Asia Cup 2022: ಸೆಮಿಫೈನಲ್​ಗೆ ಎಂಟ್ರಿಕೊಟ್ಟ ಭಾರತ-ಪಾಕಿಸ್ತಾನ; ಉಭಯ ತಂಡಗಳ ನಡುವೆ ಮತ್ತೊಂದು ಪಂದ್ಯ?

| Updated By: ಪೃಥ್ವಿಶಂಕರ

Updated on: Oct 09, 2022 | 6:49 PM

Asia Cup 2022: ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳು ಈ ಟೂರ್ನಿಯಲ್ಲಿ ಇದುವರೆಗೆ 5 ಪಂದ್ಯಗಳನ್ನು ಆಡಿದ್ದು, ಎರಡೂ ತಂಡಗಳು ತಲಾ 4 ಪಂದ್ಯಗಳನ್ನು ಗೆದ್ದಿವೆ. ಹಾಗೆಯೇ ಈ ಉಭಯ ತಂಡಗಳು ತಲಾ 8 ಅಂಕಗಳೊಂದಿಗೆ ಮಹಿಳಾ ಏಷ್ಯಾಕಪ್‌ನಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿವೆ.

Asia Cup 2022: ಸೆಮಿಫೈನಲ್​ಗೆ ಎಂಟ್ರಿಕೊಟ್ಟ ಭಾರತ-ಪಾಕಿಸ್ತಾನ; ಉಭಯ ತಂಡಗಳ ನಡುವೆ ಮತ್ತೊಂದು ಪಂದ್ಯ?
india-pakistan
Follow us on

ಕ್ರಿಕೆಟ್ ಜಗತ್ತಿನಲ್ಲಿ ಈ ಅಕ್ಟೋಬರ್ ತಿಂಗಳು ಭಾರತ ಮತ್ತು ಪಾಕಿಸ್ತಾನ (India- Pakistan) ಕ್ರಿಕೆಟ್ ಅಭಿಮಾನಿಗಳಿಗೆ ಮನರಂಜನೆಯ ಮಹಾಪೂರವನ್ನೇ ಹರಿಸಿದೆ. ಅಕ್ಟೋಬರ್ 7 ರಂದು ಈ ಎರಡೂ ತಂಡಗಳು ಮಹಿಳಾ ಏಷ್ಯಾಕಪ್‌ನಲ್ಲಿ (Women’s Asia Cup) ಮುಖಾಮುಖಿಯಾಗಿದ್ದವು. ಈಗ ಅಕ್ಟೋಬರ್ 23 ರಂದು ಪುರುಷರ ಟಿ20 ವಿಶ್ವಕಪ್‌ನಲ್ಲಿ (T20 World Cup), ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ಮೆಲ್ಬೋರ್ನ್‌ನಲ್ಲಿ ನಡೆಯಲಿದೆ. ಆದರೆ ಅದಕ್ಕೂ ಮೊದಲು ಮುಂಬರುವ 6 ದಿನಗಳಲ್ಲಿ ಮತ್ತೊಮ್ಮೆ ಎರಡೂ ತಂಡಗಳು ಮುಖಾಮುಖಿಯಾಗುವ ಸಾಧ್ಯತೆ ಇದೆ. ವಾಸ್ತವವಾಗಿ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಮಹಿಳಾ ಏಷ್ಯಾಕಪ್​ನಲ್ಲಿ ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳು ಸೆಮಿಫೈನಲ್​ ತಲುಪಿದ್ದು, ಹೀಗಾಗಿ ಈ ಎರಡು ತಂಡಗಳು ಸೆಮಿಫೈನಲ್​ನಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ.

ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳು ಈ ಟೂರ್ನಿಯಲ್ಲಿ ಇದುವರೆಗೆ 5 ಪಂದ್ಯಗಳನ್ನು ಆಡಿದ್ದು, ಎರಡೂ ತಂಡಗಳು ತಲಾ 4 ಪಂದ್ಯಗಳನ್ನು ಗೆದ್ದಿವೆ. ಹಾಗೆಯೇ ಈ ಉಭಯ ತಂಡಗಳು ತಲಾ 8 ಅಂಕಗಳೊಂದಿಗೆ ಮಹಿಳಾ ಏಷ್ಯಾಕಪ್‌ನಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿವೆ. ಭಾರತ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಭಾರತದ ನಿವ್ವಳ ರನ್ ರೇಟ್ ಪಾಕಿಸ್ತಾನಕ್ಕಿಂತ ಉತ್ತಮವಾಗಿದೆ.

