IND vs SA: ಮಿಂಚಿದ ಅರ್ಷದೀಪ್- ದೀಪಕ್, ರಾಹುಲ್- ಸೂರ್ಯ ಅರ್ಧಶತಕ; ಭಾರತಕ್ಕೆ ಸುಲಭ ಜಯ

| Updated By: ಪೃಥ್ವಿಶಂಕರ

Updated on: Sep 28, 2022 | 10:45 PM

IND vs SA: ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಭರ್ಜರಿ ಆರಂಭವನ್ನು ಮಾಡಿದ್ದು, ಗೆಲುವಿನ ಹಾದಿಯಲ್ಲಿ ಸತತ ಮೂರನೇ ಹೆಜ್ಜೆ ಇರಿಸಿದೆ.

IND vs SA: ಮಿಂಚಿದ ಅರ್ಷದೀಪ್- ದೀಪಕ್, ರಾಹುಲ್- ಸೂರ್ಯ ಅರ್ಧಶತಕ; ಭಾರತಕ್ಕೆ ಸುಲಭ ಜಯ
IND vs SA
Follow us on

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಟೀಂ ಇಂಡಿಯಾ (Team India) ಭರ್ಜರಿ ಆರಂಭವನ್ನು ಮಾಡಿದ್ದು, ಗೆಲುವಿನ ಹಾದಿಯಲ್ಲಿ ಸತತ ಮೂರನೇ ಹೆಜ್ಜೆ ಇರಿಸಿದೆ. ಸತತ ಎರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿ ಸರಣಿ ಗೆದ್ದ ಮೂರು ದಿನಗಳ ನಂತರ ಟೀಂ ಇಂಡಿಯಾ ಹೊಸ ಎದುರಾಳಿಯ ವಿರುದ್ಧವೂ ಗೆದ್ದಿದೆ. ತಿರುವನಂತಪುರಂನಲ್ಲಿ ವೇಗದ ಬೌಲರ್​ಗಳ ಸಹಕಾರಿ ಪಿಚ್ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದು, ಬ್ಯಾಟ್ಸ್​ಮನ್​ಗಳು ಸಂಕಷ್ಟಕ್ಕೆ ಸಿಲುಕಿದರು. ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾವನ್ನು ಕೇವಲ 106 ರನ್‌ಗಳಿಗೆ ಕಟ್ಟಿಹಾಕಿತು. ಆರಂಭಿಕ ಸಂಕಷ್ಟದ ನಂತರ ಭಾರತ ಈ ಪಂದ್ಯವನ್ನು 8 ವಿಕೆಟ್‌ಗಳಿಂದ ಗೆದ್ದುಕೊಂಡಿತು.

ಸುಮಾರು 3 ವರ್ಷಗಳ ನಂತರ ತಿರುವನಂತಪುರಂನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಬೌಂಡರಿ, ಸಿಕ್ಸರ್‌ಗಳ ಸುರಿಮಳೆಯನ್ನು ಪ್ರೇಕ್ಷಕರು ಕಣ್ತುಂಬಿಕೊಳ್ಳಲಿಲ್ಲ. ಆದರೆ ಉಭಯ ತಂಡಗಳ ವೇಗದ ಬೌಲರ್‌ಗಳು ಟೆಸ್ಟ್ ಪಂದ್ಯದ ಶೈಲಿಯಲ್ಲಿ ಸ್ವಿಂಗ್ ಮತ್ತು ನಿಖರವಾದ ಲೈನ್ ಲೆಂಗ್ತ್ ಬೌಲಿಂಗ್ ಅನ್ನು ಪ್ರಸ್ತುತಪಡಿಸಿದರು. ಟೀಮ್ ಇಂಡಿಯಾ ಮೊದಲು ಅದರ ಜವಾಬ್ದಾರಿಯನ್ನು ವಹಿಸಿಕೊಂಡಿತು. ದೀಪಕ್ ಚಹಾರ್-ಅರ್ಷದೀಪ್ ಸಿಂಗ್ ಅವರ ಮಾರಕ ಬೌಲಿಂಗ್ ಆಧಾರದ ಮೇಲೆ ದಕ್ಷಿಣ ಆಫ್ರಿಕಾವನ್ನು ಆರಂಭದಲ್ಲಿಯೇ ಮಂಡಿಯೂರಿಸಿತು.

15 ಎಸೆತಗಳಲ್ಲಿ ದಕ್ಷಿಣ ಆಫ್ರಿಕಾದ 5 ವಿಕೆಟ್ ಪತನ

ಟಾಸ್ ಗೆದ್ದ ನಂತರ ಮೊದಲು ಬೌಲಿಂಗ್ ಮಾಡಿದ ಭಾರತ, ದಕ್ಷಿಣ ಆಫ್ರಿಕಾ ತಂಡದ ಅರ್ಧದಷ್ಟು ಆಟಗಾರರನ್ನು ಅಂದರೆ ಮೊದಲ 15 ಎಸೆತಗಳಲ್ಲಿ 5 ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್‌ಗೆ ಕಳುಹಿಸಿತು. ಆ ವೇಳೆಗೆ ದಕ್ಷಿಣ ಆಫ್ರಿಕಾದ ಸ್ಕೋರ್ ಕೇವಲ 9 ರನ್ ಆಗಿತ್ತು. ಚಹರ್ ಮೊದಲ ಮತ್ತು ಮೂರನೇ ಓವರ್‌ಗಳಲ್ಲಿ ತಲಾ ಒಂದು ವಿಕೆಟ್ ಪಡೆದರೆ, ಎರಡನೇ ಓವರ್‌ನಲ್ಲಿ ಬೌಲಿಂಗ್ ಮಾಡಲು ಬಂದ ಎಡಗೈ ವೇಗಿ ಅರ್ಷದೀಪ್ ಮಾರಕ ಸ್ವಿಂಗ್‌ನೊಂದಿಗೆ ಮೂರು ವಿಕೆಟ್ ಪಡೆದರು.

