ಕ್ರಿಕೆಟ್ ಜಗತ್ತಿನ ಅತಿ ದೊಡ್ಡ ಪಂದ್ಯ ಭಾನುವಾರ ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಲಿದೆ. ಏಷ್ಯಾಕಪ್-2023ರ (Asia Cup 2023) ಸೂಪರ್-4ಸುತ್ತಿನಲ್ಲಿ ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವೆ ನಡೆಯಲಿರುವ ಈ ಪಂದ್ಯದ ಮೇಲೆ ಇಡೀ ವಿಶ್ವದ ಕಣ್ಣು ನೆಟ್ಟಿದೆ. ಇದಕ್ಕೆ ಒಂದು ಕಾರಣವೆಂದರೆ, ಸೆಪ್ಟೆಂಬರ್ 2 ರಂದು ಏಷ್ಯಾಕಪ್‌ನಲ್ಲಿ ಇವರಿಬ್ಬರ ನಡುವೆ ಪಂದ್ಯ ನಡೆದಿತ್ತು. ಆದರೆ ಈ ಪಂದ್ಯ ಮಳೆಯಿಂದ ಪೂರ್ಣಗೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ಉಭಯ ತಂಡಗಳ ನಡುವಿನ ಎರಡನೇ ಭಾರಿಯ ಮುಖಾಮುಖಿಯನ್ನು ಪೂರ್ಣಗೊಳಿಸುವ ಸಲುವಾಗಿ ಎಸಿಸಿ, ಈ ಪಂದ್ಯಕ್ಕೆ ಮೀಸಲು ದಿನವನ್ನು ನಿಗದಿಪಡಿಸಿದೆ. ಹೀಗಾಗಿ ಈ ಪಂದ್ಯದ ಫಲಿತಾಂಶ ಹೊರಬೀಳುವುದು ಖಚಿತವಾಗಿದೆ. ಇನ್ನು ಪಾಕ್ ತಂಡ ಎಂದಿನಂತೆ ಪಂದ್ಯಕ್ಕೆ ಒಂದು ದಿನ ಮುಂಚೆಯೇ ತಂಡವನ್ನು ಪ್ರಕಟಿಸಿದ್ದು, ತಂಡದಲ್ಲಿ ಒಂದು ಬದಲಾವಣೆ ಮಾಡಿದೆ. ಆ ಒಂದು ಬದಲಾವಣೆಯ ಲಾಭವನ್ನು ಪಡೆದುಕೊಳ್ಳುವ ಸುವರ್ಣಾವಕಾಶ ಭಾರತದ (Team India) ಪಾಲಿಗೆ ಒಲಿದು ಬಂದಿದೆ.
ಸೂಪರ್-4 ಹಂತದಲ್ಲಿ ಪ್ರತಿ ತಂಡ ಮೂರು ಪಂದ್ಯಗಳನ್ನು ಆಡಲಿದ್ದು, ಅಗ್ರ-2ಸ್ಥಾನ ಪಡೆಯುವ ತಂಡಗಳು ಫೈನಲ್‌ನಲ್ಲಿ ಆಡಲಿವೆ. ಭಾರತ- ಪಾಕ್ ತಂಡವನ್ನು ಹೊರತುಪಡಿಸಿ ಇನ್ನುಳಿದ ಎರಡು ತಂಡಗಳಾದ ಶ್ರೀಲಂಕಾ ಮತ್ತು ಬಾಂಗ್ಲಾದೇಶವನ್ನು ಪರಿಗಣಿಸಿ ಈ ಎರಡೂ ತಂಡಗಳು ಬಲಿಷ್ಠವಾಗಿರುವ ಕಾರಣ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಅಂತಿಮ ಪಂದ್ಯ ನಡೆಯುವ ಸಾಧ್ಯತೆ ಹೆಚ್ಚಿದೆ. 1984ರಲ್ಲಿ ಆರಂಭವಾದ ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಇನ್ನೂ ಫೈನಲ್ ಪಂದ್ಯ ನಡೆದಿಲ್ಲ. ಈ ಬಾರಿಯಾದರೂ ಈ ಉಭಯ ತಂಡಗಳ ಫೈನಲ್ ಕದನವನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ಭಾರತ- ಪಾಕ್ ಮುಖಾಮುಖಿಯಲ್ಲಿ ಯಾರು ಬೆಸ್ಟ್? ಹಳೆ ಸೋಲಿಗೆ ಸೇಡು ತೀರಿಸಿಕೊಳ್ಳುತ್ತಾ ರೋಹಿತ್ ಪಡೆ?
