ಪಾಕ್ ಪಡೆಯನ್ನು ಸದೆಬಡಿದು ವಿಶ್ವ ದಾಖಲೆ ಸರಿಗಟ್ಟಿದ ಟೀಮ್ ಇಂಡಿಯಾ

| Updated By: ಝಾಹಿರ್ ಯೂಸುಫ್

Updated on: Oct 14, 2023 | 9:08 PM

India vs Pakistan: 192 ರನ್​ಗಳ ಸುಲಭ ಗುರಿ ಪಡೆದ ಟೀಮ್ ಇಂಡಿಯಾ ಪರ ನಾಯಕ ರೋಹಿತ್ ಶರ್ಮಾ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದ ಹಿಟ್​ಮ್ಯಾನ್ 63 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 6 ಫೋರ್​ಗಳೊಂದಿಗೆ 86 ರನ್ ಚಚ್ಚಿದರು.

ಪಾಕ್ ಪಡೆಯನ್ನು ಸದೆಬಡಿದು ವಿಶ್ವ ದಾಖಲೆ ಸರಿಗಟ್ಟಿದ ಟೀಮ್ ಇಂಡಿಯಾ
IND vs PAK
Image Credit source: Gettyimages
Follow us on

ಏಕದಿನ ವಿಶ್ವಕಪ್​ನ 12ನೇ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ದ ಟೀಮ್ ಇಂಡಿಯಾ ಆಮೋಘ ಗೆಲುವು ದಾಖಲಿಸಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದರು. ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಟೀಮ್ ಇಂಡಿಯಾ ಬೌಲರ್​ಗಳು ಭರ್ಜರಿ ದಾಳಿ ಸಂಘಟಿಸಿದ್ದರು. ಇದಾಗ್ಯೂ ಪಾಕಿಸ್ತಾನ್ ತಂಡ 30 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 155 ರನ್​ ಕಲೆಹಾಕುವಲ್ಲಿ ಯಶಸ್ವಿಯಾಗಿತ್ತು.

ಆದರೆ 30 ರಿಂದ 40ರವರೆಗಿನ ಓವರ್​ಗಳ ವೇಳೆ ಟೀಮ್ ಇಂಡಿಯಾ ಬೌಲರ್​ಗಳು ಅದ್ಭುತ ದಾಳಿ ಸಂಘಟಿಸುವಲ್ಲಿ ಯಶಸ್ವಿಯಾದರು. ಪರಿಣಾಮ 36 ರನ್​ ಕಲೆಹಾಕುವಷ್ಟರಲ್ಲಿ ಪಾಕ್ ತಂಡ 7 ವಿಕೆಟ್​ಗಳು ಉರುಳಿದ್ದವು. ಇದರೊಂದಿಗೆ ಪಾಕ್​ ತಂಡ 42.5 ಓವರ್​ಗಳಲ್ಲಿ 191 ರನ್​ಗಳಿಗೆ ಆಲೌಟ್ ಆಯಿತು.

192 ರನ್​ಗಳ ಸುಲಭ ಗುರಿ ಪಡೆದ ಟೀಮ್ ಇಂಡಿಯಾ ಪರ ನಾಯಕ ರೋಹಿತ್ ಶರ್ಮಾ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದ ಹಿಟ್​ಮ್ಯಾನ್ 63 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 6 ಫೋರ್​ಗಳೊಂದಿಗೆ 86 ರನ್ ಚಚ್ಚಿದರು. ಇನ್ನು 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶ್ರೇಯಸ್ ಅಯ್ಯರ್ ಆಕರ್ಷಕ ಅರ್ಧಶತಕ ಬಾರಿಸಿದರು. ಈ ಮೂಲಕ ಟೀಮ್ ಇಂಡಿಯಾ 30.3 ಓವರ್​ಗಳಲ್ಲಿ 3 ವಿಕೆಟ್​ ನಷ್ಟದೊಂದಿಗೆ 192 ರನ್​ಗಳಿಸಿ ಗೆಲುವಿನ ನಗೆ ಬೀರಿತು.

ಪಾಕ್ ವಿಶ್ವ ದಾಖಲೆ ಸರಿಗಟ್ಟಿದ ಭಾರತ:

ವಿಶೇಷ ಎಂದರೆ ಪಾಕಿಸ್ತಾನ್ ವಿರುದ್ಧದ ಈ ಗೆಲುವಿನೊಂದಿಗೆ ಪಾಕ್ ತಂಡದ ಹೆಸರಿನಲ್ಲಿದ್ದ ವಿಶೇಷ ವಿಶ್ವ ದಾಖಲೆಯನ್ನು ಟೀಮ್ ಇಂಡಿಯಾ ಸರಿಗಟ್ಟಿದೆ.  ಏಕದಿನ ವಿಶ್ವಕಪ್​ನಲ್ಲಿ ಒಂದೇ ತಂಡದ ವಿರುದ್ಧ ಏಕಪಕ್ಷೀಯವಾಗಿ ಅತೀ ಹೆಚ್ಚು ಗೆಲುವು ದಾಖಲಿಸಿದ ವಿಶ್ವ ದಾಖಲೆ ಪಾಕಿಸ್ತಾನ್ ಹೆಸರಿನಲ್ಲಿತ್ತು.

ಶ್ರೀಲಂಕಾ ವಿರುದ್ಧ ಪಾಕ್ ಪಡೆ ಏಕದಿನ ವಿಶ್ವಕಪ್​ನಲ್ಲಿ 8 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಆದರೆ ಏಕದಿನ ವಿಶ್ವಕಪ್​ನಲ್ಲಿ ಪಾಕ್ ವಿರುದ್ಧ ಲಂಕಾ ತಂಡ ಇದುವರೆಗೆ ಒಂದೇ ಒಂದು ಜಯ ಸಾಧಿಸಿಲ್ಲ.ಇದೀಗ ಭಾರತ ತಂಡವು ಏಕದಿನ ವಿಶ್ವಕಪ್​ನಲ್ಲಿ  ಪಾಕಿಸ್ತಾನ್ ತಂಡಕ್ಕೆ 8ನೇ ಬಾರಿ ಸೋಲುಣಿಸಿದೆ. ಈ ಮೂಲಕ ಪಾಕ್ ತಂಡದ ಹೆಸರಿನಲ್ಲಿದ್ದ 8-0 ಏಕಪಕ್ಷೀಯ ಜಯದ ವಿಶ್ವ ದಾಖಲೆಯನ್ನು ಟೀಮ್ ಇಂಡಿಯಾ ಸರಿಗಟ್ಟಿರುವುದು ವಿಶೇಷ.

ಭಾರತ (ಪ್ಲೇಯಿಂಗ್ 11): ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

ಇದನ್ನೂ ಓದಿ: Rohit Sharma: ಭರ್ಜರಿ ಸೆಂಚುರಿಯೊಂದಿಗೆ 10 ದಾಖಲೆ ಬರೆದ ಹಿಟ್​ಮ್ಯಾನ್

ಪಾಕಿಸ್ತಾನ್ (ಪ್ಲೇಯಿಂಗ್ 11): ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಬಾಬರ್ ಆಝಂ (ನಾಯಕ), ಮೊಹಮ್ಮದ್ ರಿಝ್ವಾನ್, ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಝ್, ಹಸನ್ ಅಲಿ, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್.