ಭಾರತ ಮತ್ತು ವೆಸ್ಟ್ ಇಂಡೀಸ್ (India vs West Indies) ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 ಅಂತರದಿಂದ ಗೆದ್ದು ಬೀಗಿರುವ ಟೀಂ ಇಂಡಿಯಾ ಮೂರನೇ ಆವೃತ್ತಿಯ ಟೆಸ್ಟ್ ಚಾಂಪಿಯನ್ಶಿಪ್ಗೆ (WTC) ಶುಭಾರಂಭ ನೀಡಿದೆ. ಆದರೆ 2ನೇ ಟೆಸ್ಟ್ ಪಂದ್ಯ ಮಳೆಯಿಂದಾಗಿ ರದ್ದಾದ್ದರಿಂದ ಡಬ್ಲ್ಯುಟಿಸಿ ಪಾಯಿಂಟ್ ಪಟ್ಟಿಯಲ್ಲಿ ರೋಹಿತ್ (Rohit Sharma) ಬಳಗ ಎರಡನೇ ಸ್ಥಾನಕ್ಕೆ ಕುಸಿದಿದೆ. ಅದಾಗ್ಯೂ ಟೆಸ್ಟ್ ಸರಣಿಯಲ್ಲಿ ಕೆಲವು ಸಕಾರಾತ್ಮಕ ಅಂಶಗಳನ್ನು ಕಂಡುಕೊಂಡಿರುವ ಟೀಂ ಇಂಡಿಯಾ ಇದೀಗ ಏಕದಿನ ಸರಣಿಯತ್ತ ದೃಷ್ಟಿ ಹಾಯಿಸಿದೆ. ಇದೇ ವರ್ಷ ಏಷ್ಯಾಕಪ್ (Asia Cup) ಹಾಗೂ ವಿಶ್ವಕಪ್ (World Cup) ನಡೆಯುವುದರಿಂದ ಬಲಿಷ್ಠ ಏಕದಿನ ತಂಡವನ್ನು ಕಟ್ಟಿಕೊಳ್ಳುವುದು ರೋಹಿತ್ ಪಡೆಯ ಮುಂದಿನ ಸವಾಲಾಗಿದೆ. ಆ ಸವಾಲಿನ ಮೊದಲ ಹೆಜ್ಜೆಯಾಗಿ ಇದೀಗ ರೋಹಿತ್ ಪಡೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ವಿಂಡೀಸ್ ತಂಡವನ್ನು ಎದುರಿಸಲು ಸಜ್ಜಾಗಿದೆ. ಆದರೆ ಕೆರಿಬಿಯನ್ ನಾಡಲ್ಲಿ ಏಕದಿನ ಸರಣಿ ಆರಂಭಕ್ಕೂ ಮುನ್ನ ಅಸಮಾಧಾನಗೊಂಡಿರುವ ಟೀಂ ಇಂಡಿಯಾ, ಪ್ರಯಾಣದ ವಿಚಾರದಲ್ಲಿ ಬಿಸಿಸಿಐಗೆ (BCCI) ದೂರು ನೀಡಿದೆ.
ವಾಸ್ತವವಾಗಿ ಟ್ರಿನಿಡಾಡ್‌ನಲ್ಲಿ ಎರಡನೇ ಟೆಸ್ಟ್ ಪಂದ್ಯವನ್ನು ಆಡಿ ಮುಗಿಸಿದ ಟೀಂ ಇಂಡಿಯಾ ಜುಲೈ 27 ರಿಂದ ಆರಂಭವಾಗಲಿರುವ ಏಕದಿನ ಸರಣಿಯ ಮೊದಲ ಪಂದ್ಯಕ್ಕಾಗಿ ಬಾರ್ಬಡೋಸ್ಗೆ ಪ್ರಯಾಣ ಬೆಳೆಸಬೇಕಾಗಿತ್ತು. ಹೀಗಾಗಿ ಆಟಗಾರರಿಗೆ ರಾತ್ರಿ ವಿಮಾನ ಪ್ರಯಾಣವನ್ನು ನಿಗದಿಗೊಳಿಸಲಾಗಿತ್ತು. ಹೀಗಾಗಿ ಬಾರ್ಬಡೋಸ್ಗೆ ಹಾರಲು ಟ್ರಿನಿಡಾಡ್ ವಿಮಾನ ನಿಲ್ದಾಣಕ್ಕೆ ಬಂದಿದ್ದ ರೋಹಿತ್ ಪಡೆ ಬರೋಬ್ಬರಿ 4 ಗಂಟೆ ಸಮಯವನ್ನು ವಿಮಾನ ನಿಲ್ದಾಣದಲ್ಲೇ ಕಳೆಯಬೇಕಾಯಿತು. ಇದು ತಂಡವನ್ನು ಆಕ್ರೋಶಗೊಳಿಸಿದ್ದು, ಬಿಸಿಸಿಐಗೆ ಈ ಬಗ್ಗೆ ದೂರು ಸಲ್ಲಿಸಿದೆ.
