IND vs PAK: ಭಾರತ ವಿರುದ್ಧ ಪಾಕಿಸ್ತಾನ್ ತಂಡದ್ದೇ ಮೇಲುಗೈ: ಅಚ್ಚರಿ ಎನಿಸಿದರೂ ಇದುವೇ ಸತ್ಯ..!
India vs Pakistan Head To Head: ಭಾರತ ಮತ್ತು ಪಾಕಿಸ್ತಾನ್ ತಂಡಗಳು ಏಕದಿನ ಕ್ರಿಕೆಟ್ನಲ್ಲಿ ಇದುವರೆಗೆ 135 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಭಾರತ ತಂಡ ಗೆದ್ದಿರುವುದಕ್ಕಿಂತ ಹೆಚ್ಚಿನ ಪಂದ್ಯಗಳನ್ನು ಪಾಕಿಸ್ತಾನ್ ತಂಡವೇ ಗೆದ್ದಿದೆ. ಅದರಲ್ಲೂ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲೂ ಭಾರತದ ವಿರುದ್ಧ ಪಾಕ್ ಪಡೆ ಹೆಚ್ಚಿನ ಮ್ಯಾಚ್ಗಳಲ್ಲಿ ಜಯ ಸಾಧಿಸಿದೆ.

ವಿಶ್ವ ಕ್ರಿಕೆಟ್ನ ಮಹಾ ಕದನಕ್ಕಾಗಿ ವೇದಿಕೆ ಸಿದ್ಧವಾಗಿದೆ. ಭಾನುವಾರ (ಫೆ.23) ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯ 5ನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂ ಆತಿಥ್ಯವಹಿಸಲಿದೆ. ಈ ಪಂದ್ಯದಲ್ಲಿ ಯಾರು ಗೆಲ್ಲಲಿದ್ದಾರೆ ಎಂಬ ಕುತೂಹಲ ಒಂದೆಡೆಯಾದರೆ, ಅಂಕಿ ಅಂಶಗಳ ಪ್ರಕಾರ ಯಾರದ್ದು ಮೇಲುಗೈ ಎಂಬ ಚರ್ಚೆಗಳು ನಡೆಯುತ್ತಿದೆ. ಇಲ್ಲಿ ಕುತೂಹಲಕಾರಿ ವಿಷಯ ಎಂದರೆ ಟೀಮ್ ಇಂಡಿಯಾ ವಿರುದ್ಧ ಏಕದಿನ ಕ್ರಿಕೆಟ್ನಲ್ಲಿ ಪಾಕಿಸ್ತಾನ್ ತಂಡದ್ದೇ ಮೇಲುಗೈ ಎಂಬುದು.
ಪಾಕ್ ಪಡೆಯ ಮೇಲುಗೈ:
ಏಕದಿನ ಕ್ರಿಕೆಟ್ನಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಈವರೆಗೆ 135 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಟೀಮ್ ಇಂಡಿಯಾ ಗೆದ್ದಿರುವುದು ಕೇವಲ 57 ಮ್ಯಾಚ್ಗಳಲ್ಲಿ ಮಾತ್ರ. ಇನ್ನು ಪಾಕಿಸ್ತಾನ್ 73 ಪಂದ್ಯಗಳಲ್ಲಿ ಭಾರತ ತಂಡಕ್ಕೆ ಸೋಲುಣಿಸಿದೆ. ಇನ್ನು ಐದು ಪಂದ್ಯಗಳು ಫಲಿತಾಂಶರಹಿತವಾಗಿತ್ತು.
ಈ ಬಾರಿ ತಟಸ್ಥ ಮೈದಾನದಲ್ಲಿ ಸಾಂಪ್ರದಾಯಿಕ ಎದುರಾಳಿಗಳ ನಡುವಣ ಪಂದ್ಯ ನಡೆಯುತ್ತಿದೆ. ಅಂದರೆ ಇತ್ತ ಭಾರತದಲ್ಲೂ ಅಲ್ಲ, ಅತ್ತ ಪಾಕಿಸ್ತಾನದಲ್ಲೂ ಅಲ್ಲ. ಬದಲಾಗಿ ದುಬೈನಲ್ಲಿ ಪಂದ್ಯ ನಡೆಯುತ್ತಿರುವುದರಿಂದ ತಟಸ್ಥ ಮೈದಾನದಲ್ಲಿ ಅತ್ಯಧಿಕ ಪಂದ್ಯಗಳನ್ನು ಗೆದ್ದವರು ಯಾರು ಎಂಬ ಪ್ರಶ್ನೆ ಮೂಡುವುದು ಸಹಜ.
