
ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಪಾಕಿಸ್ತಾನ್ ತಂಡವನ್ನು ಭಾರತ ಬಗ್ಗು ಬಡಿದಿದೆ. ಇತ್ತ ಭಾರತದ ವಿರುದ್ಧದ ಸೋಲಿನೊಂದಿಗೆ ಪಾಕಿಸ್ತಾನ್ ತಂಡ ಟೂರ್ನಿಯಿಂದಲೇ ಹೊರಬಿದ್ದಿದೆ. ಇದರ ಬೆನ್ನಲ್ಲೇ ಭಾರತ ಮತ್ತು ಪಾಕ್ ನಡುವಣ ಮುಂದಿನ ಪಂದ್ಯ ಯಾವಾಗ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಈ ಪ್ರಶ್ನೆಗೆ ಸದ್ಯದ ಉತ್ತರ ಏಷ್ಯಾಕಪ್ ಟೂರ್ನಿಯಲ್ಲಿ. ಅಂದರೆ 2025ರ ಅಂತ್ಯದಲ್ಲಿ ಅಥವಾ 2026ರ ಆರಂಭದಲ್ಲಿ ಏಷ್ಯಾಕಪ್ ಟಿ20 ಟೂರ್ನಿ ನಡೆಯಲಿದೆ. ಭಾರತ ಆಯೋಜಿಸಲಿರುವ ಈ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ್ ಮತ್ತೆ ಮುಖಾಮುಖಿಯಾಗಲಿದೆ.
2026ರ ಟಿ20 ವಿಶ್ವಕಪ್ಗೂ ಮುನ್ನ ಏಷ್ಯಾಕಪ್ ಟಿ20 ಟೂರ್ನಿ ಆಯೋಜಿಸಲು ನಿರ್ಧರಿಸಲಾಗಿದ್ದು, ಈ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ್, ಬಾಂಗ್ಲಾದೇಶ್, ಅಫ್ಘಾನಿಸ್ತಾನ್, ಶ್ರೀಲಂಕಾ, ಯುಎಇ ತಂಡಗಳು ಕಣಕ್ಕಿಳಿಯಲಿದೆ.
ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿರುವ ಈ ಟೂರ್ನಿಯ ಮೊದಲ ಸುತ್ತಿನಲ್ಲೇ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಸುತ್ತಿನ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸಿದರೆ ಉಭಯ ತಂಡಗಳು ಸೂಪರ್-4 ಹಂತಕ್ಕೇರಲಿದೆ.
ಸೂಪರ್-4 ಹಂತದಲ್ಲಿ ಮತ್ತೊಮ್ಮೆ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಬಹುದು. ಇನ್ನು ಸೂಪರ್ ಫೋರ್ ಹಂತದ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸಿದರೆ ಉಭಯ ತಂಡಗಳು ಫೈನಲ್ನಲ್ಲಿ ಮುಖಾಮುಖಿಯಾಗಲಿದೆ.
ಹೀಗಾಗಿ ಈ ವರ್ಷದ ಅಂತ್ಯದಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ಭಾರತ ಮತ್ತು ಪಾಕಿಸ್ತಾನ್ ನಡುವಣ ಮೂರು ಪಂದ್ಯಗಳನ್ನು ವೀಕ್ಷಿಸುವ ಅವಕಾಶ ದೊರೆಯಬಹುದು.
ಇದನ್ನೂ ಓದಿ: ಅಬ್ಬರಿಸಿ ಬೊಬ್ಬಿರಿದು ವಿರಾಟ್ ಕೊಹ್ಲಿ ಬರೆದ ದಾಖಲೆಗಳು ಒಂದೆರೆಡಲ್ಲ..!