ಭಾರತ ಮತ್ತು ದಕ್ಷಿಣ ಆಫ್ರಿಕಾ (ind vs sa 4th t20) ನಡುವಿನ ಐದು ಪಂದ್ಯಗಳ ಟಿ20 ಸರಣಿಯ ನಾಲ್ಕನೇ ಪಂದ್ಯ ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ರಿಷಭ್ ಪಂತ್ ನಾಯಕತ್ವದ ಟೀಮ್ ಇಂಡಿಯಾಗೆ ಈ ಪಂದ್ಯ ‘ಮಾಡು ಇಲ್ಲವೇ ಮಡಿ’ ಪಂದ್ಯ . ಏಕೆಂದರೆ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋತರೆ, ಸರಣಿ ಸೌತ್ ಆಫ್ರಿಕಾ ವಶವಾಗಲಿದೆ. ಆದರೆ ಅತ್ತ ಮೂರನೇ ಟಿ20ಯಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ತಂಡವನ್ನು 48 ರನ್ ಗಳಿಂದ ಸೋಲಿಸುವ ಮೂಲಕ ಸರಣಿಯನ್ನು ಜೀವಂತವಾಗಿರಿಸಿಕೊಂಡಿದೆ. ನಾಲ್ಕನೇ ಪಂದ್ಯವನ್ನು ಗೆದ್ದು ಸರಣಿ ಸಮಬಲಗೊಳಿಸುವ ಇರಾದೆಯಲ್ಲಿದೆ ಭಾರತ ತಂಡ. ಆದರೆ ಕಳೆದ ಪಂದ್ಯದಲ್ಲಿ ಸೋತಿರುವ ಸೌತ್ ಆಫ್ರಿಕಾ ನಾಲ್ಕನೇ ಪಂದ್ಯ ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ತವಕದಲ್ಲಿದೆ. ಇದಾಗ್ಯೂ ಇಂದಿನ ಪಂದ್ಯದ ವೇಳೆ ಮಳೆ ಬರಲಿದೆಯಾ ಎಂಬ ಪ್ರಶ್ನೆಯೊಂದು ಹಲವರಲ್ಲಿದೆ. ಈ ಪ್ರಶ್ನೆಗೆ ಉತ್ತರವಾಗಿ ಸಂಪೂರ್ಣ ಹವಾಮಾನ ವರದಿ ಈ ಕೆಳಗಿನಂತಿದೆ.
ಹೇಗಿ ಹವಾಮಾನ?
ರಾಜ್‌ಕೋಟ್‌ನಲ್ಲಿ ಉಭಯ ತಂಡಗಳು ಹೀಟ್ ವೆಬ್ ಅನ್ನು ಎದುರಿಸಬೇಕಾಗಿಲ್ಲ. ಇನ್ನು ಶುಕ್ರವಾರ ರಾಜ್‌ಕೋಟ್‌ನಲ್ಲಿ ಮೋಡಗಳು ಕಂಡುಬಂದರೂ ಮಳೆಯಾಗುವ ಸಾಧ್ಯತೆಯಿಲ್ಲ. ದಿನದ ತಾಪಮಾನವು 36 ಡಿಗ್ರಿ ಸೆಲ್ಸಿಯಸ್ ಆಗುವ ನಿರೀಕ್ಷೆಯಿದೆ. ಸಂಜೆ 7 ಗಂಟೆಯಿಂದ ಪಂದ್ಯ ನಡೆಯಲ್ಲಿದ್ದು, ಈ ವೇಳೆಗೆ ತಾಪಮಾನ 30 ಡಿಗ್ರಿಗೆ ಇಳಿಯಬಹುದು. ಹೀಗಾಗಿ ಇಂದಿನ ಪಂದ್ಯವು ಮಳೆಯ ಭೀತಿಯಿಲ್ಲದೆ ಸರಾಗವಾಗಿ ನಡೆಯಲಿದೆ.