ಔಟಾದ ಮೊದಲ 5 ಬ್ಯಾಟ್ಸ್‌ಮನ್‌ಗಳ ಪೈಕಿ 4 ಮಂದಿ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ದಕ್ಷಿಣ ಆಫ್ರಿಕಾಕ್ಕೆ ಒಂದು ಅಥವಾ ಎರಡು ಉತ್ತಮ ಇನ್ನಿಂಗ್ಸ್ ಮತ್ತು ಜೊತೆಯಾಟಗಳು ಬೇಕಾಗಿದ್ದವು. ಹೀಗಾಗಿ ತಂಡದ ಪರ ಸ್ಪಿನ್ ಆಲ್ ರೌಂಡರ್ ಕೇಶವ್ ಮಹಾರಾಜ್ ಅಮೋಘ ಇನಿಂಗ್ಸ್ ಆಡಿ ತಂಡದ ಪರ ಗರಿಷ್ಠ 41 ರನ್ ಗಳಿಸಿ ಹೇಗೋ ತಂಡವನ್ನು 106 ರನ್​ಗಳ ಸ್ಕೋರ್​ಗೆ ಕೊಂಡೊಯ್ದರು.

ಟೀಂ ಇಂಡಿಯಾ ಕೂಡ ಸಂಕಷ್ಟಕ್ಕೆ ಸಿಲುಕಿತ್ತು

ನಿಸ್ಸಂಶಯವಾಗಿ ಭಾರತ ತಂಡಕ್ಕೂ ಬ್ಯಾಟಿಂಗ್ ಸುಲಭವಾಗಿರಲಿಲ್ಲ. ಹೀಗಾಗಿ ಟೀಂ ಇಂಡಿಯಾ ಆರಂಭದಲ್ಲೇ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡರೆ, ಇನ್ನೊಂದು ಕಡೆಯಿಂದ ಕೆಎಲ್ ರಾಹುಲ್ ಒಂದೊಂದು ರನ್​ಗೂ ಪರದಾಡಿದರು.

ಹೀಗಾಗಿ ಪವರ್‌ಪ್ಲೇಯ 36 ಎಸೆತಗಳಲ್ಲಿ ರಾಹುಲ್ 26 ಎಸೆತಗಳಲ್ಲಿ 11 ರನ್ ಗಳಿಸಿದರೆ, ಟೀಮ್ ಇಂಡಿಯಾ 2 ವಿಕೆಟ್ ನಷ್ಟಕ್ಕೆ 17 ರನ್ ಗಳಿಸಿತ್ತು. ಇದು ಪವರ್‌ಪ್ಲೇನಲ್ಲಿ ಟೀಂ ಇಂಡಿಯಾ ಗಳಿಸಿದ ಅತ್ಯಂತ ಕಡಿಮೆ ಸ್ಕೋರ್ ಕೂಡ ಆಗಿತ್ತು. ಏಳನೇ ಓವರ್‌ನ ಮೊದಲ ಎಸೆತದಲ್ಲಿ ಕೊಹ್ಲಿಯ ವಿಕೆಟ್ ಪತನದ ನಂತರ, ಕ್ರೀಸ್​ಗೆ ಬಂದ ಸೂರ್ಯಕುಮಾರ್ ಯಾದವ್, ಅದೇ ಓವರ್‌ನಲ್ಲಿ ಎನ್ರಿಕ್ ನೋಕಿಯಾ ಮೇಲೆ ಸತತ ಎರಡು ಸಿಕ್ಸರ್‌ಗಳನ್ನು ಬಾರಿಸಿದರು. ಆ ಬಳಿಕ ನಿದಾನವಾಗಿ ಇನ್ನಿಂಗ್ಸ್ ಮೇಲೆತ್ತಿದ ಈ ಜೋಡಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. 17ನೇ ಓವರ್​ನಲ್ಲಿ ಸಿಂಗಲ್ ಬಾರಿಸುವ ಮೂಲಕ ಸೂರ್ಯ ಅರ್ಧಶತಕ ಸಿಡಿಸಿದರೆ, ಅದೇ ಓವರ್​ನಲ್ಲಿ ಭರ್ಜರಿ ಸಿಕ್ಸರ್ ಬಾರಿಸುವ ಮೂಲಕ ರಾಹುಲ್ ಕೂಡ ಅರ್ಧಶತಕ ಪೂರ್ಣಗೊಳಿಸಿದರು. ಆ ಮೂಲಕ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟರು.

Published On - 10:21 pm, Wed, 28 September 22