IND vs SL: ‘ರೋಹಿತ್ ಬೇಡಿಕೆಯನ್ನು ಈಡೇರಿಸಲು ಪ್ರಯತ್ನಿಸುತ್ತಿದ್ದೇನೆ’; ಪಂದ್ಯದ ಬಳಿಕ ರಾಹುಲ್ ಹೇಳಿದ್ದೇನು?
KL Rahul: ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಉತ್ತಮ ವಿಷಯವೆಂದರೆ ನೀವು ಆತುರಪಡಬೇಕಾಗಿಲ್ಲ. ನೀವು ಸ್ನಾನ ಮಾಡಿ, ಒಂದೊಳ್ಳೆ ಊಟ ಮಾಡಿ, ಕಾಲಿನ ಮೇಲೆ ಕಾಲಿಟ್ಟು ಕುಳಿತು ಪಂದ್ಯವನ್ನು ಆರಾಮವಾಗಿ ವೀಕ್ಷಿಸಬಹುದು ಎಂದು ರಾಹುಲ್ ಹೇಳಿದ್ದಾರೆ.
ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಭಾರತ ಹಾಗೂ ಶ್ರೀಲಂಕಾ (India Vs Sri Lanka) ಎರಡನೇ ಏಕದಿನ ಪಂದ್ಯವನ್ನು ಗೆಲ್ಲುವುದರೊಂದಿಗೆ ಟೀಂ ಇಂಡಿಯಾ ಸರಣಿ ಕೈವಶ ಮಾಡಿಕೊಂಡಿದೆ. ಲಂಕಾ ನೀಡಿದ ಅಲ್ಪ ಟಾರ್ಗೆಟ್ ಬೆನ್ನಟ್ಟುವಲ್ಲಿ ಎಡವಿದ್ದ ಭಾರತಕ್ಕೆ ಆಸರೆಯಾದ ಕನ್ನಡಿಗೆ ಕೆಎಲ್ ರಾಹುಲ್ (KL Rahul), ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ತನ್ನ ವಿರೋಧಿಗಳಿಗೆ ರಾಹುಲ್ ತಮ್ಮ ಬ್ಯಾಟ್ ಮೂಲಕವೇ ಉತ್ತರ ನೀಡಿದ್ದಾರೆ. ವಾಸ್ತವವಾಗಿ ಕಳೆದ ವರ್ಷಗಳಲ್ಲಿ ರಾಹುಲ್ ಭಾರತ ಕ್ರಿಕೆಟ್ ತಂಡದಲ್ಲಿ ಹಲವು ಏರಿಳಿತಗಳನ್ನು ಕಂಡಿದ್ದಾರೆ. ಆರಂಭದಲ್ಲಿ ಅವರಿಗೆ ಉಪನಾಯಕತ್ವ ಸಿಕ್ಕಿತು, ನಂತರ ನಾಯಕತ್ವವೂ ಸಿಕ್ಕಿತು. ನಂತರ ವರ್ಷಗಳು ಉರುಳಿದಂತೆ ಇದೆಲ್ಲವೂ ಅವರ ಕೈ ತಪ್ಪಿತು. ಅದೇ ಹೊತ್ತಿಗೆ ಟಿ20 ತಂಡದಲ್ಲಿ ಅವರ ಸ್ಥಾನವನ್ನು ಕಿತ್ತುಕೊಂಡಿದ್ದು, ಟೆಸ್ಟ್‌ನಲ್ಲಿಯೂ ಅವರ ಸ್ಥಾನ ಭದ್ರವಾಗಿಲ್ಲ. ಇಷ್ಟೆಲ್ಲ ಆದರೂ ಹೇಗೋ ಏಕದಿನ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದರೂ ಇಲ್ಲೂ ಅವರನ್ನು ತಂಡದಿಂದ ಕೈಬಿಡಬೇಕೆಂಬ ಒತ್ತಾಯ ಕೇಳಿಬರುತ್ತಿದೆ. ಇವೆಲ್ಲದರ ನಡುವೆ ಕೋಲ್ಕತ್ತಾದಲ್ಲಿ ಶ್ರೀಲಂಕಾ ವಿರುದ್ಧ ಕಠಿಣ ಪರಿಸ್ಥಿತಿಯಲ್ಲಿ ತಂಡವನ್ನು ಗೆಲುವಿನತ್ತ ಮುನ್ನಡೆಸುವ ಮೂಲಕ ರಾಹುಲ್ ಈ ಮಾದರಿಯಲ್ಲಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಈ ಇನ್ನಿಂಗ್ಸ್‌ನ ನಂತರ ಮಾತನಾಡಿದ ರಾಹುಲ್ ತಂಡದಲ್ಲಿ ತನ್ನ ಪಾತ್ರದ ಬಗ್ಗೆ ವಿವರಣೆ ನೀಡಿದ್ದಾರೆ.
ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಆರಂಭಕ್ಕೂ ಮುನ್ನ ಹಲವು ಅಭಿಮಾನಿಗಳು ಮತ್ತು ಮಾಜಿ ಕ್ರಿಕೆಟಿಗರು ರಾಹುಲ್ ಬದಲಿಗೆ ಸೂರ್ಯಕುಮಾರ್ ಯಾದವ್ ಅವರನ್ನು ತಂಡಕ್ಕೆ ಕರೆತರಬೇಕು ಮತ್ತು ವಿಕೆಟ್ ಕೀಪಿಂಗ್‌ನಲ್ಲಿ ಶುಭಮನ್ ಗಿಲ್ ಬದಲಿಗೆ ಇಶಾನ್ ಕಿಶನ್ ಅವರಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು. ಆದರೆ,ರಾಹುಲ್ ಹಾಗೂ ಗಿಲ್ ಮೇಲೆ ನಂಬಿಕೆ ಇಟ್ಟ ಮಂಡಳಿ ಈ ಇಬ್ಬರನೇ ಕಣಕ್ಕಿಳಿಸಿತ್ತು. ಇದರಲ್ಲಿ ರಾಹುಲ್ ಮಂಡಳಿಯ ನಂಬಿಕೆ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರೆ, ಗಿಲ್ ಕೂಡ ಉತ್ತಮ ಪ್ರದರ್ಶನ ನೀಡಿದರು. ಅದರಲ್ಲೂ ರಾಹುಲ್ ಅವಕಾಶ ಪಡೆದ ಮೊದಲ ಪಂದ್ಯದಲ್ಲಿ 39 ರನ್‌ಗಳ ಉತ್ತಮ ಇನಿಂಗ್ಸ್ ಆಡಿದರು. ಎರಡನೇ ಪಂದ್ಯದಲ್ಲಿ ಭಾರತ 86 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಾಗ, ರಾಹುಲ್ ಒಂದು ಕಡೆ ಭದ್ರವಾಗಿ ನಿಂತು 64 ರನ್‌ಗಳ ಸಂಯಮದ ಅಜೇಯ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.
KL Rahul: ಮದುವೆ ತಯಾರಿಯ ನಡುವೆಯೂ ಏಕದಿನ ಸರಣಿಗೆ ಸಮರಾಭ್ಯಾಸ ಶುರು ಮಾಡಿದ ರಾಹುಲ್; ವಿಡಿಯೋ
ನನ್ನ ಆಟವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಿದೆ
ರಾಹುಲ್ ಅವರ ಈ ಇನ್ನಿಂಗ್ಸ್ ಅವರು ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಎಷ್ಟು ಮುಖ್ಯ ಎಂದು ಸಾಬೀತುಪಡಿಸಿದೆ. ಪಂದ್ಯದ ನಂತರ ಮಾತನಾಡಿದ ರಾಹುಲ್ ಕೂಡ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದರಿಂದ ಆಟವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಿದೆ ಎಂದಿದ್ದಾರೆ. “ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದರಿಂದ ನನ್ನ ಆಟವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡಿತು. ಐದನೇ ಕ್ರಮಾಂಕದಲ್ಲಿ, ನೀವು ಕ್ರೀಸ್‌ಗೆ ಬಂದ ತಕ್ಷಣ ಸ್ಪಿನ್ ಬೌಲಿಂಗ್ ಅನ್ನು ಎದುರಿಸಬೇಕಾಗುತ್ತದೆ.
