ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯನ್ನು ವಶಪಡಿಸಿಕೊಂಡ ಬಳಿಕ ಭಾರತ (India vs England) ಇದೀಗ ಏಕದಿನ ಸರಣಿ ಮೇಲೂ ಕಣ್ಣಿಟ್ಟಿದೆ. ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಬರೋಬ್ಬರಿ 10 ವಿಕೆಟ್ಗಳ ಭರ್ಜರಿ ಗೆಲುವು ಕಂಡಿತ್ತು. ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಶಮಿ ಬೌಲಿಂಗ್ ದಾಳಿಗೆ ತತ್ತರಿಸಿದ್ದ ಇಂಗ್ಲೆಂಡ್ ಕೇವಲ 110 ರನ್ಗಳಿಗೆ ಆಲೌಟ್ ಆಗಿತ್ತು. ಭಾರತ 18.4 ಓವರ್ನಲ್ಲೇ ಗುರಿ ಮುಟ್ಟಿತ್ತು. ರೋಹಿತ್ (Rohit Sharma)-ಧವನ್ ಜೋಡಿ ಅಜೇಯ ಆಟವಾಡಿದ್ದರು. ಇದೀಗ ರೋಹಿತ್ ಪಡೆ ಎರಡನೇ ಏಕದಿನ ಪಂದ್ಯಕ್ಕೆ ಸಜ್ಜಾಗಿದೆ. ಇಂದು ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ದ್ವಿತೀಯ ಪಂದ್ಯ ಆಯೋಜಿಸಲಾಗಿದ್ದು ಭಾರತ ಗೆದ್ದರೆ ಸರಣಿ ವಶಪಡಿಸಿಕೊಳ್ಳಲಿದೆ. ಇತ್ತ ಇಂಗ್ಲೆಂಡ್ಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ. ತವರಿನಲ್ಲೇ ಹೀನಾಯ ಸೋಲು ಕಂಡಿರುವ ಬಟ್ಲರ್ ನಾಯಕತ್ವಕ್ಕೂ ಇದೊಂದು ಅಗ್ನಿಪರೀಕ್ಷೆಯಾಗಿದೆ. ಹೀಗಾಗಿ ಇಂದು ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ.
ಇಂದಿನ ಪಂದ್ಯದಲ್ಲೂ ವಿರಾಟ್ ಕೊಹ್ಲಿ ಆಡುವುದು ಅನುಮಾನ ಎನ್ನಲಾಗುತ್ತಿದೆ. ತೊಡೆಸಂದು ನೋವಿನಿಂದ ಬಳಲುತ್ತಿರುವ ಕಾರಣ ಕೊಹ್ಲಿ ಅಲಭ್ಯತೆ ಭಾರತಕ್ಕೆ ದೊಡ್ಡ ಆಘಾತವಾಗಿದೆ. ಕೊಹ್ಲಿ ಗಾಯದ ಬಗ್ಗೆ ಹೆಚ್ಚಿನ ವಿವರಗಳು ಖಚಿತವಾಗಿಲ್ಲ. ಗಾಯ ಎಷ್ಟು ಗಂಭೀರವಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ವಿರಾಟ್ ಆಡದಿರುವುದು ಕೇವಲ ಮ್ಯಾನೇಜ್ಮೆಂಟ್ಗೆ ಮಾತ್ರವಲ್ಲದೆ ಸ್ವತಃ ಕೊಹ್ಲಿಗೆನೇ ಹಿನ್ನಡೆಯಾಗಿದೆ. ಯಾಕೆಂದರೆ ಸತತ ಕಳಪೆ ಫಾರ್ಮ್ನಿಂದ ತತ್ತರಿಸಿರುವ ಕೊಹ್ಲಿಗೆ ಒಂದೊಳ್ಳೆ ಇನ್ನಿಂಗ್ಸ್ನ ಅಗತ್ಯವಿದೆ. ಕೊಹ್ಲಿ ಹೊರಗುಳಿದರೆ ಮೂರನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಆಡುವುದು ಖಚಿತ.
