ಸೌತ್ ಆಫ್ರಿಕಾ ವಿರುದ್ದದ ಟಿ20 ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಟೀಮ್ ಇಂಡಿಯಾ (Team india) ಬ್ಯಾಕ್ ಟು ಬ್ಯಾಕ್ ಸೋತಿದೆ. ಅದು ಅಂತಿಂಥ ಸೋಲಲ್ಲ. ಏಕೆಂದರೆ ಸೌತ್ ಆಫ್ರಿಕಾ ಆಟಗಾರರು ಎರಡೂ ಪಂದ್ಯಗಳಲ್ಲೂ ಭರ್ಜರಿ ಜಯವನ್ನೇ ಸಾಧಿಸಿದೆ. ಅಂದರೆ ಭಾರತೀಯ ಮೈದಾನದಲ್ಲಿ ದಕ್ಷಿಣ ಆಫ್ರಿಕನ್ನರು ಪಾರುಪತ್ಯ ಮೆರೆಯುತ್ತಿರುವುದು ವಿಶೇಷ. ಮೊದಲ ಪಂದ್ಯದಲ್ಲಿ 7 ವಿಕೆಟ್ಗಳ ಹೀನಾಯ ಸೋಲನುಭವಿಸಿದ ಟೀಮ್ ಇಂಡಿಯಾ 2ನೇ ಪಂದ್ಯದಲ್ಲಿ 4 ವಿಕೆಟ್ಗಳಿಂದ ಪರಾಜಯಗೊಂಡಿದೆ. ವಿಶೇಷ ಎಂದರೆ ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆದ ಆಟಗಾರರ ದಂಡೇ ಟೀಮ್ ಇಂಡಿಯಾದಲ್ಲಿದ್ದರೂ ಯಾರೊಬ್ಬರೂ ಮಿಂಚುತ್ತಿಲ್ಲ. ಮುಖ್ಯವಾಗಿ ಬೌಲಿಂಗ್ ವಿಭಾಗವು ಮೊನಚಿಲ್ಲದಂತಾಗಿದೆ. ಐಪಿಎಲ್ 2022ರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಯಜುವೇಂದ್ರ ಚಹಾಲ್, ಗುಜರಾತ್ ಟೈಟಾನ್ಸ್ ತಂಡವನ್ನು ಪ್ರಶಸ್ತಿ ತಂದುಕೊಟ್ಟ ಹಾರ್ದಿಕ್ ಪಾಂಡ್ಯ, ಹರ್ಷಲ್ ಪಟೇಲ್ ಮತ್ತು ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಎರಡು ಪಂದ್ಯಗಳಲ್ಲಿ ಛಾಪು ಮೂಡಿಸಲು ವಿಫಲರಾಗಿದ್ದಾರೆ.
ಚಾಹಲ್-ಅಕ್ಷರ್ ಪಟೇಲ್ ಜೋಡಿ ಇದುವರೆಗೆ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಗಳಲ್ಲಿ ನಿಷ್ಪರಿಣಾಮಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಯುಜ್ವೇಂದ್ರ ಚಹಾಲ್ ಐಪಿಎಲ್ 2022 ರಲ್ಲಿ ಅತ್ಯಧಿಕ 27 ವಿಕೆಟ್‌ಗಳನ್ನು ಪಡೆದು ಪರ್ಪಲ್ ಕ್ಯಾಪ್ ವಿನ್ನರ್ ಆಗಿದ್ದರು. ಆದರೆ, ದಕ್ಷಿಣ ಆಫ್ರಿಕಾ ಪರ ಮೊದಲ 2 ಟಿ20 ಪಂದ್ಯಗಳಲ್ಲಿ ಕೇವಲ 1 ವಿಕೆಟ್ ಪಡೆಯಲು ಶಕ್ತರಾಗಿದ್ದಾರೆ. ಇನ್ನು 6 ಓವರ್‌ಗಳಲ್ಲಿ ನೀಡಿದ್ದು ಬರೋಬ್ಬರಿ 75 ರನ್‌ಗಳು. ಅಂದರೆ, ಪ್ರತಿ ಓವರ್‌ನಲ್ಲಿ 12ಕ್ಕೂ ಹೆಚ್ಚು ರನ್ ನೀಡಿದ್ದಾರೆ. ಕಟಕ್‌ನಲ್ಲಿ ನಡೆದ ಎರಡನೇ ಟಿ20ಯಲ್ಲಿ ಚಹಾಲ್ ದುಬಾರಿ ಎನಿಸಿಕೊಂಡರು. ಅವರ 4 ಓವರ್‌ಗಳಲ್ಲಿ, ಆಫ್ರಿಕನ್ ಬ್ಯಾಟ್ಸ್‌ಮನ್‌ಗಳು 49 ರನ್ ಬಾರಿಸಿದ್ದರು. ಇದಾಗ್ಯೂ ಒಂದೇ ಒಂದು ವಿಕೆಟ್ ಪಡೆದಿಲ್ಲ.
