ರಯಾನ್ ರಿಕೆಲ್ಟನ್ ಅಬ್ಬರಕ್ಕೆ ಎಬಿಡಿ ದಾಖಲೆ ಉಡೀಸ್
Afghanistan vs South Africa: ಚಾಂಪಿಯನ್ಸ್ ಟ್ರೋಫಿಯ ಮೂರನೇ ಪಂದ್ಯದಲ್ಲಿ ಅಫ್ಘಾನಿಸ್ತಾನ್ ವಿರುದ್ಧ ಸೌತ್ ಆಫ್ರಿಕಾ ತಂಡ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ 315 ರನ್ ಕಲೆಹಾಕಿದರೆ, ಅಫ್ಘಾನಿಸ್ತಾನ್ ತಂಡ 43.2 ಓವರ್ಗಳಲ್ಲಿ 208 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಸೌತ್ ಆಫ್ರಿಕಾ 107 ರನ್ಗಳ ಅಮೋಘ ಗೆಲುವು ದಾಖಲಿಸಿದೆ.
Updated on:Feb 22, 2025 | 12:54 PM

ಚಾಂಪಿಯನ್ಸ್ ಟ್ರೋಫಿಯ ಮೂರನೇ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡದ ವಿಕೆಟ್ ಕೀಪರ್ ಬ್ಯಾಟರ್ ರಯಾನ್ ರಿಕೆಲ್ಟನ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಕರಾಚಿಯ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಅಫ್ಘಾನಿಸ್ತಾನ್ ಮತ್ತು ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾಗಿದ್ದವು.

ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ರಯಾನ್ ರಿಕೆಲ್ಟನ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರೆ, ಟೋನಿ ಡಿ ಝೋರ್ಝಿ ಕೇವಲ 11 ರನ್ಗಳಿಸಿ ಔಟಾದರು. ಈ ಹಂತದಲ್ಲಿ ಜೊತೆಗೂಡಿದ ರಯಾನ್ ಹಾಗೂ ಬವುಮಾ ಉತ್ತಮ ಜೊತೆಯಾಟ ಪ್ರದರ್ಶಿಸಿದರು.

ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ರಯಾನ್ ರಿಕೆಲ್ಟನ್ ಕೇವಲ 40 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆದರೆ ಆ ಬಳಿಕ ಎಚ್ಚರಿಕೆ ಬ್ಯಾಟಿಂಗ್ನೊಂದಿಗೆ ಇನಿಂಗ್ಸ್ ಕಟ್ಟಿದ ಅವರು 101 ಎಸೆತಗಳಲ್ಲಿ ಶತಕ ಸಿಡಿಸಿದರು. ಈ ಶತಕದೊಂದಿಗೆ ಸೌತ್ ಆಫ್ರಿಕಾ ಪರ ವಿಶೇಷ ದಾಖಲೆಯೊಂದನ್ನು ಬರೆದರು.

ಅಂದರೆ ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ ಸೌತ್ ಆಫ್ರಿಕಾ ಪರ ಯಾವುದೇ ವಿಕೆಟ್ ಕೀಪರ್ ಬ್ಯಾಟರ್ ಶತಕ ಸಿಡಿಸಿರಲಿಲ್ಲ. 2013 ರ ಆವೃತ್ತಿಯಲ್ಲಿ ಟೀಮ್ ಇಂಡಿಯಾ ವಿರುದ್ಧ ಎಬಿ ಡಿವಿಲಿಯರ್ಸ್ 70 ರನ್ ಬಾರಿಸಿದ್ದೇ ಸೌತ್ ಆಫ್ರಿಕಾ ವಿಕೆಟ್ ಕೀಪರ್ನ ಗರಿಷ್ಠ ಸ್ಕೋರ್. ಇದೀಗ ಎಬಿಡಿಯ ದಾಖಲೆ ಮುರಿಯುವಲ್ಲಿ ರಯಾನ್ ರಿಕೆಲ್ಟನ್ ಯಶಸ್ವಿಯಾಗಿದ್ದಾರೆ.

ಅಫ್ಘಾನಿಸ್ತಾನ್ ವಿರುದ್ಧ 106 ಎಸೆತಗಳನ್ನು ಎದುರಿಸಿದ ರಯಾನ್ ರಿಕೆಲ್ಟನ್ 1 ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ 103 ರನ್ ಬಾರಿಸಿದ್ದಾರೆ. ಈ ಮೂಲಕ ಚಾಂಪಿಯನ್ಸ್ ಟ್ರೋಫಿಯಲ್ಲಿ ಸೌತ್ ಆಫ್ರಿಕಾ ಪರ ಶತಕ ಸಿಡಿಸಿದ ಮೊದಲ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನು ರಯಾನ್ ರಿಕೆಲ್ಟನ್ ತಮ್ಮದಾಗಿಸಿಕೊಂಡಿದ್ದಾರೆ.
Published On - 12:54 pm, Sat, 22 February 25
























