ದಾಖಲೆಯ ಶತಕ ಸಿಡಿಸಿದ ರೋಹಿತ್; ವಿಶ್ವಕಪ್​ನಲ್ಲಿ ಗೆಲುವಿನ ನಾಗಾಲೋಟ ಮುಂದುವರಿದ ಭಾರತ

|

Updated on: Oct 12, 2023 | 6:05 AM

India vs Afghanistan, ICC World Cup 2023: ವಿಶ್ವಕಪ್​ನಲ್ಲಿ ಟೀಂ ಇಂಡಿಯಾದ ಗೆಲುವಿನ ಓಟ ಮುಂದುವರಿದಿದೆ. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ರೋಹಿತ್ ಬ್ರಿಗೇಡ್ 8 ವಿಕೆಟ್​ಗಳಿಂದ ಅಫ್ಘಾನಿಸ್ತಾನವನ್ನು ಮಣಿಸಿತು. ಇದು ಟೀಂ ಇಂಡಿಯಾದ ಸತತ ಎರಡನೇ ಗೆಲುವಾಗಿದೆ.

ದಾಖಲೆಯ ಶತಕ ಸಿಡಿಸಿದ ರೋಹಿತ್; ವಿಶ್ವಕಪ್​ನಲ್ಲಿ ಗೆಲುವಿನ ನಾಗಾಲೋಟ ಮುಂದುವರಿದ ಭಾರತ
ಭಾರತ- ಅಫ್ಘಾನಿಸ್ತಾನ
Follow us on

ವಿಶ್ವಕಪ್​ನಲ್ಲಿ(ICC world cup 2023) ಟೀಂ ಇಂಡಿಯಾದ ಗೆಲುವಿನ ಓಟ ಮುಂದುವರಿದಿದೆ. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ರೋಹಿತ್ ಬ್ರಿಗೇಡ್ 8 ವಿಕೆಟ್​ಗಳಿಂದ ಅಫ್ಘಾನಿಸ್ತಾನವನ್ನು (India Vs Afghanistan) ಮಣಿಸಿತು. ಇದು ಟೀಂ ಇಂಡಿಯಾದ ಸತತ ಎರಡನೇ ಗೆಲುವಾಗಿದೆ. ಇದಕ್ಕೂ ಮುನ್ನ ಆಸ್ಟ್ರೇಲಿಯವನ್ನು 6 ವಿಕೆಟ್‌ಗಳಿಂದ ಸೋಲಿಸಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ತಂಡ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 272 ರನ್ ಕಲೆಹಾಕಿತು. 273 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾ 35 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಸಾಧಿಸಿತು. ಭಾರತದ ಪರ ನಾಯಕ ರೋಹಿತ್ ಶರ್ಮಾ (Rohit Sharma) 84 ಎಸೆತಗಳನ್ನು ಎದುರಿಸಿ 16 ಬೌಂಡರಿ ಮತ್ತು 5 ಸಿಕ್ಸರ್‌ ನೆರವಿನಿಂದ 131 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ವಿರಾಟ್ ಕೊಹ್ಲಿ 55 ಮತ್ತು ಶ್ರೇಯಸ್ ಅಯ್ಯರ್ 25 ರನ್ ಗಳಿಸಿ ಅಜೇಯರಾಗಿ ಉಳಿದರು.

ಸ್ಫೋಟಕ ಆರಂಭ

273 ರನ್‌ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ಸಿಕ್ಕಿತು. ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಮೊದಲ ವಿಕೆಟ್‌ಗೆ ಶತಕದ ಜೊತೆಯಾಟ ನಡೆಸಿದರು. ಇಬ್ಬರೂ 18.4 ಓವರ್‌ಗಳಲ್ಲಿ 156 ರನ್ ಸೇರಿಸಿದರು. ಈ ವೇಳೆ 47 ಎಸೆತಗಳಲ್ಲಿ 47 ರನ್ ಗಳಿಸಿದ್ದ ಇಶಾನ್, ರಶೀದ್ ಖಾನ್ ಎಸೆತದಲ್ಲಿ ಔಟಾದರು. ಆದರೆ ಒಂದು ತುದಿಯಲ್ಲಿ ಅಬ್ಬರಿಸುತ್ತಿದ್ದ ರೋಹಿತ್ ಶರ್ಮಾ ಅಫ್ಘಾನ್ ಬೌಲರ್‌ಗಳ ಬೆವರಿಳಿಸುವುದನ್ನು ಮುಂದುವರೆಸಿ ಕೇವಲ 63 ಎಸೆತಗಳಲ್ಲಿ ಶತಕ ಪೂರೈಸಿದರು. ಅಂತಿಮವಾಗಿ ರೋಹಿತ್ 84 ಎಸೆತಗಳಲ್ಲಿ 131 ರನ್ ಗಳಿಸಿ ರಶೀದ್ ಖಾನ್ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್​ಗೆ ಮರಳಿದರು.