ಮತ್ತೊಂದೆಡೆ ಅಕ್ಷರ್ ಪಟೇಲ್ 2 ಪಂದ್ಯಗಳಿಂದ 5 ಓವರ್‌ಗಳಲ್ಲಿ 59 ರನ್ ನೀಡಿದ್ದಾರೆ. ಮೊದಲ ಪಂದ್ಯದಲ್ಲಿ 4 ಓವರ್‌ಗಳಲ್ಲಿ 40 ರನ್ ನೀಡಿ 1 ವಿಕೆಟ್ ಪಡೆದರೆ, 2ನೇ ಪಂದ್ಯದಲ್ಲಿ 1 ಓವರ್‌ನಲ್ಲಿ 19 ರನ್ ಬಿಟ್ಟುಕೊಟ್ಟಿದ್ದರು. ಅಂದರೆ ತಂಡದ ಪ್ರಮುಖ ಸ್ಪಿನ್ ಆಲ್ರೌಂಡರ್ ಆಗಿರುವ ಅಕ್ಷರ್ ಪಟೇಲ್ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದಾರೆ.
ಹರ್ಷಲ್ ಪಟೇಲ್ ಅವರು ಐಪಿಎಲ್ 2022 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವಾಗಿ ಉತ್ತಮ ಬೌಲಿಂಗ್ ಮಾಡಿದರು. ಆದರೆ, ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ 2 ಪಂದ್ಯಗಳಲ್ಲಿ ತಮ್ಮ ಬೌಲಿಂಗ್ ಛಾಪು ಮೂಡಿಸಲು ಸಾಧ್ಯವಾಗಲಿಲ್ಲ. ಮೊದಲ ಟಿ20ಯಲ್ಲಿ ಅವರು 4 ಓವರ್‌ಗಳಲ್ಲಿ 42 ರನ್ ನೀಡಿ ಕೇವಲ ಒಂದು ವಿಕೆಟ್ ಪಡೆದಿದ್ದರು. ಹಾಗೆಯೇ ಎರಡನೇ ಪಂದ್ಯದಲ್ಲಿ 3 ಓವರ್ ಗಳಲ್ಲಿ 17 ರನ್ ನೀಡಿ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಆದರೆ ಹರ್ಷಲ್ ಪಟೇಲ್ ಡೆತ್ ಓವರ್‌ನಲ್ಲಿ ಪರಿಣಾಮಕಾರಿ ಬೌಲಿಂಗ್ ಮಾಡುತ್ತಿಲ್ಲ. ಅಲ್ಲದೆ ವಿಕೆಟ್ ಪಡೆಯುವಲ್ಲಿ ಹಿಂದೆ ಬಿದ್ದಿದ್ದಾರೆ. ಅದೇ ಐಪಿಎಲ್ನಲ್ಲಿ 15 ಪಂದ್ಯಗಳಲ್ಲಿ 19 ವಿಕೆಟ್ ಪಡೆದು ಮಿಂಚಿದ್ದರು.