ಸೆಮಿಫೈನಲ್‌ನಲ್ಲೂ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗುವ ನಿರೀಕ್ಷೆ ಹೆಚ್ಚಿದೆ. ಆದಾಗ್ಯೂ, ಇದಕ್ಕಾಗಿ ಅಭಿಮಾನಿಗಳು ಸ್ವಲ್ಪ ಸಮಯ ಕಾಯಬೇಕಾಗಿದೆ. ಏಕೆಂದರೆ ಶ್ರೀಲಂಕಾ ತಂಡವು 6 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದು, ಥಾಯ್ಲೆಂಡ್ ತಂಡ ಕೂಡ ಅಷ್ಟೇ ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಹೀಗಾಗಿ ಭಾರತ ಮತ್ತು ಪಾಕಿಸ್ತಾನ ಸೆಮಿಫೈನಲ್‌ನಲ್ಲಿ ಆಡುತ್ತವೆಯೇ ಅಥವಾ ಇಲ್ಲವೇ ಎಂಬುದು ಈ ಉಭಯ ತಂಡಗಳ ಕೊನೆಯ ಪಂದ್ಯದ ನಂತರವಷ್ಟೇ ನಿರ್ಧಾರವಾಗಲಿದೆ.

ಅಕ್ಟೋಬರ್ 13 ರಂದು ಸೆಮಿಫೈನಲ್ ಪಂದ್ಯ

ಭಾರತ ಹಿಂದಿನ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 59 ರನ್‌ಗಳಿಂದ ಸೋಲಿಸಿದರೆ, ಪಾಕಿಸ್ತಾನ ಭಾನುವಾರ ಯುಎಇ ವಿರುದ್ಧ 71 ರನ್‌ಗಳ ಜಯದೊಂದಿಗೆ ಸೆಮಿಫೈನಲ್‌ನಲ್ಲಿ ಸ್ಥಾನ ಪಡೆದುಕೊಂಡಿತು. ಈಗ ಭಾರತ ತಂಡ ಥಾಯ್ಲೆಂಡ್ ವಿರುದ್ಧ ಮತ್ತು ಪಾಕಿಸ್ತಾನ ತಂಡ ಶ್ರೀಲಂಕಾ ವಿರುದ್ಧ ಆಡಲಿದೆ. ಇದಾದ ಬಳಿಕ ಮಹಿಳೆಯರ ಏಷ್ಯಾಕಪ್​ನ ಎರಡೂ ಸೆಮಿಫೈನಲ್ ಪಂದ್ಯಗಳು ಅಕ್ಟೋಬರ್ 13ರಂದು ನಡೆಯಲಿದ್ದು, ಅಕ್ಟೋಬರ್ 15ರಂದು ಪ್ರಶಸ್ತಿ ಸುತ್ತಿನ ಪಂದ್ಯ ನಡೆಯಲಿದೆ.

ಪಾಕಿಸ್ತಾನ ಎದುರು ಸೋತಿದ್ದ ಭಾರತ

ಈ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಒಮ್ಮೆ ಮುಖಾಮುಖಿಯಾಗಿದ್ದು, ಈ ಪಂದ್ಯದಲ್ಲಿ ಪಾಕಿಸ್ತಾನ 13 ರನ್‌ಗಳಿಂದ ಗೆದ್ದಿದೆ. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಭಾರತಕ್ಕೆ 138 ರನ್‌ಗಳ ಗುರಿ ನೀಡಿತ್ತು. ಇದಕ್ಕೆ ಉತ್ತರವಾಗಿ ಗುರಿ ಬೆನ್ನಟ್ಟಿದ ಭಾರತ ತಂಡ 19.4 ಓವರ್‌ಗಳಲ್ಲಿ 124 ರನ್‌ಗಳಿಗೆ ಆಲೌಟ್ ಆಗಿ 14 ರನ್​ಗಳಿಂದ ಸೋಲೊಪ್ಪಿಕೊಂಡಿತ್ತು.

Published On - 6:49 pm, Sun, 9 October 22