IND vs USA: ಗೆದ್ದಿದ್ದೇ ದೊಡ್ಡ ಸಮಾಧಾನ: ಪಂದ್ಯದ ಬಳಿಕ ರೋಹಿತ್ ಶರ್ಮಾ ಹೇಳಿದ್ದೇನು?

T20 World Cup 2024: ಯುಎಸ್​ಎ ವಿರುದ್ಧದ ಗೆಲುವಿನೊಂದಿಗೆ ಭಾರತ ತಂಡವು ಟಿ20 ವಿಶ್ವಕಪ್​ನ ಸೂಪರ್-8 ಹಂತಕ್ಕೇರಿದೆ. ಮುಂದಿನ ಸುತ್ತಿನಲ್ಲಿ ಟೀಮ್ ಇಂಡಿಯಾ ಗ್ರೂಪ್-1 ನಲ್ಲಿ ಕಾಣಿಸಿಕೊಳ್ಳಲಿದೆ. ಇದಕ್ಕೂ ಮುನ್ನ ಜೂನ್ 15 ರಂದು ಕೆನಡಾ ವಿರುದ್ಧ ತನ್ನ ಕೊನೆಯ ಲೀಗ್ ಪಂದ್ಯವನ್ನಾಡಲಿದೆ. ಇನ್ನು ಜೂನ್ 19 ರಿಂದ ಸೂಪರ್-8 ಪಂದ್ಯಗಳು ಶುರುವಾಗಲಿದೆ.

IND vs USA: ಗೆದ್ದಿದ್ದೇ ದೊಡ್ಡ ಸಮಾಧಾನ: ಪಂದ್ಯದ ಬಳಿಕ ರೋಹಿತ್ ಶರ್ಮಾ ಹೇಳಿದ್ದೇನು?
Rohit Sharma

Updated on: Jun 13, 2024 | 7:37 AM

T20 World Cup 2024: ಟಿ20 ವಿಶ್ವಕಪ್‌ನ 25ನೇ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಜಯ ಸಾಧಿಸಿದೆ. ಯುಎಸ್​ಎ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಯುಎಸ್​ಎ ತಂಡಕ್ಕೆ ಮೊದಲ ಓವರ್‌ನ ಮೊದಲ ಎಸೆತದಲ್ಲೇ ಅರ್ಷದೀಪ್ ಸಿಂಗ್ ಆಘಾತ ನೀಡಿದ್ದರು. ಶಯಾನ್ ಜಹಾಂಗೀರ್ (0) ವಿಕೆಟ್ ಕಬಳಿಸಿ ಶುಭಾರಂಭ ಮಾಡಿದ ಅರ್ಷದೀಪ್, ಆ ಬಳಿಕ ಆಂಡ್ರೀಸ್ ಗೌಸ್ (2) ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಇನ್ನು ಹಾರ್ದಿಕ್ ಪಾಂಡ್ಯ ಡೇಂಜರಸ್ ಆರೋನ್ ಜೋನ್ಸ್ (11) ವಿಕೆಟ್ ಕಬಳಿಸಿದರು.

ಈ ಹಂತದಲ್ಲಿ ಕಣಕ್ಕಿಳಿದ ನಿತೀಶ್ ಕುಮಾರ್ 23 ಎಸೆತಗಳಲ್ಲಿ 27 ರನ್ ಬಾರಿಸಿದರೆ, ಕೋರಿ ಅ್ಯಂಡರ್ಸನ್ 15 ರನ್ ಕಲೆಹಾಕಿದರು. ಈ ಮೂಲಕ ಯುಎಸ್​ಎ ತಂಡವು 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 110 ರನ್ ಕಲೆಹಾಕಿದರು.

111 ರನ್​ಗಳ ಸುಲಭ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಕೂಡ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕರಾದ ವಿರಾಟ್ ಕೊಹ್ಲಿ (0) ಹಾಗೂ ರೋಹಿತ್ ಶರ್ಮಾ (3) ಸೌರಭ್ ನೇತ್ರಾವಲ್ಕರ್ ಯುಎಸ್​ಎ ತಂಡಕ್ಕೆ ಭರ್ಜರಿ ಆರಂಭ ಒದಗಿಸಿದ್ದರು.

ಈ ವೇಳೆ ಕಣಕ್ಕಿಳಿದ ಸೂರ್ಯಕುಮಾರ್ ಯಾದವ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. 49 ಎಸೆತಗಳನ್ನು ಎದುರಿಸಿದ ಸೂರ್ಯ 2 ಭರ್ಜರಿ ಸಿಕ್ಸ್ ಹಾಗೂ 2 ಫೋರ್​ಗಳೊಂದಿಗೆ ಅಜೇಯ 50 ರನ್ ಸಿಡಿಸಿದರು. ಈ ಮೂಲಕ 18.2 ಓವರ್​ಗಳಲ್ಲಿ ಟೀಮ್ ಇಂಡಿಯಾವನ್ನು ಗುರಿ ಮುಟ್ಟಿಸಿ, 7 ವಿಕೆಟ್​ಗಳ ಜಯ ತಂದುಕೊಟ್ಟರು.

ಈ ಗೆಲುವಿನ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಇದು ಕಠಿಣ ಪಿಚ್ ಎಂಬುದು ತಿಳಿದಿತ್ತು. ಆದರೆ ನಾವು ಉತ್ತಮ ಜೊತೆಯಾಟದೊಂದಿಗೆ ಪಂದ್ಯ ಗೆಲ್ಲುವಲ್ಲಿ ಯಶಸ್ವಿಯಾಗಿದ್ದೇವೆ. ಪ್ರಬುದ್ಧತೆಯ ಬ್ಯಾಟಿಂಗ್ ಪ್ರದರ್ಶಿಸಿದ ಶ್ರೇಯಸ್ಸು ಸೂರ್ಯಕುಮಾರ್ ಯಾದವ್ ಹಾಗೂ ಶಿವಂ ದುಬೆಗೆ ಸಲ್ಲುತ್ತದೆ ಎಂದರು.

