Axar Patel: 35 ಎಸೆತ, 3 ಫೋರ್, 5 ಸಿಕ್ಸರ್: ಅಕ್ಷರ್ ಪಟೇಲ್ ಸ್ಫೋಟಕ ಆಟದ ವಿಡಿಯೋ ಇಲ್ಲಿದೆ ನೋಡಿ
IND vs WI ODI: ಅಕ್ಷರ್ ಪಟೇಲ್ ಕ್ರೀಸ್ಗೆ ಬಂದಾಗ ಭಾರತದ ಗೆಲುವಿಗೆ 74 ಎಸೆತಗಳಲ್ಲಿ 114 ರನ್ಗಳು ಬೇಕಾಗಿತ್ತು. ವೆಸ್ಟ್ ಇಂಡೀಸ್ ಇನ್ನೆರಡು ವಿಕೆಟ್ ಕಿತ್ತರೆ ಜಯ ನಮ್ಮದೇ ಎಂದು ನಂಬಿದ್ದರು. ಆದರೆ, ಕೆರಿಬಿಯನ್ ಬೌಲರ್ಗಳನ್ನು ಅಕ್ಷರಶಃ ಕಾಡಿದ ಅಕ್ಷರ್ ಫೋರ್-ಸಿಕ್ಸರ್ಗಳ ಮಳೆ ಸುರಿಸಿ ಭಾರತಕ್ಕೆ ಜಯ ತಂದುಕೊಟ್ಟರು.
ಭಾರತ ಕ್ರಿಕೆಟ್ ತಂಡದ ಬ್ಯಾಟಿಂಗ್ ಶಕ್ತಿ ಎಷ್ಟಿದೆ ಎಂಬುದು ಕ್ರಿಕೆಟ್ ಜಗತ್ತಿಗೆ ಮತ್ತೊಮ್ಮೆ ಸಾಭೀತಾಗಿದೆ. ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ 312 ರನ್‌ಗಳ ಟಾರ್ಗೆಟ್ ಅನ್ನು ಬೆನ್ನಟ್ಟಿದ ಭಾರತ (IND vs WI 2nd ODI) ಕೊನೆಯ ಓವರ್ ವರೆಗೂ ಛಲ ಬಿಡದೆ ಹೋರಾಡಿ 2 ವಿಕೆಟ್ಗಳ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಪಂದ್ಯಗಳಲ್ಲಿ 2-0 ಅಂತರದ ಮುನ್ನಡೆ ಪಡೆದುಕೊಂಡು ಸರಣಿ ವಶಪಡಿಸಕೊಂಡಿದೆ. ಭಾರತದ ಗೆಲುವಿನಲ್ಲಿ ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್ ಹಾಗೂ ಸಂಜು ಸ್ಯಾಮ್ಸನ್ (Sanju Samson) ಹೀಗೆ ಮೂವರು ಬ್ಯಾಟರ್ಗಳು ಅರ್ಧಶತಕ ಸಿಡಿಸಿ ನೆರವಾದರು. ಅದರಲ್ಲೂ ಅಕ್ಷರ್ ಪಟೇಲ್ (Axar Patel) ಕೊನೆಯ ವರೆಗೂ ನಿಂತು ವಿನ್ನಿಂಗ್ ಶಾಟ್ ಹೊಡಯುವ ಮೂಲಕ ಟೀಮ್ ಇಂಡಿಯಾಕ್ಕೆ ಗೆಲುವು ತಂದಿಟ್ಟರು. ಕೇವಲ 35 ಎಸೆತಗಳಲ್ಲಿ 3 ಫೋರ್ ಹಾಗೂ 5 ಅಮೋಘ ಸಿಕ್ಸ್ ಸಿಡಿಸಿ ಮನಮೋಹಕ ಬ್ಯಾಟಿಂಗ್ ನಡೆಸಿದ ಅಕ್ಷರ್ ಅಜೇಯ 64 ರನ್ ಚಚ್ಚಿದರು.
