‘ನನ್ನ ವೃತ್ತಿಜೀವನದಲ್ಲಿ ಯಶಸ್ಸಿಗಿಂತ ವೈಫಲ್ಯಗಳೇ ಹೆಚ್ಚು’; ದಾಖಲೆಯ ಶತಕದ ಬಳಿಕ ಮನದಾಳ ತೆರೆದಿಟ್ಟ ಸಂಜು
Sanju Samson press conference: ಟೀಂ ಇಂಡಿಯಾದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದ ಸಂಜು ಸ್ಯಾಮ್ಸನ್ ಇದೀಗ ತಮ್ಮ ಲಯವನ್ನು ಕಂಡುಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಪಂದ್ಯದಲ್ಲಿ ದಾಖಲೆಯ ಶತಕ ಸಿಡಿಸಿ ಸಂಜು, ಈ ಗೆಲುವು ಅವರ ದೃಢ ನಿರ್ಧಾರ ಮತ್ತು ತಂಡದ ಬೆಂಬಲದ ಫಲಿತಾಂಶ ಎಂದು ಹೇಳಿಕೊಂಡಿದ್ದಾರೆ.
ಟೀಂ ಇಂಡಿಯಾದಲ್ಲಿ ಬಹಳ ವರ್ಷಗಳಿಂದ ಆಡುತ್ತಿರುವ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ಗೆ ಇದುವರೆಗೆ ತಂಡದಲ್ಲಿ ಖಾಯಂ ಸ್ಥಾನ ಅನ್ನೋದು ಮರಿಚಿಕೆಯಾಗಿತ್ತು. ಹೀಗಾಗಿ ಟೀಂ ಇಂಡಿಯಾದಲ್ಲಿ ಸಂಜು ಅವರ ವೃತ್ತಿಜೀವನ ಬಹುತೇಕ ಅಂತ್ಯವಾಗಿದೆ ಎಂದು ಹಲವು ಕ್ರಿಕೆಟ್ ಪಂಡಿತರು ಅಭಿಪ್ರಾಯ ಪಟ್ಟಿದ್ದರು. ಆದರೀಗ ಲಯ ಕಂಡುಕೊಂಡಿರುವ ಸಂಜು ಸ್ಯಾಮ್ಸನ್ ಭಾರತ ಟಿ20 ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವತ್ತ ಹೆಜ್ಜೆ ಇಟ್ಟಿದ್ದಾರೆ. ಟಿ20 ವಿಶ್ವಕಪ್ ಬಳಿಕ ಹಲವು ಆಟಗಾರರಿಗೆ ಈ ಸ್ವರೂಪದಿಂದ ವಿರಾಮ ನೀಡಿರುವುದರಿಂದ ಸಂಜು ತನಗೆ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುತ್ತಿದ್ದಾರೆ. ಬಾಂಗ್ಲಾದೇಶ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ್ದ ಸಂಜು ಇದೀಗ ದಕ್ಷಿಣ ಆಫ್ರಿಕಾದಲ್ಲೂ ಸ್ಫೋಟಕ ಬ್ಯಾಟಿಂಗ್ ಮಾಡಿದ್ದಾರೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಸಂಜು ಅಚ್ಚರಿಯ ಇನ್ನಿಂಗ್ಸ್ ಆಡಿ ಶತಕ ಸಿಡಿಸಿದ್ದರು.
