IND vs NZ: ಟೀಮ್ ಇಂಡಿಯಾಗೆ ಕ್ಲೀನ್ ಸ್ವೀಪ್ ಭೀತಿ

India vs New Zealand: ಬೆಂಗಳೂರು ಮತ್ತು ಪುಣೆ ಟೆಸ್ಟ್ ಸೋಲುಗಳನ್ನು ಎದುರಿಸಿರುವ ಟೀಮ್ ಇಂಡಿಯಾ ಇದೀಗ ಅವಮಾನಕರ ಕ್ಲೀನ್ ಸ್ವೀಪ್ ಅಂಚಿನಲ್ಲಿದೆ. ಈ ಕ್ಲೀನ್ ಸ್ವೀಪ್ ಅವಮಾನವನ್ನು ತಪ್ಪಿಸಲು ಭಾರತ ತಂಡವು ಮುಂಬೈ ಟೆಸ್ಟ್​ನಲ್ಲಿ ನ್ಯೂಝಿಲೆಂಡ್ ತಂಡವನ್ನು ಮಣಿಸಲೇಬೇಕು.

IND vs NZ: ಟೀಮ್ ಇಂಡಿಯಾಗೆ ಕ್ಲೀನ್ ಸ್ವೀಪ್ ಭೀತಿ
IND vs NZ
Follow us
ಝಾಹಿರ್ ಯೂಸುಫ್
|

Updated on: Oct 28, 2024 | 7:44 AM

ಭಾರತ ತಂಡವು ಟೆಸ್ಟ್ ಕ್ರಿಕೆಟ್​ನಲ್ಲಿ ಕ್ಲೀನ್ ಸ್ವೀಪ್ ಸೋಲು ಎದುರಿಸಿ ವರ್ಷಗಳೇ ಕಳೆದಿವೆ. ಕೊನೆಯ ಬಾರಿ ಭಾರತ ತಂಡ ಎಲ್ಲಾ ಪಂದ್ಯಗಳಲ್ಲೂ ಪರಾಜಯಗೊಂಡು ಸರಣಿ ಸೋತಿದ್ದು 2020 ರಲ್ಲಿ. ಇದೀಗ ನಾಲ್ಕು ವರ್ಷಗಳ ಬಳಿಕ ಟೀಮ್ ಇಂಡಿಯಾಗೆ ಮತ್ತೆ ಕ್ಲೀನ್ ಸ್ವೀಪ್ ಸೋಲಿನ ಭೀತಿ ಎದುರಾಗಿದೆ. ಇಂತಹದೊಂದು ಭಯ ಹುಟ್ಟಿಸಿಕೊಂಡಿರುವ ಟಾಮ್ ಲ್ಯಾಥಮ್ ಮುಂದಾಳತ್ವದ ನ್ಯೂಝಿಲೆಂಡ್ ಪಡೆ.

ಏಕೆಂದರೆ ಬಲಿಷ್ಠ ಭಾರತ ತಂಡಕ್ಕೆ ತವರಿನಲ್ಲೇ ಬ್ಯಾಕ್ ಟು ಬ್ಯಾಕ್ ಸೋಲುಣಿಸುವಲ್ಲಿ ನ್ಯೂಝಿಲೆಂಡ್ ತಂಡ ಯಶಸ್ವಿಯಾಗಿದೆ. ಈ ಸೋಲನ್ನು ಇದೀಗ ಟೀಮ್ ಇಂಡಿಯಾದ ಶರಣಾಗತಿ ಎಂದೇ ವಿಶ್ಲೇಷಿಸಲಾಗುತ್ತಿದೆ. ಏಕೆಂದರೆ ಎರಡೂ ಪಂದ್ಯಗಳಲ್ಲೂ ಭಾರತ ತಂಡದಿಂದ ನಿರೀಕ್ಷಿತ ಪ್ರದರ್ಶನವಂತು ಮೂಡಿಬಂದಿಲ್ಲ.

ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡ ಗೆದ್ದಿದ್ದು ಬರೋಬ್ಬರಿ 8 ವಿಕೆಟ್​ಗಳಿಂದ. ಇನ್ನು ಪುಣೆ ಟೆಸ್ಟ್​ನಲ್ಲಿ 113 ರನ್​ಗಳ ಅಂತರದಿಂದ ಅಮೋಘ ಗೆಲುವು ದಾಖಲಿಸುವಲ್ಲಿ ಕಿವೀಸ್ ಪಡೆ ಯಶಸ್ವಿಯಾಗಿದೆ. ಈ ಎರಡು ಸೋಲುಗಳನ್ನು ಭಾರತೀಯರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ ಎಂಬುದೇ ಸತ್ಯ.

ಏಕೆಂದರೆ ನ್ಯೂಝಿಲೆಂಡ್ ತಂಡ ನೀಡಿದ ಸಾಂಘಿಕ ಪ್ರದರ್ಶನದ ಮುಂದೆ ಭಾರತೀಯ ಆಟಗಾರರು ಹಿಂದಿದ್ದರು ಎಂಬುದಕ್ಕೆ ಈ ಎರಡು ಪಂದ್ಯಗಳ ಫಲಿತಾಂಶಗಳೇ ಸಾಕ್ಷಿ. ಅದರಲ್ಲೂ ಬೆಂಗಳೂರಿನಲ್ಲಿ ಸೋತ ಬಳಿಕ ಪುಣೆಯಲ್ಲಿ ಭಾರತ ತಂಡಕ್ಕೆ ಅನುಕೂಲವಾಗುವಂತಹ ಸ್ಪಿನ್ ಸ್ನೇಹಿ ಪಿಚ್ ಅನ್ನು ರೂಪಿಸಲಾಗಿತ್ತು. ಅಲ್ಲೂ ಕೂಡ ಕಿವೀಸ್ ಪಡೆ ಪರಾಕ್ರಮ ಮೆರೆದಿರುವುದು ವಿಶೇಷ.

