IND vs SL: ಸೂರ್ಯ, ಗಂಭೀರ್ಗೆ ಗೆಲುವಿನ ಆರಂಭ; 43 ರನ್ಗಳಿಂದ ಸೋತ ಲಂಕಾ
IND vs SL: ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಭಾರತ ಹಾಗೂ ಶ್ರೀಲಂಕಾ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಪ್ರವಾಸಿ ಟೀಂ ಇಂಡಿಯಾ 43 ರನ್‌ಗಳ ಬೃಹತ್ ಜಯ ದಾಖಲಿಸಿದೆ. ಈ ಮೂಲಕ ಟಿ20 ವಿಶ್ವಕಪ್ ಬಳಿಕ ಚುಟುಕು ಮಾದರಿಯ ತಂಡದ ನಾಯಕತ್ವವಹಿಸಿಕೊಂಡಿರುವ ಸೂರ್ಯಕುಮಾರ್ ಯಾದವ್ ಹಾಗೂ ತಂಡದ ನೂತನ ಮುಖ್ಯ ಕೋಚ್ ಆಗಿರುವ ಗೌತಮ್ ಗಂಭೀರ್ಗೆ ಗೆಲುವಿನ ಶುಭಾರಂಭ ಸಿಕ್ಕಿದೆ.
ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಭಾರತ ಹಾಗೂ ಶ್ರೀಲಂಕಾ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಪ್ರವಾಸಿ ಟೀಂ ಇಂಡಿಯಾ 43 ರನ್‌ಗಳ ಬೃಹತ್ ಜಯ ದಾಖಲಿಸಿದೆ. ಈ ಮೂಲಕ ಟಿ20 ವಿಶ್ವಕಪ್ ಬಳಿಕ ಚುಟುಕು ಮಾದರಿಯ ತಂಡದ ನಾಯಕತ್ವವಹಿಸಿಕೊಂಡಿರುವ ಸೂರ್ಯಕುಮಾರ್ ಯಾದವ್ ಹಾಗೂ ತಂಡದ ನೂತನ ಮುಖ್ಯ ಕೋಚ್ ಆಗಿರುವ ಗೌತಮ್ ಗಂಭೀರ್ಗೆ ಗೆಲುವಿನ ಶುಭಾರಂಭ ಸಿಕ್ಕಿದೆ. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್ಗಳಲ್ಲಿ ತಂಡ 7ವಿಕೆಟ್ ಕಳೆದುಕೊಂಡು ಬರೋಬ್ಬರಿ 213 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡ ಉತ್ತಮ ಆರಂಭದ ಹೊರತಾಗಿಯೂ ಈ ಬೃಹತ್ ಮೊತ್ತವನ್ನು ಬೆನ್ನಟ್ಟುವಲ್ಲಿ ವಿಫಲವಾಯಿತು. ಅಂತಿಮವಾಗಿ ತಂಡ 20 ನೇ ಓವರ್‌ನಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 170 ರನ್ ಕಲೆಹಾಕಲಷ್ಟೇ ಶಕ್ತವಾಯಿತು.
ಅಬ್ಬರಿಸಿದ ಭಾರತದ ಬ್ಯಾಟಿಂಗ್ ವಿಭಾಗ
ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾಕ್ಕೆ ಶುಭ್ಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ಉತ್ತಮ ಆರಂಭ ನೀಡಿದರು. ಪವರ್‌ಪ್ಲೇನಲ್ಲಿ ಇಬ್ಬರೂ 74 ರನ್ ಸೇರಿಸಿದರು. ಗಿಲ್ 16 ಎಸೆತಗಳಲ್ಲಿ 34 ರನ್ ಮತ್ತು ಯಶಸ್ವಿ 21 ಎಸೆತಗಳಲ್ಲಿ 40 ರನ್ ಕಲೆಹಾಕಿದರು. ಆದಾಗ್ಯೂ, ಈ ಇಬ್ಬರೂ ಆಟಗಾರರು ಸತತ ಎರಡು ಎಸೆತಗಳಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು. ಆದರೆ ನಾಯಕ ಸೂರ್ಯಕುಮಾರ್ ಯಾದವ್ ತಮ್ಮದೇ ಶೈಲಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡುವ ಮೂಲಕ ಶ್ರೀಲಂಕಾ ತಂಡವನ್ನು ಮತ್ತೆ ಒತ್ತಡಕ್ಕೆ ತಳ್ಳಿದರು.
