ಭಾರತ ಹಾಗೂ ವೆಸ್ಟ್ ಇಂಡೀಸ್ (India vs West Indies) ನಡುವಣ ಸರಣಿಗೆ ಇಂದು ಚಾಲನೆ ಸಿಗಲಿದೆ. ಮೂರು ಪಂದ್ಯಗಳ ಏಕದಿನ ಸರಣಿ ಪೈಕಿ ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿಂದು ಮೊದಲ ಏಕದಿನ ಪಂದ್ಯ ನಡೆಯಲಿದೆ. ರೋಹಿತ್-ಪೊಲಾರ್ಡ್ ನಡುವಣ ಕಾದಾಟಕ್ಕೆ ಅಭಿಮಾನಿಗಳು ಕಾದುಕುಳಿತಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಹೀನಾಯ ಸೋಲಿನಿಂದ ಪಾಠ ಕಲಿತು ಇದೀಗ ಹೊಸ ಯೋಜನೆ, ಹೊಸ ಸವಾಲುಗಳೊಂದಿಗೆ ಏಕದಿನ ಕ್ರಿಕೆಟ್ ಇತಿಹಾಸದ ತನ್ನ ಸಾವಿರದ ಪಂದ್ಯಕ್ಕೆ ಟೀಮ್ ಇಂಡಿಯಾ ಸಜ್ಜಾಗಿದೆ. ಭಾರತಕ್ಕೆ ಇದು 1000ನೇ ಏಕದಿನ (1000th ODI) ಪಂದ್ಯವಾಗಿರುವುದು ವಿಶೇಷ. ರೋಹಿತ್ ಶರ್ಮ (Rohit Sharma) ಇದೇ ಮೊದಲ ಸಲ ಪೂರ್ಣ ಪ್ರಮಾಣದ ನಾಯಕನಾಗಿ ಭಾರತವನ್ನು ಮುನ್ನಡೆಸುತ್ತಿದ್ದಾರೆ. ಇದು ನೂತನ ಯುಗವೊಂದಕ್ಕೆ ಮುನ್ನುಡಿಯಾದೀತೇ ಎಂಬುದೊಂದು ನಿರೀಕ್ಷೆ. ಹೀಗೆ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವ ಮೊದಲ ಏಕದಿನ ಪಂದ್ಯದಲ್ಲಿ ಹೊಸ ದಾಖಲೆ ಕೂಡ ನಿರ್ಮಾನ ಆಗುವ ಸಾಧ್ಯತೆ. ಪ್ರಮುಖ ಆಟಗಾರರು ನೂತನ ಸಾಧನೆಯ ಹೊಸ್ತಿಲಲ್ಲಿದ್ದಾರೆ.
ಕಿಂಗ್ ಕೊಹ್ಲಿಗೆ ಬೇಕು 6 ರನ್:
ತವರಿನಲ್ಲಿ 5000 ಏಕದಿನ ರನ್ ಬಾರಿಸಿದ ಎರಡನೇ ಭಾರತೀಯ ಬ್ಯಾಟರ್ ಎನಿಸಿಕೊಳ್ಳಲು ವಿರಾಟ್ ಕೊಹ್ಲಿಗೆ ಇನ್ನು ಕೇವಲ ಆರು ರನ್‌ಗಳ ಅಗತ್ಯವಿದೆಯಷ್ಟೇ. ಭಾರತ ಪರ ತವರಿನಲ್ಲಿ 5 ಸಾವಿರಕ್ಕೂ ಅಧಿಕ ರನ್ ಬಾರಿಸಿದ ಏಕೈಕ ಭಾರತೀಯ ಬ್ಯಾಟರ್ ಎನ್ನುವ ದಾಖಲೆ ಸಚಿನ್ ತೆಂಡುಲ್ಕರ್ ಅವರ ಹೆಸರಿನಲ್ಲಿದೆ. ಇದೀಗ ಕೊಹ್ಲಿ ಇನ್ನು ಕೇವಲ 6 ರನ್ ಬಾರಿಸಿದರೆ, ಈ ಸಾಧನೆ ಮಾಡಿದ ಭಾರತದ ಎರಡನೇ ಬ್ಯಾಟರ್ ಎನ್ನುವ ಕೀರ್ತಿಗೆ ಪಾತ್ರರಾಗಲಿದ್ದಾರೆ. ತವರಿನಲ್ಲಿ 5000+ ರನ್ ಬಾರಿಸಲು ಸಚಿನ್ 121 ಇನಿಂಗ್ಸ್‌ಗಳನ್ನಾಡಿದ್ದರು. ಕೊಹ್ಲಿ 96ನೇ ಇನಿಂಗ್ಸ್‌ನಲ್ಲೇ 5,000+ ರನ್ ಬಾರಿಸುವ ಸಾಧ್ಯತೆಯಿದೆ.
