ಭಾರತ ತನ್ನ ವೆಸ್ಟ್ ಇಂಡೀಸ್ ((India vs West Indies)) ಪ್ರವಾಸವನ್ನು ಮತ್ತೊಂದು ಭರ್ಜರಿ ಗೆಲುವಿನೊಂದಿಗೆ ಕೊನೆಗೊಳಿಸಿದೆ. ಭಾರತ ಕ್ರಿಕೆಟ್ ತಂಡ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ತಂಡವನ್ನು 88 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿದೆ. ಇದರೊಂದಿಗೆ ಟೀಂ ಇಂಡಿಯಾ 4-1 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಭಾರತೀಯ ಸ್ಪಿನ್ನರ್‌ಗಳು ತಮ್ಮ ಸಾಮರ್ಥ್ಯ ಪ್ರದರ್ಶಿಸಿ ಎಲ್ಲಾ 10 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ಹಿಂದೆಯೂ ಭಾರತ ಏಕದಿನ ಸರಣಿಯನ್ನು ಅಮೋಘ ರೀತಿಯಲ್ಲಿ ಗೆದ್ದಿತ್ತು. ಹೀಗಾಗಿ ಭಾರತ ತಂಡದ ಕೆರಿಬಿಯನ್ ಪ್ರವಾಸ ಅಮೋಘವಾಗಿತ್ತು. ವೆಸ್ಟ್ ಇಂಡೀಸ್ ಭರವಸೆ ಮತ್ತೊಮ್ಮೆ ನಿರಾಶಾದಾಯಕವಾಗಿತ್ತು. ಅಂತಿಮ ಪಂದ್ಯದಲ್ಲಿ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಿದ್ದರಿಂದ ಹಾರ್ದಿಕ್ ಪಾಂಡ್ಯ (Hardik Pandya) ಟೀಮ್ ಇಂಡಿಯಾದ ನಾಯಕತ್ವವನ್ನು ವಹಿಸಿಕೊಂಡಿದ್ದರು. ಶ್ರೇಯಸ್ ಅಯ್ಯರ್ (Shreyas Iyer) ಅವರ ಅರ್ಧಶತಕದ ನೆರವಿನಿಂದ ಭಾರತ 7 ವಿಕೆಟ್‌ಗೆ 189 ರನ್ ಗಳಿಸುವ ಮೂಲಕ ವೆಸ್ಟ್ ಇಂಡೀಸ್‌ಗೆ ಸವಾಲೊಡ್ಡಿತು.
ಬಿಷ್ಣೋಯ್, ಅಕ್ಷರ್ ಪಟೇಲ್ ಮತ್ತು ಕುಲ್ದೀಪ್ ಧಮಾಲ್
ಭಾರತದ ಬೌಲಿಂಗ್ ದಾಳಿಗೆ ವೆಸ್ಟ್ ಇಂಡೀಸ್ ತಂಡ ಮಂಡಿಯೂರಿತು. ಭಾರತದ ಬೌಲರ್ ಅಕ್ಷರ್ ಪಟೇಲ್ ಶೂನ್ಯ ರನ್‌ಗಳಿಗೆ ವಿಕೆಟ್ ಪಡೆಯುವ ಮೂಲಕ ವೆಸ್ಟ್ ಇಂಡೀಸ್‌ಗೆ ಕೆಟ್ಟ ಆರಂಭವನ್ನು ನೀಡಿದರು. ಅಕ್ಷರ್ ಪಟೇಲ್ ಮೊದಲ ಮೂರು ವಿಕೆಟ್‌ಗಳನ್ನು ಕಬಳಿಸುವ ಮೂಲಕ ವೆಸ್ಟ್ ಇಂಡೀಸ್‌ಗೆ ತೊಂದರೆ ನೀಡಿದರು. ಕುಲ್ದೀಪ್ ಯಾದವ್ ಮತ್ತು ರವಿ ಬಿಷ್ಣೋಯ್ ತಮ್ಮ ಅದ್ಭುತ ಬೌಲಿಂಗ್ ಪ್ರದರ್ಶನದಿಂದ ಉಳಿದದ್ದನ್ನು ಮಾಡಿದರು. ಇಬ್ಬರೂ ಒಂದೇ ಓವರ್‌ನಲ್ಲಿ ಎರಡು ವಿಕೆಟ್ ಕಬಳಿಸಿದ್ದರಿಂದ ವೆಸ್ಟ್ ಇಂಡೀಸ್ ಸೋಲು ಖಚಿತವಾಯಿತು. ರವಿ ಬಿಷ್ಣೋಯ್ 2.4 ಓವರ್‌ಗಳಲ್ಲಿ 16 ರನ್ ನೀಡಿ 4 ವಿಕೆಟ್ ಪಡೆದರು. ಅಲ್ಲದೆ ಎರಡು ಓವರ್‌ಗಳಲ್ಲಿ ತಲಾ ಎರಡು ವಿಕೆಟ್ ಪಡೆದರು. ಕುಲದೀಪ್ ಯಾದವ್ 3 ವಿಕೆಟ್ ಪಡೆದರು, ಜೊತೆಗೆ ಒಂದೇ ಓವರ್‌ನಲ್ಲಿ 2 ವಿಕೆಟ್ ಪಡೆದರು.
