IND vs WI: ಸಿಕ್ಸರ್ ಸಿಡಿಸಿ ಜಯ ತಂದುಕೊಟ್ಟ ಹಾರ್ದಿಕ್; ಸ್ವಾರ್ಥಿ ಎಂದ ನೆಟ್ಟಿಗರು

|

Updated on: Aug 09, 2023 | 8:25 AM

Hardik Pandya: ನಾಯಕ ಹಾರ್ದಿಕ್ ಪಾಂಡ್ಯ ಕೂಡ ಬೌಲಿಂಗ್ ಮತ್ತು ಉಪಯುಕ್ತ ಇನ್ನಿಂಗ್ಸ್‌ನೊಂದಿಗೆ ಕೊಡುಗೆ ನೀಡಿದರು. ಇದರ ಹೊರತಾಗಿಯೂ, ಹಾರ್ದಿಕ್, ಟೀಂ ಇಂಡಿಯಾ ಅಭಿಮಾನಿಗಳು ಹಾಗೂ ನೆಟ್ಟಿಗರ ಟೀಕೆಗೆ ಗುರಿಯಾಗಬೇಕಾಯ್ತು.

IND vs WI: ಸಿಕ್ಸರ್ ಸಿಡಿಸಿ ಜಯ ತಂದುಕೊಟ್ಟ ಹಾರ್ದಿಕ್; ಸ್ವಾರ್ಥಿ ಎಂದ ನೆಟ್ಟಿಗರು
ಹಾರ್ದಿಕ್ ಪಾಂಡ್ಯ
Follow us on

ವೆಸ್ಟ್ ಇಂಡೀಸ್ ವಿರುದ್ಧ ಸತತ ಎರಡು ಟಿ20 ಪಂದ್ಯಗಳ ಸೋಲಿನ ಬಳಿಕ ಟೀಂ ಇಂಡಿಯಾ (India vs West Indies) ಇದೀಗ ಮೂರನೇ ಟಿ20 ಪಂದ್ಯವನ್ನು ಗೆದ್ದು ಮತ್ತೆ ಗೆಲುವಿನ ಲಯಕ್ಕೆ ಮರಳಿದೆ. ದುರ್ಬಲ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಹಾಗೂ ಏಕದಿನ ಸರಣಿಯನ್ನು ಸುಲಭವಾಗಿ ಗೆದ್ದುಬೀಗಿದ ಭಾರತದ ಟಿ20 ಸರಣಿ ಗೆಲುವಿನ ಹಾದಿ ಅಷ್ಟು ಸುಗಮವಾಗಿಲ್ಲ. ಐದು ಪಂದ್ಯಗಳ ಸರಣಿಯಲ್ಲಿ ಮೊದಲೆರಡು ಪಂದ್ಯಗಳನ್ನು ಸೋತಿದ್ದ ಟೀಂ ಇಂಡಿಯಾಕ್ಕೆ (Team India) ಸರಣಿ ಕೈ ತಪ್ಪುವ ಭೀತಿ ಎದುರಾಗಿತ್ತು. ಆದರೆ ಮೂರನೇ ಟಿ20ಪಂದ್ಯದಲ್ಲಿ ತನ್ನ ಗೆಲುವಿನ ಹಾದಿಗೆ ಮರಳಿದ ಭಾರತ, ವೆಸ್ಟ್ ಇಂಡೀಸ್ ವಿರುದ್ಧ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವು ಸರಣಿಯಲ್ಲಿ ಭಾರತದ ಭರವಸೆಯನ್ನು ಜೀವಂತವಾಗಿರಿಸಿದೆ. ತಂಡದ ಪರ ಸೂರ್ಯ (Suryakumar Yadav), ತಿಲಕ್ ವರ್ಮಾ(Tilak Varma) ಹಾಗೂ ಕುಲ್ದೀಪ್ (Kuldeep Yadav) ಗೆಲುವಿನ ಪ್ರದರ್ಶನ ನೀಡಿದರೆ, ಅವರೊಂದಿಗೆ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಕೂಡ ಬೌಲಿಂಗ್ ಮತ್ತು ಉಪಯುಕ್ತ ಇನ್ನಿಂಗ್ಸ್‌ನೊಂದಿಗೆ ಕೊಡುಗೆ ನೀಡಿದರು. ಇದರ ಹೊರತಾಗಿಯೂ, ಹಾರ್ದಿಕ್, ಟೀಂ ಇಂಡಿಯಾ ಅಭಿಮಾನಿಗಳು ಹಾಗೂ ನೆಟ್ಟಿಗರ ಟೀಕೆಗೆ ಗುರಿಯಾಗಬೇಕಾಯ್ತು.

ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 159 ರನ್ ಕಲೆಹಾಕಿತು. ಭಾರತ ಪರ ಕುಲ್ದೀಪ್ ಯಾದವ್ ಗರಿಷ್ಠ 3 ವಿಕೆಟ್ ಪಡೆದರು. ಅದೇ ವೇಳೆ ನಾಯಕ ಹಾರ್ದಿಕ್ ಕೂಡ 3 ಓವರ್ ಬೌಲ್ ಕೇವಲ 18 ರನ್ ನೀಡಿ ರನ್ ನಿಯಂತ್ರಿಸಿದರು. ಇನ್ನು ಬ್ಯಾಟಿಂಗ್​ನಲ್ಲಿ ಅಬ್ಬರಿಸಿದ ಸೂರ್ಯಕುಮಾರ್ ಯಾದವ್ (83) ಮತ್ತು ತಿಲಕ್ ವರ್ಮಾ (ಅಜೇಯ 49) ಹಾಗೂ ನಾಯಕ ಹಾರ್ದಿಕ್ ಪಾಂಡ್ಯ ಅವರ ಅಜೇಯ 20 ರನ್​ಗಳ ಆಧಾರದ ಮೇಲೆ ಟೀಂ ಇಂಡಿಯಾ 17.5 ಓವರ್‌ಗಳಲ್ಲಿ 7 ವಿಕೆಟ್‌ಗಳಿಂದ ಗೆಲುವಿನ ದಡ ಸೇರಿತು.

IND vs WI: ಅರ್ಧಶತಕ ಸಿಡಿಸಿ ಸೂರ್ಯಕುಮಾರ್ ದಾಖಲೆ ಮುರಿದ ತಿಲಕ್ ವರ್ಮಾ

ನೆಟ್ಟಿಗರ ಕೋಪಕ್ಕೆ ಗುರಿಯಾದ ಹಾರ್ದಿಕ್

ಇನ್ನು ಕೊನೆಯವರೆಗೂ ಅಜೇಯರಾಗಿ ಉಳಿದ ಹಾರ್ದಿಕ್, ಸಿಕ್ಸರ್ ಸಿಡಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ರೋವ್‌ಮನ್ ಪೊವೆಲ್ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಹಾರ್ದಿಕ್ ತಂಡಕ್ಕೆ ಜಯ ತಂದುಕೊಟ್ಟರು. ಆದರೆ ಹಾರ್ದಿಕ್‌ ಸಿಡಿಸಿದ ಈ ಸಿಕ್ಸರ್‌ ನೆಟ್ಟಿಗರ ಕೋಪಕ್ಕೆ ಕಾರಣವಾಯ್ತು.