ರೋಹಿತ್‌ಗೆ ರಾಹುಲ್‌ನಿಂದ ಏನು ಬೇಕು?
ಸ್ಪಿನ್ ವಿರುದ್ಧದ ತೊಂದರೆ ಮತ್ತು ವೇಗಿಗಳನ್ನು ಎದುರಿಸುವುದರ ಹೊರತಾಗಿಯೂ, ನಾಯಕ ರೋಹಿತ್ ಶರ್ಮಾ ಅವರಿಂದ ವಿಶೇಷ ಬೇಡಿಕೆಯಿತ್ತು. ಅದನ್ನು ಪೂರೈಸಲು ನಾನು ಪ್ರಯತ್ನಿಸುತ್ತಿದ್ದೇನೆ. ವಾಸ್ತವವಾಗಿ ರೋಹಿತ್ ಅವರು ನಾನು ಐದನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವುದನ್ನು ಇಷ್ಟಪಡುತ್ತಾರೆ. ಹಾಗಾಗಿ ನಾನು ಅದನ್ನು ಮಾಡಲು ಪ್ರಯತ್ನಿಸುತ್ತಿದ್ದೇನೆ ಎಂದಿದ್ದಾರೆ.”
ಆತುರಪಡಬೇಕಾಗಿಲ್ಲ
ಕಾರು ಅಪಘಾತದಲ್ಲಿ ರಿಷಬ್ ಪಂತ್ ದೀರ್ಘಕಾಲದವರೆಗೆ ಮೈದಾನದಿಂದ ಹೊರಗುಳಿದಿರುವ ಕಾರಣ, ರಾಹುಲ್ ಸದ್ಯಕ್ಕೆ ತಂಡದ ವಿಕೆಟ್ ಕೀಪರ್ ಆಗಿರುತ್ತಾರೆ. ಅದಕ್ಕಾಗಿಯೇ ಅವರು ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಆದ್ಯತೆ ನೀಡುತ್ತಾರೆ. ಈ ಬಗ್ಗೆ ಮಾತನಾಡಿದ ರಾಹುಲ್, “ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಉತ್ತಮ ವಿಷಯವೆಂದರೆ ನೀವು ಆತುರಪಡಬೇಕಾಗಿಲ್ಲ. ನೀವು ಸ್ನಾನ ಮಾಡಿ, ಒಂದೊಳ್ಳೆ ಊಟ ಮಾಡಿ, ಕಾಲಿನ ಮೇಲೆ ಕಾಲಿಟ್ಟು ಕುಳಿತು ಪಂದ್ಯವನ್ನು ಆರಾಮವಾಗಿ ವೀಕ್ಷಿಸಬಹುದು. ಆದರೆ ತಂಡಕ್ಕೆ ನನ್ನಿಂದ ಏನು ಬೇಕು ಎಂದು ನಾನು ಯಾವಾಗಲೂ ಯೋಚಿಸುತ್ತೇನೆ. ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಂಡ ನಂತರ ನೀವು ಮೈದಾನಕ್ಕೆ ಬಂದರೆ, ಅದು ನಿಮಗೆ ಮತ್ತು ತಂಡಕ್ಕೆ ಸಹಾಯ ಮಾಡುತ್ತದೆ ಎಂದು ರಾಹುಲ್ ತನ್ನ ಆದ್ಯತೆಯ ಬಗ್ಗೆ ಮಾತನಾಡಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:35 am, Fri, 13 January 23