IND vs PAK: ಹೀಗಾದಲ್ಲಿ ಭಾರತ ಮತ್ತು ಪಾಕಿಸ್ತಾನ್ ಮತ್ತೆ ಮುಖಾಮುಖಿ
Asia Cup 2025: ಏಷ್ಯಾಕಪ್ ಸೂಪರ್-4 ಹಂತದ 16ನೇ ಪಂದ್ಯದಲ್ಲಿ ಭಾರತ ತಂಡವು ಬಾಂಗ್ಲಾದೇಶ್ ತಂಡವನ್ನು ಎದುರಿಸಲಿದೆ. ಇನ್ನು ಸೆಪ್ಟೆಂಬರ್ 26 ರಂದು ನಡೆಯಲಿರುವ ಮ್ಯಾಚ್ನಲ್ಲಿ ಭಾರತ ಮತ್ತು ಶ್ರೀಲಂಕಾ ಮುಖಾಮುಖಿಯಾಗಲಿದೆ. ಈ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಗೆಲುವು ದಾಖಲಿಸಿದರೆ ನೇರವಾಗಿ ಫೈನಲ್ಗೆ ಪ್ರವೇಶಿಸಲಿದೆ.

ಏಷ್ಯಾಕಪ್ನ ಸೂಪರ್-4 ಹಂತದ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ತಂಡವನ್ನು ಬಗ್ಗು ಬಡಿದು ಟೀಮ್ ಇಂಡಿಯಾ ಶುಭಾರಂಭ ಮಾಡಿದೆ. ದುಬೈನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕ್ ತಂಡವು 20 ಓವರ್ಗಳಲ್ಲಿ 171 ರನ್ ಕಲೆಹಾಕಿದ್ದರು. ಈ ಸ್ಪರ್ಧಾತ್ಮಕ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ 18.5 ಓವರ್ಗಳಲ್ಲಿ 174 ರನ್ಗಳಿಸಿ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ಈ ಗೆಲುವಿನೊಂದಿಗೆ ಭಾರತ ತಂಡವು ತನ್ನ ಫೈನಲ್ ಹಾದಿಯನ್ನು ಸುಗಮಗೊಳಿಸಿದೆ. ಅದರಂತೆ ಮುಂದಿನ ಪಂದ್ಯದಲ್ಲಿ ಬಾಂಗ್ಲಾದೇಶ್ ಹಾಗೂ ಶ್ರೀಲಂಕಾ ತಂಡಗಳನ್ನು ಸೋಲಿಸಿದರೆ ನೇರವಾಗಿ ಫೈನಲ್ಗೆ ಎಂಟ್ರಿ ಕೊಡಬಹುದು. ಒಂದು ವೇಳೆ ಪಾಕಿಸ್ತಾನ್ ತಂಡವು ತನ್ನ ಮುಂದಿನ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದರೆ ಟೀಮ್ ಇಂಡಿಯಾವನ್ನು ಮತ್ತೆ ಎದುರಿಸಬಹುದು. ಅದು ಹೇಗೆಂದರೆ…
ಫೈನಲ್ ಹಾದಿ:
ಈ ಬಾರಿಯ ಏಷ್ಯಾಕಪ್ ಟೂರ್ನಿ ನಡೆಯುತ್ತಿರುವುದು ರೌಂಡ್ ರಾಬಿನ್ ಮಾದರಿಯಲ್ಲಿ. ಅಂದರೆ ಇಲ್ಲಿ ಯಾವುದೇ ಸೆಮಿಫೈನಲ್ ಪಂದ್ಯ ಇರುವುದಿಲ್ಲ. ಬದಲಾಗಿ ಸೂಪರ್-4 ಹಂತದ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಫೈನಲ್ ಆಡಲಿವೆ.