ಡರ್ಬನ್‌ನಲ್ಲಿ ಶುಕ್ರವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ 61 ರನ್‌ಗಳ ಸುಲಭ ಜಯ ಸಾಧಿಸಿತು. ತಂಡದ ಈ ಅಮೋಘ ಜಯದಲ್ಲಿ ಸ್ಯಾಮ್ಸನ್ ಅವರ ಪಾತ್ರ ಪ್ರಮುಖವಾಗಿತ್ತು. ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಸಂಜು 50 ಎಸೆತಗಳಲ್ಲಿ 107 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಇದರಲ್ಲಿ 7 ಬೌಂಡರಿ ಹಾಗೂ 10 ಭರ್ಜರಿ ಸಿಕ್ಸರ್ಗಳು ಸೇರಿದ್ದವು. ಈ ಮೂಲಕ ಸಂಜು ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಸತತ ಎರಡು ಶತಕಗಳನ್ನು ಬಾರಿಸಿದ ಭಾರತದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಪಂದ್ಯ ಮುಗಿದ ಬಳಿಕ ತಮ್ಮ ವೃತ್ತಿಜೀವನದ ಏಳುಬೀಳುಗಳ ಬಗ್ಗೆ ಮಾತನಾಡಿದ ಸಂಜು, ಆರಂಭಿಕ ದಿನಗಳಲ್ಲಿ ವೈಫಲ್ಯಗಳಿಂದಾಗಿ ನನ್ನ ಸಾಮರ್ಥ್ಯದ ಬಗ್ಗೆ ನನಗೆ ಅನುಮಾನವಿತ್ತು. ಆದರೆ ನಾಯಕ ಮತ್ತು ತರಬೇತುದಾರರು ನೀಡಿದ ಆತ್ಮವಿಶ್ವಾಸ ಮತ್ತು ಬೆಂಬಲ ನನ್ನನ್ನು ಮತ್ತೆ ಲಯಕ್ಕೆ ಮರಳುವಂತೆ ಮಾಡಿತು ಎಂದಿದ್ದಾರೆ.
ಸಾಕಷ್ಟು ವೈಫಲ್ಯಗಳನ್ನು ಎದುರಿಸಿದ್ದೇನೆ
ಪಂದ್ಯದ ನಂತರ ಮಾತನಾಡಿದ ಸ್ಯಾಮ್ಸನ್, ‘ನನ್ನ ವೃತ್ತಿಜೀವನದಲ್ಲಿ ನಾನು ಸಾಕಷ್ಟು ವೈಫಲ್ಯಗಳನ್ನು ಎದುರಿಸಿದ್ದೇನೆ. ನೀವು ಸತತ ವೈಫಲ್ಯಗಳನ್ನು ಎದುರಿಸಿದಾಗ ನಿಮ್ಮ ಮನಸ್ಸಿನಲ್ಲಿ ಬಹಳಷ್ಟು ಅನುಮಾನಗಳು ಮೂಡುತ್ತವೆ. ಇದರ ಜೊತೆಗೆ ಜನರ ಟೀಕೆಗಳು, ಸೋಶಿಯಲ್ ಮೀಡಿಯಾದಲ್ಲಿನ ನಿಂದನೆಗಳು ನಿಮ್ಮನ್ನು ಸಾಕಷ್ಟು ಚಿಂತೆಗೀಡು ಮಾಡುತ್ತವೆ. ಆ ಹಂತದಲ್ಲಿ ನಾನು ಕೂಡ ಆಶ್ಚರ್ಯ ಪಡುತ್ತಿದ್ದೆ, ನಾನು ಅಂತರರಾಷ್ಟ್ರೀಯ ಕ್ರಿಕೆಟ್ಗೆ ಸೂಕ್ತವಾದ ಆಟಗಾರನಲ್ಲವ ಎಂಬ ಪ್ರಶ್ನೆಗಳು ಮೂಡುತ್ತಿದ್ದವು. ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದ ನನಗೆ, ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಏಕೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ ಎಂಬ ಅನೇಕ ಆಲೋಚನೆಗಳು ನನ್ನ ಮನಸ್ಸಿಗೆ ಬಂದವು. ಆದರೆ ಬಹಳ ವರ್ಷಗಳ ಅನುಭವದ ನಂತರ, ನನ್ನ ಸಾಮರ್ಥ್ಯ ಏನು ಎಂದು ನನಗೆ ಈಗ ತಿಳಿದಿದೆ.