ಶ್ರೇಯಸ್ ಅಯ್ಯರ್ ಮತ್ತು ಹಾರ್ದಿಕ್ ಪಾಂಡ್ಯ ಕೂಡ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲೆರಡು ಪಂದ್ಯಗಳಲ್ಲಿ ನಿರೀಕ್ಷಿತ ಆಟ ಪ್ರದರ್ಶಿಸಿಲ್ಲ. ಮೊದಲ ಟಿ20ಯಲ್ಲಿ ಹಾರ್ದಿಕ್ 12 ಎಸೆತಗಳಲ್ಲಿ 31 ರನ್ ಬಾರಿಸಿ ತಂಡವನ್ನು 200ರ ಗಡಿ ದಾಟಿಸಿ ಮಿಂಚಿದ್ದರೂ, ಬೌಲಿಂಗ್ನಲ್ಲಿ ದುಬಾರಿ ಎನಿಸಿಕೊಂಡರು. ಏಕೆಂದರೆ ಪಾಂಡ್ಯ ಅವರ ಮೊದಲ ಓವರ್‌ನಲ್ಲಿಯೇ ಆಫ್ರಿಕನ್ ಬ್ಯಾಟ್ಸ್‌ಮನ್‌ಗಳು 18 ರನ್ ಗಳಿಸಿದ್ದರು. ಇದಾದ ಬಳಿಕ ನಾಯಕ ಪಂತ್ ಅವರಿಗೆ ಬೌಲಿಂಗ್ ಕೂಡ ನೀಡಿರಲಿಲ್ಲ. ಎರಡನೇ ಟಿ20ಯಲ್ಲಿ ಪಾಂಡ್ಯ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ವಿಫಲರಾದರು. 3 ಓವರ್‌ಗಳಲ್ಲಿ 31 ರನ್‌ಗಳನ್ನು ಬಿಟ್ಟುಕೊಟ್ಟರು. ಅಷ್ಟೇ ಅಲ್ಲದೆ ಹಾರ್ದಿಕ್ ಎರಡು ಪಂದ್ಯಗಳಿಂದ ಒಂದೇ ಒಂದು ವಿಕೆಟ್ ಪಡೆದಿಲ್ಲ.
ಶ್ರೇಯಸ್ ಅಯ್ಯರ್ ಪರಿಸ್ಥಿತಿಯೂ ಇದೇ ಆಗಿದೆ. ಎರಡೂ ಪಂದ್ಯಗಳಲ್ಲಿ ಶ್ರೇಯಸ್ ರನ್ ಗಳಿಸಿದ್ದರು. ಆದರೆ, ಅವರ ಸ್ಟ್ರೈಕ್ ರೇಟ್ ತುಂಬಾ ಕಡಿಮೆಯಿದೆ. ಅದರಲ್ಲೂ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದರೂ ಬಿರುಸಿನ ಆಟ ಪ್ರದರ್ಶಿಸದೇ ಹೆಚ್ಚಿನ ಬಾಲ್ ಆಡುತ್ತಿದ್ದಾರೆ. ಮೊದಲ ಪಂದ್ಯದಲ್ಲಿ 27 ಎಸೆತಗಳಲ್ಲಿ 36 ರನ್ ಬಾರಿಸಿದ್ದರೆ, 2ನೇ ಪಂದ್ಯದಲ್ಲಿ ಅಯ್ಯರ್ 35 ಎಸೆತಗಳಲ್ಲಿ 40 ರನ್ ಮಾತ್ರಗಳಿಸಿದ್ದರು. ಅಂದರೆ ಪವರ್ಪ್ಲೇನಲ್ಲಿ ಕಣಕ್ಕಿಳಿದರೂ ಅದರ ಲಾಭ ಪಡೆದುಕೊಳ್ಳುವಲ್ಲಿ ಶ್ರೇಯಸ್ ಅಯ್ಯರ್ ವಿಫಲರಾಗಿದ್ದಾರೆ. ಇನ್ನು ರುತುರಾಜ್ ಗಾಯಕ್ವಾಡ್ ಬಗ್ಗೆ ಹೇಳುವಂತಿಲ್ಲ, ಬಂದ ಪುಟ್ಟ ಹೋದ ಪುಟ್ಟ ಎಂಬಂತೆ ಮೊದಲ ಪಂದ್ಯದಲ್ಲಿ 23 ರನ್ಗಳಿಸಿದರೆ, 2ನೇ ಪಂದ್ಯದಲ್ಲಿ 1 ರನ್ಗಳಿಸಿ ಔಟಾಗಿದ್ದರು. ಅಂದರೆ ಐಪಿಎಲ್ನಲ್ಲಿ ಅಬ್ಬರಿಸುವ ಮೂಲಕ ಹೀರೋಗಳೆನಿಸಿಕೊಂಡಿರುವ ಆಟಗಾರರೇ ಟೀಮ್ ಇಂಡಿಯಾ ಪರ ವಿಫಲರಾಗುತ್ತಿರುವುದು ಇದೀಗ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಚಿಂತೆಯನ್ನು ಹೆಚ್ಚಿಸಿದೆ.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.