ಇದೀಗ ಟೀಮ್ ಇಂಡಿಯಾ ವಿರುದ್ಧ ಸೋತಿರುವ ಪಾಕಿಸ್ತಾನ್ ತಂಡವು ಬಾಂಗ್ಲಾದೇಶ್ ಹಾಗೂ ಶ್ರೀಲಂಕಾ ವಿರುದ್ಧ ಭರ್ಜರಿ ಜಯ ಸಾಧಿಸಬೇಕು. ಇತ್ತ ಭಾರತ ತಂಡವು ಶ್ರೀಲಂಕಾ ಹಾಗೂ ಬಾಂಗ್ಲಾದೇಶ್ ವಿರುದ್ಧ ಗೆಲ್ಲುವುದು ನಿಶ್ಚಿತ. ಇದರಿಂದ ಟೀಮ್ ಇಂಡಿಯಾದ ಪಾಯಿಂಟ್ಸ್ 6 ಆಗಲಿದೆ.
ಅತ್ತ ಬಾಂಗ್ಲಾದೇಶ್ ಹಾಗೂ ಶ್ರೀಲಂಕಾ ವಿರುದ್ಧ ಗೆಲ್ಲುವ ಮೂಲಕ ಪಾಕಿಸ್ತಾನ್ ತಂಡವು ಒಟ್ಟು 4 ಅಂಕಗಳನ್ನು ಪಡೆದು ಪಾಯಿಂಟ್ಸ್ ಟೇಬಲ್ನಲ್ಲಿ ದ್ವಿತೀಯ ಸ್ಥಾನ ಅಲಂಕರಿಸಬಹುದು. ಈ ಮೂಲಕ ಫೈನಲ್ಗೆ ಅರ್ಹತೆ ಪಡೆಯಲು ಅವಕಾಶ ಹೊಂದಿದೆ.
ಈ ಮೇಲಿನ ಸಮೀಕರಣದಂತೆ, ಅಂದರೆ ಪಾಕಿಸ್ತಾನ್ ತಂಡವು ಬಾಂಗ್ಲಾದೇಶ್ ಹಾಗೂ ಶ್ರೀಲಂಕಾ ತಂಡಗಳಿಗೆ ಸೋಲುಣಿಸಿದರೆ ಫೈನಲ್ನಲ್ಲಿ ಭಾರತ ತಂಡವನ್ನು ಎದುರಿಸುವುದು ಬಹುತೇಕ ಖಚಿತ. ಹೀಗಾಗಿ ಈ ಬಾರಿಯ ಏಷ್ಯಾಕಪ್ ಫೈನಲ್ನಲ್ಲಿ ಇಂಡೊ-ಪಾಕ್ ಕದನವನ್ನು ನಿರೀಕ್ಷಿಸಬಹುದು.
ಇದನ್ನೂ ಓದಿ: 331 ಎಸೆತಗಳಲ್ಲಿ ವಿಶ್ವ ದಾಖಲೆ ಬರೆದ ಅಭಿಷೇಕ್ ಶರ್ಮಾ
ಫೈನಲ್ ಪಂದ್ಯ ಯಾವಾಗ?
ಸೆಪ್ಟೆಂಬರ್ 24 ರಂದು ನಡೆಯಲಿರುವ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಟೀಮ್ ಇಂಡಿಯಾ ಸೆಪ್ಟೆಂಬರ್ 26 ರಂದು ಶ್ರೀಲಂಕಾ ತಂಡವನ್ನು ಎದುರಿಸಲಿದೆ. ಈ ಪಂದ್ಯದೊಂದಿಗೆ ಸೂಪರ್-4 ಹಂತದ ಮ್ಯಾಚ್ಗಳು ಪೂರ್ಣಗೊಳ್ಳಲಿದೆ. ಇದಾದ ಬಳಿಕ ಸೆಪ್ಟೆಂಬರ್ 28 ರಂದು ಫೈನಲ್ ಪಂದ್ಯ ಜರುಗಲಿದ್ದು, ಈ ಪಂದ್ಯಕ್ಕೆ ದುಬೈನ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ಆತಿಥ್ಯವಹಿಸಲಿದೆ.
