46 ಬೌಂಡರಿ, 12 ಸಿಕ್ಸರ್… ಅಜೇಯ 426 ರನ್ ಚಚ್ಚಿದ ಹರಿಯಾಣ ಸೂಪರ್ ಸ್ಟಾರ್
CK Nayudu Trophy: ಹರಿಯಾಣ ಮತ್ತು ಮುಂಬೈ ನಡುವೆ ನಡೆಯುತ್ತಿರುವ ಸಿಕೆ ನಾಯುಡು ಟ್ರೋಫಿ ಪಂದ್ಯದಲ್ಲಿ ಹರಿಯಾಣ ಪರ ಕಣಕ್ಕಿಳಿದಿರು ಯಶ್ವರ್ಧನ್ ದಲಾಲ್ ಕೇವಲ 463 ಎಸೆತಗಳಲ್ಲಿ 46 ಬೌಂಡರಿ ಹಾಗೂ 12 ಸಿಕ್ಸರ್ ಸಹಿತ 426 ರನ್ ಬಾರಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇವರ ಈ ಇನ್ನಿಂಗ್ಸ್ ಆಧಾರದ ಮೇಲೆ ಹರಿಯಾಣ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 700 ಕ್ಕೂ ಹೆಚ್ಚು ರನ್ ಗಳಿಸಿದೆ.
ಒಂದೆಡೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಅವರಂತಹ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳು ರನ್‌ಗಾಗಿ ಪರದಾಡುತ್ತಿದ್ದರೆ, ಇನ್ನೊಂದೆಡೆ ದೇಶೀಯ ಕ್ರಿಕೆಟ್ನಲ್ಲಿ ಅನೇಕ ಅಪರಿಚಿತ ಬ್ಯಾಟ್ಸ್‌ಮನ್‌ಗಳು ರನ್‌ಗಳ ಮಳೆ ಸುರಿಸುತ್ತಿದ್ದಾರೆ. ಭಾರತದಲ್ಲಿ ರಣಜಿ ಟ್ರೋಫಿ ಜೊತೆಗೆ ನಡೆಯುತ್ತಿರುವ 23 ವರ್ಷದೊಳಗಿನವರ ಕರ್ನಲ್ ಸಿಕೆ ನಾಯುಡು ಟ್ರೋಫಿಯಲ್ಲಿ ಹರಿಯಾಣ ತಂಡದ ಸ್ಟಾರ್ ಬ್ಯಾಟರ್ ಯಶ್ವರ್ಧನ್ ದಲಾಲ್ 451 ಎಸೆತಗಳಲ್ಲಿ ಬರೋಬ್ಬರಿ 400 ರನ್ ಬಾರಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
410 ರನ್‌ಗಳ ಅದ್ಭುತ ಜೊತೆಯಾಟ
ವಾಸ್ತವವಾಗಿ ಸಿಕೆ ನಾಯುಡು ಟ್ರೋಫಿಯಲ್ಲಿ ಹರಿಯಾಣ ಮತ್ತು ಮುಂಬೈ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡುತ್ತಿರುವ ಹರಿಯಾಣ ಬೃಹತ್ ಮೊತ್ತ ಕಲೆಹಾಕಿದೆ. ತಂಡದ ಪರ ಆರಂಭಿಕ ಜೋಡಿ ಅರ್ಶ್ ರಂಗ ಮತ್ತು ಯಶ್ವರ್ಧನ್ ದಲಾಲ್ ದಾಖಲೆಯ ಇನ್ನಿಂಗ್ಸ್ ಕಟ್ಟಿದ್ದಾರೆ. ಈ ಇಬ್ಬರೂ ತಮ್ಮ ತಮ್ಮ ಶತಕಗಳನ್ನು ಪೂರೈಸಿದಲ್ಲದೆ, ಮೊದಲ ವಿಕೆಟ್‌ಗೆ 410 ರನ್‌ಗಳ ಅದ್ಭುತ ಜೊತೆಯಾಟವನ್ನು ಮಾಡಿದರು. ಅಂತಿಮವಾಗಿ ಪಂದ್ಯದ ಎರಡನೇ ದಿನ ರಂಗ 151 ರನ್ ಗಳಿಸಿ ಔಟಾದರೆ, ಮತ್ತೊಬ್ಬ ಆರಂಭಿಕ ದಲಾಲ್ ಮಾತ್ರ ತಮ್ಮ ಸ್ಫೋಟಕ ಬ್ಯಾಟಿಂಗ್ ಮುಂದುವರಿಸಿ ಇತಿಹಾಸ ಸೃಷ್ಟಿಸಿದ್ದಾರೆ.
ಅಜೇಯ 426 ರನ್
ಪಂದ್ಯದ ಎರಡನೇ ದಿನ ಒಂದೆಡೆ ತಂಡದ ವಿಕೆಟ್ಗಳ ಪತನದ ನಡುವೆಯೂ ಮುಂಬೈ ಬೌಲರ್‌ಗಳ ಬೆವರಿಳಿಸಿದ ಯಶ್ವರ್ಧನ್ ದಲಾಲ್ 451 ಎಸೆತಗಳಲ್ಲಿ 400 ರನ್ ಗಡಿ ಮುಟ್ಟುವ ಮೂಲಕ ಇತಿಹಾಸ ಸೃಷ್ಟಿಸಿದರು. ಇದು ಈ ಟೂರ್ನಿಯ ಅತಿ ದೊಡ್ಡ ಸ್ಕೋರ್‌ಗಳಲ್ಲಿ ಒಂದಾಗಿದೆ. ದಲಾಲ್ ಅವರ ಈ ಇನ್ನಿಂಗ್ಸ್ ಆಧಾರದ ಮೇಲೆ ಹರಿಯಾಣ ತಂಡ 700ಕ್ಕೂ ಹೆಚ್ಚು ರನ್ ಗಳಿಸಿದೆ. ಎರಡನೇ ದಿನದಾಟದಂತ್ಯಕ್ಕೆ ಹರಿಯಾಣ ತಂಡ 8 ವಿಕೆಟ್ ಕಳೆದುಕೊಂಡು 732 ರನ್ ಗಳಿಸಿದ್ದು, ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿಲ್ಲ. ತಂಡದ ಪರ ಅಜೇಯರಾಗಿ ಉಳಿದಿರುವ ಯಶ್ವರ್ಧನ್ ದಲಾಲ್ ಕೇವಲ 463 ಎಸೆತಗಳಲ್ಲಿ 46 ಬೌಂಡರಿ ಹಾಗೂ 12 ಸಿಕ್ಸರ್ ಸಹಿತ 426 ರನ್ ಬಾರಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