IND vs WI: ಈ ಬಾರಿ ಟೀಮ್ ಇಂಡಿಯಾಗೆ ಕಠಿಣ ಸವಾಲು: ವೆಸ್ಟ್ ಇಂಡೀಸ್ ಈ ಹಿಂದಿಗಿಂತಲೂ ಡೇಂಜರಸ್..!

| Updated By: ಝಾಹಿರ್ ಯೂಸುಫ್

Updated on: Jan 31, 2022 | 3:12 PM

India vs West Indies: ನಾಯಕ ಕೀರನ್ ಪೊಲಾರ್ಡ್ ವೆಸ್ಟ್ ಇಂಡೀಸ್ ತಂಡದ ದೊಡ್ಡ ಶಕ್ತಿ. ಇಂಗ್ಲೆಂಡ್ ವಿರುದ್ಧದ ಸರಣಿಯ ವೇಳೆ ಪೊಲಾರ್ಡ್ ನಾಯಕತ್ವದ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಆದರೆ 577 ಟಿ20 ಪಂದ್ಯಗಳನ್ನು ಆಡಿರುವ ಆಟಗಾರನನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ಅದರಲ್ಲೂ ಭಾರತದ ಪಿಚ್​ನಲ್ಲಿ ಪೊಲಾರ್ಡ್ ಅಬ್ಬರವನ್ನು ತಡೆಯುವುದು ದೊಡ್ಡ ಸವಾಲು.

IND vs WI: ಈ ಬಾರಿ ಟೀಮ್ ಇಂಡಿಯಾಗೆ ಕಠಿಣ ಸವಾಲು: ವೆಸ್ಟ್ ಇಂಡೀಸ್ ಈ ಹಿಂದಿಗಿಂತಲೂ ಡೇಂಜರಸ್..!
IND vs WI
Follow us on

ಟಿ20 ವಿಶ್ವಕಪ್​ನಲ್ಲಿ ವೆಸ್ಟ್​ ಇಂಡೀಸ್ ತಂಡದ ಕಳಪೆ ಪ್ರದರ್ಶನ ನೋಡಿದ ಬಳಿಕ ಈ ತಂಡ ಮತ್ತೆ ಕಂಬ್ಯಾಕ್ ಮಾಡುವುದು ಅನುಮಾನ ಎಂದವರೇ ಹೆಚ್ಚು. ಆದರೆ ತಿಂಗಳುಗಳ ಅಂತರದಲ್ಲೇ ಇದೀಗ ವಿಂಡೀಸ್ ದೈತ್ಯರು ಮೈಕೊಡವಿ ನಿಂತಿದ್ದಾರೆ. ಅದು ಕೂಡ ಟಿ20 ಕ್ರಿಕೆಟ್​ನ ನಂಬರ್ 1 ತಂಡ ಇಂಗ್ಲೆಂಡ್ ಅನ್ನು ಬಗ್ಗು ಬಡಿದು ಎಂಬುದು ವಿಶೇಷ. ಟಿ20 ಶ್ರೇಯಾಂಕದಲ್ಲಿ 10 ನೇ ಸ್ಥಾನದಲ್ಲಿರುವ ವೆಸ್ಟ್ ಇಂಡೀಸ್ ಇಂಗ್ಲೆಂಡ್ ಅನ್ನು 3-2 ರಿಂದ ಸೋಲಿಸಿ ಪರಾಕ್ರಮ ಮೆರೆದಿದೆ. ಈ ವಿಜಯದೊಂದಿಗೆ ಕೆರಿಬಿಯನ್ ಪಡೆ ಟೀಮ್ ಇಂಡಿಯಾಗೆ ಎಚ್ಚರಿಕೆ ರವಾನಿಸಿದೆ.​ ಟಿ20 ವಿಶ್ವಕಪ್​ಗೆ ಹೋಲಿಸಿದರೆ ಇಂಗ್ಲೆಂಡ್ ವಿರುದ್ದ ಸರಣಿಯಲ್ಲಿ ವೆಸ್ಟ್ ಇಂಡೀಸ್​ ಪ್ರದರ್ಶನ ಅತ್ಯಾಧ್ಭುತವಾಗಿದೆ. ಅದರಲ್ಲೂ ತಂಡದಲ್ಲಿ ಅವಕಾಶ ಪಡೆದ ಬಹುತೇಕ ಆಟಗಾರರು ಫಾರ್ಮ್​ ಪ್ರದರ್ಶಿಸಿದ್ದಾರೆ.

