IND vs WI 1st ODI: ವೆಸ್ಟ್ ಇಂಡೀಸ್ ವಿರುದ್ಧ ಜಯ ಸಾಧಿಸಿದ ಟೀಮ್ ಇಂಡಿಯಾ

| Updated By: ಝಾಹಿರ್ ಯೂಸುಫ್

Updated on: Jul 27, 2023 | 11:15 PM

IND vs WI 1st ODI: ಭಾರತ-ವೆಸ್ಟ್ ಇಂಡೀಸ್ ನಡುವಣ 2ನೇ ಏಕದಿನ ಪಂದ್ಯವು ಜುಲೈ 29 ರಂದು ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯಲಿದೆ.

IND vs WI 1st ODI: ವೆಸ್ಟ್ ಇಂಡೀಸ್ ವಿರುದ್ಧ ಜಯ ಸಾಧಿಸಿದ ಟೀಮ್ ಇಂಡಿಯಾ
IND vs WI
Follow us on

West Indies vs India, 1st ODI: ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿದೆ. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ರೋಹಿತ್ ಶರ್ಮಾ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಇನಿಂಗ್ಸ್​ ಆರಂಭಿಸಿದ ವೆಸ್ಟ್ ಇಂಡೀಸ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಭಾರತೀಯ ಬೌಲರ್​ಗಳು ಯಶಸ್ವಿಯಾಗಿದ್ದರು. 3ನೇ ಓವರ್​ನಲ್ಲಿ ಕೈಲ್ ಮೇಯರ್ಸ್​ (2) ವಿಕೆಟ್ ಕಬಳಿಸುವ ಹಾರ್ದಿಕ್ ಪಾಂಡ್ಯ ಭಾರತ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಚೊಚ್ಚಲ ಪಂದ್ಯವಾಡಿದ ಮುಖೇಶ್ ಕುಮಾರ್ ಅಲಿಕ್ ಅಥನಾಝ್ ವಿಕೆಟ್ ಕಬಳಿಸಿ ವೈಯುಕ್ತಿಕ ವಿಕೆಟ್ ಖಾತೆ ತೆರೆದರು. ಇದರ ನಡುವೆ ಬ್ರಾಂಡನ್ ಕಿಂಗ್ (2) ಶಾರ್ದೂಲ್ ಠಾಕೂರ್​ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು.

ಈ ಹಂತದಲ್ಲಿ 4ನೇ ವಿಕೆಟ್​ಗೆ ಜೊತೆಯಾದ ಶಿಮ್ರಾನ್ ಹೆಟ್ಮೆಯರ್ ಹಾಗೂ ಶಾಯ್ ಹೋಪ್ 43 ರನ್​ಗಳ ಜೊತೆಯಾಟವಾಡಿದರು. ಈ ನಾಯಕ ರೋಹಿತ್ ಶರ್ಮಾ ಚೆಂಡನ್ನು ಸ್ಪಿನ್ನರ್ ಜಡೇಜಾ ಕೈಗಿತ್ತರು. ನಾಯಕನ ನಿರೀಕ್ಷೆಯನ್ನು ಹುಸಿಗೊಳಿಸದ ಜಡೇಜಾ ಹೆಟ್ಮೆಯರ್​ (11) ರನ್ನು ಕ್ಲೀನ್ ಬೌಲ್ಡ್ ಮಾಡಿದರು.

ಇದರ ಬೆನ್ನಲೇ ರೋವ್​ಮನ್ ಪೊವೆಲ್ (4) ಹಾಗೂ ರೊಮಾರಿಯೊ ಶೆಫರ್ಡ್ (0) ವಿಕೆಟ್ ಕಬಳಿಸಿ ಜಡೇಜಾ ಬ್ಯಾಕ್ ಟು ಬ್ಯಾಕ್ ಯಶಸ್ಸು ತಂದುಕೊಟ್ಟರು. ಈ ಯಶಸ್ಸು ನಡುವೆ ದಾಳಿಗಿಳಿದ ಕುಲ್ದೀಪ್ ಯಾದವ್ ಡೊಮಿನಿಕ್ ಡ್ರೇಕ್ಸ್ (3) ಹಾಗೂ ಯಾನಿಕ್ ಕ್ಯಾರಿಯಾ (3) ಎಲ್​ಬಿ ಬಲೆಗೆ ಬೀಳಿಸಿದರು. ಅಷ್ಟೇ ಅಲ್ಲದೆ ಕ್ರೀಸ್ ಕಚ್ಚಿ ನಿಂತಿದ್ದ ಶಾಯ್ ಹೋಪ್ (43) ವಿಕೆಟ್ ಪಡೆದು ಭಾರತಕ್ಕೆ 9ನೇ ಯಶಸ್ಸು ತಂದುಕೊಟ್ಟರು. ಇನ್ನು ಜೇಡನ್ ಸೀಲ್ಸ್ (0) ಬಂದ ಬೆನ್ನಲ್ಲೇ ಕ್ಯಾಚಿತ್ತರು.

ಇದರೊಂದಿಗೆ ವೆಸ್ಟ್ ಇಂಡೀಸ್ ತಂಡವು 23 ಓವರ್​ಗಳಲ್ಲಿ ಕೇವಲ 114 ರನ್​ಗಳಿಗೆ ಆಲೌಟ್ ಆಯಿತು. ಟೀಮ್ ಇಂಡಿಯಾ ಪರ ಕುಲ್ದೀಪ್ ಯಾದವ್ 3 ಓವರ್​ಗಳಲ್ಲಿ 4 ವಿಕೆಟ್ ಕಬಳಿಸಿ ಮಿಂಚಿದರೆ, ರವೀಂದ್ರ ಜಡೇಜಾ 3 ವಿಕೆಟ್ ಪಡೆದು ಉತ್ತಮ ಸಾಥ್ ನೀಡಿದರು.

