500 ರನ್‌ಗಳ ಇತಿಹಾಸ: ಟೀಮ್ ಇಂಡಿಯಾಗೆ ಸೋಲಿನ ಭಯವೇ ಇಲ್ಲ!
IND vs SL 2nd Test: ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ಇನಿಂಗ್ಸ್‌ನಲ್ಲಿ 500ಕ್ಕೂ ಅಧಿಕ ರನ್ ಗಳಿಸಿದರೂ ಪಂದ್ಯ ಸೋತ ಉದಾಹರಣೆಗಳು ಸಾಕಷ್ಟಿವೆ. ಆದರೆ ಈ ವಿಚಾರದಲ್ಲಿ ಭಾರತೀಯ ಕ್ರಿಕೆಟ್ ತಂಡ ಮಾತ್ರ ಇಡೀ ವಿಶ್ವದಲ್ಲೇ ಅತ್ಯಂತ ಅಪರೂಪದ ಹಾಗೂ ವಿಶಿಷ್ಟ ದಾಖಲೆಯೊಂದನ್ನು ಹೊಂದಿದೆ. ಶ್ರೀಲಂಕಾ ವಿರುದ್ಧದ ಕೊಲೊಂಬೊ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಭಾರತ 503 ರನ್ ಗಳಿಸುತ್ತಿದ್ದಂತೆ ಇತಿಹಾಸದ ಆ ರೋಚಕ ಅಂಕಿ-ಅಂಶಗಳು ಮತ್ತೆ ಮುಂಚೂಣಿಗೆ ಬಂದಿವೆ.

ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ 503/9 ರನ್‌ಗಳ ಬೃಹತ್ ಮೊತ್ತ ಪೇರಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ. ಇತ್ತ ಭಾರತ ತಂಡದ ಈ ಬೃಹತ್ ಮೊತ್ತದ ಬೆನ್ನಲ್ಲೇ ಈ ಪಂದ್ಯದಲ್ಲೂ ಟೀಮ್ ಇಂಡಿಯಾ ಸೋಲುವುದಿಲ್ಲ ಎಂಬುದು ಖಚಿತವಾಗಿದೆ. ಇದಕ್ಕೆ ಮುಖ್ಯ ಕಾರಣ ಭಾರತ ತಂಡದ ಐತಿಹಾಸಿಕ ದಾಖಲೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಇನಿಂಗ್ಸ್‌ನಲ್ಲಿ 500ಕ್ಕೂ ಅಧಿಕ ರನ್ ಗಳಿಸಿದಾಗ ಭಾರತ ಎಂದಿಗೂ ಸೋತ ಉದಾಹರಣೆಯೇ ಇಲ್ಲ!
ಹೌದು, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ 500 ಅಥವಾ ಅದಕ್ಕಿಂತ ಹೆಚ್ಚಿನ ರನ್ ಗಳಿಸಿದಾಗ ಎಂದಿಗೂ ಪಂದ್ಯವನ್ನು ಸೋತಿಲ್ಲ. ಹೀಗಾಗಿಯೇ ಲಂಕಾ ವಿರುದ್ಧ ಕೂಡ ಗೆಲುವು ಇಲ್ಲಾ ಪಂದ್ಯ ಡ್ರಾ ಆಗಲಿದೆ ಎಂಬುದು ಕ್ರಿಕೆಟ್ ಪಂಡಿತರ ಲೆಕ್ಕಾಚಾರ.
ಬಲಿಷ್ಠ ತಂಡಕ್ಕಿಲ್ಲದ ಹೆಗ್ಗಳಿಕೆ!
ಕ್ರಿಕೆಟ್ ಜಗತ್ತನ್ನು ದಶಕಗಳ ಕಾಲ ಆಳಿದ ಆಸ್ಟ್ರೇಲಿಯಾ, ಇಂಗ್ಲೆಂಡ್ ಹಾಗೂ ನೆರೆಯ ಪಾಕಿಸ್ತಾನ್ ತಂಡಗಳು ಕೂಡ ಮೊದಲ ಇನಿಂಗ್ಸ್‌ನಲ್ಲಿ 500ಕ್ಕೂ ಹೆಚ್ಚು ರನ್ ಬಾರಿಸಿಯೂ ಪಂದ್ಯ ಸೋತ ಅಪಕೀರ್ತಿಗೆ ಒಳಗಾಗಿವೆ.
- ಆಸ್ಟ್ರೇಲಿಯಾ: 1894ರಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ 586 ರನ್ ಗಳಿಸಿದರೂ ಸೋಲೊಪ್ಪಿಕೊಂಡಿತ್ತು.
