IND vs WI: ಬ್ಯಾಟಿಂಗ್ ಕ್ರಮಾಂಕದಲ್ಲಾಗಿರುವ ಬದಲಾವಣೆಯ ಬಗ್ಗೆ ಶುಭ್​ಮನ್ ಗಿಲ್ ಹೇಳಿದ್ದೇನು?

|

Updated on: Jul 13, 2023 | 8:52 AM

Shubman Gill: ಟೀಂ ಇಂಡಿಯಾದಲ್ಲಿ ಖಾಯಂ ಸ್ಥಾನ ಪಡೆದ ಬಳಿಕ ಆರಂಭಿಕನಾಗಿ ಕಾಣಿಸಿಕೊಳ್ಳುತ್ತಿದ್ದ ಶುಭ್​ಮನ್ ಗಿಲ್, ಜೈಸ್ವಾಲ್ ಆಗಮನದಿಂದ ಮೂರನೇ ಕ್ರಮಾಂಕಕ್ಕೆ ಜಾರಿದ್ದಾರೆ.

IND vs WI: ಬ್ಯಾಟಿಂಗ್ ಕ್ರಮಾಂಕದಲ್ಲಾಗಿರುವ ಬದಲಾವಣೆಯ ಬಗ್ಗೆ ಶುಭ್​ಮನ್ ಗಿಲ್ ಹೇಳಿದ್ದೇನು?
ಶುಭ್​ಮನ್ ಗಿಲ್
Follow us on

ವೆಸ್ಟ್ ಇಂಡೀಸ್ ವಿರುದ್ಧ ಆರಂಭವಾಗಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ (India vs West Indies) ಮೊದಲ ದಿನವೇ ಉತ್ತಮ ಆರಂಭ ಪಡೆದುಕೊಂಡಿದೆ. ವಿಂಡೀಸ್ ತಂಡವನ್ನು ಕೇವಲ 150 ರನ್​ಗಳಿಗೆ ಕಟ್ಟಿಹಾಕಿರುವ ಭಾರತ, ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ್ದು, ದಿನದಾಟದಂತ್ಯಕ್ಕೆ ಯಾವುದೇ ವಿಕೆಟ್ ನಷ್ಟವಿಲ್ಲದೆ 80 ರನ್ ಕಲೆಹಾಕಿದೆ. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ನಾಯಕ ರೋಹಿತ್ ಶರ್ಮಾ (Rohit Sharma) ಹಾಗೂ ಯಶಸ್ವಿ ಜೈಸ್ವಾಲ್ (Yashasvi Jaiswal) ಮುರಿಯದ ವಿಕೆಟ್​ಗೆ ಅರ್ಧಶತಕದ ಜೊತೆಯಾಟವನ್ನು ಹಂಚಿಕೊಂಡಿದ್ದಾರೆ. ವಾಸ್ತವವಾಗಿ ಟೀಂ ಇಂಡಿಯಾ (Team India) ಪರ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡುತ್ತಿರುವ ಜೈಸ್ವಾಲ್ ಓಪನರ್ ಆಗಿ ಬಡ್ತಿ ಪಡೆದುಕೊಂಡಿದ್ದಾರೆ. ಹೀಗಾಗಿ ಈ ಹಿಂದೆ ನಾಯಕ ರೋಹಿತ್ ಜೊತೆ ಇನ್ನಿಂಗ್ಸ್ ಆರಂಭಿಸುತ್ತಿದ್ದ ಶುಭ್​ಮನ್ ಗಿಲ್ (Shubman Gill) ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ.

ಟೀಂ ಇಂಡಿಯಾದಲ್ಲಿ ಖಾಯಂ ಸ್ಥಾನ ಪಡೆದ ಬಳಿಕ ಆರಂಭಿಕನಾಗಿ ಕಾಣಿಸಿಕೊಳ್ಳುತ್ತಿದ್ದ ಶುಭ್​ಮನ್ ಗಿಲ್, ಜೈಸ್ವಾಲ್ ಆಗಮನದಿಂದ ಮೂರನೇ ಕ್ರಮಾಂಕಕ್ಕೆ ಜಾರಿದ್ದಾರೆ. ಟೆಸ್ಟ್ ಕ್ರಿಕೆಟ್​ನಲ್ಲಿ ಮೂರನೇ ಕ್ರಮಾಂಕಕ್ಕೆ ಬಹಳ ಮಹತ್ವವಿದ್ದು, ಈ ಹಿಂದೆ ಟೀಂ ಇಂಡಿಯಾದಲ್ಲಿ ಈ ಸ್ಥಾನವನ್ನು ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ತುಂಬುತ್ತಿದ್ದರು. ಇದೀಗ ಈ ಸ್ಥಾನ ತುಂಬಲು ಬಂದಿರುವ ಗಿಲ್, ತನ್ನ ಬ್ಯಾಟಿಂಗ್ ಕ್ರಮಾಂಕದಲ್ಲಿ ಆಗಿರುವ ಬದಲಾವಣೆಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