ಪ್ರಸ್ತುತ ವೆಸ್ಟ್ ಇಂಡೀಸ್ ತಂಡದಲ್ಲಿ ಮ್ಯಾಚ್ ವಿನ್ನರ್ ಆಟಗಾರರ ದೊಡ್ಡ ಸೈನ್ಯವೇ ಇದೆ. ಇತ್ತೀಚಿಗೆ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲೂ ಇದು ಕಂಡುಬಂದಿದೆ. ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳಲ್ಲೂ ಬೇರೆ ಬೇರೆ ಆಟಗಾರರು ಮಿಂಚಿರುವುದು ಇದಕ್ಕೆ ಸಾಕ್ಷಿ. ಅಂದರೆ ತಂಡವು ಈಗ ಯಾವುದೇ ಒಬ್ಬ ಆಟಗಾರನನ್ನು ಅವಲಂಬಿತವಾಗಿಲ್ಲ ಎಂಬುದು ಸ್ಪಷ್ಟ. ಕೊನೆಯ ಟಿ20ಯಲ್ಲಿ ನಾಯಕ ಪೊಲಾರ್ಡ್ 41 ರನ್‌ ಬಾರಿ ಮತ್ತೆ ಫಾರ್ಮ್​ಗೆ ಮರಳಿದ್ದಾರೆ. ಹೀಗಾಗಿ ಭಾರತದಲ್ಲಿ ವಿಂಡೀಸ್ ದಾಂಡಿಗರನ್ನು ಕಟ್ಟಿಹಾಕುವುದು ಅಂದುಕೊಂಡಷ್ಟು ಸುಲಭವಲ್ಲ. ಅದರಲ್ಲೂ ಜಸ್​ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿಯಂತಹ ಅನುಭವಿ ವೇಗಿಗಳು ಟೀಮ್ ಇಂಡಿಯಾದಿಂದ ಹೊರಗುಳಿದಿದ್ದಾರೆ. ಹೀಗಾಗಿ ವೆಸ್ಟ್ ಇಂಡೀಸ್ ಸ್ಪೋಟಕ ಬ್ಯಾಟ್ಸ್​ಮನ್​ಗಳನ್ನು ಕಟ್ಟಿಹಾಕುವುದು ಹೊಸ ಬೌಲರುಗಳಿಗೆ ಸಾವಾಲಾಗುವ ಸಾಧ್ಯತೆಯಿದೆ.

ಇನ್ನು ವಿಂಡೀಸ್ ತಂಡದ ಬೌಲರುಗಳು ಕೂಡ ಈ ಬಾರಿ ಉತ್ತಮ ಲಯದಲ್ಲಿದ್ದಾರೆ. ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಕೆರಿಬಿಯನ್ ನಾಡದಲ್ಲಿ ಉತ್ತಮ ಪ್ರದರ್ಶನ ನೀಡಿದರೂ, ಅಂತಿಮವಾಗಿ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ವೆಸ್ಟ್ ಇಂಡೀಸ್ ಬೌಲರುಗಳು ಯಶಸ್ವಿಯಾಗಿದ್ದರು. ಇದಕ್ಕೆ ಉದಾಹರಣೆ, ನಾಲ್ಕನೇ ಟಿ20ಯಲ್ಲಿ ಮೊಯಿನ್ ಅಲಿ ಜೇಸನ್ ಹೋಲ್ಡರ್ ಎಸೆತದಲ್ಲಿ ಸತತ ನಾಲ್ಕು ಸಿಕ್ಸರ್ ಸಿಡಿಸಿದ್ದರು. ಅದೇ ಜೇಸನ್ ಹೋಲ್ಡರ್ ಕೊನೆಯ ಟಿ20ಯಲ್ಲಿ ಸತತ 4 ಎಸೆತಗಳಲ್ಲಿ 4 ವಿಕೆಟ್ ಕಬಳಿಸಿ ಇತಿಹಾಸ ನಿರ್ಮಿಸಿದ್ದರು.