ವಾಸ್ತವವಾಗಿ ಪಾಕಿಸ್ತಾನ ತಂಡ, ಪಂದ್ಯಕ್ಕೆ ಒಂದು ದಿನ ಮೊದಲು ಅಂದರೆ ಶನಿವಾರವೇ ತನ್ನ ಪ್ಲೇಯಿಂಗ್-11 ಅನ್ನು ಘೋಷಿಸಿದೆ. ಸೆಪ್ಟೆಂಬರ್ 2 ರಂದು ಭಾರತ ವಿರುದ್ಧ ನಡೆದ ಪಂದ್ಯದ ಪ್ಲೇಯಿಂಗ್-11 ಗೆ ಹೋಲಿಸಿದರೆ ಪಾಕಿಸ್ತಾನದ ನಾಯಕ ಬಾಬರ್ ಆಝಂ ಈ ಪಂದ್ಯದಲ್ಲಿ ಒಂದು ಬದಲಾವಣೆ ಮಾಡಿದ್ದಾರೆ. ಮೊಹಮ್ಮದ್ ನವಾಜ್ರನ್ನು ತಂಡದಿಂದ ಕೈಬಿಟ್ಟು, ಫಹೀಮ್ ಅಶ್ರಫ್ ರೂಪದಲ್ಲಿ ಹೆಚ್ಚುವರಿ ವೇಗದ ಬೌಲರ್ ಅನ್ನು ಆಯ್ಕೆ ಮಾಡಿದೆ. ಆದರೆ ಆರ್. ಪ್ರೇಮದಾಸ ಮೈದಾನ ಪಿಚ್‌ಗೆ ಸಂಬಂಧಿಸಿದಂತೆ ಇದುವರೆಗಿನ ವರದಿಗಳ ಪ್ರಕಾರ, ಈ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚು ಸಹಕಾರಿಯಾಗಿದೆ. ಪಂದ್ಯ ಮುಂದುವರೆದಂತೆ, ಪಿಚ್ ನಿಧಾನವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಪಾಕಿಸ್ತಾನ ತನ್ನ ತಂಡದಿಂದ ಒಬ್ಬ ಸ್ಪಿನ್ನರ್ ಅನ್ನು ಕೈಬಿಟ್ಟು ವೇಗದ ಬೌಲರ್ಗೆ ಅವಕಾಶ ನೀಡಿ ಎಡವಟ್ಟು ಮಾಡಿಕೊಂಡಿದೆ.
ಟೀಂ ಇಂಡಿಯಾದ ಮಟ್ಟಿಗೆ ಹೇಳುವುದಾದರೆ, ನಾಯಕ ರೋಹಿತ್ ಶರ್ಮಾ ಇಂತಹ ತಪ್ಪು ಮಾಡುವ ಸಾಧ್ಯತೆಗಳಿಲ್ಲ. ಈ ಪಂದ್ಯಕ್ಕೆ ಟೀಂ ಇಂಡಿಯಾ ಹೆಚ್ಚುವರಿ ಸ್ಪಿನ್ನರ್ ಆಯ್ಕೆ ಮಾಡಿದರೆ ಆಶ್ಚರ್ಯಪಡಬೇಕಾಗಿಲ್ಲ. ಹೀಗಾಗಿ ಈ ಪಂದ್ಯದಲ್ಲಿ ಅಕ್ಷರ್ ಪಟೇಲ್ ಆಡಿದರೂ ಆಡಬಹುದಾಗಿದೆ. ಅಕ್ಷರ್ ತಂಡಕ್ಕೆ ಬಂದರೆ ಶಾರ್ದೂಲ್ ಠಾಕೂರ್ ತಂಡದಿಂದ ಹೊರ ಹೋಗಬೇಕಾಗಬಹುದು.