ಇನ್ನು 115 ರನ್​ಗಳ ಸುಲಭ ಗುರಿ ಪಡೆದ ಟೀಮ್ ಇಂಡಿಯಾ ಪರ ಶುಭ್​ಮನ್ ಗಿಲ್ ಜೊತೆ ರೋಹಿತ್ ಶರ್ಮಾ ಬದಲು ಇಶಾನ್ ಕಿಶನ್ ಇನಿಂಗ್ಸ್ ಆರಂಭಿಸಿದ್ದರು. 4 ಓವರ್​ಗಳಲ್ಲಿ 18 ರನ್​ಗಳಿಸಿದ್ದ ವೇಳೆ ಶುಭ್​ಮನ್ ಗಿಲ್ (7) ನೀಡಿ ಹೊರನಡೆದರು.
ಈ ವೇಳೆ ಬಡ್ತಿ ಪಡೆದು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸೂರ್ಯಕುಮಾರ್ ಯಾದವ್ ಇಶಾನ್ ಕಿಶನ್ ಜೊತೆಗೂಡಿ ಉತ್ತಮ ಜೊತೆಯಾಟವಾಡಿದರು.

ಈ ಹಂತದಲ್ಲಿ ದಾಳಿಗಿಳಿದ ಸ್ಪಿನ್ನರ್ ಗುಡಕೇಶ್ ಮೋಟಿ ಎಸೆತವನ್ನು ಗುರುತಿಸುವಲ್ಲಿ ಎಡವಿದ ಸೂರ್ಯಕುಮಾರ್ ಯಾದವ್ (19) ಎಲ್​ಬಿಡಬ್ಲ್ಯೂ ಆಗಿ ನಿರ್ಗಮಿಸಿದರು. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹಾರ್ದಿಕ್ ಪಾಂಡ್ಯ (5) ರನೌಟ್ ಆಗಿ ಹೊರ ನಡೆದರು.

ಮತ್ತೊಂದೆಡೆ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಇಶಾನ್ ಕಿಶನ್ 44 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆದರೆ ಅರ್ಧಶತಕ ಬೆನ್ನಲ್ಲೇ ಸಿಕ್ಸ್​ ಸಿಡಿಸುವ ಯತ್ನದಲ್ಲಿ ಇಶಾನ್ (52) ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿದರು. ಇನ್ನು ಬಡ್ತಿ ಪಡೆದು 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದ ಶಾರ್ದೂಲ್ ಠಾಕೂರ್ 1 ರನ್​ಗಳಿಸಿ ವಿಕೆಟ್ ಒಪ್ಪಿಸಿದರು.

ಇನ್ನು 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರೋಹಿತ್ ಶರ್ಮಾ (12) ರವೀಂದ್ರ ಜಡೇಜಾ (16) ಜೊತೆಗೂಡಿ 21 ರನ್​ಗಳಿಸುವ ಮೂಲಕ 22.5 ಓವರ್​ಗಳಲ್ಲಿ ಟೀಮ್ ಇಂಡಿಯಾವನ್ನು ಗುರಿಮುಟ್ಟಿಸಿದರು. ಈ ಮೂಲಕ ಟೀಮ್ ಇಂಡಿಯಾ 5 ವಿಕೆಟ್​ಗಳ ಜಯ ಸಾಧಿಸಿತು.

ವೆಸ್ಟ್ ಇಂಡೀಸ್ ಪ್ಲೇಯಿಂಗ್ 11: ಶಾಯ್ ಹೋಪ್ (ನಾಯಕ) , ಕೈಲ್ ಮೇಯರ್ಸ್ , ಬ್ರಾಂಡನ್ ಕಿಂಗ್ , ಅಲಿಕ್ ಅಥಾನಾಝ್ , ಶಿಮ್ರಾನ್ ಹೆಟ್ಮೆಯರ್ , ರೋವ್​ಮನ್ ಪೊವೆಲ್ , ರೊಮಾರಿಯೋ ಶೆಫರ್ಡ್ , ಯಾನಿಕ್ ಕ್ಯಾರಿಯಾ , ಡೊಮಿನಿಕ್ ಡ್ರೇಕ್ಸ್ , ಜೇಡನ್ ಸೀಲ್ಸ್ , ಗುಡಕೇಶ್ ಮೋಟಿ.

ಇದನ್ನೂ ಓದಿ: Ravindra Jadeja: 30 ವರ್ಷಗಳ ಹಳೆಯ ದಾಖಲೆ ಮುರಿದ ರವೀಂದ್ರ ಜಡೇಜಾ

ಭಾರತ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ) , ಶುಭಮನ್ ಗಿಲ್ , ವಿರಾಟ್ ಕೊಹ್ಲಿ , ಇಶಾನ್ ಕಿಶನ್ (ವಿಕೆಟ್ ಕೀಪರ್) , ಹಾರ್ದಿಕ್ ಪಾಂಡ್ಯ , ಸೂರ್ಯಕುಮಾರ್ ಯಾದವ್ , ರವೀಂದ್ರ ಜಡೇಜಾ , ಶಾರ್ದೂಲ್ ಠಾಕೂರ್ , ಕುಲದೀಪ್ ಯಾದವ್ , ಉಮ್ರಾನ್ ಮಲಿಕ್ , ಮುಖೇಶ್ ಕುಮಾರ್.

 

Published On - 11:13 pm, Thu, 27 July 23