ಈ ಸರಣಿಯಲ್ಲಿ ಇಂಗ್ಲೆಂಡ್‌ನ ಬೌಲರ್‌ಗಳು ಕಬಳಿಸಿದ್ದು 23 ವಿಕೆಟ್‌ಗಳನ್ನು ಮಾತ್ರ. ಆದರೆ ಮತ್ತೊಂದೆಡೆ ಕೆರಿಬಿಯನ್ ಬೌಲರ್‌ಗಳು ಒಟ್ಟು 43 ವಿಕೆಟ್‌ಗಳನ್ನು ಪಡೆದಿದ್ದರು. ಅಂದರೆ ಇಂಗ್ಲೆಂಡ್​ಗಿಂತ ವಿಂಡೀಸ್ ಬೌಲರುಗಳು ಮಾರಕ ದಾಳಿ ಸಂಘಟಿಸಿದ್ದರು. ಹೀಗಾಗಿ ಕೆರಿಬಿಯನ್​ ಬೌಲರುಗಳ ವಿರುದ್ದ ಕ್ರೀಸ್ ಕಚ್ಚಿ ನಿಲ್ಲಲು ಟೀಮ್ ಇಂಡಿಯಾ ವಿಶೇಷ ರಣತಂತ್ರ ಹೆಣೆಯಬೇಕಿದೆ.

ಇನ್ನು ನಾಯಕ ಕೀರನ್ ಪೊಲಾರ್ಡ್ ವೆಸ್ಟ್ ಇಂಡೀಸ್ ತಂಡದ ದೊಡ್ಡ ಶಕ್ತಿ. ಇಂಗ್ಲೆಂಡ್ ವಿರುದ್ಧದ ಸರಣಿಯ ವೇಳೆ ಪೊಲಾರ್ಡ್ ನಾಯಕತ್ವದ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಆದರೆ 577 ಟಿ20 ಪಂದ್ಯಗಳನ್ನು ಆಡಿರುವ ಆಟಗಾರನನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ಅದರಲ್ಲೂ ಭಾರತದ ಪಿಚ್​ನಲ್ಲಿ ಪೊಲಾರ್ಡ್ ಅಬ್ಬರವನ್ನು ತಡೆಯುವುದು ದೊಡ್ಡ ಸವಾಲು. ಅದರಲ್ಲೂ ರೋಹಿತ್ ಶರ್ಮಾ ಜೊತೆ ಕೆಲ ವರ್ಷಗಳಿಂದ ಮುಂಬೈ ಇಂಡಿಯನ್ಸ್​​ನಲ್ಲಿ ಆಡುತ್ತಿರುವ ಪೊಲಾರ್ಡ್​ಗೆ ಹಿಟ್​ಮ್ಯಾನ್​ ನಾಯಕತ್ವದ ಪ್ರತಿಯೊಂದು ಹೆಜ್ಜೆಗಳು ಗೊತ್ತಿರುತ್ತದೆ. ಹೀಗಾಗಿ ರೋಹಿತ್ ರಣತಂತ್ರದಲ್ಲಿ ಪೊಲಾರ್ಡ್ ಗಿಂತ ಒಂದು ಹೆಜ್ಜೆ ಮುಂದೆ ಇರಬೇಕಾದ ಅನಿವಾರ್ಯತೆ ಇದೆ.

