IND vs WI: ಮೊದಲ ದಿನದಾಟ ಅಂತ್ಯ; ಸ್ಪಿನ್ ದಾಳಿಗೆ ತತ್ತರಿಸಿದ ವಿಂಡೀಸ್ 150 ರನ್​ಗಳಿಗೆ ಆಲೌಟ್..!

|

Updated on: Jul 13, 2023 | 5:36 AM

IND vs WI: ಡೊಮಿನಿಕಾದಲ್ಲಿ ಆರಂಭವಾಗಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನವೇ ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ.

IND vs WI: ಮೊದಲ ದಿನದಾಟ ಅಂತ್ಯ; ಸ್ಪಿನ್ ದಾಳಿಗೆ ತತ್ತರಿಸಿದ ವಿಂಡೀಸ್ 150 ರನ್​ಗಳಿಗೆ ಆಲೌಟ್..!
ಭಾರತ- ವೆಸ್ಟ್ ಇಂಡೀಸ್
Follow us on

ಡೊಮಿನಿಕಾದಲ್ಲಿ ಆರಂಭವಾಗಿರುವ ಭಾರತ ಮತ್ತು ವೆಸ್ಟ್ ಇಂಡೀಸ್ (India vs West Indies) ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನವೇ ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ. ಟೆಸ್ಟ್ ಪಂದ್ಯದ ಮೊದಲ ದಿನವೇ ಟೀಂ ಇಂಡಿಯಾ (Team India) ವೆಸ್ಟ್ ಇಂಡೀಸ್ ತಂಡವನ್ನು ಬೇಗನೇ ಆಲೌಟ್ ಮಾಡುವ ಮೂಲಕ ಈಗಾಗಲೇ ತನ್ನ ಇನ್ನಿಂಗ್ಸ್ ಆರಂಭಿಸಿದೆ. ಮ್ಯಾಜಿಕಲ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (R Ashwin) ಅವರ ದಾಖಲೆಯ 5 ವಿಕೆಟ್‌ಗಳ ಆಧಾರದ ಮೇಲೆ, ಟೀಂ ಇಂಡಿಯಾ ಆತಿಥೇಯ ವೆಸ್ಟ್ ಇಂಡೀಸ್ ತಂಡವನ್ನು ಕೇವಲ 150 ರನ್‌ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಯಿತು. ಆ ಬಳಿಕ ತನ್ನ ಮೊದಲ ಇನ್ನಿಂಗ್ಸ್‌ ಆರಂಭಿಸಿರುವ ರೋಹಿತ್ (Rohit Sharma) ಬಳಗ ದಿನದಾಟದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 80 ರನ್ ಕಲೆಹಾಕಿದೆ.

12 ವರ್ಷಗಳ ನಂತರ ವಿಂಡ್ಸರ್ ಪಾರ್ಕ್ ಮೈದಾನದಲ್ಲಿ ವಿಂಡೀಸ್ ತಂಡವನ್ನು ಎದುರಿಸಿದ ಟೀಂ ಇಂಡಿಯಾ ಅನಾನುಭವಿ ಕೆರಿಬಿಯನ್ನರನ್ನು ಸುಲಭ ತುತ್ತಾಗಿ ಮಾಡಿಕೊಂಡಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ನಾಯಕ ಕ್ರೇಗ್ ಬ್ರಾಥ್‌ವೈಟ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಬ್ಯಾಟಿಂಗ್​ಗೆ ಅನುಕೂಲಕರವಾದ ಪಿಚ್​ನಲ್ಲಿ ವಿಂಡೀಸ್ ಇನ್ನಿಂಗ್ಸ್ ಆರಂಭಿಸಿದ ಬ್ರಾಥ್‌ವೈಟ್ (20 ರನ್) ಮತ್ತು ತೇಜ್​ನಾರಾಯಣ್ ಚಂದ್ರಪಾಲ್ (12 ರನ್) ನಡುವಿನ 31 ರನ್​ಗಳ ಜೊತೆಯಾಟವು ಉತ್ತಮ ಆರಂಭದ ಭರವಸೆಯನ್ನು ಮೂಡಿಸಿತು. ಆದರೆ ಅಶ್ವಿನ್ ಅವರಿಬ್ಬರನ್ನು ಬಲಿಪಶು ಮಾಡಿದರು. ಶೀಘ್ರದಲ್ಲೇ ರವೀಂದ್ರ ಜಡೇಜಾ ಮತ್ತು ಶಾರ್ದೂಲ್ ಠಾಕೂರ್ ಕೂಡ ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದರು. ಹೀಗಾಗಿ ವಿಂಡೀಸ್ ತಂಡ ಮೊದಲ ಸೆಷನ್ ಅಂತ್ಯಕ್ಕೆ ಕೇವಲ 68 ರನ್‌ ಕಲೆಹಾಕಿ 4 ವಿಕೆಟ್‌ ಕಳೆದುಕೊಂಡಿತು. ಎರಡನೇ ಸೆಷನ್​ನಲ್ಲೂ ಪರಿಸ್ಥಿತಿ ಬದಲಾಗದ ಕಾರಣ ಈ ಸೆಷನಲ್ಲಿಯೂ ತಂಡ 70 ರನ್ ಗಳಿಸುವಷ್ಟರಲ್ಲಿ ಮತ್ತೆ 4 ವಿಕೆಟ್ ಕಳೆದುಕೊಂಡಿತು.

