IND vs SA: ರಾಯ್ಪುರದಲ್ಲಿ ಚೊಚ್ಚಲ ಏಕದಿನ ಶತಕ ಸಿಡಿಸಿದ ರುತುರಾಜ್ ಗಾಯಕ್ವಾಡ್
Ruturaj Gaikwad century: ರಾಂಚಿಯಲ್ಲಿ ಕೇವಲ 8 ರನ್ ಗಳಿಸಿದ್ದ ರುತುರಾಜ್ ಗಾಯಕ್ವಾಡ್, ರಾಯ್ಪುರದಲ್ಲಿ ತಮ್ಮ ಚೊಚ್ಚಲ ಏಕದಿನ ಶತಕ ಸಿಡಿಸಿ ಮಿಂಚಿದ್ದಾರೆ. ಟೀಂ ಇಂಡಿಯಾ ಪರ ಇದುವರೆಗೆ 8 ಏಕದಿನ ಪಂದ್ಯಗಳನ್ನಾಡಿರುವ ರುತುರಾಜ್, 77 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಮೊದಲ ಪಂದ್ಯದ ವೈಫಲ್ಯದ ಬಳಿಕ ಅವರ ಈ ಅಮೋಘ ಪ್ರದರ್ಶನ ಭಾರತ ಕ್ರಿಕೆಟ್‌ಗೆ ಭರವಸೆ ಮೂಡಿಸಿದೆ.

ರಾಂಚಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಕೇವಲ ಒಂದಂಕಿಗೆ ಸುಸ್ತಾಗಿದ್ದ ಟೀಂ ಇಂಡಿಯಾದ ಯುವ ಬ್ಯಾಟ್ಸ್‌ಮನ್ ರುತುರಾಜ್ ಗಾಯಕ್ವಾಡ್ (Ruturaj Gaikwad), ರಾಯ್ಪುರದಲ್ಲಿ ತಮ್ಮ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಮೊದಲ ಏಕದಿನದಲ್ಲಿ ಕೇವಲ 8 ರನ್ ಗಳಿಸಿ ಔಟಾಗಿದ್ದ ರುತುರಾಜ್, ಇದೀಗ ಎರಡನೇ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಟೀಂ ಇಂಡಿಯಾ ಪರ ಇದುವರೆಗೆ 8 ಏಕದಿನ ಪಂದ್ಯಗಳನ್ನಾಡಿರುವ ರುತುರಾಜ್ಗೆ ಇದು ಚೊಚ್ಚಲ ಏಕದಿನ ಶತಕವಾಗಿರುವುದು ಇನ್ನಷ್ಟು ವಿಶೇಷವಾಗಿದೆ. ಎಂದಿನಂತೆ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ರುತುರಾಜ್ ಆರಂಭದಿಂದಲೂ ವೇಗವಾಗಿ ಬ್ಯಾಟ್ ಬೀಸಿದರು. 52 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅವರು 77 ಎಸೆತಗಳಲ್ಲಿ ತಮ್ಮ ಚೊಚ್ಚಲ ಶತಕದ ಗಡಿ ದಾಟಿದರು.
ರಾಯ್ಪುರದಲ್ಲಿ ರೋಹಿತ್ ಮತ್ತು ಜೈಸ್ವಾಲ್ ಔಟಾದ ನಂತರ ಕ್ರೀಸ್ಗೆ ಬಂದ ಗಾಯಕ್ವಾಡ್, ವಿರಾಟ್ ಕೊಹ್ಲಿ ಜೊತೆ ಗಮನಾರ್ಹ ಪಾಲುದಾರಿಕೆ ರೂಪಿಸಿದರು. ಮೊದಲ ಎಸೆತದಲ್ಲೇ ಔಟಾಗುವುದರಿಂದ ಸ್ವಲ್ಪದರಲ್ಲೇ ಪಾರಾದ ಗೈಕ್ವಾಡ್ ಆ ನಂತರ ಅದ್ಭುತ ಹೊಡೆತಗಳನ್ನು ಆಡಿದರು. ಕೇವಲ 52 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ರುತುರಾಜ್ ಮುಂದಿನ 25 ಎಸೆತಗಳಲ್ಲಿ ಶತಕ ತಲುಪಿದರು. ಗೈಕ್ವಾಡ್ ಕೇವಲ 77 ಎಸೆತಗಳಲ್ಲಿ ತಮ್ಮ ಮೊದಲ ಏಕದಿನ ಶತಕ ಪೂರೈಸಿದರು.