ಇಲ್ಲಿ ಮತ್ತೊಂದು ವಿಶೇಷತೆ ಎಂದರೆ ಇಂಗ್ಲೆಂಡ್​ ವಿರುದ್ದ ಸರಣಿಯಲ್ಲಿ ವೆಸ್ಟ್ ಇಂಡೀಸ್ ದಾಂಡಿಗರು 5 ಪಂದ್ಯಗಳಿಂದ ಒಟ್ಟು 51 ಸಿಕ್ಸರ್ ಸಿಡಿಸಿದ್ದಾರೆ. ಅಷ್ಟೇ ಅಲ್ಲದೆ ಇಡೀ ಸರಣಿಯಲ್ಲಿ ವೆಸ್ಟ್ ಇಂಡೀಸ್ ಕೇವಲ 220 ಡಾಟ್ ಬಾಲ್ ಗಳನ್ನು ಮಾತ್ರ ಆಡಿತ್ತು. ಅದೇ ನಂಬರ್ 1 ತಂಡ ಎನಿಸಿಕೊಂಡ ಇಂಗ್ಲೆಂಡ್ 251 ಡಾಟ್ ಬಾಲ್​ಗಳನ್ನು ಆಡಿದೆ. ಅಂದರೆ ಇಲ್ಲಿ ವಿಂಡೀಸ್ ದಾಂಡಿಗರು ದೊಡ್ಡ ಹೊಡೆತ ಮತ್ತು ಪ್ರತಿಯೊಂದು ಎಸೆತಗಳಲ್ಲೂ ರನ್​ಗಳಿಸಲು ಹೆಚ್ಚಿನ ಒತ್ತು ನೀಡಿರುವುದು ಸ್ಪಷ್ಟ. ಹೀಗಾಗಿ ಇದೇ ರಣತಂತ್ರದೊಂದಿಗೆ ಭಾರತದ ವಿರುದ್ದ ಕೂಡ ಕಣಕ್ಕಿಳಿಯಲಿದೆ.

ಆದರೆ ಇತ್ತ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ದ ಹೀನಾಯ ಪ್ರದರ್ಶನ ನೀಡಿದ್ದು, ಇದೀಗ ವೆಸ್ಟ್ ಇಂಡೀಸ್ ವಿರುದ್ದ ಭರ್ಜರಿ ಜಯ ಸಾಧಿಸಬೇಕಾದ ಅನಿವಾರ್ಯತೆ. ಆದರೆ ಈ ಬಾರಿ ವೆಸ್ಟ್ ಇಂಡೀಸ್ ತಂಡವು ಈ ಹಿಂದಿನಂತಿಲ್ಲ ಎಂಬುದಕ್ಕೆ ಇಂಗ್ಲೆಂಡ್ ತಂಡವನ್ನು ಬಗ್ಗು ಬಡಿದಿರುವುದು ಸಾಕ್ಷಿ. ಹಾಗಾಗಿ ವೆಸ್ಟ್ ಇಂಡೀಸ್ ವಿರುದ್ದ ಸರಣಿ ಟೀಮ್ ಇಂಡಿಯಾ ಕಠಿಣ ಸವಾಲಾಗುವುದರಲ್ಲಿ ಅನುಮಾನವೇ ಇಲ್ಲ.

ಭಾರತ-ವೆಸ್ಟ್ ಇಂಡೀಸ್ ಏಕದಿನ ಸರಣಿ ವೇಳಾಪಟ್ಟಿ:

ಫೆಬ್ರವರಿ 6 – 1 ನೇ ODI, ಅಹಮದಾಬಾದ್

ಫೆಬ್ರವರಿ 9 – 2 ನೇ ODI, ಅಹಮದಾಬಾದ್

ಫೆಬ್ರವರಿ 11 – 3 ನೇ ODI, ಅಹಮದಾಬಾದ್

ಏಕದಿನ ಸರಣಿಗೆ ಟೀಮ್ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ರುತುರಾಜ್ ಗಾಯಕ್ವಾಡ್, ಶಿಖರ್ ಧವನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ದೀಪಕ್ ಹೂಡಾ, ರಿಷಬ್ ಪಂತ್ (ವಿಕೆಟ್ ಕೀಪರ್), ದೀಪಕ್ ಚಹಾರ್ , ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಹಾಲ್, ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ಮತ್ತು ಅವೇಶ್ ಖಾನ್.

ಏಕದಿನ ಸರಣಿಗೆ ವೆಸ್ಟ್ ಇಂಡೀಸ್ ತಂಡ: ಕೀರನ್ ಪೊಲಾರ್ಡ್ (ನಾಯಕ), ಕೆಮರ್ ರೋಚ್, ಎನ್‌ಕ್ರುಮಾ ಬೊನ್ನರ್, ಬ್ರಾಂಡನ್ ಕಿಂಗ್, ಫ್ಯಾಬಿಯನ್ ಅಲೆನ್, ಡ್ಯಾರೆನ್ ಬ್ರಾವೋ, ಶಮ್ರಾ ಬ್ರೂಕ್ಸ್, ಜೇಸನ್ ಹೋಲ್ಡರ್, ಶಾಯ್ ಹೋಪ್, ಅಕಿಲ್ ಹೊಸೈನ್, ಅಲ್ಜಾರಿ ಜೋಸೆಫ್, ನಿಕೋಲಸ್ ಪೂರನ್, ರೊಮರಿಯಾ ಶೆಫರ್ಡ್ , ಓಡಿಯನ್ ಸ್ಮಿತ್ ಮತ್ತು ಹೇಡನ್ ವಾಲ್ಷ್ ಜೂನಿಯರ್.