- ಇಂಗ್ಲೆಂಡ್: 2006ರ ಆಡಿಲೇಡ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 551/6 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡರೂ ಸೋಲಿನ ಮುಖ ನೋಡಿತ್ತು.
- ಪಾಕಿಸ್ತಾನ್: 2024ರಲ್ಲಿ ಮುಲ್ತಾನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ 556 ರನ್ ಗಳಿಸಿದರೂ ಇನಿಂಗ್ಸ್ ಸೋಲು ಅನುಭವಿಸಿ ಇತಿಹಾಸ ಪುಟ ಸೇರಿತ್ತು.
ಆದರೆ ಭಾರತ ಮಾತ್ರ ಮೊದಲ ಇನಿಂಗ್ಸ್‌ನಲ್ಲಿ ಬೃಹತ್ ಮೊತ್ತ ಕಲೆಹಾಕಿದಾಗ, ಎದುರಾಳಿ ತಂಡಕ್ಕೆ ಪಂದ್ಯವನ್ನು ಬಿಟ್ಟುಕೊಟ್ಟ ಉದಾಹರಣೆಯೇ ಇಲ್ಲ. ಭಾರತ ಈ ಪರಿಸ್ಥಿತಿಯಲ್ಲಿ ಪಂದ್ಯವನ್ನು ಗೆದ್ದಿದೆ, ಇಲ್ಲವೇ ಡ್ರಾ ಮಾಡಿಕೊಂಡಿದೆ. ಇದಕ್ಕೆ ಸಾಕ್ಷಿ ಈ ಕೆಳಗಿನ ಅಂಕಿ ಅಂಶಗಳು.
ವಿಶ್ವ ದಾಖಲೆಯ ನಾಗಾಲೋಟ:
ಭಾರತ ತಂಡ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಒಟ್ಟು 56 ಬಾರಿ ಮಾತ್ರ 500+ ರನ್ ಕಲೆಹಾಕಿದೆ. ಈ ವೇಳೆ ಒಮ್ಮೆಯೂ ಪಂದ್ಯವನ್ನು ಸೋತಿಲ್ಲ.
- ಗೆದ್ದ ಪಂದ್ಯಗಳು: 31
- ಡ್ರಾ ಆದ ಪಂದ್ಯಗಳು: 24
- ಸೋತ ಪಂದ್ಯಗಳು: 0
ಅಂದರೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ 100ಕ್ಕೂ ಅಧಿಕ ಪಂದ್ಯಗಳನ್ನಾಡಿದ ತಂಡಗಳ ಪೈಕಿ, ಮೊದಲ ಇನಿಂಗ್ಸ್‌ನಲ್ಲಿ 500ಕ್ಕೂ ಹೆಚ್ಚು ರನ್ ಗಳಿಸಿದ ಬಳಿಕವೂ ಒಮ್ಮೆಯೂ ಸೋಲದ ಅಪರೂಪದ ತಂಡವೆಂಬ ಅಪರೂಪದ ವಿಶ್ವ ದಾಖಲೆ ಟೀಮ್ ಇಂಡಿಯಾ ಹೆಸರಿನಲ್ಲಿದೆ.
ಇದನ್ನೂ ಓದಿ: 70 ಕೋಟಿ ರೂ. ನಷ್ಟ: ಟೀಮ್ ಇಂಡಿಯಾ ಕಣಕ್ಕಿಳಿದರೆ 500 ಕೋಟಿ ರೂ. ಲಾಭ!
ಇತಿಹಾಸ ಮರುಕಳಿಸುತ್ತಾ?
ಕೊಲೊಂಬೊದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಭಾರತ ತಂಡ 503/9 ರನ್‌ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ. ಕ್ರಿಕೆಟ್ ಇತಿಹಾಸದ ಈ ಹಿಂದಿನ ಅಂಕಿ-ಅಂಶಗಳನ್ನು ಗಮನಿಸಿದರೆ, ಭಾರತ ತಂಡ ಈ ಪಂದ್ಯವನ್ನು ಸೋಲುವ ಸಾಧ್ಯತೆ ಶೂನ್ಯ ಎನ್ನಬಹುದು. ಹೀಗಾಗಿ ಲಂಕಾ ವಿರುದ್ಧದ 2ನೇ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಗೆಲ್ಲಬಹುದು ಇಲ್ಲಾ ಪಂದ್ಯ ಡ್ರಾನಲ್ಲಿ ಅಂತ್ಯವಾಗುವುದನ್ನು ಎದುರು ನೋಡಬಹುದು.




