ವೆಸ್ಟ್ ಇಂಡೀಸ್ (WI vs IND) ವಿರುದ್ದ 2ನೇ ಏಕದಿನ ಪಂದ್ಯದಲ್ಲೂ ಟೀಮ್ ಇಂಡಿಯಾ (Team India) ರೋಚಕ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿದೆ. ಮೊದಲ ಪಂದ್ಯದಲ್ಲಿ 3 ರನ್ಗಳಿಂದ ಜಯ ಸಾಧಿಸಿದ್ದ ಟೀಮ್ ಇಂಡಿಯಾ, 2ನೇ ಪಂದ್ಯದಲ್ಲೂ ಭರ್ಜರಿ ಪ್ರದರ್ಶನ ನೀಡಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡದ ನಾಯಕ ನಿಕೋಲಸ್ ಪೂರನ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದರು. ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಬ್ಯಾಟ್ ಬೀಸಿದ ಆರಂಭಿಕ ಆಟಗಾರ ಶಾಯ್ ಹೋಪ್ ಟೀಮ್ ಇಂಡಿಯಾ ಬೌಲರ್ಗಳ ಬೆಂಡೆತ್ತಿದರು. 135 ಎಸೆತಗಳನ್ನು ಎದುರಿಸಿದ ಹೋಪ್ ಅಂತಿಮವಾಗಿ 3 ಸಿಕ್ಸ್ ಹಾಗೂ 8 ಫೋರ್ನೊಂದಿಗೆ 115 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 6 ವಿಕೆಟ್ ನಷ್ಟಕ್ಕೆ 311 ಕ್ಕೆ ತಂದು ನಿಲ್ಲಿಸಿದರು.
ಈ ಬೃಹತ್ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ. ನಾಯಕ ಶಿಖರ್ ಧವನ್ ಕೇವಲ 13 ರನ್ಗಳಿಸಿ ವಿಕೆಟ್ ಒಪ್ಪಿಸಿದ್ದರು. ಆದರೆ ಈ ಹಂತದಲ್ಲಿ ಜೊತೆಗೂಡಿದ ಶುಭ್ಮನ್ ಗಿಲ್ ಹಾಗೂ ಶ್ರೇಯಸ್ ಅಯ್ಯರ್ ತಂಡಕ್ಕೆ ಆಸರೆಯಾದರು. ಆದರೆ 43 ರನ್ಗಳಿಸಿದ್ದ ವೇಳೆ ಗಿಲ್ ಕೈಲ್ ಮೇಯರ್ಸ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಮತ್ತೊಂದೆಡೆ ಶ್ರೇಯಸ್ ಅಯ್ಯರ್ 71 ಎಸೆತಗಳಲ್ಲಿ 63 ರನ್ಗಳ ಉಪಯುಕ್ತ ಕಾಣಿಕೆ ನೀಡಿದರು. ಆ ಬಳಿಕ ಬಂದ ಸಂಜು ಸ್ಯಾಮ್ಸನ್ (54) ಅರ್ಧಶತಕ ಶತಕ ಬಾರಿಸಿದ ತಂಡದ ಮೊತ್ತವನ್ನು ಹೆಚ್ಚಿಸಿದರು. ಇದಾಗ್ಯೂ ಪಂದ್ಯವು ವೆಸ್ಟ್ ಇಂಡೀಸ್ ಕೈಯಲ್ಲಿತ್ತು.
ಆದರೆ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಆಲ್ರೌಂಡರ್ ಅಕ್ಷರ್ ಪಟೇಲ್ ಇಡೀ ಪಂದ್ಯದ ಚಿತ್ರಣ ಬದಲಿಸಿದರು. ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಅಕ್ಷರ್ ಸಿಕ್ಸ್-ಫೋರ್ಗಳ ಸುರಿಮಳೆಗೈದರು. ಅಲ್ಲದೆ ಸಿಡಿಲಬ್ಬರದ ಅರ್ಧಶತಕ ಸಿಡಿಸಿ ಮಿಂಚಿದರು. ಪರಿಣಾಮ ಕೊನೆಯ ಓವರ್ನಲ್ಲಿ ಟೀಮ್ ಇಂಡಿಯಾಗೆ ಗೆಲ್ಲಲು 8 ರನ್ಗಳ ಅವಶ್ಯಕತೆಯಿತ್ತು. ಅತ್ತ ವೆಸ್ಟ್ ಇಂಡೀಸ್ಗೆ 2 ವಿಕೆಟ್ ಪಡೆದರೆ ಸಾಕಿತ್ತು.