ಇದೀಗ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಪಿಚ್ ಯಾವ ರೀತಿಯಿದ್ದರೂ ನ್ಯೂಝಿಲೆಂಡ್ ಗೆಲ್ಲುವ ವಿಶ್ವಾಸದಿಂದ ಪುಟಿದೇಳುತ್ತಿದೆ. ಏಕೆಂದರೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಭಾರತದಲ್ಲಿ ಟೆಸ್ಟ್ ಸರಣಿ ಗೆದ್ದು ನ್ಯೂಝಿಲೆಂಡ್ ಐತಿಹಾಸಿಕ ಸಾಧನೆ ಮಾಡಿದೆ.

ಈ ಐತಿಹಾಸಿಕ ಸಾಧನೆಯೊಂದಿಗೆ ಭಾರತಕ್ಕೆ ಕ್ಲೀನ್ ಸ್ವೀಪ್ ಸೋಲಿನ ರುಚಿ ತೋರಿಸಲು ನ್ಯೂಝಿಲೆಂಡ್ ಕೂಡ ತುದಿಗಾಲಲ್ಲಿ ನಿಂತಿದೆ. ಅದರಲ್ಲೂ ಟೀಮ್ ಇಂಡಿಯಾ ಟೆಸ್ಟ್ ಕ್ರಿಕೆಟ್​ನಲ್ಲಿ ಕೊನೆಯ ಬಾರಿಗೆ ಕ್ಲೀನ್ ಸ್ವೀಪ್ ಸೋಲಿನ ರುಚಿ ನೋಡಿದ್ದು ಕೂಡ ನ್ಯೂಝಿಲೆಂಡ್ ವಿರುದ್ಧ ಎಂಬುದು ಇಲ್ಲಿ ಉಲ್ಲೇಖಾರ್ಹ.

2020 ರಲ್ಲಿ ನ್ಯೂಝಿಲೆಂಡ್​ನಲ್ಲಿ ನಡೆದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡವು 2-0 ಅಂತರದಿಂದ ಸೋಲನುಭವಿಸಿತ್ತು. ಇದೀಗ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳನ್ನು ಕಿವೀಸ್ ಬಳಗ ಗೆದ್ದುಕೊಂಡಿದೆ. ಇನ್ನು ಕೊನೆಯ ಮ್ಯಾಚ್​ನಲ್ಲೂ ಸೋಲುಣಿಸಿ ಸರಣಿಯನ್ನು ವೈಟ್ ವಾಶ್ ಮಾಡಿಕೊಳ್ಳುವ ಇರಾದೆಯಲ್ಲಿದ್ದಾರೆ.

ಇತ್ತ ತವರಿನಲ್ಲಿ ಇಂತಹದೊಂದು ಅವಮಾನಕರ ಸೋಲನ್ನು ತಪ್ಪಿಸಿಕೊಳ್ಳಲು ಭಾರತ ತಂಡ ಅಂತಿಮ ಪಂದ್ಯದಲ್ಲಿ ಗೆಲ್ಲಲೇಬೇಕು. ಒಂದು ವೇಳೆ ಸೋತರೆ 24 ವರ್ಷಗಳ ಬಳಿಕ ಭಾರತ ತಂಡಕ್ಕೆ ತವರಿನಲ್ಲಿ ಕ್ಲೀನ್ ಸ್ವೀಪ್ ಸೋಲಿನ ರುಚಿ ತೋರಿಸಿದ ಹಿರಿಮೆ ಕೂಡ ನ್ಯೂಝಿಲೆಂಡ್ ತಂಡದ ಪಾಲಾಗಲಿದೆ.

ಅಂದರೆ ಭಾರತ ತಂಡವು ತವರಿನಲ್ಲಿ ಕೊನೆಯ ಬಾರಿ ವೈಟ್ ವಾಶ್ ಸೋಲು ಎದುರಿಸಿದ್ದು 2000 ರಲ್ಲಿ. ಅಂದು ಸೌತ್ ಆಫ್ರಿಕಾ ತಂಡವು ಭಾರತವನ್ನು 2-0 ಅಂತರದಿಂದ ಮಣಿಸಿ ಇತಿಹಾಸ ಬರೆದಿತ್ತು.

ಇದನ್ನೂ ಓದಿ: ಝಿಂಬಾಬ್ವೆ ಅಬ್ಬರಕ್ಕೆ ಟೀಮ್ ಇಂಡಿಯಾದ ವಿಶ್ವ ದಾಖಲೆ ಉಡೀಸ್

ಈ ಇತಿಹಾಸವನ್ನು ಪುನರಾವರ್ತಿಸುವ ವಿಶ್ವಾಸದಲ್ಲಿದೆ ನ್ಯೂಝಿಲೆಂಡ್. ಆದರೆ ನ್ಯೂಝಿಲೆಂಡ್​ ತಂಡದ ಈ ವಿಶ್ವಾಸವನ್ನು ಸೆದೆಬಿಡಿದು ಟೀಮ್ ಇಂಡಿಯಾ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೂ ಮುನ್ನ ತನ್ನ ಆತ್ಮ ವಿಶ್ವಾಸ ಹೆಚ್ಚಿಸಿಕೊಳ್ಳಲಿದೆಯಾ ಕಾದು ನೋಡಬೇಕಿದೆ.