ನಾಯಕ ಮತ್ತು ಕೋಚ್ ನನ್ನ ಬೆನ್ನಿಗೆ ನಿಂತರು
ನಾನು ವಿಕೆಟ್‌ನಲ್ಲಿ ಸ್ವಲ್ಪ ಸಮಯವನ್ನು ಕಳೆದರೆ, ಸ್ಪಿನ್ ಮತ್ತು ವೇಗದ ಬೌಲಿಂಗ್ ವಿರುದ್ಧ ಉತ್ತಮ ಶಾಟ್‌ಗಳನ್ನು ಹೊಡೆಯುವ ಸಾಮರ್ಥ್ಯವಿದೆ ಎಂಬುದನ್ನು ಅರಿತುಕೊಂಡೆ. ಈ ಮೂಲಕ ನಾನು ಖಂಡಿತವಾಗಿಯೂ ತಂಡಕ್ಕೆ ಉತ್ತಮ ಕೊಡುಗೆ ನೀಡಬಲ್ಲೆ ಎಂಬುದು ಅರಿವಾಯಿತು. ನಿಸ್ಸಂಶಯವಾಗಿ ನನ್ನ ವೃತ್ತಿಜೀವನದಲ್ಲಿ ಸಾಕಷ್ಟು ಏರಿಳಿತಗಳಿವೆ. ಈ ಹಂತದಲ್ಲಿ ನನಗೆ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಕೋಚ್ ಗೌತಮ್ ಗಂಭೀರ್ ಅವರಿಂದ ಉತ್ತಮ ಬೆಂಬಲ ಸಿಕ್ಕಿತು. ಸೂರ್ಯಕುಮಾರ್ ಯಾದವ್ ಮತ್ತು ಗೌತಮ್ ಭಾಯ್ ಮತ್ತು ವಿವಿಎಸ್ ಲಕ್ಷ್ಮಣ್ ಸರ್ ಅವರಂತಹವರು ವೈಫಲ್ಯದ ಸಮಯದಲ್ಲಿ ನನ್ನ ಬೆಂಬಲಕ್ಕೆ ನಿಂತರು. ನಿಮ್ಮ ವೈಫಲ್ಯಗಳ ಸಮಯದಲ್ಲಿ ಅವರು ನಿಮ್ಮೊಂದಿಗೆ ಮಾತನಾಡುವ ರೀತಿ ಬಹಳ ಮುಖ್ಯ.
ನಾನು ತುಂಬಾ ಕೃತಜ್ಞನಾಗಿದ್ದೇನೆ
ಆದ್ದರಿಂದ ನನ್ನ ಕೆಟ್ಟ ಸಮಯದಲ್ಲಿ ನನಗೆ ಗೌತಮ್ ಭಾಯ್ ಮತ್ತು ಸೂರ್ಯಕುಮಾರ್ ಅವರಿಂದ ಸಾಕಷ್ಟು ಸಲಹೆ ಸಿಕ್ಕಿತು. ಸ್ಪಿನ್ ಬೌಲಿಂಗ್ ವಿರುದ್ಧ ಶ್ರಮಿಸುವಂತೆ ಹಾಗೆಯೇ ಕೇರಳದ ಸ್ಪಿನ್ನರ್‌ಗಳ ವಿರುದ್ಧ ಅಲ್ಲಿನ ಒರಟು ವಿಕೆಟ್‌ಗಳಲ್ಲಿ ಅಭ್ಯಾಸ ಮಾಡಿ ಎಂದು ಅವರು ನನಗೆ ಸಲಹೆ ನೀಡಿದರು. ನನ್ನ ಮೇಲೆ ಅವರು ತೋರಿದ ನಂಬಿಕೆಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ನಾನು ಅದನ್ನು ನನ್ನ ತಂಡದ ನಿರ್ವಹಣೆಗೆ ಹಿಂತಿರುಗಿಸಲು ಸಾಧ್ಯವಾಯಿತು ಎಂದು ನಾನು ಭಾವಿಸುತ್ತೇನೆ. ಇದು ಕೇವಲ ಪ್ರಾರಂಭ ಎಂದು ನಾನು ಭಾವಿಸುತ್ತೇನೆ. ನಾನು ಇನ್ನೂ ಕಠಿಣ ಅಭ್ಯಾಸ ಮಾಡಲು ಬಯಸುತ್ತೇನೆ. ನನ್ನ ದೇಶಕ್ಕಾಗಿ ಆಡಲು ನಾನು ತುಂಬಾ ಕೃತಜ್ಞನಾಗಿದ್ದೇನೆ. ನಾನು ಮೈದಾನಕ್ಕೆ ಹೋದಾಗಲೆಲ್ಲಾ ತಂಡಕ್ಕೆ ಕೊಡುಗೆ ನೀಡಲು ಮತ್ತು ಪಂದ್ಯ ಗೆಲ್ಲಲು ಪ್ರಯತ್ನಿಸುತ್ತೇನೆ ಎಂದು ಸಂಜು ಹೇಳಿಕೊಂಡಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