ಭಾರತ ಮತ್ತು ಪಾಕಿಸ್ತಾನ್ ಆಡಿರುವ 135 ಪಂದ್ಯಗಳಲ್ಲಿ 74 ಮ್ಯಾಚ್ಗಳು ತಟಸ್ಥ ಮೈದಾನಗಳಲ್ಲಿ ನಡೆದಿದೆ. ಈ ವೇಳೆ ಪಾಕಿಸ್ತಾನ್ ತಂಡ 40 ಮ್ಯಾಚ್ಗಳಲ್ಲಿ ಗೆಲುವು ದಾಖಲಿಸಿದರೆ, ಭಾರತ ತಂಡ ಗೆದ್ದಿರುವುದು 34 ಪಂದ್ಯಗಳಲ್ಲಿ ಮಾತ್ರ.
ಇನ್ನು ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಉಭಯ ತಂಡಗಳು 5 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಪಾಕಿಸ್ತಾನ್ ತಂಡ 3 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಟೀಮ್ ಇಂಡಿಯಾ 2 ಪಂದ್ಯಗಳಲ್ಲಿ ಮಾತ್ರ ಗೆಲುವು ದಾಖಲಿಸಿದೆ.
ಈ ಅಂಕಿ ಅಂಶಗಳ ಪ್ರಕಾರ ಏಕದಿನ ಟೂರ್ನಿಗಳಲ್ಲಿ ಭಾರತದ ವಿರುದ್ಧ ಪಾಕಿಸ್ತಾನ್ ತಂಡ ಮೇಲುಗೈ ಹೊಂದಿರುವುದು ಸ್ಪಷ್ಟ. ಆದರೆ ಕೊನೆಯ ಐದು ಮುಖಾಮುಖಿಯಲ್ಲಿ ಟೀಮ್ ಇಂಡಿಯಾ ಪಾಕ್ ಪಡೆಯನ್ನು ಮಕಾಡೆ ಮಲಗಿಸಿದೆ ಎಂಬುದು ಇಲ್ಲಿ ಉಲ್ಲೇಖಾರ್ಹ.
ಬಲಿಷ್ಠ ಭಾರತ ಪಡೆ:
ಭಾರತ ಮತ್ತು ಪಾಕಿಸ್ತಾನ್ ನಡುವಣ ಕೊನೆಯ ಐದು ಏಕದಿನ ಪಂದ್ಯಗಳ ಫಲಿತಾಂಶವನ್ನು ಮಾತ್ರ ಗಣನೆಗೆ ತೆಗೆದುಕೊಂಡರೆ ಟೀಮ್ ಇಂಡಿಯಾವೇ ಬಲಿಷ್ಠ. ಏಕೆಂದರೆ 2018 ರಿಂದ ಭಾರತದ ವಿರುದ್ಧ ಪಾಕಿಸ್ತಾನ್ ತಂಡವು ಒಂದೇ ಒಂದು ಏಕದಿನ ಪಂದ್ಯ ಗೆದ್ದಿಲ್ಲ.
ಇದನ್ನೂ ಓದಿ: 5126 ಎಸೆತಗಳಲ್ಲಿ ವಿಶ್ವ ದಾಖಲೆ ಬರೆದ ಮೊಹಮ್ಮದ್ ಶಮಿ
ಅದರಲ್ಲೂ 2023 ರಲ್ಲಿ ನಡೆದ ಏಷ್ಯಾಕಪ್ ಹಾಗೂ ಏಕದಿನ ವಿಶ್ವಕಪ್ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಪಾಕಿಸ್ತಾನ್ ತಂಡವನ್ನು ಬಗ್ಗು ಬಡಿದಿದೆ. ಏಷ್ಯಾಕಪ್ನಲ್ಲಿ ಪಾಕ್ ವಿರುದ್ಧ 228 ರನ್ಗಳ ಅಮೋಘ ಗೆಲುವು ದಾಖಲಿಸಿದ್ದ ಟೀಮ್ ಇಂಡಿಯಾ, ಏಕದಿನ ವಿಶ್ವಕಪ್ನಲ್ಲಿ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಹೀಗಾಗಿ ಈ ಬಾರಿ ಕೂಡ ಪಾಕಿಸ್ತಾನ್ ವಿರುದ್ಧ ಭಾರತ ತಂಡದ ಅಮೋಘ ಗೆಲುವನ್ನು ಎದುರು ನೋಡಬಹುದು.