ಭಾರತ-ವೆಸ್ಟ್ ಇಂಡೀಸ್ T20 ಸರಣಿಯ ವೇಳಾಪಟ್ಟಿ:

ಫೆಬ್ರವರಿ 16 – 1 ನೇ T20, ಕೋಲ್ಕತ್ತಾ

ಫೆಬ್ರವರಿ 18 – 2 ನೇ T20, ಕೋಲ್ಕತ್ತಾ

ಫೆಬ್ರವರಿ 20 – 3 ನೇ T20, ಕೋಲ್ಕತ್ತಾ

ಭಾರತ ವಿರುದ್ಧದ ಟಿ20 ಸರಣಿಗೆ ವೆಸ್ಟ್ ಇಂಡೀಸ್ ತಂಡ: ಕೀರನ್ ಪೊಲಾರ್ಡ್ (ನಾಯಕ), ನಿಕೋಲಸ್ ಪೂರನ್ (ಉಪನಾಯಕ), ಫ್ಯಾಬಿಯನ್ ಅಲೆನ್, ಡ್ಯಾರೆನ್ ಬ್ರಾವೋ, ರೋಸ್ಟನ್ ಚೇಸ್, ಶೆಲ್ಡನ್ ಕಾಟ್ರೆಲ್, ಡೊಮಿನಿಕ್ ಡ್ರೇಕ್ಸ್, ಜೇಸನ್ ಹೋಲ್ಡರ್, ಶಾಯ್ ಹೋಪ್, ಅಕಿಲ್ ಹೊಸೈನ್, ಬ್ರೇಮನ್ ಕಿಂಗ್, ರೋವ್ಮನ್ ಪೊವೆಲ್, ರೊಮಾರಿಯೋ ಶೆಫರ್ಡ್, ಕೈಲ್ ಮೈಯರ್ಸ್, ಓಡಿಯನ್ ಸ್ಮಿತ್ ಮತ್ತು ಹೇಡನ್ ವಾಲ್ಷ್ ಜೂನಿಯರ್.

ಟಿ20 ಸರಣಿಗೆ ಟೀಮ್ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ (ವಿಕೆಟ್ ಕೀಪರ್), ವೆಂಕಟೇಶ್ ಅಯ್ಯರ್, ದೀಪಕ್ ಚಹರ್, ಶಾರ್ದೂಲ್ ಠಾಕೂರ್, ರವಿ ಬಿಷ್ಣೋಯ್, ಅಕ್ಷರ್ ಪಟೇಲ್, ಯುಜ್ವೇಂದ್ರ ಚಾಹಲ್, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್, ಅವೇಶ್ ಖಾನ್ ಮತ್ತು ಹರ್ಷಲ್ ಪಟೇಲ್

 

ಇದನ್ನೂ ಓದಿ:  IND vs WI: ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಯಲ್ಲಿದ್ದ 5 ಆಟಗಾರರು ಟೀಮ್ ಇಂಡಿಯಾದಿಂದ ಔಟ್..!

ಇದನ್ನೂ ಓದಿ: ICC ODI Rankings: ಐಸಿಸಿ ಏಕದಿನ ರ‍್ಯಾಕಿಂಗ್ ಪಟ್ಟಿ ಪ್ರಕಟ: ಕೊಹ್ಲಿ-ರೋಹಿತ್ ನಡುವೆ ಪೈಪೋಟಿ

ಇದನ್ನೂ ಓದಿ: IPL 2022 Auction: ಲಕ್ನೋ ತಂಡದ ಮೊದಲ ಟಾರ್ಗೆಟ್ ಯಾರು ಎಂಬುದನ್ನು ಬಹಿರಂಗಪಡಿಸಿದ ರಾಹುಲ್

(IND vs WI: West Indies are a dangerous and unpredictable side)