ಡಾಟ್ ಮಾಡುವ ಬದಲು ಸಿಕ್ಸರ್

ವಾಸ್ತವವಾಗಿ ಟೀಂ ಇಂಡಿಯಾ ಕೇವಲ 34 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಿತ್ತು. ಇದಾದ ಬಳಿಕ ತಿಲಕ್ ವರ್ಮಾ ಅವರು ಸೂರ್ಯಕುಮಾರ್ ಯಾದವ್ ಜೊತೆ 87 ರನ್ ಜೊತೆಯಾಟ ನಡೆಸಿ ಗೆಲುವಿನ ರೂವಾರಿ ಎನಿಸಿದರು. ಸೂರ್ಯ ಔಟಾದ ಬಳಿಕ ಬ್ಯಾಟಿಂಗ್​ಗೆ ಬಂದ ಹಾರ್ದಿಕ್​ಗೆ ತಿಲಕ್ ಉತ್ತಮ ಸಾಥ್​ ನೀಡಿದರು. ಹೀಗಾಗಿ 17 ಓವರ್‌ಗಳ ನಂತರ ಭಾರತದ ಸ್ಕೋರ್ 154 ರನ್ ತಲುಪಿತು. ಅಂತಿಮವಾಗಿ ಭಾರತದ ಗೆಲುವಿಗೆ 18 ಎಸೆತಗಳಲ್ಲಿ ಕೇವಲ 6 ರನ್‌ಗಳ ಅಗತ್ಯವಿತ್ತು. ಇದೇ ವೇಳೆ ತಿಲಕ್ ವರ್ಮಾ ಕೂಡ ಅರ್ಧಶತಕದ ಸಮೀಪದಲ್ಲಿದ್ದರು. ಬಳಿಕ 18ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ತಿಲಕ್ 1 ರನ್ ತೆಗೆದುಕೊಂಡು ನಾನ್ ಸ್ಟ್ರೈಕ್​ಗೆ ಬಂದರು. ಸ್ಟ್ರೈಕ್ ತೆಗೆದುಕೊಂಡ ಹಾರ್ದಿಕ್ ಓವರ್​ನಲ್ಲಿ ಉಳಿದಿದ್ದ ಎರಡು ಎಸೆತಗಳನ್ನು ಡಾಟ್ ಮಾಡಿ, ತಿಲಕ್​ಗೆ ಅರ್ಧಶತಕ ಪೂರೈಸಲು ಅವಕಾಶ ಮಾಡಿಕೊಡುತ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಹಾರ್ದಿಕ್ ಎದುರಿಸಿದ ಮೊದಲ ಎಸೆತವನ್ನು ಸಿಕ್ಸರ್ ಬಾರಿಸಿ, ಇನ್ನಿಂಗ್ಸ್ ಮುಗಿಸಿದರು. ಈ ಮೂಲಕ ತಿಲಕ್ ಸತತ ಎರಡನೇ ಅರ್ಧಶತಕ ಸಿಡಿಸುವ ಅವಕಾಶವನ್ನು ಕಸಿದುಕೊಂಡರು.

ಧೋನಿಯನ್ನು ನೆನೆದ ನೆಟ್ಟಿಗರು

ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿ ಮೂಲಕ ಭಾರತ ತಂಡಕ್ಕೆ ಎಂಟ್ರಿಕೊಟ್ಟ ತಿಲಕ್ ಆಡಿದ ಎಲ್ಲಾ ಮೂರು ಪಂದ್ಯಗಳಲ್ಲಿ ತಂಡದ ಅತ್ಯಂತ ಪರಿಣಾಮಕಾರಿ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಹೀಗಿರುವಾಗ ಅವರ ಅರ್ಧಶತಕವನ್ನು ತಪ್ಪಿಸಿದ ಹಾರ್ದಿಕ್ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ #Selfish ಟ್ರೆಂಡ್ ಶುರುವಾಗಿದೆ. ಅಲ್ಲದೆ ಧೋನಿಯ ಅದೊಂದು ಇನ್ನಿಂಗ್ಸ್​ ಅನ್ನು ಎಲ್ಲರು ಸ್ಮರಿಸುತ್ತಿದ್ದಾರೆ.

ವಾಸ್ತವವಾಗಿ 2014ರ ಟಿ20 ವಿಶ್ವಕಪ್‌ನ ಸೆಮಿಫೈನಲ್‌ ಪಂದ್ಯದಲ್ಲಿ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅತ್ಯುತ್ತಮ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಗೆಲುವಿನ ದಡ ಸೇರಸಿದ್ದರು. ಆ ಪಂದ್ಯದಲ್ಲಿ ಭಾರತಕ್ಕೆ ಕೇವಲ ಒಂದು ರನ್ ಬೇಕಾಗಿದ್ದಾಗ ಧೋನಿ 19ನೇ ಓವರ್‌ನ ಕೊನೆಯ ಎಸೆತವನ್ನು ಡಾಟ್ ಮಾಡುವ ಮೂಲಕ ಕೊಹ್ಲಿಗೆ ಗೆಲುವಿನ ರನ್ ಬಾರಿಸುವ ಅವಕಾಶ ಮಾಡಿಕೊಟ್ಟಿದ್ದರು. ಬಳಿಕ 20ನೇ ಓವರ್​ನ ಮೊದಲ ಎಸೆತವನ್ನು ಎದುರಿಸಿದ ಕೊಹ್ಲಿ ವಿನ್ನಿಂಗ್ ಶಾಟ್ ಬಾರಿಸಿದ್ದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:10 am, Wed, 9 August 23