ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಇದೀಗ ಕೊನೆಯ ಹಂತಕ್ಕೆ ಬಂದಿದೆ. ಸರಣಿಯಲ್ಲಿ ಈಗಾಗಲೇ 4 ಪಂದ್ಯಗಳು ನಡೆದಿದ್ದು, ಆತಿಥೇಯ ಆಸ್ಟ್ರೇಲಿಯಾ 2-1 ರ ಮುನ್ನಡೆ ಕಾಯ್ದುಕೊಂಡಿದೆ. ಹೀಗಾಗಿ ನಾಳೆಯಿಂದ ಸಿಡ್ನಿಯಲ್ಲಿ ಆರಂಭವಾಗಲಿರುವ ಸರಣಿ ನಿರ್ಧಾರಕ ಪಂದ್ಯವನ್ನು ಗೆದ್ದುಕೊಳ್ಳುವುದರೊಂದಿಗೆ ಸರಣಿಯನ್ನು ಸಮಬಲಗೊಳಿಸಲು ಟೀಂ ಇಂಡಿಯಾ ಯತ್ನಿಸಲಿದೆ. ಇದರ ಜೊತೆಗೆ ಹೊಸ ವರ್ಷವನ್ನು ಗೆಲುವಿನೊಂದಿಗೆ ಆರಂಭಿಸಲು ಭಾರತ ಕಾತರದಲ್ಲಿದೆ. ಈ ಪಂದ್ಯವನ್ನು ಭಾರತ ಗೆದ್ದರೆ ಸರಣಿ ಡ್ರಾ ಆಗಲಿದ್ದು, ಟೀಂ ಇಂಡಿಯಾದ ಬಳಿಯೇ ಟ್ರೋಫಿ ಉಳಿದುಕೊಳ್ಳಲಿದೆ. ಏಕೆಂದರೆ ಕಳೆದ ಬಾರಿ ನಡೆದಿದ್ದ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಗೆದ್ದುಕೊಳ್ಳುವಲ್ಲಿ ಭಾರತ ಯಶಸ್ವಿಯಾಗಿತ್ತು.
ವಾಸ್ತವವಾಗಿ ನಾಲ್ಕನೇ ಟೆಸ್ಟ್‌ನಲ್ಲಿ ಭಾರತ ಸೋತಾಗಿನಿಂದ ತಂಡದ ವಿರುದ್ಧ ಬಿಸಿಸಿಐ ಅಸಮಾಧಾನಗೊಂಡಿದೆ. ಇದರ ಜೊತೆಗೆ ಮುಖ್ಯ ಕೋಚ್ ಗೌತಮ್ ಗಂಭೀರ್ ಕೂಡ ಆಟಗಾರರ ಪ್ರದರ್ಶನದಿಂದ ಬೇಸರಗೊಂಡಿದ್ದಾರೆ ಎಂದು ವರದಿಯಾಗಿದೆ. ಇದರ ನಡುವೆ ಕೊನೆಯ ಟೆಸ್ಟ್ ಪಂದ್ಯದಿಂದ ರೋಹಿತ್ ಹೊರಗುಳಿಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ರೋಹಿತ್ ನಿರ್ಗಮನದಿಂದಾಗಿ ಮತ್ತೆ ಜಸ್ಪ್ರಿತ್ ಬುಮ್ರಾಗೆ ನಾಯಕತ್ವದ ಪಟ್ಟ ಕಟ್ಟಿದ್ದು, ಶುಭ್ಮನ್ ಗಿಲ್ ಅವರನ್ನು ಆಡುವ ಹನ್ನೊಂದರ ಬಳಗದಲ್ಲಿ ಕಾಣಬಹುದು ಎಂದು ವರದಿಯಾಗಿದೆ. ಇದಲ್ಲದೆ ವೇಗಿ ಆಕಾಶ್ ದೀಪ್ ಕೂಡ ಗಾಯದಿಂದಾಗಿ ಐದನೇ ಟೆಸ್ಟ್ ಆಡುತ್ತಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ. ಹೀಗಾಗಿ ಐದನೇ ಟೆಸ್ಟ್‌ನಲ್ಲಿ ತಂಡದಲ್ಲಿ ಸಾಕಷ್ಟು ಬದಲಾವಣೆಗಳಾಗುವುದು ಖಚಿತವಾಗಿದೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕೊನೆಯ ಟೆಸ್ಟ್ ಪಂದ್ಯ ಶುಕ್ರವಾರದಿಂದ ಅಂದರೆ ಜನವರಿ 3 ರಿಂದ ಆರಂಭವಾಗಲಿದೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದನೇ ಪಂದ್ಯವು ಸಿಡ್ನಿಯ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದನೇ ಟೆಸ್ಟ್ ಪಂದ್ಯ ಭಾರತೀಯ ಕಾಲಮಾನ ಬೆಳಗ್ಗೆ 5:00 ಗಂಟೆಗೆ ಆರಂಭವಾಗಲಿದೆ. ಇದಕ್ಕೂ ಅರ್ಧ ಗಂಟೆ ಮೊದಲು ಅಂದರೆ ಬೆಳಗ್ಗೆ 4:30ಕ್ಕೆ ಟಾಸ್ ನಡೆಯಲಿದೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕೊನೆಯ ಟೆಸ್ಟ್ ಪಂದ್ಯ ಸ್ಟಾರ್ ಸ್ಪೋರ್ಟ್ಸ್ನಲ್ಲಿ ಪ್ರಸಾರವಾಗಲಿದೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದನೇ ಟೆಸ್ಟ್ ಪಂದ್ಯವನ್ನು ಡಿಸ್ನಿ ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿ ಆನ್‌ಲೈನ್‌ನಲ್ಲಿ ವೀಕ್ಷಿಸಬಹುದು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