ಹಾಗೆಯೇ ಅಮೆರಿಕ ತಂಡದಲ್ಲಿರುವ ಭಾರತೀಯ ಆಟಗಾರರೊಂದಿಗೆ ನಮ್ಮಲ್ಲಿನ ಕೆಲ ಆಟಗಾರರು ಜೊತೆಯಾಗಿ ಕ್ರಿಕೆಟ್ ಆಡಿದ್ದಾರೆ. ಇದೀಗ ಅವರು ಕೂಡ ಬೇರೊಂದು ದೇಶದ ಪರ ಕಣಕ್ಕಿಳಿಯುತ್ತಿದ್ದಾರೆ. ಈ ಪ್ರಗತಿ ನಿಜಕ್ಕೂ ಸಂತೋಷಕರ. ಏಕೆಂದರೆ ಅವರೆಲ್ಲರೂ ಕಷ್ಟಪಟ್ಟು ಈ ಮಟ್ಟಕ್ಕೇರಿದ್ದಾರೆ. ಯುಎಸ್​ಎ ಆಟಗಾರರ ಪ್ರದರ್ಶನ ನಿಜಕ್ಕೂ ಪ್ರಶಂಸನೀಯ ಎಂದು ರೋಹಿತ್ ಶರ್ಮಾ ಹೇಳಿದರು.

ಈ ಪಂದ್ಯದ ಆರಂಭಕ್ಕೂ ಮುನ್ನವೇ ಮ್ಯಾಚ್ ಇರುವುದು ಬೌಲರ್​ಗಳ ಕೈಯಲ್ಲಿ ಎಂಬುದು ನಮಗೆ ತಿಳಿದಿತ್ತು. ಏಕೆಂದರೆ ಈ ಪಿಚ್​ನಲ್ಲಿ ರನ್ ಗಳಿಸುವುದು ಕಷ್ಟಕರವಾಗಿತ್ತು. ಅದರಂತೆ ನಮ್ಮ ಬೌಲರ್​ಗಳು ಅತ್ಯುತ್ತಮ ದಾಳಿ ಸಂಘಟಿಸುವಲ್ಲಿ ಯಶಸ್ವಿಯಾದರು.

ವಿಶೇಷವಾಗಿ ಅರ್ಷದೀಪ್ ಸಿಂಗ್. ಇಂದಿನ ಪಿಚ್ ಸೀಮರ್​ಗಳಿಗೆ ಅನುಕೂಲಕರವಾಗಿತ್ತು. ಹೀಗಾಗಿ ಹೆಚ್ಚಿನ ವೇಗಿಗಳನ್ನು ಬಳಸಿಕೊಂಡಿದ್ದೇವೆ. ಅದರಂತೆ ಇದೀಗ ಫಲಿತಾಂಶ ನಮ್ಮ ಪರವಾಗಿದೆ. ಇದುವೇ ದೊಡ್ಡ ಸಮಾಧಾನ ಎಂದು ರೋಹಿತ್ ಶರ್ಮಾ ಹೇಳಿದರು.

ಏಕೆಂದರೆ ನಸ್ಸೌ ಪಿಚ್​ನಲ್ಲಿ ಆಡುವುದು ಸುಲಭವಾಗಿರಲಿಲ್ಲ. ನಾವು ಎಲ್ಲಾ 3 ಪಂದ್ಯಗಳಲ್ಲಿ ಕೊನೆಯವರೆಗೂ ಅಂಟಿಕೊಳ್ಳಬೇಕಾಯಿತು. ಈ ಗೆಲುವಿನಿಂದ ಸಾಕಷ್ಟು ಆತ್ಮವಿಶ್ವಾಸವನ್ನು ಪಡೆದಿದ್ದೇವೆ. ಅದರಲ್ಲೂ ಸೂರ್ಯಕುಮಾರ್ ಯಾದವ್ ಅವರಿಂದ ವಿಭಿನ್ನ ಬ್ಯಾಟಿಂಗ್ ಮೂಡಿಬಂದಿದೆ.

ಅನುಭವಿ ಆಟಗಾರರಿಂದ ನಾವು ನಿರೀಕ್ಷಿಸುವುದು ಕೂಡ ಅದನ್ನೇ. ಅವರು ಕ್ರೀಸ್ ಕಚ್ಚಿ ನಿಂತು ಪಂದ್ಯವನ್ನು ಮುಗಿಸಿರುವುದು ಉತ್ತಮ ಬೆಳವಣಿಗೆ. ಈ ಗೆಲುವಿಗೆ ಅವರು ಕೂಡ ಕಾರಣಕರ್ತರು ಎಂದು ರೋಹಿತ್ ಶರ್ಮಾ ಹೇಳಿದರು.

ಇದನ್ನೂ ಓದಿ: T20 World Cup 2024: ಟಿ20 ವಿಶ್ವಕಪ್​ನಲ್ಲಿ ವಿಶ್ವ ದಾಖಲೆ ಬರೆದ ಉಗಾಂಡ ಬೌಲರ್

ಇನ್ನು ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಸೂಪರ್-8 ಹಂತಕ್ಕೇರಿದ್ದು, ಮುಂದಿನ ಸುತ್ತಿನಲ್ಲಿ ಭಾರತ ತಂಡವು ಗ್ರೂಪ್-1 ನಲ್ಲಿ ಕಣಕ್ಕಿಳಿಯಲಿದೆ.

 

 

Published On - 7:36 am, Thu, 13 June 24