IND vs PAK: ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ನಲ್ಲಿ ಒಂದು ಬದಲಾವಣೆ ಸಾಧ್ಯತೆ
India vs Pakistan: ಚಾಂಪಿಯನ್ಸ್ ಟ್ರೋಫಿಯ 5ನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಕಣಕ್ಕಿಳಿಯಲಿದೆ. ದುಬೈನ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೆ ಸೆಮಿಫೈನಲ್ಗೇರುವುದು ಖಚಿತವಾಗಲಿದೆ. ಅತ್ತ ಪಾಕಿಸ್ತಾನ್ ತಂಡ ಸೋತರೆ ಟೂರ್ನಿಯಿಂದಲೇ ಹೊರಬೀಳಲಿದೆ. ಹೀಗಾಗಿ ಈ ಮ್ಯಾಚ್ ಪಾಕ್ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ.

ಭಾರತ ಮತ್ತು ಪಾಕಿಸ್ತಾನ್ ನಡುವಣ ಹೈವೋಲ್ಟೇಜ್ ಕದನಕ್ಕೆ ಕೌಂಟ್ ಡೌನ್ ಶುರುವಾಗಿದೆ. ಭಾನುವಾರ (ಫೆ.23) ನಡೆಯಲಿರುವ ಈ ಮಹತ್ವದ ಪಂದ್ಯಕ್ಕಾಗಿ ಟೀಮ್ ಇಂಡಿಯಾ ತನ್ನ ಪ್ಲೇಯಿಂಗ್ ಇಲೆವೆನ್ನಲ್ಲಿ ಒಂದು ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆಯಿದೆ. ಏಕೆಂದರೆ ಬಾಂಗ್ಲಾದೇಶ್ ವಿರುದ್ಧ ಕಣಕ್ಕಿಳಿದ ಕುಲ್ದೀಪ್ ಯಾದವ್ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ.
ಒಂದೆಡೆ ಅಕ್ಷರ್ ಪಟೇಲ್ ಉತ್ತಮ ಸ್ಪಿನ್ ಮೋಡಿ ಮಾಡಿದರೂ, ಪರಿಪೂರ್ಣ ಸ್ಪಿನ್ನರ್ ಆಗಿ ಕಣಕ್ಕಿಳಿದ ಕುಲ್ದೀಪ್ ಯಾದವ್ ಒಂದೇ ಒಂದು ವಿಕೆಟ್ ಕಬಳಿಸಿರಲಿಲ್ಲ. ಹೀಗಾಗಿ ಪಾಕಿಸ್ತಾನ್ ವಿರುದ್ಧದ ಪಂದ್ಯದಿಂದ ಅವರನ್ನು ಕೈ ಬಿಟ್ಟು ಅರ್ಷದೀಪ್ ಸಿಂಗ್ ಅಥವಾ ವರುಣ್ ಚಕ್ರವರ್ತಿ ಅವರನ್ನು ಕಣಕ್ಕಿಳಿಸಬಹುದು.
ಇಲ್ಲಿ ಅರ್ಷದೀಪ್ ಸಿಂಗ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ ಬಾಂಗ್ಲಾದೇಶ್ ವಿರುದ್ಧದ ಪಂದ್ಯದಲ್ಲಿ ವೇಗಿಗಳಾಗಿ ಕಣಕ್ಕಿಳಿದಿದ್ದ ಮೊಹಮ್ಮದ್ ಶಮಿ 5 ವಿಕೆಟ್ ಪಡೆದರೆ, ಹರ್ಷಿತ್ ರಾಣಾ 3 ವಿಕೆಟ್ ಪಡೆದಿದ್ದರು. ಅಂದರೆ ದುಬೈ ಪಿಚ್ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ವೇಗಿಗಳು ಯಶಸ್ವಿಯಾಗಿದ್ದಾರೆ.
ಇದೀಗ ಇದೇ ಮೈದಾನದಲ್ಲಿ ಪಾಕಿಸ್ತಾನ್ ವಿರುದ್ಧ ಕಣಕ್ಕಿಳಿಯಲು ಟೀಮ್ ಇಂಡಿಯಾ ಸಜ್ಜಾಗಿದೆ. ಹೀಗಾಗಿ ಈ ಪಂದ್ಯದಲ್ಲಿ ಭಾರತ ತಂಡವು ಮೂವರು ಪರಿಪೂರ್ಣ ವೇಗದ ಬೌಲರ್ಗಳಿಗೆ ಮಣೆಹಾಕುವ ಸಾಧ್ಯತೆಯಿದೆ.
ಅದರಂತೆ ಟೀಮ್ ಇಂಡಿಯಾ ಪರ ಆರಂಭಿಕರಾಗಿ ಶುಭ್ಮನ್ ಗಿಲ್ ಹಾಗೂ ರೋಹಿತ್ ಶರ್ಮಾ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಹಾಗೂ ನಾಲ್ಕನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಬ್ಯಾಟ್ ಬೀಸಲಿದ್ದಾರೆ.
ವಿಕೆಟ್ ಕೀಪರ್ ಬ್ಯಾಟರ್ ಆಗಿ ಕೆಎಲ್ ರಾಹುಲ್ ಕಾಣಿಸಿಕೊಂಡರೆ, ಆಲ್ರೌಂಡರ್ಗಳಾಗಿ ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ ಹಾಗೂ ಅಕ್ಷರ್ ಪಟೇಲ್ ಕಣಕ್ಕಿಳಿಯಲಿದ್ದಾರೆ.
ಇನ್ನು ವೇಗಿಗಳಾಗಿ ಮೊಹಮ್ಮದ್ ಶಮಿ, ಹರ್ಷಿತ್ ರಾಣಾ ಹಾಗೂ ಅರ್ಷದೀಪ್ ಸಿಂಗ್ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಅದರಂತೆ ಟೀಮ್ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿರಲಿದೆ…
- ರೋಹಿತ್ ಶರ್ಮಾ (ನಾಯಕ)
- ಶುಭ್ಮನ್ ಗಿಲ್
- ವಿರಾಟ್ ಕೊಹ್ಲಿ
- ಶ್ರೇಯಸ್ ಅಯ್ಯರ್
- ಕೆಎಲ್ ರಾಹುಲ್ (ವಿಕೆಟ್ ಕೀಪರ್)
- ಹಾರ್ದಿಕ್ ಪಾಂಡ್ಯ
- ಅಕ್ಷರ್ ಪಟೇಲ್
- ರವೀಂದ್ರ ಜಡೇಜಾ
- ಮೊಹಮ್ಮದ್ ಶಮಿ
- ಹರ್ಷಿತ್ ರಾಣಾ
- ಅರ್ಷದೀಪ್ ಸಿಂಗ್
ಇದನ್ನೂ ಓದಿ: Champions Trophy 2025: ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ 13 ಆಟಗಾರರು ಔಟ್
ಭಾರತ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್. ಶಮಿ, ಅರ್ಷದೀಪ್ ಸಿಂಗ್, ರವೀಂದ್ರ ಜಡೇಜಾ, ವರುಣ್ ಚಕ್ರವರ್ತಿ.