4ನೇ ಕ್ರಮಾಂಕದಲ್ಲಿ ರುತುರಾಜ್ ಶತಕ
ರುತುರಾಜ್ ಅವರ ಶತಕ ವಿಶೇಷ ಏಕೆಂದರೆ, ಅವರು ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿದ್ದರೂ, ಈ ಸರಣಿಯಲ್ಲಿ ಅವರಿಗೆ 4 ನೇ ಕ್ರಮಾಂಕದಲ್ಲಿ ಆಡುವ ಅವಕಾಶ ಸಿಕ್ಕಿದೆ. ತಮ್ಮ ಕ್ರಮಾಂಕ ಬದಲಾಯಿಸಿದರೂ ರುತುರಾಜ್ ಕೇವಲ 77 ಎಸೆತಗಳಲ್ಲಿ ಶತಕ ಬಾರಿಸಿದರು. ಅದ್ಭುತ ವಿಷಯವೆಂದರೆ ಗಾಯಕ್ವಾಡ್ ಸ್ಪಿನ್ನರ್‌ಗಳ ವಿರುದ್ಧ ಮತ್ತು ವೇಗಿಗಳ ವಿರುದ್ಧ ಅಷ್ಟೇ ಉತ್ತಮವಾಗಿ ಬ್ಯಾಟ್ ಬೀಸಿದರು. ಅಂತಿಮವಾಗಿ ರುತುರಾಜ್ ಗಾಯಕ್ವಾಡ್ 83 ಎಸೆತಗಳಲ್ಲಿ 105 ರನ್ ಗಳಿಸಿ ಔಟಾದರು.
IND vs SA: ರಾಯ್ಪುರದಲ್ಲೂ ಕಿಂಗ್ ಕೊಹ್ಲಿಯದ್ದೇ ಕಾರುಬಾರು; ಸತತ 2ನೇ ಶತಕ
ರುತುರಾಜ್-ವಿರಾಟ್ ಶತಕದ ಜೊತೆಯಾಟ
ರುತುರಾಜ್ ಗಾಯಕ್ವಾಡ್ ಶತಕ ಗಳಿಸಿದ್ದಲ್ಲದೆ, ವಿರಾಟ್ ಕೊಹ್ಲಿ ಅವರೊಂದಿಗೆ ಗಮನಾರ್ಹ ಪಾಲುದಾರಿಕೆಯನ್ನು ರೂಪಿಸಿದರು. ಒಟ್ಟಾಗಿ ಈ ಜೋಡಿ 195 ರನ್ ಕಲೆಹಾಕಿತು. ಕುತೂಹಲಕಾರಿಯಾಗಿ, ವಿರಾಟ್ ಕೊಹ್ಲಿ ರಾಂಚಿ ಏಕದಿನ ಪಂದ್ಯಕ್ಕೂ ಮುನ್ನ ಗಾಯಕ್ವಾಡ್ ಅವರೊಂದಿಗೆ ಸಾಕಷ್ಟು ಸಮಯ ಕಳೆದಿದ್ದರು. ಅವರಿಗೆ ನೆಟ್ಸ್‌ನಲ್ಲಿ ಮಾರ್ಗದರ್ಶನವನ್ನು ನೀಡಿದ್ದರು. ಈ ಶತಕವು ಗಾಯಕ್ವಾಡ್ ಅವರ ಏಕದಿನ ತಂಡದಲ್ಲಿ ಸ್ಥಾನವನ್ನು ಖಾತರಿಪಡಿಸುವುದಿಲ್ಲವಾದರೂ, ಅವರು ಖಂಡಿತವಾಗಿಯೂ ಆಯ್ಕೆದಾರರ ಮೇಲೆ ಒತ್ತಡ ಹೇರಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:05 pm, Wed, 3 December 25