ಕ್ರೀಸ್ನಲ್ಲಿ ಇದ್ದಿದ್ದು ಅಕ್ಷರ್ ಪಟೇಲ್ ಹಾಗೂ ಮೊಹಮ್ಮದ್ ಸಿರಾಜ್. ಕೈಲ್ ಮೇಯರ್ಸ್ ಎಸೆದ 50ನೇ ಓವರ್ನ ಮೊದಲ ಎಸೆತದಲ್ಲಿ ಯಾವುದೇ ರನ್ ಇಲ್ಲ. 2ನೇ ಎಸೆತದಲ್ಲಿ ಅಕ್ಷರ್ ಪಟೇಲ್ ಸಿಂಗಲ್ ತೆಗೆದರು. 3ನೇ ಎಸೆತದಲ್ಲಿ ಸಿರಾಜ್ ಕೂಡ ಒಂದು ರನ್ ತೆಗೆದರು. 4ನೇ ಎಸೆತದಲ್ಲಿ ಮತ್ತೆ ಸ್ಟ್ರೈಕ್ಗೆ ಬಂದ ಅಕ್ಷರ್ ಪಟೇಲ್ (64) ಲಾಂಗ್ ಆಫ್ನತ್ತ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಟೀಮ್ ಇಂಡಿಯಾಗೆ 2 ವಿಕೆಟ್ಗಳ ರೋಚಕ ಜಯ ತಂದುಕೊಟ್ಟರು. ಈ ಗೆಲುವಿನೊಂದಿಗೆ 3 ಪಂದ್ಯಗಳ ಸರಣಿಯಲ್ಲಿ ಭಾರತ ತಂಡವು 2-0 ಅಂತರದಿಂದ ಮುನ್ನಡೆ ಪಡೆದುಕೊಂಡಿದೆ. ಅಲ್ಲದೆ ಕೊನೆಯ ಪಂದ್ಯ ಬಾಕಿಯಿರುವಂತೆಯೇ ಸರಣಿಯನ್ನು ವಶಪಡಿಸಿಕೊಂಡಿದೆ.
ಈ ಸರಣಿ ಗೆಲುವಿನೊಂದಿಗೆ ಟೀಮ್ ಇಂಡಿಯಾ ಕ್ರಿಕೆಟ್ ಇತಿಹಾಸದಲ್ಲೇ ಹೊಸ ವಿಶ್ವ ದಾಖಲೆ ನಿರ್ಮಿಸಿರುವುದು ವಿಶೇಷ. ಅಂದರೆ ವೆಸ್ಟ್ ಇಂಡೀಸ್ ವಿರುದ್ದ ಟೀಮ್ ಇಂಡಿಯಾ ಸತತವಾಗಿ 12 ಏಕದಿನ ಸರಣಿಗಳನ್ನು ಗೆದ್ದಿದೆ. ಏಕದಿನ ಕ್ರಿಕೆಟ್ನಲ್ಲಿ ವಿಶ್ವದ ಯಾವುದೇ ತಂಡ ಒಂದು ಟೀಮ್ ವಿರುದ್ದ ಸತತವಾಗಿ ಇಷ್ಟೊಂದು ಸರಣಿ ಗೆದ್ದಿಲ್ಲ. ಈ ಮೂಲಕ ಟೀಮ್ ಇಂಡಿಯಾ ಏಕದಿನ ಕ್ರಿಕೆಟ್ನಲ್ಲಿ ಹೊಸ ಇತಿಹಾಸ ಬರೆದಿದೆ.
ಇದಕ್ಕೂ ಮುನ್ನ ಇಂತಹದೊಂದು ದಾಖಲೆ ಪಾಕಿಸ್ತಾನ್ ತಂಡದ ಹೆಸರಿನಲ್ಲಿತ್ತು. ಪಾಕ್ ತಂಡವು ಜಿಂಬಾಬ್ವೆ ವಿರುದ್ದದ ಸತತವಾಗಿ 11 ಸರಣಿಗಳನ್ನು ಗೆದ್ದುಕೊಂಡಿತ್ತು. ಇದೀಗ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ದ ಸತತವಾಗಿ 12 ಏಕದಿನ ಸರಣಿ ಜಯಿಸುವ ಮೂಲಕ ಪಾಕಿಸ್ತಾನದ ದಾಖಲೆಯನ್ನು ಹಿಂದಿಕ್ಕಿ, ಹೊಸ ಇತಿಹಾಸ ನಿರ್ಮಿಸಿದೆ.
ಇಲ್ಲಿ ವಿಶೇಷ ಎಂದರೆ ಟೀಮ್ ಇಂಡಿಯಾ 2006 ರ ಬಳಿಕ ವೆಸ್ಟ್ ಇಂಡೀಸ್ ವಿರುದ್ದ ಒಂದೇ ಒಂದು ಏಕದಿನ ಸರಣಿ ಸೋತಿಲ್ಲ. ಅಂದರೆ ಒನ್ಡೇ ಕ್ರಿಕೆಟ್ನಲ್ಲಿ ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ದ ಕಳೆದ ಒಂದು ದಶಕದಿಂದಲೂ ಪಾರುಪತ್ಯ ಸಾಧಿಸುತ್ತಾ ಬರುತ್ತಿದೆ. ಈ ಮೂಲಕ ಇದೀಗ ಹೊಸ ವಿಶ್ವ ದಾಖಲೆಯನ್ನೂ ಕೂಡ ನಿರ್ಮಿಸಿದೆ.