಈ ಶತಕದ ನೆರವಿನಿಂದ ಭಾರತ ತಂಡ 6 ವಿಕೆಟ್​ಗಳ ಜಯ ಸಾಧಿಸಿದೆ.

41 ರನ್​ಗೆ ವಿರಾಟ್ ಕೊಹ್ಲಿ ಔಟ್: ನಿಯಮ ಗೊತ್ತಿಲ್ಲದೇ ಬೆಪ್ಪಾದ ಪಾಕಿಸ್ತಾನ್..!
Virat Kohli Pakistan

Updated on: Feb 26, 2025 | 11:07 AM

ಚಾಂಪಿಯನ್ಸ್ ಟ್ರೋಫಿಯ 5ನೇ ಪಂದ್ಯದಲ್ಲಿ ಭಾರತ ತಂಡ ಅಮೋಘ ಗೆಲುವು ದಾಖಲಿಸಿದೆ. ಅದು ಸಹ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ತಂಡವನ್ನು ಬಗ್ಗು ಬಡಿಯುವ ಮೂಲಕ. ಈ ಗೆಲುವಿನ ರೂವಾರಿ ವಿರಾಟ್ ಕೊಹ್ಲಿ. ಈ ಪಂದ್ಯದಲ್ಲಿ ಪಾಕಿಸ್ತಾನ್ ನೀಡಿದ 241 ರನ್​ಗಳ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಪರ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದರು. ಈ ಶತಕದ ನೆರವಿನೊಂದಿಗೆ ಭಾರತ ತಂಡವು 42.3 ಓವರ್​ಗಳಲ್ಲಿ 244 ರನ್ ಬಾರಿಸಿ 6 ವಿಕೆಟ್​ಗಳ ಗೆಲುವು ದಾಖಲಿಸಿತು.

ಒಂದು ವೇಳೆ ವಿರಾಟ್ ಕೊಹ್ಲಿ ಬೇಗನೆ ಔಟ್ ಆಗಿದ್ದರೆ, ಪಾಕಿಸ್ತಾನ್ ತಂಡಕ್ಕೆ ಪಂದ್ಯದ ಮೇಲೆ ಹಿಡಿತ ಸಾಧಿಸುವ ಅವಕಾಶವಿತ್ತು. ಆದರೆ ಅಂತಹದೊಂದು ಅವಕಾಶವನ್ನು ಪಾಕ್ ಆಟಗಾರರೇ ತಪ್ಪಿಸಿಕೊಂಡಿದ್ದಾರೆ ಎಂದರೆ ನಂಬಲೇಬೇಕು.

ಈ ಪಂದ್ಯದ 18ನೇ ಓವರ್​ನಲ್ಲಿ ಶುಭ್​ಮನ್ ಗಿಲ್ ಔಟಾಗಿದ್ದರು. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿಯ ವಿಕೆಟ್ ಪಡೆಯುವ ಅವಕಾಶ ಪಾಕಿಸ್ತಾನ್ ತಂಡದ ಮುಂದಿತ್ತು. ಏಕೆಂದರೆ ಈ ಪಂದ್ಯದ 21ನೇ ಓವರ್​ನ 5ನೇ ಎಸೆತದಲ್ಲಿ ಕಿಂಗ್ ಕೊಹ್ಲಿ ಮಹಾ ಎಡವಟ್ಟು ಮಾಡಿದ್ದರು.

ಹ್ಯಾರಿಸ್ ರೌಫ್ ಎಸೆದ 21ನೇ ಓವರ್​ನ 5ನೇ ಎಸೆತವನ್ನು ಕವರ್​ ಪಾಯಿಂಟ್​ನತ್ತ ಬಾರಿಸಿ ಕೊಹ್ಲಿ ಒಂದು ರನ್ ಓಡಿದ್ದರು. ಹೀಗೆ ನಾನ್​ ಸ್ಟ್ರೈಕರ್​ನತ್ತ ಓಡಿ ಬಂದ ವಿರಾಟ್ ಕೊಹ್ಲಿಯನ್ನು ರನೌಟ್ ಮಾಡಲು ಪಾಕ್ ಫೀಲ್ಡರ್ ಚೆಂಡನ್ನು ಎಸೆದಿದ್ದಾರೆ. ಈ ವೇಳೆ ವಿರಾಟ್ ಕೊಹ್ಲಿ ವಿನಾಕಾರಣ ಕೈಯಿಂದಲೇ ಚೆಂಡನ್ನು ತಡೆದಿದ್ದಾರೆ. ಐಸಿಸಿ ನಿಯಮದ ಪ್ರಕಾರ ಬ್ಯಾಟರ್ ಚೆಂಡನ್ನು ತಡೆದು ಫೀಲ್ಡಿಂಗ್​ಗೆ ಅಡ್ಡಿಪಡಿಸುವಂತಿಲ್ಲ.