ಇನ್ನು ಬಹಳ ಸಮಯದ ನಂತರ ಶಿಖರ್ ಧವನ್ ಟೀಮ್ ಇಂಡಿಯಾಕ್ಕೆ ಕಮ್ಬ್ಯಾಕ್ ಮಾಡಿದ್ದು ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾಗೆ ಉತ್ತಮ ಸಾಥ್ ನೀಡಿ ಅಜೇಯ 31 ರನ್ ಗಳಿಸಿದ್ದರು. ಕಳೆದ ಕೆಲವು ಪಂದ್ಯಗಳಲ್ಲಿ ಲಯ ಕಳೆದುಕೊಂಡಿದ್ದ ರೋಹಿತ್, ಮೊದಲ ಹಣಾಹಣಿಯಲ್ಲಿ ಅಜೇಯ ಅರ್ಧಶತಕ ಗಳಿಸಿರುವುದು ಸಮಾಧಾನಕರ ಬೆಳವಣಿಗೆ. ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜ, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ ಕೂಡ ಕಣಕ್ಕಿಳಿಯಲಿದ್ದಾರೆ. ಇತ್ತ ಬೂಮ್ರಾ, ಶಮಿ ಮತ್ತು ಪ್ರಸಿದ್ಧ ಕೃಷ್ಣ, ಚಹಲ್ ಅವರು ಸ್ಥಾನ ಉಳಿಸಿಕೊಳ್ಳುವುದು ಖಚಿತ.
ಇತ್ತ ಜೋಸ್ ಬಟ್ಲರ್ಗೆ ಇದು ಮತ್ತೊಂದು ಅಗ್ನಿಪರೀಕ್ಷೆ. ಇಂಗ್ಲೆಂಡ್ ತಂಡದ ನಾಯಕನಾಗಿದ್ದ ಇಯಾನ್ ಮಾರ್ಗನ್ ನಾಯಕತ್ವ ತೊರೆದ ಬಳಿಕ ಕ್ಯಾಪ್ಟನ್ ಆಗಿರುವ ಬಟ್ಲರ್ ಟಿ20 ಸರಣಿ ಕಳೆದುಕೊಂಡಿದ್ದರು. ಈಗ ಏಕದಿನ ಸರಣಿ ವಶಪಡಿಸಿಕೊಳ್ಳಬೇಕಾದರೆ ಇಂದು ಗೆಲ್ಲಲೇ ಬೇಕಿದೆ. ಆಂಗ್ಲರ ತಂಡದಲ್ಲಿ ಬೆನ್ ಸ್ಟೋಕ್ಸ್, ಜೋ ರೂಟ್, ಬೈರ್ಸ್ಟೋರಂತಹ ಬಲಿಷ್ಠ ಆಟಗಾರರಿದ್ದರು ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವುತ್ತಿದೆ. ಬ್ಯಾಟಿಂಗ್ ವೈಫಲ್ಯವನ್ನು ಸರಿಪಡಿಸಿಕೊಂಡರೆ, ಈ ಪಂದ್ಯದಲ್ಲಿ ಜಯಿಸುವ ಆಸೆ ಈಡೇರಬಹುದು.
ಲಾರ್ಡ್ಸ್ ಕ್ರೀಡಾಂಗಣದ ಪಿಚ್ ಮೊದಲಿನಿಂದಲೂ ಸ್ವಿಂಗ್ ಎಸೆತಗಳಿಗೆ ಹೆಚ್ಚು ನೆರವು ನೀಡುವ ಗುಣ ಹೊಂದಿದೆ. ಇಲ್ಲಿ 70 ಏಕದಿನ ಪಂದ್ಯಗಳು ನಡೆದಿವೆ. ಅದರಲ್ಲಿ ಇಲ್ಲಿ ದಾಖಲಾದ ಗರಿಷ್ಠ ಮೊತ್ತ 238 ರನ್. ಎರಡೂ ಇನಿಂಗ್ಸ್‌ಗಳಲ್ಲಿಯೂ ಬೌಲರ್‌ಗಳು ಹೆಚ್ಚು ಯಶಸ್ಸು ಕಂಡಿದ್ದಾರೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯವು ಭಾರತೀಯ ಕಾಲಮಾನದ ಪ್ರಕಾರ ಸಂಜೆ 5:30 ಕ್ಕೆ ಪ್ರಾರಂಭವಾಗಲಿದೆ. ಪಂದ್ಯದ ನೇರ ಪ್ರಸಾರವನ್ನು ಸೋನಿ ನೆಟ್‌ವರ್ಕ್‌ನ ಚಾನೆಲ್‌ನಲ್ಲಿ ನೋಡಬಹುದು. ಜೊತೆಗೆ ಹಿಂದಿಯಲ್ಲಿ ಸೋನಿ ಟೆನ್ 3 ನಲ್ಲಿ ವೀಕ್ಷಿಸಬಹುದು.
Published On - 7:49 am, Thu, 14 July 22