IND vs WI: ಅಭ್ಯಾಸಕ್ಕೆ ಗೈರು; ಹೀಗಾದರೆ ರೋಹಿತ್ ಶರ್ಮಾ ಫಾರ್ಮ್​ ಕಂಡುಕೊಳ್ಳುವುದು ಯಾವಾಗ?

ಅಶ್ವಿನ್ ಮುಂದೆ ತಲೆಬಾಗಿದ ವಿಂಡೀಸ್

ಒಂದೆಡೆ ವಿಂಡೀಸ್ ಪಾಳಾಯದ ವಿಕೆಟ್​ಗಳು ತರಗೆಲೆಗಳಂತೆ ಉದುರುತ್ತಿದ್ದರೂ ವೆಸ್ಟ್ ಇಂಡೀಸ್‌ ತಂಡಕ್ಕೆ ಪಾದಾರ್ಪಣೆ ಮಾಡಿದ 24 ವರ್ಷದ ಅಲಿಕ್ ಎತಾನೇಜ್ 47 ರನ್​ಗಳ ಹೋರಾಟದ ಇನ್ನಿಂಗ್ಸ್ ಆಡಿದರು. ವೆಸ್ಟ್ ಇಂಡೀಸ್ 150 ರನ್ ಗಳಿಸಲು ಸಾಧ್ಯವಾಯಿತ್ತೆಂದರೆ ಅದಕ್ಕೆ ಎತಾನೇಜ್ ಅವರ ಇನ್ನಿಂಗ್ಸ್ ಕಾರಣ. ಅವರಲ್ಲದೆ, ರಹಕೀಮ್ ಕಾರ್ನ್‌ವಾಲ್ ಕೂಡ 19 ರನ್​ಗಳ ಉಪಯುಕ್ತ ಕೊಡುಗೆ ನೀಡಿದರು. ಟೀಂ ಇಂಡಿಯಾ ಪರ 60 ರನ್ ನೀಡಿ 5 ವಿಕೆಟ್ ಉರುಳಿಸಿದ ಅಶ್ವಿನ್, ಟೆಸ್ಟ್‌ನಲ್ಲಿ 33 ನೇ ಬಾರಿಗೆ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದ ಸಾಧನೆ ಮಾಡಿದರು. ಅಲ್ಲದೆ ಇನ್ನಿಂಗ್ಸ್ ಒಂದರಲ್ಲಿ 5 ವಿಕೆಟ್ ಉರುಳಿಸಿದವರ ದಾಖಲೆಯಲ್ಲಿ ಜೇಮ್ಸ್ ಆಂಡರ್ಸನ್ (32) ಅವರನ್ನು ಹಿಂದಿಕ್ಕಿ ಸಕ್ರಿಯ ಬೌಲರ್‌ಗಳಲ್ಲಿ ಅತ್ತಿ ಹೆಚ್ಚು ಬಾರಿ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ ಪಡೆದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ.