ವಿರಾಟ್ ಕೊಹ್ಲಿ ಚೆಂಡನ್ನು ತಡೆದ ವಿಡಿಯೋ:

ಐಸಿಸಿ ನಿಯಮ 37.4 ರ ಪ್ರಕಾರ, ಚೆಂಡು ಚಲನೆಯಲ್ಲಿರುವಾಗ ಫೀಲ್ಡರ್‌ನ ಒಪ್ಪಿಗೆಯಿಲ್ಲದೆ, ಬ್ಯಾಟ್ ಅಥವಾ ಅವನ/ಅವಳ ದೇಹದ ಯಾವುದೇ ಭಾಗವನ್ನು ಬಳಸಿ ಚೆಂಡನ್ನು ಯಾವುದೇ ಫೀಲ್ಡರ್‌ಗೆ ಹಿಂತಿರುಗಿಸಿದರೆ ಅಥವಾ ಬ್ಯಾಟರ್ ಚೆಂಡನ್ನು ತಡೆದು ಅಡ್ಡಿಪಡಿಸಿದರೆ ಅದನ್ನು ಔಟ್ ಎಂದು ಪರಿಗಣಿಸಲಾಗುತ್ತದೆ.

ಆದರೆ ಈ ನಿಯಮ ಬಗ್ಗೆ ಪಾಕಿಸ್ತಾನ್ ಆಟಗಾರರಿಗೆ ಗೊತ್ತೇ ಇರಲಿಲ್ಲ. ಅಲ್ಲದೆ ಯಾವುದೇ ಆಟಗಾರನು ಈ ಬಗ್ಗೆ ಫೀಲ್ಡ್ ಅಂಪೈರ್​ಗೆ ಮನವಿಯನ್ನೂ ಸಹ ಮಾಡಿರಲಿಲ್ಲ. ಒಂದು ವೇಳೆ ಮನವಿ ಸಲ್ಲಿಸಿದರೆ ಅಂಪೈರ್ ಔಟ್ ನೀಡುತ್ತಿದ್ದರು. ಇದರೊಂದಿಗೆ 41 ರನ್​ಗೆ ವಿರಾಟ್ ಕೊಹ್ಲಿಯ ಇನಿಂಗ್ಸ್ ಕೂಡ ಕೊನೆಗೊಳ್ಳುತ್ತಿತ್ತು. ಆದರೆ ಇಂತಹದೊಂದು ನಿಯಮ ಇದೆ ಎಂಬುದರ ಪರಿಕಲ್ಪನೆ ಕೂಡ ಪಾಕಿಸ್ತಾನ್ ತಂಡದ ಆಟಗಾರರಿಗೆ ಇರಲಿಲ್ಲ ಎಂಬುದೇ ಸತ್ಯ.

ಏಕೆಂದರೆ ಈ ಹಿಂದೆ ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ಬಾಂಗ್ಲಾದೇಶ್ ತಂಡದ ಬ್ಯಾಟರ್ ಮುಶ್ಫಿಕುರ್ ರಹೀಮ್ ಬ್ಯಾಟಿಂಗ್ ವೇಳೆ ಕೈಯಿಂದ ಚೆಂಡನ್ನು ತಡೆದು ಔಟಾಗಿದ್ದರು. ಅಂದು ಅಂಪೈರ್ ಐಸಿಸಿ ನಿಯಮ 37.4 ರ ಪ್ರಕಾರ ಔಟ್ ಎಂದು ತೀರ್ಪು ನೀಡಿದ್ದರು.

ಮುಶ್ಫಿಕುರ್ ರಹೀಮ್ ಔಟ್ ವಿಡಿಯೋ:

ಇದನ್ನೂ ಓದಿ: ಅಬ್ಬರಿಸಿ ಬೊಬ್ಬಿರಿದು ವಿರಾಟ್ ಕೊಹ್ಲಿ ಬರೆದ ದಾಖಲೆಗಳು ಒಂದೆರೆಡಲ್ಲ..!

ಇದೇ ನಿಯಮ ವಿರಾಟ್ ಕೊಹ್ಲಿಯ ವಿಷಯದಲ್ಲೂ ಅನ್ವಯವಾಗುತ್ತಿತ್ತು. ಇದನ್ನೇ ಕಾಮೆಂಟ್ರಿ ಬಾಕ್ಸ್​ನಲ್ಲಿದ್ದ ಟೀಮ್ ಇಂಡಿಯಾದ ಮಾಜಿ ಆಟಗಾರ ಸುನಿಲ್ ಗವಾಸ್ಕರ್​ ಕೂಡ ಪ್ರಸ್ತಾಪಿಸಿದ್ದರು. ಆದರೆ ಪಾಕಿಸ್ತಾನ್ ತಂಡದ ಆಟಗಾರರಿಗೆ ಇಂತಹದೊಂದು ನಿಯಮ ಇರುವುದೇ ಗೊತ್ತಿರಲಿಲ್ಲ. ಪರಿಣಾಮ ವಿರಾಟ್ ಕೊಹ್ಲಿಯ ವಿಕೆಟ್ ಪಡೆಯುವ ಸುವರ್ಣಾವಕಾಶವನ್ನು ಪಾಕಿಸ್ತಾನ್ ಕೈಚೆಲ್ಲಿಕೊಂಡಿತು.  ಇತ್ತ ಸಿಕ್ಕ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡ ಕಿಂಗ್ ಕೊಹ್ಲಿ ಆಕರ್ಷಕ ಶತಕ ಬಾರಿಸಿ ಟೀಮ್ ಇಂಡಿಯಾಗೆ 6 ವಿಕೆಟ್​ಗಳ ಭರ್ಜರಿ ಜಯ ತಂದುಕೊಟ್ಟರು.

 

 

 

Published On - 9:55 am, Tue, 25 February 25