IND vs WI ODI Series: ಟೆಸ್ಟ್ ಸರಣಿ ಮುಕ್ತಾಯ: ಭಾರತ- ವೆಸ್ಟ್ ಇಂಡೀಸ್ ಏಕದಿನ ಸರಣಿ ಯಾವಾಗ?, ಎಷ್ಟು ಗಂಟೆಗೆ?
ಈ ದೂರಿನಲ್ಲಿ ರಾತ್ರಿ ಪ್ರಯಾಣವನ್ನು ನಿಗದಿಪಡಿಸದಂತೆ ಮನವಿ ಮಾಡಿರುವ ಭಾರತ ತಂಡ, ವಿಮಾನ ಪ್ರಯಾಣವನ್ನು ರಾತ್ರಿ ಬದಲು ಹಗಲಿನಲ್ಲಿ ಕಾಯ್ದಿರಿಸುವಂತೆ ಕೇಳಿಕೊಂಡಿದೆ. ಈ ಬಗ್ಗೆ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದ್ದು, ವರದಿಯ ಪ್ರಕಾರ, ನಿಗದಿಯಂತೆ ಟೀಂ ಇಂಡಿಯಾ ಆಟಗಾರರು ರಾತ್ರಿ 11 ಗಂಟೆಗೆ ಟ್ರಿನಿಡಾಡ್ ತೊರೆದು, ಮುಂಜಾನೆ ವೇಳೆಗೆ ಬಾರ್ಬಡೋಸ್ ತಲುಪಬೇಕಿತ್ತು. ಆದರೆ ವಿಮಾನ ಬರೋಬ್ಬರಿ 4 ಗಂಟೆ ತಡವಾಯಿತು.
11 ಗಂಟೆಯ ಫ್ಲೈಟ್ ಹಿಡಿಯಲು ರಾತ್ರಿ 8.40ಕ್ಕೆ ಹೋಟೆಲ್ನಿಂದ ಚೆಕ್ ಔಟ್ ಮಾಡಿದ್ದ ಟೀಂ ಇಂಡಿಯಾ, ವಿಮಾನ ತಡವಾಗಿದ್ದರಿಂದ ವಿಮಾನ ನಿಲ್ದಾಣದಲ್ಲಿ ಗಂಟೆಗಟ್ಟಲೆ ಕಾಯಬೇಕಾಗಿ ಬಂತ್ತು. ರಾತ್ರಿ 11 ಗಂಟೆಗೆ ಹಾರಬೇಕಿದ್ದ ವಿಮಾನ 4 ಗಂಟೆ ತಡವಾಗಿ ಬೆಳಗಿನ ಜಾವ 3 ಗಂಟೆಗೆ ಪ್ರಯಾಣ ಆರಂಭಿಸಿತು. ಹೀಗಾಗಿ ವಿಮಾನ ವಿಳಂಬದಿಂದಾಗಿ ಭಾರತದ ಆಟಗಾರರು ತೀವ್ರ ಕೋಪಗೊಂಡಿದ್ದು ಈ ಬಗ್ಗೆ ಬಿಸಿಸಿಐಗೆ ದೂರು ನೀಡಿದ್ದಾರೆ. ಅಲ್ಲದೆ ರಾತ್ರಿ ವೇಳೆ ಯಾವುದೇ ವಿಮಾನ ಕಾಯ್ದಿರಿಸದಂತೆ ಒತ್ತಾಯಿಸಿದ್ದಾರೆ ಎಂದು ವರದಿಯಾಗಿದೆ.
ಏಕದಿನ ಸರಣಿಯ ಮೊದಲ ಎರಡು ಪಂದ್ಯಗಳು ಜೂನ್ 27 ಮತ್ತು ಜೂನ್ 29 ರಂದು ಬಾರ್ಬಡೋಸ್‌ನ ಐಕಾನಿಕ್ ಕೆನ್ಸಿಂಗ್ಟನ್ ಓವಲ್‌ನಲ್ಲಿ ನಡೆಯಲಿವೆ. ಮೂರನೇ ಮತ್ತು ಅಂತಿಮ ಪಂದ್ಯವು ಟ್ರೌಬಾದ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆಯಲ್ಲಿದೆ. ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 7:00 ಗಂಟೆಗೆ ಪ್ರಾರಂಭವಾಗುತ್ತವೆ.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಶುಭ್ಮನ್ ಗಿಲ್, ಸಂಜು ಸ್ಯಾಮ್ಸನ್, ಸೂರ್ಯ ಕುಮಾರ್ ಯಾದವ್, ಇಶಾನ್ ಕಿಶನ್, ಶಾರ್ದೂಲ್ ಠಾಕೂರ್, ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ, ಯುಜ್ವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಜಯದೇವ್ ಉನದ್ಕಟ್, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಮುಖೇಶ್ ಕುಮಾರ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:21 am, Wed, 26 July 23