India vs New Zealand: ಕಿವೀಸ್ ಕಿವಿ ಹಿಂಡಿದ ರೋಹಿತ್ ಪಡೆ: ಭಾರತೀಯರ ಮಾರಕ ದಾಳಿಗೆ ದಂಗಾದ ನ್ಯೂಜಿಲೆಂಡ್
India vs New Zealand 3rd T20I: ನ್ಯೂಜಿಲೆಂಡ್ ವಿರುದ್ಧದ ಕೊನೇ ಟಿ20 ಪಂದ್ಯದಲ್ಲೂ ಟಾಸ್ ಗೆಲ್ಲುವಲ್ಲಿ ಯಶಸ್ವಿಯಾದ ನಾಯಕ ರೋಹಿತ್ ಶರ್ಮಾ ಈ ಬಾರಿ ಬ್ಯಾಟಿಂಗ್ ಆಯ್ದುಕೊಂಡರು. ಕೆಎಲ್ ರಾಹುಲ್ಗೆ ವಿಶ್ರಾಂತಿ ನೀಡಿದ ಪರಿಣಾಮ ರೋಹಿತ್ ಜೊತೆ ಇಶಾನ್ ಕಿಶನ್ ಇನ್ನಿಂಗ್ಸ್ ಆರಂಭಿಸಿದರು.
ನಿರೀಕ್ಷೆಯಂತೆ ಭಾರತ ತಂಡ ನ್ಯೂಜಿಲೆಂಡ್ (India vs New Zealand) ವಿರುದ್ಧದ ಟಿ20 ಸರಣಿಯನ್ನು (T20I Series) ಕ್ಲೀನ್ ಸ್ವೀಪ್ ಮಾಡಿದೆ. ಭಾನುವಾರ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಬರೋಬ್ಬರಿ 73 ರನ್ಗಳ ಗೆಲುವು ಸಾಧಿಸುವ ಮೂಲಕ ಭಾರತ 3-0 ಅಂತರದಲ್ಲಿ ಮುನ್ನಡೆ ಸಾಧಿಸಿ ವೈಟ್ ವಾಷ್ ಸಾಧನೆ ಮಾಡಿದೆ. ಟೀಮ್ ಇಂಡಿಯಾದ (Team Indiaa) ಬ್ಯಾಟಿಂಗ್ ಅಬ್ಬರಕ್ಕೆ ಬ್ರೇಕ್ ಹಾಕಲು ಮತ್ತೊಮ್ಮೆ ನ್ಯೂಜಿಲೆಂಡ್ ವಿಫಲವಾಯಿತು. ಬ್ಯಾಟಿಂಗ್ನಲ್ಲೂ ಕಿವೀಸ್ ಅಕ್ಷರ್ ಪಟೇಲ್ (Axar Patel) ಸ್ಪಿನ್ ಮೋಡಿಗೆ ಸಿಲುಕಿ ತಬ್ಬಿಬ್ಬಾಯಿತು. ಈ ಮೂಲಕ ನಾಯಕನಾಗಿ ರೋಹಿತ್ ಶರ್ಮಾ (Rohit Sharma) ಮತ್ತು ಕೋಚ್ ಆಗಿ ರಾಹುಲ್ ದ್ರಾವಿಡ್ (Rahul Dravid) ತಮ್ಮ ಕಾರ್ಯವನ್ನು ಅದ್ಭುತವಾಗಿ ಶುರು ಮಾಡಿದ್ದು, ಇವರ ಮೇಲೆ ದುಪ್ಪಟ್ಟು ನಿರೀಕ್ಷೆ ಹುಟ್ಟುಕೊಂಡಿದೆ.
ಕೊನೇ ಪಂದ್ಯದಲ್ಲೂ ಟಾಸ್ ಗೆಲ್ಲುವಲ್ಲಿ ಯಶಸ್ವಿಯಾದ ನಾಯಕ ರೋಹಿತ್ ಶರ್ಮಾ ಈ ಬಾರಿ ಬ್ಯಾಟಿಂಗ್ ಆಯ್ದುಕೊಂಡರು. ಕೆಎಲ್ ರಾಹುಲ್ಗೆ ವಿಶ್ರಾಂತಿ ನೀಡಿದ ಪರಿಣಾಮ ರೋಹಿತ್ ಜೊತೆ ಇಶಾನ್ ಕಿಶನ್ ಇನ್ನಿಂಗ್ಸ್ ಆರಂಭಿಸಿದರು. ಈ ಜೋಡಿ ಸ್ಫೋಟಕ ಬ್ಯಾಟಿಂಗ್ ನಡೆಸಿತು. ಪವರ್ ಪ್ಲೇಯ 6 ಓವರ್ನಲ್ಲಿ ಇವರಿಬ್ಬರು 60ಕ್ಕೂ ಹೆಚ್ಚು ರನ್ ಗಳಿಸಿದರು. ಆದರೆ, ಇಶಾನ್ ಔಟಾದ ಬಳಿಕ ಭಾರತಕ್ಕೆ ಒಳ್ಳೆಯ ಜೊತೆಯಾಟ ಬರದೇ ಹೋದರೂ ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್ ಮತ್ತು ಬಾಲಂಗೋಚಿಗಳಾದ ಹರ್ಷಲ್ ಪಟೇಲ್ ಹಾಗೂ ದೀಪಕ್ ಚಾಹರ್ ಅವರು ರನ್ ಓಟ ಕಡಿಮೆಯಾಗದಂತೆ ನೋಡಿಕೊಂಡಿತು.