ಸೆಪ್ಟೆಂಬರ್ 2 ರಂದು ಈ ಎರಡು ತಂಡಗಳು ಪರಸ್ಪರ ಮುಖಾಮುಖಿಯಾದಾಗ, ಪಾಕಿಸ್ತಾನದ ಎಡಗೈ ವೇಗದ ಬೌಲರ್ ಶಾಹೀನ್ ಶಾ ಆಫ್ರಿದಿ ಭಾರತದ ಅಗ್ರ ಕ್ರಮಾಂಕವನ್ನು ಧ್ವಂಸಗೊಳಿಸಿದ್ದರು. ಅವರು ರೋಹಿತ್ ಮತ್ತು ವಿರಾಟ್ ವಿಕೆಟ್ ಪಡೆದಿದ್ದರು. ಈ ಪಂದ್ಯದಲ್ಲಿ ರೋಹಿತ್ ಮತ್ತು ವಿರಾಟ್ ಈ ಬಾರಿ ಶಾಹೀನ್ ಜೊತೆ ಹೇಗೆ ವ್ಯವಹರಿಸುತ್ತಾರೆ ಎಂಬುದೇ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಆದರೆ, ಟೀಂ ಇಂಡಿಯಾ ಶಾಹೀನ್ ಅವರನ್ನು ಎದುರಿಸಲು ವಿಭಿನ್ನ ರೀತಿಯ ಅಭ್ಯಾಸವನ್ನು ಮಾಡಿದೆ ಮತ್ತು ಸ್ಪೆಷಲಿಸ್ಟ್ ನುವಾನ್ ಸೇನಾವಿರತ್ನೆ ತಂಡಕ್ಕೆ ಇದರಲ್ಲಿ ಸಹಾಯ ಮಾಡಿದ್ದಾರೆ. ಈಗ ಭಾರತದ ಬ್ಯಾಟಿಂಗ್ ಶಾಹೀನ್ ಸೇರಿದಂತೆ ಪಾಕಿಸ್ತಾನದ ಉಳಿದ ವೇಗದ ಬೌಲರ್‌ಗಳನ್ನು ಹೇಗೆ ಎದುರಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಬ್ಯಾಟಿಂಗ್ ಮಾಡಿರಲಿಲ್ಲ. ಟೀಂ ಇಂಡಿಯಾ ಇನ್ನಿಂಗ್ಸ್ ಬಳಿಕ ಮಳೆ ಸುರಿಯಲಾರಂಭಿಸಿದ್ದರಿಂದ ಪಂದ್ಯವನ್ನು ರದ್ದುಗೊಳಿಸಬೇಕಾಯ್ತು. ಈ ಬಾರಿ ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ರವೀಂದ್ರ ಜಡೇಜಾ ಅವರಂತಹ ಬೌಲರ್‌ಗಳ ವಿರುದ್ಧ ಪಾಕಿಸ್ತಾನದ ಬ್ಯಾಟಿಂಗ್ ವಿಭಾಗ ಹೇಗೆ ಆಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ. ಪಾಕಿಸ್ತಾನದ ಬ್ಯಾಟಿಂಗ್ ಸಂಪೂರ್ಣವಾಗಿ ನಾಯಕ ಬಾಬರ್ ಮತ್ತು ಮೊಹಮ್ಮದ್ ರಿಜ್ವಾನ್ ಮೇಲೆ ಅವಲಂಬಿತವಾಗಿದೆ. ಇವರಿಬ್ಬರ ವಿಕೆಟ್‌ಗಳು ಬೇಗ ಪತನವಾದರೆ ಪಾಕಿಸ್ತಾನದ ಸ್ಥಿತಿ ಇನ್ನಷ್ಟು ಹದಗೆಡಲಿದೆ.
ಪಾಕಿಸ್ತಾನದ ಪ್ಲೇಯಿಂಗ್-11: ಬಾಬರ್ ಆಝಂ (ನಾಯಕ), ಇಮಾಮ್ ಉಲ್ ಹಕ್, ಫಖರ್ ಜಮಾನ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಅಘಾ ಸಲ್ಮಾನ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಫಹೀಮ್ ಅಶ್ರಫ್, ಶಾಹೀನ್ ಶಾ ಆಫ್ರಿದಿ, ನಸೀಮ್ ಶಾ ಮತ್ತು ಹ್ಯಾರಿಸ್ ರೌಫ್.
ಭಾರತ ಸಂಭಾವ್ಯ ತಂಡ: ರೋಹಿತ್ ಶರ್ಮಾ (ನಾಯಕ) , ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್/ಕೆಎಲ್ ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ.
Published On - 7:58 am, Sun, 10 September 23