IND vs WI: ಕಿಶನ್- ಜೈಸ್ವಾಲ್​ಗೆ ಟೆಸ್ಟ್ ಕ್ಯಾಪ್ ನೀಡಿದ್ದು ಯಾರು ಗೊತ್ತಾ? ವಿಡಿಯೋ ನೋಡಿ

ನಾನೇ ಸ್ವತಃ ಈ ನಿರ್ಧಾರ ತೆಗೆದುಕೊಂಡಿದ್ದೇನೆ

ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಬಗ್ಗೆ ಮಾತನಾಡಿರುವ ಗಿಲ್, ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ನಾಯಕ ರೋಹಿತ್ ಶರ್ಮಾ ನೀನು ಯಾವ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಯಸುತ್ತೀಯ ಎಂದು ನನ್ನನ್ನು ಕೇಳಿದರು. ಅದಕ್ಕೆ ನಾನು, ನನಗೆ ಮೂರನೇ ಕ್ರಮಾಂಕ ಬೇಕು ಎಂದು ಹೇಳಿದೆ. ಆರಂಭಿಕನಾಗಿ ಹೊಸ ಚೆಂಡಿನೊಂದಿಗೆ ಆಡುವುದು ಯಾವಾಗಲೂ ಒಳ್ಳೆಯದು. ನನಗೆ ಹೊಸ ಚೆಂಡಿನಲ್ಲಿ ಆಡಿದ ಅನುಭವವಿದೆ. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಆಟಗಾರನಿಗೂ ಸ್ವಲ್ಪ ವ್ಯತ್ಯಾಸವಿದ್ದರೂ ಅದು ತುಂಬಾ ಭಿನ್ನವಾಗಿರುವುದಿಲ್ಲ. ಹೀಗಾಗಿ ನನಗೆ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದು ಹೆಚ್ಚು ವ್ಯತ್ಯಾಸವನ್ನುಂಟು ಮಾಡುವುದಿಲ್ಲ ಎಂದಿದ್ದಾರೆ.

ನೀವು ಈಗಾಗಲೇ ಹಿರಿಯ ಆಟಗಾರನಂತೆ ಭಾವಿಸಲು ಪ್ರಾರಂಭಿಸಿದ್ದೀರಾ ಎಂದು ಕೇಳಿದಕ್ಕೆ ಉತ್ತರಿಸಿದ ಗಿಲ್, ‘ನಿಜವಾಗಿಯೂ ಇಲ್ಲ. ಪಾತ್ರಗಳು ವಿಭಿನ್ನವಾಗಿವೆ. ಖಂಡಿತವಾಗಿಯೂ ನಾನು ಹಾಗೆ ಭಾವಿಸುವುದಿಲ್ಲ’ ಎಂದಿದ್ದಾರೆ. ಹಾಗೆಯೇ ಡಬ್ಲ್ಯುಟಿಸಿ ಫೈನಲ್ ಬಳಿಕ ಸಿಕ್ಕ ಒಂದು ತಿಂಗಳ ವಿಶ್ರಾಂತಿಯ ಬಗ್ಗೆ ಮಾತನಾಡಿದ ಗಿಲ್, ‘ನಾನು ಒಂದು ತಿಂಗಳ ವಿರಾಮವನ್ನು ನಿಜವಾಗಿಯೂ ಆನಂದಿಸಿದೆ, ನನ್ನ ಕುಟುಂಬದೊಂದಿಗೆ ಸಮಯ ಕಳೆದಿದ್ದೇನೆ. ಡೊಮಿನಿಕಾದಲ್ಲಿ ಮೊದಲ ಬಾರಿಗೆ ಆಡುತ್ತಿದ್ದೇನೆ. ನಾವು ಇಲ್ಲಿಗೆ ಬಹಳ ಹಿಂದೆಯೇ ಬಂದಿದ್ದೇವೆ, ಉತ್ತಮ ತರಬೇತಿ ಪಡೆದಿದ್ದೇವೆ’ ಎಂದರು.

ಯಾವ ಕ್ರಮಾಂಕಕ್ಕೂ ಸೈ

ಇನ್ನು ತಮ್ಮ ಕ್ರಮಾಂಕದ ಬದಲಾವಣೆ ಬಗ್ಗೆ ಕೋಚ್ ದ್ರಾವಿಡ್ ಹಾಗೂ ನಾಯಕ ರೋಹಿತ್ ಜೊತೆ ನಡೆದ ಮಾತುಕತೆಯ ಬಗ್ಗೆ ವಿವರಿಸಿದ ಗಿಲ್, ನಾನು ಕೋಚ್ ರಾಹುಲ್ ದ್ರಾವಿಡ್ ಅವರೊಂದಿಗೆ ಚರ್ಚಿಸಿ ಈ ನಿರ್ಧಾರಕ್ಕೆ ಬಂದಿದ್ದೇನೆ. ನನಗೆ ನನ್ನ ವೃತ್ತಿ ಬದುಕಿನಲ್ಲಿ 3 ಮತ್ತು 4 ನೇ ಕ್ರಮಾಂಕದಲ್ಲಿ ಆಡಿದ ಅನುಭವವಿದೆ. ಹೀಗಾಗಿ ನಾನು ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದರೆ ನನ್ನ ತಂಡಕ್ಕೆ ಉತ್ತಮವಾಗಿ ಕಾರ್ಯನಿರ್ವಹಿಸಬಹುದೆಂದು ನಾನು ಭಾವಿಸುತ್ತೇನೆ ಎಂದು ಗಿಲ್ ಹೇಳಿಕೊಂಡಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