ಸೂರ್ಯ, ಕೇವಲ 22 ಎಸೆತಗಳಲ್ಲಿ ಅರ್ಧಶತಕವನ್ನು ಪೂರ್ಣಗೊಳಿಸಿದರು. ಆದರೆ ತಮ್ಮ ಅರ್ಧಶತಕವನ್ನು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸುವಲ್ಲಿ ವಿಫಲರಾದ ಸೂರ್ಯ 26 ಎಸೆತಗಳಲ್ಲಿ 58 ರನ್ ಗಳಿಸಿ ಔಟಾದರು. ಅಂತಿಮವಾಗಿ ಪಂತ್ 33 ಎಸೆತಗಳಲ್ಲಿ 49 ರನ್ ಕೊಡುಗೆ ನೀಡಿದರೆ, ಅಕ್ಷರ್ ಪಟೇಲ್ ಇನಿಂಗ್ಸ್ನ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ತಂಡದ ಸ್ಕೋರನ್ನು 213 ರನ್‌ಗಳಿಗೆ ಕೊಂಡೊಯ್ದರು.
A 43-run victory in the first T20I! 🙌#TeamIndia take a 1-0 lead in the series 👏👏
Scorecard ▶️ https://t.co/Ccm4ubmWnj #SLvIND pic.twitter.com/zZ9b1TocAf
— BCCI (@BCCI) July 27, 2024
ನಿಸ್ಸಾಂಕ- ಮೆಂಡಿಸ್ ಸ್ಫೋಟಕ ಬ್ಯಾಟಿಂಗ್
ಈ ಬೃಹತ್ ಗುರಿ ಬೆನ್ನಟ್ಟಿದ ಶ್ರೀಲಂಕಾ ಕೂಡ ಟೀಂ ಇಂಡಿಯಾಗೆ ತಕ್ಕ ಪ್ರತ್ಯುತ್ತರ ನೀಡಿತು. ಆರಂಭಿಕರಾದ ಪಾಥುಮ್ ನಿಸ್ಸಾಂಕ ಮತ್ತು ಕುಸಾಲ್ ಮೆಂಡಿಸ್ ನಡುವೆ ಕೇವಲ 52 ಎಸೆತಗಳಲ್ಲಿ 84 ರನ್‌ಗಳ ಜೊತೆಯಾಟವಿತ್ತು. ಇಬ್ಬರೂ ಬ್ಯಾಟ್ಸ್‌ಮನ್‌ಗಳು ಭಾರತದ ಬೌಲರ್‌ಗಳ ಬೆವರಿಳಿಸಿದರು. ಆದರೆ 9ನೇ ಓವರ್‌ನಲ್ಲಿ ಕುಸಾಲ್ ಮೆಂಡಿಸ್ ಅವರನ್ನು ಔಟ್ ಮಾಡುವ ಮೂಲಕ ಅರ್ಷದೀಪ್ ಸಿಂಗ್ ಟೀಂ ಇಂಡಿಯಾಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಆದರೆ ಪಾಥುಮ್ ನಿಸ್ಸಾಂಕ ಮಾತ್ರ ತಮ್ಮ ಹೊಡಿಬಡಿ ಆಟವನ್ನು ಮುಂದುವರೆಸಿ 4 ಸಿಕ್ಸರ್ ಮತ್ತು 7 ಬೌಂಡರಿಗಳ ಸಹಾಯದಿಂದ 79 ರನ್ ಬಾರಿಸಿ, 15ನೇ ಓವರ್‌ನಲ್ಲಿ ಅಕ್ಷರ್ ಪಟೇಲ್ಗೆ ಬಲಿಯಾದರು. ಇಲ್ಲಿಂದ ಪಂದ್ಯ ಟೀಂ ಇಂಡಿಯಾದತ್ತ ಹೊರಳಿತು. ಅಕ್ಷರ್ ಅದೇ ಓವರ್‌ನಲ್ಲಿ ಕುಸಾಲ್ ಪೆರೆರಾ ಅವರನ್ನು ಔಟ್ ಮಾಡಿದರೆ, ಆ ಬಳಿಕ ಶ್ರೀಲಂಕಾದ ಪೆವಿಲಿಯನ್ ಪರೇಡ್ ಆರಂಭವಾಯಿತು.
158 ರನ್ ಗಳಿಸುವಷ್ಟರಲ್ಲಿ ನಾಲ್ಕನೇ ವಿಕೆಟ್ ಕಳೆದುಕೊಂಡಿದ್ದ ಶ್ರೀಲಂಕಾ ಆ ನಂತರ ಕೇವಲ 12 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು. ಇದರರ್ಥ ಶ್ರೀಲಂಕಾ 12 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡಿತು. ಡೆತ್ ಓವರ್ಗಳಲ್ಲಿ ಟೀಂ ಇಂಡಿಯಾ ಉತ್ತಮವಾಗಿ ಬೌಲಿಂಗ್ ಮಾಡಿದ್ದು, ಇದರ ಪರಿಣಾಮ ಮೊದಲ ಟಿ20ಯಲ್ಲಿ ಭರ್ಜರಿ ಗೆಲುವು ಸಾಧಿಸಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:58 pm, Sat, 27 July 24