5126 ಎಸೆತಗಳಲ್ಲಿ ವಿಶ್ವ ದಾಖಲೆ ಬರೆದ ಮೊಹಮ್ಮದ್ ಶಮಿ
Champions Trophy 2025: ಚಾಂಪಿಯನ್ಸ್ ಟ್ರೋಫಿ 2025ರ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಬಾಂಗ್ಲಾದೇಶ್ ವಿರುದ್ಧ ನಡೆದ ಈ ಪಂದ್ಯದ ಮೂಲಕ ಭಾರತ ತಂಡದ ವೇಗಿ ಮೊಹಮ್ಮದ್ ಶಮಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಅದು ಸಹ ಕೇವಲ 5126 ಎಸೆತಗಳ ಮೂಲಕ ಎಂಬುದೇ ವಿಶೇಷ.
Updated on: Feb 22, 2025 | 8:00 AM

ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಏಕದಿನ ಕ್ರಿಕೆಟ್‌ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ಆಸ್ಟ್ರೇಲಿಯನ್ ವೇಗಿ ಮಿಚೆಲ್ ಸ್ಟಾರ್ಕ್ ಅವರ ವರ್ಲ್ಡ್ ರೆಕಾರ್ಡ್ ಅನ್ನು ಅಳಿಸಿ ಹಾಕುವ ಮೂಲಕ ಎಂಬುದು ವಿಶೇಷ. ದುಬೈನ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ 2ನೇ ಪಂದ್ಯದಲ್ಲಿ ಮೊಹಮ್ಮದ್ ಶಮಿ ಕರಾರುವಾಕ್ ದಾಳಿ ಸಂಘಟಿಸಿದ್ದರು.

ಬಾಂಗ್ಲಾದೇಶ್ ವಿರುದ್ಧದ ಈ ಪಂದ್ಯದ ಮೊದಲ ಓವರ್ನಲ್ಲೇ ವಿಕೆಟ್ ಕಬಳಿಸಿ ಶುಭಾರಂಭ ಮಾಡಿದ ಶಮಿ, ಆ ಬಳಿಕ ಮತ್ತೆ ನಾಲ್ಕು ವಿಕೆಟ್ ಉರುಳಿಸಿದರು. ಈ 5 ವಿಕೆಟ್‌ಗಳೊಂದಿಗೆ ಟೀಮ್ ಇಂಡಿಯಾ ವೇಗಿ ಏಕದಿನ ಕ್ರಿಕೆಟ್‌ನಲ್ಲಿ 200 ವಿಕೆಟ್‌ಗಳ ಸಾಧನೆ ಮಾಡಿದ್ದಾರೆ. ಅದು ಸಹ ಕೇವಲ 5126 ಎಸೆತಗಳಲ್ಲಿ ಎಂಬುದು ವಿಶೇಷ.

ಅಂದರೆ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಅತೀ ಕಡಿಮೆ ಎಸೆತಗಳ ಮೂಲಕ 200 ವಿಕೆಟ್ ಕಬಳಿಸಿದ ವಿಶ್ವ ದಾಖಲೆ ಇದೀಗ ಭಾರತದ ತಂಡದ ವೇಗಿ ಮೊಹಮ್ಮದ್ ಶಮಿ ಪಾಲಾಗಿದೆ. 854.3 ಓವರುಗಳ ಮೂಲಕ ಶಮಿ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಇದಕ್ಕೂ ಮುನ್ನ ಈ ವಿಶ್ವ ದಾಖಲೆ ಆಸ್ಟ್ರೇಲಿಯಾದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಹೆಸರಿನಲ್ಲಿತ್ತು. ಸ್ಟಾರ್ಕ್ 873.3 ಓವರುಗಳಲ್ಲಿ, ಅಂದರೆ 5240 ಎಸೆತಗಳಲ್ಲಿ 200 ವಿಕೆಟ್ಗಳನ್ನು ಪೂರೈಸಿ ಏಕದಿನ ಕ್ರಿಕೆಟ್‌ನಲ್ಲಿ ಅತೀ ವೇಗವಾಗಿ ಇನ್ನೂರು ವಿಕೆಟ್‌ಗಳ ಮೈಲುಗಲ್ಲು ಮುಟ್ಟಿದ ಬೌಲರ್ ಎನಿಸಿಕೊಂಡಿದ್ದರು.

ಇದೀಗ ಕೇವಲ 5126 ಎಸೆತಗಳಲ್ಲಿ 200 ವಿಕೆಟ್ ಉರುಳಿಸಿ, ಏಕದಿನ ಕ್ರಿಕೆಟ್‌ನಲ್ಲಿ ಅತೀ ಕಡಿಮೆ ಎಸೆತಗಳ ಮೂಲಕ ಇನ್ನೂರು ವಿಕೆಟ್ ಕಬಳಿಸಿದ ಬೌಲರ್ ಎನಿಸಿಕೊಂಡಿದ್ದಾರೆ. ಅಲ್ಲದೆ ಐಸಿಸಿ ಟೂರ್ನಿಯಲ್ಲಿ ಭಾರತದ ಪರ ಅತ್ಯಧಿಕ ವಿಕೆಟ್ ಕಬಳಿಸಿದ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಐಸಿಸಿ ಟೂರ್ನಿಯಲ್ಲಿ ಈವರೆಗೆ 19 ಪಂದ್ಯಗಳನ್ನಾಡಿರುವ ಶಮಿ ಒಟ್ಟು 60 ವಿಕೆಟ್ ಪಡೆದು ಈ ಸಾಧನೆ ಮಾಡಿದ್ದಾರೆ.
