ರೋಹಿತ್ ಶರ್ಮಾ 31 ಎಸೆತಗಳಲ್ಲಿ 56 ರನ್ ಕಲೆಹಾಕಿದರೆ ಇಶಾನ್ ಕಿಶನ್ 21 ಎಸೆತಗಳಲ್ಲಿ 29 ರನ್ ಕಲೆ ಹಾಕಿದರು. ನಂತರ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸೂರ್ಯಕುಮಾರ್ ಯಾದವ್ 4 ಎಸೆತಗಳಲ್ಲಿ ಶೂನ್ಯ ಸುತ್ತಿ ಪೆವಿಲಿಯನ್ ಸೇರಿಕೊಂಡರೆ, ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಿಷಭ್ ಪಂತ್ 4 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಶ್ರೇಯಸ್ ಅಯ್ಯರ್ 25 ರನ್ ಗಳಿಸಿ ಔಟ್ ಆದರೆ, ವೆಂಕಟೇಶ ಅಯ್ಯರ್ 20 ರನ್ ಕಲೆ ಹಾಕಿದರು. ಇನ್ನುಳಿದಂತೆ ಹರ್ಷಲ್ ಪಟೇಲ್ 18 ರನ್, ಅಕ್ಷರ್ ಪಟೇಲ್ ಅಜೇಯ 2 ರನ್ ಮತ್ತು ಕೊನೆಯಲ್ಲಿ ಹೊಡಿ ಬಡಿ ಆಟವಾಡಿದ ದೀಪಕ್ ಚಹರ್ 8 ಎಸೆತಗಳಲ್ಲಿ ಅಜೇಯ 21 ರನ್ ಚಚ್ಚಿದರು.
ಅಂತಿಮವಾಗಿ ಭಾರತ 20 ಓವರ್ಗಳಲ್ಲಿ 184 ರನ್ ಕಲೆಹಾಕಿತು. ಮಿಚೆಲ್ ಸ್ಯಾಂಟ್ನರ್ 4 ಓವರ್ ಬೌಲಿಂಗ್ ಮಾಡಿ 27 ರನ್ ನೀಡಿ 3 ವಿಕೆಟ್ ಪಡೆದರು. ದೊಡ್ಡ ಟಾರ್ಗೆಟ್ ಬೆನ್ನಟ್ಟಿದ ನ್ಯೂಜಿಲೆಂಡ್ 17.2 ಓವರ್ ಗಳಲ್ಲಿ 111 ರನ್ಗೆ ಆಲೌಟ್ ಹೀನಾಯ ಸೋಲುಂಡಿತು. ಕಿವೀಸ್ ಆರಂಭಿಕ ಬ್ಯಾಟರ್ ಮಾರ್ಟಿನ್ ಗಪ್ಟಿಲ್(51, 36 ಎಸೆತ, 4 ಬೌಂಡರಿ, 4 ಸಿಕ್ಸರ್) ಸರ್ವಾಧಿಕ ಸ್ಕೋರ್ ಗಳಿಸಿದರು. ಟಿಮ್ ಸೆಫರ್ಟ್(17) ಹಾಗೂ ಫರ್ಗುಸನ್ (14) ಎರಡಂಕೆಯ ಸ್ಕೋರ್ ಗಳಿಸಿದರು. ಅಗ್ರ ಕ್ರಮಾಂಕದ ಆಟಗಾರರಾದ ಮಾರ್ಕ್ ಚಾಪ್ ಮನ್ ಹಾಗೂ ಗ್ಲೆನ್ ಫಿಲಿಪ್ಸ್ ಖಾತೆ ತೆರೆಯಲು ವಿಫಲರಾದರು.
ಅಕ್ಷರ್ ಪಟೇಲ್ 3 ಓವರ್ ಬೌಲಿಂಗ್ ಮಾಡಿ ಕೇವಲ 9 ರನ್ ನೀಡಿ 3 ವಿಕೆಟ್ ಕಿತ್ತು ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು. ಹರ್ಷಲ್ ಪಟೇಲ್ 3 ಓವರ್ನಲ್ಲಿ 26 ರನ್ ನೀಡಿ 2 ವಿಕೆಟ್ ಪಡೆದು ಕಿವೀಸ್ ಆಲೌಟ್ ಆಗಲು ನೆರವಾದರು. ಟೂರ್ನಿಯುದ್ದಕ್ಕೂ ಮಿಂಚಿದ ರೋಹಿತ್ ಶರ್ಮಾ ಸರಣಿಶ್ರೇಷ್ಠ ತಮ್ಮದಾಗಿಸಿದರು. ಭಾರತ ಇನ್ನು ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಪಂದ್ಯವನ್ನು ಆಡಲಿದೆ. ಇದು ನವೆಂಬರ್ 25 ರಿಂದ ಕಾನ್ಪುರದ ಗ್ರೀನ್ ಪಾರ್ಕ್ನಲ್ಲಿ ಶುರುವಾಗಲಿದೆ.
(India beat New Zealand by 73 runs to secure a 3-0 clean sweep in the T20I series)