ಅಕ್ಷರ್ ಪಟೇಲ್ ಕ್ರೀಸ್ಗೆ ಬಂದಾಗ ಭಾರತದ ಗೆಲುವಿಗೆ 74 ಎಸೆತಗಳಲ್ಲಿ 114 ರನ್‌ಗಳ ಅವಶ್ಯತೆಯಿತ್ತು. ಭಾರತಕ್ಕೆ ಗೆಲುವು ದೂರದ ಮಾತಾಗಿದ್ದರೆ ವೆಸ್ಟ್ ಇಂಡೀಸ್ ಇನ್ನೆರಡು ವಿಕೆಟ್ ಕಿತ್ತರೆ ಜಯ ನಮ್ಮದೇ ಎಂದು ನಂಬಿದ್ದರು. ಆದರೆ, ಎಲ್ಲರ ಯೋಜನೆಯನ್ನು ಉಲ್ಟಾ ಮಾಡಿದ್ದು ಅಕ್ಷರ್. ವೆಸ್ಟ್ ಇಂಡೀಸ್ ಬೌಲರ್ಗಳನ್ನು ಅಕ್ಷರಶಃ ಕಾಡಿದ ಅಕ್ಷರ್ ಫೋರ್, ಸಿಕ್ಸರ್ಗಳ ಮಳೆ ಸುರಿಸಿದರು. ಈ ವರ್ಷ ಬ್ಯಾಟಿಂಗ್ನಲ್ಲಿ ಸಾಕಷ್ಟು ಸುಧಾರಣೆ ಕಂಡಿರುವ ಇವರು ಸರಿಯಾದ ಸಮಯದಲ್ಲಿ ತಂಡದ ಗೆಲುವಿಗೆ ಹೋರಾಡಿ ಉಪಯುಕ್ತ ಕಾಣಿಕೆ ನೀಡಿದರು. ಅದರಲ್ಲೂ ಅಕ್ಷರ್ 49.4ನೇ ಓವರ್ನಲ್ಲಿ ಸಿಕ್ಸ್ ಸಿಡಿಸಿ ವಿನ್ನಿಂಗ್ ಶಾಟ್ ಹೊಡೆದಿದ್ದು ಅದ್ಭುತವಾಗಿತ್ತು. ಇಲ್ಲಿದೆ ನೋಡಿ ಪಟೇಲ್ ಆಟದ ವಿಡಿಯೋ.
ದ್ವಿತೀಯ ಏಕದಿನ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ವೆಸ್ಟ್ ಇಂಡೀಸ್ ತಂಡಕ್ಕೆ ಶಾಯ್ ಹೋಪ್ ಮತ್ತು ಕೈಲ್ ಮೇಯರ್ಸ್ ಚುರುಕಿನ ಆರಂಭ ನೀಡಿದರು. ಮೊದಲ ವಿಕೆಟ್ಗೆ ಇವರಿಬ್ಬರು 65 ರನ್ ಗಳಿಸಿದರು. ಮೇಯರ್ಸ್ 39 ರನ್ ಗಳಿಸಿ ಔಟಾದರೆ, ನಂತರದ ಬಂದ ಶಾಮಾರ್ಹ್ ಬ್ರೂಕ್ಸ್ 35 ರನ್ ಮಾಡಿದರು. ಬ್ರೆಂಡೆನ್ ಕಿಂಗ್ ಸೊನ್ನೆ ಸುತ್ತಿದ್ದು ತಂಡಕ್ಕೆ ಹಿನ್ನಡೆಯಾಯಿತು.
ಆದರೆ, ಮೂರು ಪ್ರಮುಖ ವಿಕೆಟ್ ಕಳೆದುಕೊಂಡಿದ್ದ ವೇಳೆ ಮೈದಾನಕ್ಕಿಳಿದ ನಾಯಕ ನಿಕೋಲಸ್ ಪೂರನ್ ಅವರು ಹೋಪ್ ಜೊತೆಗೂಡಿ ಭಾರತೀಯ ಬೌಲರ್ಗಳನ್ನು ದಂಡಿಸಿದರು. 77 ಎಸೆತಗಳಲ್ಲಿ 6 ಸಿಕ್ಸರ್, 1 ಬೌಂಡರಿ ಬಾರಿಸಿ 74 ರನ್ ಸಿಡಿಸಿದರು. ಇನ್ನೊಂದೆಡೆ ತಾಳ್ಮೆಯಿಂದಲೇ ದೊಡ್ಡ ಇನಿಂಗ್ಸ್ ಕಟ್ಟಿದ ಹೋಪ್ ಆಕರ್ಷಕ ಶತಕ ಬಾರಿಸಿದರು. 3 ಸಿಕ್ಸರ್, 8 ಬೌಂಡರಿ ಸಮೇತ 115 ರನ್ ಗಳಿಸಿದರು. ಪರಿಣಾಮ ವೆಸ್ಟ್ ಇಂಡೀಸ್ ನಿಗದಿತ 50 ಓವರ್‌ಗಳಲ್ಲಿ 311 ರನ್ ಗಳಿಸಿತು.
ವಿಂಡೀಸ್ ನೀಡಿದ್ದ 312 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ತಂಡವು 49.4 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಶ್ರೇಯಸ್ ಅಯ್ಯರ್(63), ಸಂಜು ಸಾಮ್ಸನ್(54) ಹಾಗೂ ಅಕ್ಷರ್ ಪಟೇಲ್ ಅರ್ಧಶತಕ ಸಿಡಿಸುವ ಮೂಲಕ ಭಾರತಕ್ಕೆ ಗೆಲುವು ತಂದಿಟ್ಟರು. ಪಂದ್ಯಶ್ರೇಷ್ಠ ಪ್ರಶಸ್ತಿ ಅಕ್ಷರ್ ಬಾಜಿಕೊಂಡರು. ಅಂತಿಮ ಮೂರನೇ ಏಕದಿನ ಪಂದ್ಯ ಜುಲೈ 27ಕ್ಕೆ ನಡೆಯಲಿದೆ.