ಹೆಟ್ಮೆಯರ್ ಅರ್ಧಶತಕ
ವೆಸ್ಟ್ ಇಂಡೀಸ್ ಪರ ಶಿಮ್ರಾನ್ ಹೆಟ್ಮೆಯರ್ ಏಕಾಂಗಿಯಾಗಿ ಬೌಂಡರಿ ಮತ್ತು ಸಿಕ್ಸರ್ ನೊಂದಿಗೆ ಹೋರಾಟ ಮುಂದುವರಿಸಿದರು. ಆದರೆ ಇನ್ನೊಂದು ತುದಿಯಲ್ಲಿ ಅವರಿಗೆ ಬೆಂಬಲ ನೀಡಲು ಕ್ರೀಸ್‌ನಲ್ಲಿ ಯಾರೂ ನಿಲ್ಲಲಿಲ್ಲ. ಇದರಿಂದ ವೆಸ್ಟ್ ಇಂಡೀಸ್ ಸೋಲು ಖಚಿತವಾಯಿತು. ಹೆಟ್ಮೆಯರ್ 35 ಎಸೆತಗಳಲ್ಲಿ 56 ರನ್ ಗಳಿಸಿದರು. ಅವರು 4 ಸಿಕ್ಸರ್ ಮತ್ತು 5 ಬೌಂಡರಿಗಳನ್ನು ಬಾರಿಸಿದರು. ಆರಂಭಿಕ ಆಟಗಾರ ಶರ್ಮಾ ಬ್ರೂಕ್ಸ್ 13 ರನ್ ಗಳಿಸಿದರು. ಇದು ತಂಡದ ಎರಡನೇ ಗರಿಷ್ಠ ಸ್ಕೋರ್ ಆಗಿತ್ತು. ಡೆವೊನ್ ಥಾಮಸ್ 11 ಎಸೆತಗಳಲ್ಲಿ 10 ರನ್ ಗಳಿಸಿ ಔಟಾದರು. ನಾಯಕ ನಿಕೋಲಸ್ ಪೂರನ್ 3 ರನ್ ಗಳಿಸಲಷ್ಟೇ ಶಕ್ತರಾದರು. ರೋವ್‌ಮನ್ ಪೊವೆಲ್ 13 ಎಸೆತಗಳಲ್ಲಿ 9 ರನ್ ಗಳಿಸಿ ಔಟಾದರು.
ಕಿಮೊ ಪೌಲ್ ಶೂನ್ಯ ರನ್‌ಗಳಿಗೆ ಔಟಾದರು. ಡೊಮಿನಿಕ್ ಡ್ರೇಕ್ಸ್ 2 ಎಸೆತಗಳಲ್ಲಿ 1 ರನ್, ಓಡಿಯನ್ ಸ್ಮಿತ್ 3 ಎಸೆತಗಳಲ್ಲಿ ಶೂನ್ಯಕ್ಕೆ ಮರಳಿದರು. ಒಬೆಡ್ ಮೆಕಾಯ್ ಕೂಡ ಖಾತೆ ತೆರೆಯಲಿಲ್ಲ. ಹೀಗಾಗಿ 16ನೇ ಓವರ್ನ ನಾಲ್ಕನೇ ಎಸೆತದಲ್ಲಿ ವೆಸ್ಟ್ ಇಂಡೀಸ್ ತಂಡ ಆಲೌಟ್ ಆಯಿತು. ಜೊತೆಗೆ ಸಂಪೂರ್ಣ 20 ಓವರ್‌ಗಳನ್ನೂ ಬ್ಯಾಟಿಂಗ್ ಮಾಡಲು ಕೂಡ ಅವರಿಗೆ ಸಾಧ್ಯವಾಗಲಿಲ್ಲ. ಇದರ ಫಲವಾಗಿ ಭಾರತ ಅಂತಿಮ ಪಂದ್ಯದಲ್ಲಿ 88 ರನ್‌ಗಳ ಜಯ ಸಾಧಿಸಿತು.
Published On - 11:47 pm, Sun, 7 August 22