ಕೊಹ್ಲಿ-ಸಚಿನ್ ದಾಖಲೆ ಉಡೀಸ್ ಮಾಡ್ತಾರಾ ರೋಹಿತ್?:
ತವರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಹೆಚ್ಚು ರನ್ ಗಳಿಸಿದ ದಾಖಲೆ ವಿರಾಟ್ ಹೆಸರಲ್ಲಿದೆ. 20 ಪಂದ್ಯದಲ್ಲಿ ಕೊಹ್ಲಿ 1239 ರನ್ ಗಳಿಸಿದರೆ, ರೋಹಿತ್ 13 ಪಂದ್ಯಗಳಿಂದ 1040 ರನ್ ಗಳಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಒಟ್ಟು ರನ್ ಗಳಿಸಿದವರ ಪಟ್ಟಿಯಲ್ಲೂ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ. ವಿರಾಟ್ 39 ಪಂದ್ಯಗಳಿಂದ 2235 ರನ್ ಗಳಿಸಿದ್ದು, ಸಚಿನ್ ತೆಂಡೂಲ್ಕರ್ ಅವರು 39 ಪಂದ್ಯಗಳಲ್ಲಿ 1573 ರನ್ ಗಳಿಸಿದ್ದಾರೆ. ರೋಹಿತ್ ಅವರು 33 ಪಂದ್ಯಗಳಲ್ಲಿ 1523 ರನ್ ಗಳಿಸಿದ್ದಾರೆ. ರೋಹಿತ್ ಶರ್ಮಾ ಅವರು ಈ ಸರಣಿಯಲ್ಲಿ ಸಚಿನ್ ತೆಂಡೂಲ್ಕರ್ ದಾಖಲೆ ಮುರಿಯುವುದು ಬಹುತೇಕ ಖಚಿತವಾಗಿದೆ.
5000 ರನ್ ಜೊತೆಯಾಟ:
ಓಡಿಐ ಕ್ರಿಕೆಟ್‌ನಲ್ಲಿ 5000 ರನ್ ಜೊತೆಯಾಟವನ್ನು ಪೂರ್ಣಗೊಳಿಸಲು ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಜೋಡಿಗೆ ಇನ್ನು ಕೇವಲ 94 ರನ್ ಮಾತ್ರ ಅಗತ್ಯವಿದೆ. ಪ್ರಸ್ತುತ 81 ಇನಿಂಗ್ಸ್‌ಗಳಲ್ಲಿ ರೋಹಿತ್ ಹಾಗೂ ಕೊಹ್ಲಿ ಜೋಡಿ 64.55ರ ಸರಾಸರಿಯಲ್ಲಿ 18 ಶತಕ ಸೇರಿದಂತೆ 4906 ರನ್ ಗಳಿಸಿದೆ. ವೆಸ್ಟ್ ಇಂಡೀಸ್ ವಿರುದ್ಧ ಮೂರು ಪಂದ್ಯಗಳ ಓಡಿಐ ಸರಣಿಯಲ್ಲಿ ಈ ಜೋಡಿ 94 ರನ್ ಜೊತೆಯಾಟವಾಡಿದ್ದೆ ಆದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ 5000 ರನ್ ಜೊತೆಯಾಟವಾಡಿದ ಭಾರತದ ಮೂರನೇ ಜೋಡಿ ಎಂಬ ಕೀರ್ತಿಗೆ ರೋಹಿತ್-ಕೊಹ್ಲಿ ಭಾಜನರಾಗಲಿದ್ದಾರೆ.