ಪಿಚ್ ವರದಿ:
ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಸ್ಟೇಡಿಯಂ ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ಸಹಕಾರಿ. ಇಲ್ಲಿ ನಡೆದ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಪ್ರತಿ ಬಾರಿ 150ಕ್ಕೂ ಹೆಚ್ಚು ರನ್‌ಗಳು ದಾಖಲಾಗಿವೆ. ಸೌರಾಷ್ಟ್ರದಲ್ಲಿ ಭಾರತ ಮೊದಲ ಬಾರಿಗೆ 2013 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಿ20 ಪಂದ್ಯವನ್ನು ಆಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ202 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಟೀಮ್ ಇಂಡಿಯಾ ಚೇಸ್ ಮಾಡಿರುವುದು ವಿಶೇಷ. ಇನ್ನು ಇಲ್ಲಿ ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಮಾಡಲು ಬಯಸುತ್ತದೆ.
ಭಾರತವು ಈ ಮೈದಾನದಲ್ಲಿ ಮೂರು ಟಿ20 ಪಂದ್ಯಗಳನ್ನು ಆಡಿದೆ. ಈ ಪಿಚ್‌ನಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶವನ್ನು ಸೋಲಿಸಿದೆ. 2017ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ 40 ರನ್‌ಗಳಿಂದ ಸೋಲನುಭವಿಸಬೇಕಾಯಿತು. ಅದೇ ಸಮಯದಲ್ಲಿ ದಕ್ಷಿಣ ಆಫ್ರಿಕಾ ಈ ಪಿಚ್‌ನಲ್ಲಿ ಒಂದೇ ಒಂದು ಟಿ20 ಪಂದ್ಯವನ್ನು ಆಡಿಲ್ಲ. ಆದರೆ ಇಲ್ಲಿ ನಡೆದ ಏಕೈಕ ಏಕದಿನ ಪಂದ್ಯದಲ್ಲಿ ಭಾರತ ತಂಡವನ್ನು ಸೌತ್ ಆಫ್ರಿಕಾ ಸೋಲಿಸಿತ್ತು. 2018ರಲ್ಲಿ ಎಂಎಸ್ ಧೋನಿ ನೇತೃತ್ವದ ಭಾರತ ತಂಡವನ್ನು ಸೌತ್ ಆಫ್ರಿಕಾ 18 ರನ್‌ಗಳಿಂದ ಸೋಲಿಸಿತ್ತು. ಮೊದಲು ಬ್ಯಾಟ್ ಮಾಡಿದ ಆಫ್ರಿಕಾ 270 ರನ್ ಗಳಿಸಿತು. ಭಾರತ ತಂಡ ನಿಗದಿತ 50 ಓವರ್‌ಗಳಲ್ಲಿ ಆರು ವಿಕೆಟ್‌ಗಳ ನಷ್ಟಕ್ಕೆ 252 ರನ್ ಗಳಿಸಲಷ್ಟೇ ಶಕ್ತವಾಯಿತು.
ಅಂದರೆ ರಾಜ್‌ಕೋಟ್‌ನಲ್ಲಿ ನಡೆದ ಟಿ20 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಮೇಲುಗೈ ಹೊಂದಿದೆ. ಹೀಗಾಗಿ ಇಂದಿನ ಪಂದ್ಯದಲ್ಲೂ ಗೆಲುವನ್ನು ನಿರೀಕ್ಷಿಸಬಹುದು.
ಉಭಯ ತಂಡಗಳು ಹೀಗಿದೆ:
ಭಾರತ ಟಿ20 ತಂಡ: ರಿಷಬ್ ಪಂತ್ (ನಾಯಕ ಮತ್ತು ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವೇಶ್ವರ್ ಕುಮಾರ್ , ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಷದೀಪ್ ಸಿಂಗ್ ಮತ್ತು ಉಮ್ರಾನ್ ಮಲಿಕ್.
ದಕ್ಷಿಣ ಆಫ್ರಿಕಾ ಟಿ20 ತಂಡ: ತೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್, ಹೆನ್ರಿಕ್ ಕ್ಲಾಸೆನ್, ಕೇಶವ್ ಮಹಾರಾಜ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಅನ್ರಿಕ್ ನೋಕಿಯಾ, ವೇಯ್ನ್ ಪೌರ್ನೆಲ್, ಡ್ವೇನ್ ಪ್ರಿಟೋರಿಯಸ್, ತಬ್ರೇಝ್ ಶಂಸಿ, ಕಗಿಸೊ ರಬಾಡ, ಸ್ಟಬ್ಸ್, ರಾಸಿ ವ್ಯಾನ್ ಡೆರ್ ಡುಸೆನ್ ಮತ್ತು ಮಾರ್ಕೊ ಯಾನ್ಸೆನ್.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.