ರೋಹಿತ್-ಯಶಸ್ವಿ ಉತ್ತಮ ಆರಂಭ

ಆರಂಭದಿಂದಲೂ ವಿಕೆಟ್ ಕಳೆದುಕೊಳ್ಳುತ್ತ ಸಾಗಿದ ವೆಸ್ಟ್ ಇಂಡೀಸ್ ತಂಡ ಮೂರನೇ ಸೆಷನ್​ ಆರಂಭವಾಗಿ ಅರ್ಧ ಗಂಟೆಯೊಳಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಆಲೌಟ್ ಆಯಿತು. ಇದಾದ ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾದ ರನ್ ವೇಗಕ್ಕೆ ವಿಂಡೀಸ್​ನ ವೇಗಿಗಳಾದ ಕೆಮರ್ ರೋಚ್ ಮತ್ತು ಅಲ್ಜಾರಿ ಜೋಸೆಫ್ ಆರಂಭದಲ್ಲಿ ಕಡಿವಾಣ ಹಾಕಿದರು. ಅಲ್ಲದೆ ಆರಂಭದಲ್ಲೇ ಎಲ್‌ಬಿಡಬ್ಲ್ಯುಗೆ ಬಲಿಯಾಗಬೇಕಿದ್ದ ರೋಹಿತ್ ಶರ್ಮಾ, ಅಂಪೈರ್ ಕರೆಯಿಂದ ಬದುಕುಳಿದರು.

ಇಲ್ಲಿಂದ ಲಯ ಕಂಡುಕೊಂಡ ರೋಹಿತ್ ದಿನದಂತ್ಯಕ್ಕೆ ಔಟಾಗದೆ 30 ರನ್ ಕಲೆಹಾಕಿದರೆ, ಮತ್ತೊಂದೆಡೆ ಯಶಸ್ವಿ ಜೈಸ್ವಾಲ್ ಕೂಡ ಔಟಾಗದೆ 40 ರನ್ ಬಾರಿಸಿದರು. ಆದರೆ ಟೀಂ ಇಂಡಿಯಾ ಪರ ಮೊದಲ ಟೆಸ್ಟ್ ಪಂದ್ಯವನ್ನಾಡುತ್ತಿರುವ 21ರ ಹರೆಯದ ಯುವ ಎಡಗೈ ಬ್ಯಾಟ್ಸ್‌ಮನ್ ಆರಂಭದಲ್ಲೇ ರನ್​ ಗಳಿಸಲು ಕೊಂಚ ತಿಣುಕಾಡಿದರು. ಖಾತೆ ತೆರೆಯಲು 14 ಎಸೆತಗಳನ್ನು ತೆಗೆದುಕೊಂಡ ಜೈಸ್ವಾಲ್ ಆರಂಭದಲ್ಲಿ ರನ್ ಕಲೆಹಾಕಲು ಸ್ವಲ್ಪ ಆತುರ ತೋರಿದರು. ಪರಿಣಾಮ ಅವರು ಹಲವು ಬಾರಿ ಚೆಂಡನ್ನು ಆಡುವುದನ್ನು ತಪ್ಪಿಸಿಕೊಂಡರು. ಆದಾಗ್ಯೂ, ಮೊದಲ ರನ್ ಬಂದ ನಂತರ, ಸಂಯಮ ಕಾಯ್ದುಕೊಂಡ ಯಶಸ್ವಿ ಕೆಲವು ಅತ್ಯುತ್ತಮ ಕಟ್ ಮತ್ತು ಸ್ವೀಪ್ ಶಾಟ್​ಗಳನ್ನು ಆಡುವ ಮೂಲಕ ಅರ್ಧಶತಕದ ಸನಿಹಕ್ಕೆ ಬಂದು ನಿಂತಿದ್ದಾರೆ. ಈ ನಡುವೆ ಈ ಇಬ್ಬರೂ ಅರ್ಧಶತಕದ ಜೊತೆಯಾಟವನ್ನು ಹಂಚಿಕೊಂಡಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:33 am, Thu, 13 July 23