1000 ರನ್ ಜೊತೆಯಾಟ:
ಕೊಹ್ಲಿ- ರೋಹಿತ್ ಜೋಡಿ ಓಡಿಐ ಕ್ರಿಕೆಟ್‌ನಲ್ಲಿ 982 ರನ್ ಗಳಿಸಿದೆ. ವಿಂಡೀಸ್ ವಿರುದ್ಧ 1000 ರನ್ ಜೊತೆಯಾಟ ಪೂರ್ಣಗೊಳಿಸಲು ಕೊಹ್ಲಿ-ರೋಹಿತ್ ಜೋಡಿಗೆ ಕೇವಲ 18 ರನ್ ಅಗತ್ಯವಿದೆ. ಆ ಮೂಲಕ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ 1000 ರನ್ ಜೊತೆಯಾಟವಾಡಿದ ಭಾರತದ ಮೊದಲ ಜೋಡಿ ಎಂಬ ಖ್ಯಾತಿಗೆ ಕೊಹ್ಲಿ ಮತ್ತು ರೋಹಿತ್ ಜೋಡಿ ಭಾಜನವಾಗಲಿದೆ. ಅಷ್ಟೇ ಅಲ್ಲದೆ ಏಕೈಕ ಎದುರಾಳಿ ತಂಡದ ವಿರುದ್ಧ ಎರಡು ಅಥವಾ ಅದಕ್ಕಿಂತೆ ಹೆಚ್ಚು ಬಾರಿ 1000 ರನ್ ಜೊತೆಯಾಟವಾಡಿದ ಸಚಿನ್ ಹಾಗೂ ಗಂಗೂಲಿ ದಾಖಲೆಯನ್ನು ಈ ಜೋಡಿ ಸರಿದೂಗಿಸಲಿದೆ.
ಇವರ ಜೊತೆಗೆ ಟೀಮ್ ಇಂಡಿಯಾ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಇನ್ನೊಂದು ವಿಕೆಟ್ ಕಿತ್ತರೆ ಏಕದಿನದಲ್ಲಿ 100 ವಿಕೆಟ್ ಪೂರ್ತಿಗೊಳಿಸಲಿದ್ದಾರೆ. ವೆಸ್ಟ್ ಇಂಡೀಸ್ ತಂಡ ಬ್ಯಾಟರ್ ಶಾಯ್ ಹೋಪ್ ಏಕದಿನದಲ್ಲಿ 300 ಬೌಂಡರಿ ಪೂರ್ತಿಗೊಳಿಸಲು ಇನ್ನು ಕೇವಲ 2 ಬೌಂಡರಿಗಳ ಅಗತ್ಯವಿದೆ.
Raj Bawa: ಬ್ರಿಟಿಷರನ್ನು ಅಟ್ಟಾಡಿಸಿದ ರಾಜ: ಇದುವರೆಗೆ ಯಾವುದೇ ಭಾರತೀಯ ಪ್ಲೇಯರ್ ಮಾಡಿಲ್ಲ ಈ ದಾಖಲೆ
IND vs WI: ಮೊದಲ ಏಕದಿನಕ್ಕೆ ಇದೆಯೇ ಮಳೆಯ ಕಾಟ?: ಪಿಚ್ ರಿಪೋರ್ಟ್, ಪಂದ್ಯ ಎಷ್ಟು ಗಂಟೆಗೆ ಆರಂಭ? ಇಲ್ಲಿದೆ ಮಾಹಿತಿ