ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ ಅವರ ಸಿಡಿಲಬ್ಬರ ಮುಂದುವರೆದಿದೆ. ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದ್ದ ಸೂರ್ಯ ಇದೀಗ ಸೌತ್ ಆಫ್ರಿಕಾ ವಿರುದ್ಧ ಕೂಡ ಅಬ್ಬರಿಸಿದ್ದಾರೆ.
ತಿರುವನಂತಪುರಂನಲ್ಲಿನ ಗ್ರೀನ್ಫೀಲ್ಡ್ ಮೈದಾನದಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಸೂರ್ಯಕುಮಾರ್ ಯಾದವ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಕೇವಲ 33 ಎಸೆತಗಳನ್ನು ಎದುರಿಸಿದ್ದ ಬಲಗೈ ದಾಂಡಿಗ 3 ಸಿಕ್ಸ್ ಹಾಗೂ 5 ಫೋರ್ನೊಂದಿಗೆ ಅರ್ಧಶತಕ ಬಾರಿಸಿದ್ದರು.
ಈ ಅರ್ಧಶತಕದೊಂದಿಗೆ ಟಿ20 ಕ್ರಿಕೆಟ್ ಸೂರ್ಯಕುಮಾರ್ ಯಾದವ್ ವಿಶೇಷ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಅದು ಕೂಡ ಟೀಮ್ ಇಂಡಿಯಾದ ಅತಿರಥ ಮಹಾರಥರನ್ನು ಹಿಂದಿಕ್ಕುವ ಮೂಲಕ ಎಂಬುದು ವಿಶೇಷ.
ಅಂದರೆ ಒಂದು ಕ್ಯಾಲೆಂಡರ್ ವರ್ಷದಲ್ಲಿ ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ದಾಖಲೆ ಇದೀಗ ಸೂರ್ಯಕುಮಾರ್ ಯಾದವ್ ಪಾಲಾಗಿದೆ. ಈ ಹಿಂದೆ ಈ ದಾಖಲೆ ಶಿಖರ್ ಧವನ್ ಅವರ ಹೆಸರಿನಲ್ಲಿತ್ತು.
ಆದರೆ 2022 ರಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಸೂರ್ಯಕುಮಾರ್ ಯಾದವ್ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಅವರನ್ನು ಹಿಂದಿಕ್ಕಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಅಷ್ಟೇ ಅಲ್ಲದೆ ಟೀಮ್ ಇಂಡಿಯಾ ಪರ ಟಿ20ಯಲ್ಲಿ ಒಂದು ವರ್ಷದಲ್ಲಿ 700 ಕ್ಕೂ ಅಧಿಕ ರನ್ ಬಾರಿಸಿದ ಮೊದಲ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನೂ ಕೂಡ ಬರೆದಿದ್ದಾರೆ. ಹಾಗಿದ್ರೆ ಭಾರತದ ಪರ ಟಿ20 ಕ್ರಿಕೆಟ್ನಲ್ಲಿ ಒಂದು ವರ್ಷದಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟ್ಸ್ಮನ್ಗಳು ಯಾರೆಲ್ಲಾ ನೋಡೋಣ....
1- ಸೂರ್ಯಕುಮಾರ್ ಯಾದವ್ - 732* ರನ್ (2022)
2- ಶಿಖರ್ ಧವನ್ - 689 (2018)
3- ವಿರಾಟ್ ಕೊಹ್ಲಿ- 641 (2016)
4- ರೋಹಿತ್ ಶರ್ಮಾ - 590 (2018)
ಇಲ್ಲಿ ಹೆಸರಿಸಲಾಗಿರುವ ಮೂವರು ಬ್ಯಾಟ್ಸ್ಮನ್ಗಳಲ್ಲಿ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಆರಂಭಿಕರಾಗಿ ಕಣಕ್ಕಿಳಿದು ಈ ಸಾಧನೆ ಮಾಡಿದ್ದರು. ಇನ್ನು ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಆಡುವ ಮೂಲಕ ಬೃಹತ್ ರನ್ ಕಲೆಹಾಕಿದ್ದರು. ಆದರೆ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ 700+ ರನ್ ಬಾರಿಸುವ ಮೂಲಕ ಸೂರ್ಯಕುಮಾರ್ ಹೊಸ ಇತಿಹಾಸ ನಿರ್ಮಿಸಿರುವುದು ವಿಶೇಷ.
Published On - 10:32 am, Thu, 29 September 22