- Kannada News Photo gallery Cricket photos Rohit Sharma's 11000 ODI Runs: India Edges Past Bangladesh in Champions Trophy
IND vs BAN: ಏಕದಿನದಲ್ಲಿ ಶರವೇಗದ ಬ್ಯಾಟಿಂಗ್; ವಿಶೇಷ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ ಹಿಟ್ಮ್ಯಾನ್
Rohit Sharma: ಬಾಂಗ್ಲಾದೇಶ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಭಾರತ ಪ್ರಯಾಸದ ಗೆಲುವು ಸಾಧಿಸಿತು. ರೋಹಿತ್ ಶರ್ಮಾ ಮತ್ತು ಶುಭ್‌ಮನ್ ಗಿಲ್ ಅವರ ಅತ್ಯುತ್ತಮ ಆರಂಭದ ಹೊರತಾಗಿಯೂ ಮಧ್ಯಮ ಕ್ರಮಾಂಕದ ಹೋರಾಟದಿಂದಾಗಿ ಭಾರತ ಸಾಕಷ್ಟು ಹೆಣಗಾಡಬೇಕಾಯಿತು. ಆದಾಗ್ಯೂ, ರೋಹಿತ್ ಶರ್ಮಾ ಅವರು ಈ ಪಂದ್ಯದಲ್ಲಿ 11000 ಏಕದಿನ ರನ್‌ಗಳ ಮೈಲುಗಲ್ಲನ್ನು ಸ್ಥಾಪಿಸಿದರು. ಈ ಮೂಲಕ ಅತಿ ಕಡಿಮೆ ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ ಎರಡನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
Updated on: Feb 21, 2025 | 8:29 AM

ಬಾಂಗ್ಲಾದೇಶ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಟೀಂ ಇಂಡಿಯಾ ನಿರೀಕ್ಷಿತ ಗೆಲುವು ಸಾಧಿಸಿಲ್ಲವಾದರೂ ಗೆಲುವಿನ ದಡ ಮುಟ್ಟುವಲ್ಲಿ ಯಶಸ್ವಿಯಾಗಿದೆ. ತಂಡಕ್ಕೆ ಉತ್ತಮ ಆರಂಭ ಸಿಕ್ಕ ಹೊರತಾಗಿಯೂ ಮಧ್ಯಮ ಕ್ರಮಾಂಕ ಕೈಕೊಟ್ಟ ಕಾರಣ ತಂಡ ಗೆಲುವಿಗಾಗಿ ಸಾಕಷ್ಟು ಶ್ರಮ ಪಡಬೇಕಾಯಿತು. ಆದಾಗ್ಯೂ ನಾಯಕ ರೋಹಿತ್, ಆರಂಭಿಕ ಶುಭ್‌ಮನ್ ಗಿಲ್ ಹಾಗೂ ರಾಹುಲ್ ಅವರ ಸಮಯೋಜಿತ ಬ್ಯಾಟಿಂಗ್ನಿಂದಾಗಿ ತಂಡ ಜಯದ ನಗೆಬೀರಿತು.

ಬಾಂಗ್ಲಾದೇಶ ನೀಡಿದ 229 ರನ್‌ಗಳ ಗುರಿ ಬೆನ್ನಟ್ಟಿದ ಭಾರತಕ್ಕೆ ನಾಯಕ ರೋಹಿತ್ ಶರ್ಮಾ ಹಾಗೂ ಶುಭ್‌ಮನ್ ಗಿಲ್ ಉತ್ತಮ ಆರಂಭ ಒದಗಿಸಿಕೊಟ್ಟರು. ಈ ಇಬ್ಬರು ಮೊದಲ ವಿಕೆಟ್ಗೆ 69 ರನ್‌ಗಳ ಜೊತೆಯಾಟ ನೀಡಿದರು. ಇದೇ ವೇಳೆ ಎಂದಿನಿಂತೆ ಸ್ಫೋಟಕ ಬ್ಯಾಟಿಂಗ್ ನಡೆಸಿದ ನಾಯಕ ರೋಹಿತ್ ಶರ್ಮಾ ವಿಶೇಷ ಸಾಧನೆ ಕೂಡ ಮಾಡಿದ್ದರು.

ಈ ಪಂದ್ಯದಲ್ಲಿ 41 ರನ್‌ಗಳ ಇನ್ನಿಂಗ್ಸ್ ಆಡಿದ ರೋಹಿತ್ ಏಕದಿನ ಕ್ರಿಕೆಟ್‌ನಲ್ಲಿ 11000 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಇದರ ಜೊತೆಗೆ ಅತಿ ಕಡಿಮೆ ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ ವಿಶ್ವದ ಎರಡನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಈ ವಿಷಯದಲ್ಲಿ ರೋಹಿತ್ ಭಾರತದ ಮಾಜಿ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದರು.

ರೋಹಿತ್ 11000 ರನ್ ಪೂರ್ಣಗೊಳಿಸಲು 261 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡರೆ, ಸಚಿನ್ ತೆಂಡೂಲ್ಕರ್ ತಮ್ಮ 276 ನೇ ಏಕದಿನ ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು. ಈ ವಿಚಾರದಲ್ಲಿ ರೋಹಿತ್ಗಿಂತ ಮುಂದಿರುವ ವಿರಾಟ್ ಕೊಹ್ಲಿ 222 ಏಕದಿನ ಪಂದ್ಯಗಳಲ್ಲಿ 11000 ರನ್‌ಗಳನ್ನು ಪೂರ್ಣಗೊಳಿಸಿದ ದಾಖಲೆಯನ್ನು ಹೊಂದಿದ್ದಾರೆ.

ಈ ಪಟ್ಟಿಯಲ್ಲಿ ರಿಕಿ ಪಾಂಟಿಂಗ್ ನಾಲ್ಕನೇ ಸ್ಥಾನದಲ್ಲಿದ್ದು, ಅವರು 286 ಏಕದಿನ ಇನ್ನಿಂಗ್ಸ್‌ಗಳಲ್ಲಿ 11000 ರನ್ ಪೂರೈಸಿದ್ದರು. ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ 288 ಏಕದಿನ ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರೆ, ರೋಹಿತ್ ಏಕದಿನ ಕ್ರಿಕೆಟ್‌ನಲ್ಲಿ 11000 ರನ್ ಗಳಿಸಿದ ನಾಲ್ಕನೇ ಭಾರತೀಯ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಅವರಿಗಿಂತ ಮೊದಲು ಸಚಿನ್, ಕೊಹ್ಲಿ ಮತ್ತು ಗಂಗೂಲಿ ಈ ಸಾಧನೆ ಮಾಡಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಭಾರತಕ್ಕೆ ರೋಹಿತ್ ಮತ್ತು ಶುಭ್‌ಮನ್ ಗಿಲ್ ಉತ್ತಮ ಆರಂಭ ನೀಡಿದರು. ರೋಹಿತ್ ಅರ್ಧಶತಕದತ್ತ ಸಾಗುತ್ತಿದ್ದರು ಆದರೆ ದೊಡ್ಡ ಹೊಡೆತವನ್ನು ಆಡಲು ಪ್ರಯತ್ನಿಸುವಾಗ ವಿಕೆಟ್ ಕಳೆದುಕೊಂಡರು. ರೋಹಿತ್ 36 ಎಸೆತಗಳಲ್ಲಿ ಏಳು ಬೌಂಡರಿಗಳ ಸಹಾಯದಿಂದ 41 ರನ್ ಗಳಿಸಿ ಔಟಾದರು.



