ಚಿನ್ನಕ್ಕಾಗಿ ಭಾರತ- ಅಫ್ಘಾನ್ ನಡುವೆ ಫೈಟ್; ಫೈನಲ್ ಪಂದ್ಯದ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ?

ಕೊಹ್ಲಿಯ ಸತತ 2ನೇ ಅರ್ಧಶತಕ

ಆರಂಭಿಕರಿಬ್ಬರನ್ನು ಹೊರತುಪಡಿಸಿ ಮ್ಯಾಚ್ ವಿನ್ನಿಂಗ್ಸ್ ಆಡಿದ ಮಾಜಿ ನಾಯಕ ವಿರಾಟ್ ಕೊಹ್ಲಿ 55 ರನ್​ಗಳ ಅಜೇಯ ಇನ್ನಿಂಗ್ಸ್ ಆಡುವ ಮೂಲಕ ಈ ವಿಶ್ವಕಪ್‌ನಲ್ಲಿ ಸತತ ಎರಡನೇ ಅರ್ಧಶತಕ ಸಿಡಿಸಿದರು. ಕೊಹ್ಲಿ ಈ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾ ವಿರುದ್ಧ 85 ರನ್‌ಗಳ ಇನಿಂಗ್ಸ್‌ ಆಡಿದ್ದರು. ಕೊಹ್ಲಿಗೆ ಸಾಥ್ ನೀಡಿದ ಶ್ರೇಯಸ್ ಅಯ್ಯರ್ ಕೂಡ ಫಾರ್ಮ್‌ಗೆ ಮರಳಿ 23 ಎಸೆತಗಳಲ್ಲಿ 25 ರನ್ ಸಿಡಿಸಿದರು. ಕೊಹ್ಲಿ ಮತ್ತು ಅಯ್ಯರ್ ಮೂರನೇ ವಿಕೆಟ್‌ಗೆ 68 ರನ್‌ಗಳ ಜೊತೆಯಾಟವನ್ನೂ ಹಂಚಿಕೊಂಡರು.

ಅಫ್ಘಾನಿಸ್ತಾನದ ಇನ್ನಿಂಗ್ಸ್

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ನಾಯಕ ಹಶ್ಮತುಲ್ಲಾ ಶಾಹಿದಿ ಅವರ 80 ರನ್‌ಗಳ ಇನ್ನಿಂಗ್ಸ್‌ನ ಆಧಾರದ ಮೇಲೆ ಎಂಟು ವಿಕೆಟ್‌ಗೆ 272 ರನ್ ಗಳಿಸಿತು. ಶಾಹಿದಿ ತಮ್ಮ 85 ಎಸೆತಗಳ ಇನ್ನಿಂಗ್ಸ್‌ನಲ್ಲಿ ಎಂಟು ಬೌಂಡರಿ ಮತ್ತು ಒಂದು ಸಿಕ್ಸರ್‌ನೊಂದಿಗೆ ನಾಲ್ಕನೇ ವಿಕೆಟ್‌ಗೆ ಅಜ್ಮತುಲ್ಲಾ ಒಮರ್ಜಾಯ್ ಅವರೊಂದಿಗೆ 121 ರನ್‌ಗಳ ಜೊತೆಯಾಟವನ್ನು ಆಡಿದರು. ಒಮರ್ಜಾಯ್ ತಮ್ಮ 69 ಎಸೆತಗಳ ಇನ್ನಿಂಗ್ಸ್‌ನಲ್ಲಿ ಎರಡು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿದರು.

ದುಬಾರಿಯಾದ ಸಿರಾಜ್

ಭಾರತದ ಪರ ಬೌಲಿಂಗ್​ನಲ್ಲಿ ಮಿಂಚಿದ ಜಸ್ಪ್ರೀತ್ ಬುಮ್ರಾ 10 ಓವರ್‌ಗಳಲ್ಲಿ 39 ರನ್‌ ನೀಡಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರು. ಉಪನಾಯಕ ಹಾರ್ದಿಕ್ ಪಾಂಡ್ಯ ಎರಡು ವಿಕೆಟ್ ಪಡೆದರೆ, ಕುಲ್ದೀಪ್ ಯಾದವ್ ಮತ್ತು ಶಾರ್ದೂಲ್ ಠಾಕೂರ್ ತಲಾ ಒಂದು ವಿಕೆಟ್ ಪಡೆದರು. ಮೊಹಮ್ಮದ್ ಸಿರಾಜ್ ಒಂಬತ್ತು ಓವರ್‌ಗಳಲ್ಲಿ 76 ರನ್ ಬಿಟ್ಟುಕೊಟ್ಟು ಕೊಂಚ ದುಬಾರಿಯಾದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